ಕೋಡಿಂಬಾಡಿ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರನ್ನು ಮುಂದುವರಿಸಲು ಗ್ರಾ.ಪಂ.ಅಧ್ಯಕ್ಷರ ನೇತೃತ್ವದಲ್ಲಿ ತಾ.ಪಂ.ಇ.ಓ.ಗೆ ಮನವಿ

0

ಪುತ್ತೂರು: ಕೋಡಿಂಬಾಡಿ ಗ್ರಾ.ಪಂ.ವ್ಯಾಪ್ತಿಯ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ ನೇತೃತ್ವದಲ್ಲಿ ಮಾ.21ರಂದು ತಾ.ಪಂ‌. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿಯವರಿಗೆ ಮನವಿ ಸಲ್ಲಿಸಲಾಗಿದೆ.

 


‘ಗ್ರಾಮ ಪಂಚಾಯತಿಯಲ್ಲಿ ದಿನಾಂಕ 2018ರ ಆ.3ರಂದು ಸಂಜೀವಿನಿ ಒಕ್ಕೂಟ ರಚನೆಗೊಂಡಿದೆ. ಈ ಒಕ್ಕೂಟ ನಾಲ್ಕು ವರ್ಷದಿಂದ ಉತ್ತಮವಾಗಿ ಕಾರ್ಯಾಚರಿಸುತ್ತಿದೆ. ಮಹಿಳಾ ಸ್ವಸಹಾಯ ಸಂಘದ ಮುಖಾಂತರ ಮಹಿಳೆಯರನ್ನು ಅಭಿವೃದ್ಧಿ ಪಡಿಸಲು ಈ ಯೋಜನೆಯು ಉತ್ತಮ ಯೋಜನೆಯಾಗಿದೆ ಎಂದು ಹೇಳಲು ನಾವು ಸಂತೋಷಪಡುತ್ತೇವೆ. ಸಂಜೀವಿನಿ ಒಕ್ಕೂಟದಲ್ಲಿ ಮುಖ್ಯ ಪುಸ್ತಕ ಬರಹಗಾರರು ಅತ್ಯುತ್ತಮ ರೀತಿಯಲ್ಲಿ ಕಾರ್ಯಾಚರಿಸಿದರೆ ಮಾತ್ರ ಒಕ್ಕೂಟವು ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಕೋಡಿಂಬಾಡಿ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದಲ್ಲಿ ಸಂಧ್ಯಾ ಕೆ. ಇವರು ಸುಮಾರು ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಗ್ರಾಮ ಒಕ್ಕೂಟದಲ್ಲಿ ಸುಮಾರು ೦೫ ಸಂಜೀವಿನಿ ಸ್ವಸಹಾಯ ಸಂಘ, 5 ರೈತ ಮಹಿಳಾ ಉತ್ಪಾದನಾ ಸಂಘ ರಚನೆ ಮಾಡಿ ಮತ್ತು70%ರಷ್ಟು ವಿಕಲಚೇತನರನ್ನು ಸಂಜೀವಿನಿ ಸ್ವಸಹಾಯ ಸಂಘದ ಮುಖಾಂತರ ಸಂಘದ ಸದಸ್ಯರನ್ನಾಗಿ ಮಾಡಿರುತ್ತಾರೆ. ಸುಮಾರು 7 ವಿಶೇಷ ಚೇತನರ ಸಂಘದಲ್ಲಿ ೫ ಸಂಘದ ಸದಸ್ಯರು ಸ್ವ ಉದ್ಯೋಗ ಚಟುವಟಿಕೆ ಮಾಡಲು ಸಮುದಾಯ ಬಂಡವಾಳ ನಿಧಿ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿ ಜೀವನ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಅಷ್ಟೇ ಅಲ್ಲದೆ ಫೆಬ್ರವರಿ ಅಂತ್ಯಕ್ಕೆ ರೂ ೧೦೨೫೦೦೦.೦೦ರಷ್ಟು ಒಕ್ಕೂಟದಿಂದ ಸಾಲ ವಿತರಿಸಿ ಸ್ವ ಉದ್ಯೋಗ ಮಾಡಲು ಮಹಿಳೆಯರನ್ನು ಪ್ರೇರೇಪಿಸಿ ಸರಿಯಾದ ರೀತಿಯಲ್ಲಿ ಮರುಪಾವತಿ ಕೂಡ ಮಾಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ೧೪೩ ಸದಸ್ಯರಿಗೆ ಪೌಷ್ಠಿಕ ಕೈತೋಟ ಮಾಡಲು ಪಂಚಾಯತಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ ಮತ್ತು 163 ಜನರಿಗೆ ವಿಮೆ ಮಾಡಿಸಿರುತ್ತಾರೆ. ಗ್ರಾ.ಪಂ.ಗೆ ಸಂಬಂಧಿಸಿದ ನರೇಗಾ ಯೋಜನೆಯಲ್ಲಿ ಎರೆಹುಳು ತೊಟ್ಟಿ, ಸೋಕ್ ಪಿಟ್ ಇವನ್ನು ಸಂಜೀವಿನಿ ಸಂಘದವರೇ ಮೊದಲ ಬಾರಿ ಮಾಡಿರುತ್ತಾರೆ. ಅಷ್ಟೇ ಅಲ್ಲದೆ ಸಾರ್ವಜನಿಕ ಕಾಮಗಾರಿಯಾದ ಇಂಗುಗುಂಡಿಗಳನ್ನು ಸಂಜೀವಿನಿ ಸಂಘದವರು ಮಾಡಿರುತ್ತಾರೆ. ಇದೆಲ್ಲ ಎಂಬಿಕೆ ಸಂಧ್ಯಾ ಕೆ. ಇವರ ಮುಂದಾಳತ್ವದಲ್ಲಿ ನಡೆದಿರುತ್ತದೆ ಹಾಗೂ ತಾಲೂಕಿನಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಹಿಳಾ ಕೂಲಿ ಕಾರ್ಮಿಕರಾಗಿ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆಲ್ಲಾ ಮುಖ್ಯ ಪುಸ್ತಕ ಬರಹಗಾರ ಪಾತ್ರವಿದೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ. ಇಷ್ಟೆಲ್ಲಾ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ ಎಂ.ಬಿ.ಕೆ. ಅವರ ಮೇಲೆ ಯಾವುದೇ ಕರ್ತವ್ಯ ಲೋಪ ಆಗಿರುವುದಿಲ್ಲ ಎಂದು ಕಾರ್ಯಕಾರಿ ಸಮಿತಿಯವರು ತಿಳಿಸಿರುತ್ತಾರೆ ಹಾಗೂ ಒಕ್ಕೂಟದ ಸದಸ್ಯರಿಂದ ಯಾವುದೇ ದೂರುಗಳು ಕೂಡ ಬಂದಿರುವುದಿಲ್ಲ. ಆದರೆ ಆರು ತಿಂಗಳ ಹಿಂದೆ ಕಾರ್ಯನಿರ್ವಹಣಾಧಿಕಾರಿಗಳಾದ ತಮಗೆ ಒಕ್ಕೂಟದ ಸದಸ್ಯರಲ್ಲದ ಇತರರು ನೀಡಿದ ದೂರು ಅರ್ಜಿಯನ್ನು ಗ್ರಾ.ಪಂ. ಒಕ್ಕೂಟದಲ್ಲಿ ಪರಿಶೀಲನೆ ಮಾಡದೆ ತಾವು ಇದರ ಬಗ್ಗೆ ಸ್ವತಂತ್ರವಾಗಿ ತೀರ್ಮಾನಿಸಿ ಒಕ್ಕೂಟಕ್ಕೆ ಇವರ ಆಯ್ಕೆ ಅಸಿಂಧು ಎಂದು ಆದೇಶ ನೀಡಿದ್ದೀರಿ, ಒಕ್ಕೂಟದ ಸಿಬ್ಬಂದಿಗಳನ್ನು ಆಯ್ಕೆ ಮಾಡಲು ಕಾರ್ಯಕಾರಿ ಸಮಿತಿಗೆ ಮಾತ್ರ ಅಧಿಕಾರವಿದೆ ಎಂದು ಸರಕಾರದ ಆದೇಶದಲ್ಲಿ ಇರುವುದನ್ನು ನಾವು ಪರಿಶೀಲಿಸಿದ್ದೇವೆ. ತಾವು ಮಾಡಿದ ಆದೇಶದಿಂದ ಒಕ್ಕೂಟದಲ್ಲಿ ತೀವ್ರ ಅಡ್ಡ ಪರಿಣಾಮಗಳು ಈಗಾಗಲೇ ಬೀರುತ್ತಿದೆ. ಆದುದರಿಂದ ತಾವು ಹೊರಡಿಸಿರುವ ಆದೇಶವನ್ನು ಮರು ಪರಿಶೀಲಿಸಿ ಒಕ್ಕೂಟವು ಸರಿಯಾದ ಮಾರ್ಗಸೂಚಿಯಲ್ಲಿ ಆಯ್ಕೆ ಮಾಡಿರುವ ಎಂ.ಬಿ.ಕೆ. ಸಂಧ್ಯಾ ಕೆ. ಇವರನ್ನು ಮುಂದುವರಿಸಲು ಸರಿಯಾದ ಆದೇಶ ಹೊರಡಿಸಿ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಗ್ರಾ.ಪಂ.ಉಪಾಧ್ಯಕ್ಷೆ ಉಷಾ ಲಕ್ಷ್ಮಣ ಪೂಜಾರಿ, ಸದಸ್ಯರಾದ ರಾಮಣ್ಣ ಗೌಡ ಗುಂಡೋಳೆ, ವಿಶ್ವನಾಥ ಕೃಷ್ಣಗಿರಿ, ಮೋಹಿನಿ ಮತ್ತು ಪುಷ್ಪಾ ಲೋಕಯ್ಯ ನಾಯ್ಕ ಮನವಿ ನೀಡುವ ನಿಯೋಗದಲ್ಲಿದ್ದರು. ಮನವಿ ಸ್ವೀಕರಿಸಿದ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿಯವರು ಮೇಲಾಧಿಕಾರಿಯವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here