ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರ

0

  • ಕಾರ್ಬನ್ ಫೈಬರ್ ದೋಟಿಯಲ್ಲಿ ಅಡಿಕೆ ಕೊಯ್ಲು, ಔಷಧಿ ಸಿಂಪಡಣೆ ತರಬೇತಿ-ಸಂವಾದ ಕಾರ್ಯಕ್ರಮ

ಚಿತ್ರ: ಯೂಸುಫ್ ರೆಂಜಲಾಡಿ

 

ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಸಾಯ ಎಂಟರ್ ಪ್ರೈಸಸ್ ಪುತ್ತೂರು ಇವರ ಸಹಕಾರದೊಂದಿಗೆ ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರ ಮಾ.೨೩ರಂದು ಮುಂಡೂರು ಗ್ರಾಮದ ಕಡ್ಯ ಶಿವರಾಮ ಕಲ್ಲೂರಾಯರ ತೋಟದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಾರ್ಬನ್ ಫೈಬರ್ ದೋಟಿಯಲ್ಲಿ ಅಡಿಕೆ ಕೊಯ್ಲು ಮತ್ತು ಔಷಧಿ ಸಿಂಪಡಣೆ ತರಬೇತಿ ಶಿಬಿರ ನಡೆಯಿತು. ಹಲವಾರು ಅಡಿಕೆ ಕೃಷಿಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ನೆರೆಯ ಕೇರಳ ರಾಜ್ಯದಿಂದಲೂ ಕೆಲವು ಅಡಿಕೆ ಕೃಷಿಕರು ಆಗಮಿಸಿ ತರಬೇತಿ ಪಡೆದುಕೊಂಡರು.

ಕಾರ್ಮಿಕರ ಕೊರತೆ ನೀಗಿಸಬೇಕಿದೆ-ಶಂಕರ ನಾರಾಯಣ್
ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರ ನಾರಾಯಣ್ ಭಟ್ ಖಂಡಿಗ ಮಾತನಾಡಿ ಕಾರ್ಮಿಕರ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಔಷಧಿ ಸಿಂಪಡಣೆ ಆಗದೇ ಇರುವುದು, ಕೊಯ್ಲಿಗೆ ಜನ ಸಿಗದೇ ಇರುವುದು ಇತ್ತೀಚೆಗೆ ಅಡಿಕೆ ಕೃಷಿಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದ್ದು ಅಡಿಕೆ ಕೃಷಿಕರ ಇಡೀ ಒಂದು ವರ್ಷದ ಶ್ರಮ ವ್ಯರ್ಥವಾಗುವ ಸನ್ನಿವೇಶಗಳೂ ಉಂಟಾಗುತ್ತದೆ. ಇಂತಹ ಸನ್ನಿವೇಶಗಳನ್ನು ಹೋಗಲಾಡಿಸಿ ಅಡಿಕೆ ಕೃಷಿಯನ್ನು ನಿಶ್ಚಿಂತೆಯಿಂದ ಮುಂದುವರಿಸಿಕೊಂಡು ಹೋಗಬೇಕಾಗಿರುವುದು ಕಾಲದ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

ಕೃಷಿಕರಿಗೆ ಸಂಘದ ಮೂಲಕ ಸ್ಪಂದನೆ-ಸುರೇಶ್ ಕುಮಾರ್
ಅಧ್ಯಕ್ಷತೆ ವಹಿಸಿದ್ದ ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಕೃಷಿಕರ ಆಶೊತ್ತರಗಳಿಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಕೃಷಿಕರಿಗೆ ಉತ್ತೇಜನ ನೀಡುವ ಕಾರ್ಯವನ್ನು ಮಾಡುತ್ತಿದೆ. ಆಧುನಿಕ ತಂತ್ರಜ್ಞಾನಕ್ಕೆ ಅನುಸಾರವಾಗಿ ಅಡಿಕೆ ಕೃಷಿಯಲ್ಲಿ ಬದಲಾವಣೆಗಳಾಗಿದ್ದು ನಾವೂ ಅದರೊಂದಿಗೆ ಬದಲಾಗಬೇಕಾಗಿದೆ ಎಂದು ಅವರು ಹೇಳಿದರು.

ಕೃಷಿಕರ ಪರವಾಗಿ ನಿರಂತರ ಕಾರ್ಯಕ್ರಮ-ಯಾಕೂಬ್ ಮುಲಾರ್
ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ನಮ್ಮ ಸಹಕಾರಿ ಸಂಘದ ಮೂಲಕ ಕೃಷಿಕರ ಪರವಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಮುಂದಕ್ಕೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಚನೆಯಿದೆ ಎಂದು ಹೇಳಿದರು.

ತಾಂತ್ರಿಕತೆಯನ್ನು ತಿಳಿಸುವ ಉದ್ದೇಶ-ಜಯಪ್ರಕಾಶ್ ರೈ
ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಮಾತನಾಡಿ ನಮ್ಮ ಸಂಘವು ಕೃಷಿಕರಿಗೆ ದೊರೆಯುವ ಯೋಜನೆ, ಸೌಲಭ್ಯಗಳನ್ನು ನಿರಂತರವಾಗಿ ನಿಡುತ್ತಾ ಬಂದಿದ್ದು ಇದೀಗ ಮುಂದುವರಿದು ಕೃಷಿಕರಿಗೆ ತಾಂತ್ರಿಕತೆಯನ್ನು ತಿಳಿಸುವ ಉದ್ದೇಶಕ್ಕೆ ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ಅಡಿಕೆ ಕೃಷಿಕರಿಗೆ ಬಹಳಷ್ಟು ಉಪಯುಕ್ತವಾಗಲಿದೆ ಎಂದು ಅವರು ಹೇಳಿದರು.

ಅಡಿಕೆ ತೋಟದಲ್ಲಿ ತರಬೇತಿ-ಸಂವಾದ:
ನುರಿತ ತರಬೇತುದಾರರಾದ ಆರ್.ಜಿ ಹೆಗ್ಡೆ ಕುಮಟ ಹಾಗೂ ರಮೇಶ್ ಭಟ್ ಕುಮಟರವರು ಕಾರ್ಬನ್ ಫೈಬರ್ ದೋಟಿಯಲ್ಲಿ ಅಡಿಕೆ ಕೊಯ್ಲು ಮತ್ತು ಔಷಧಿ ಸಿಂಪಡಣೆ ಬಗ್ಗೆ ತರಬೇತಿ ನೀಡಿದರು. ಸುಮಾರು ೫೦ರಷ್ಟು ಮಂದಿ ತರಬೇತಿ ಪಡೆದುಕೊಂಡರು. ನೂರಕ್ಕೂ ಅಧಿಕ ಕೃಷಿಕರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ತರಬೇತಿ ಬಳಿಕ ಸಂವಾದ ನಡೆಯಿತು. ಕೃಷಿಕರ ವಿವಿಧ ಪ್ರಶ್ನೆ, ಸಂಶಯಗಳಿಗೆ ತರಬೇತುದಾರರು ಉತ್ತರಿಸಿದರು. ಸಾಯ ಎಂಟರ್‌ಪ್ರೈಸಸ್‌ನ ಮಾರ್ಕೆಟಿಂಗ್ ವಿಭಾಗದ ಪದ್ಮನಾಭ ಹಾಗೂ ಟೆಕ್ನೀಶಿಯನ್ ತಾರನಾಥರವರು ತರಬೇತಿ ನೀಡಲು ಸಹಕರಿಸಿದರು.

ಸಂಘದಿಂದ ರೂ.10 ಸಾವಿರ ಸಬ್ಸಿಡಿ:
ಕಾರ್ಬನ್ ಫೈಬರ್ ದೋಟಿಯಲ್ಲಿ ಅಡಿಕೆ ಕೊಯ್ಲು ಮತ್ತು ಔಷಧಿ ಸಿಂಪಡಣೆ ತರಬೇತಿ ಪಡೆದು ಅವುಗಳ ಬಳಕೆ ಮಾಡುವ ಅಡಿಕೆ ಕೃಷಿಕರಿಗೆ ನಮ್ಮ ಸಹಕಾರಿ ಸಂಘದ ಮೂಲಕ ನೆರವು ನೀಡುವ ಯೋಚನೆಯಲ್ಲಿದ್ದೇವೆ. ಮುಂದಿನ ವರ್ಷ ಇದಕ್ಕಾಗಿ ರೂ.10 ಸಾವಿರ ಮೊತ್ತವನ್ನು ಸಬ್ಸಿಡಿ ಮೂಲಕ ಅಡಿಕೆ ಕೃಷಿಕರಿಗೆ ನೀಡುವ ಬಗ್ಗೆ ಯೋಜನೆ ಹಾಕಿಕೊಂಡಿದ್ದು ಅಡಿಕೆ ಕೃಷಿಕರನ್ನು ಪ್ರೋತ್ಸಾಹಿಸುವುದು ಮತ್ತು ಉತ್ತೇಜನ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಹಾಗೂ ಉಪಾಧ್ಯಕ್ಷ ಯಾಕೂಬ್ ಮುಲಾರ್ ಹೇಳಿದರು.

ವೇದಿಕೆಯಲ್ಲಿ ತರಬೇತುದಾರರಾದ ಆರ್.ಜಿ ಹೆಗ್ಡೆ ಕುಮಟ ಹಾಗೂ ರಮೇಶ್ ಭಟ್ ಕುಮಟ, ಶಿವರಾಮ ಕಲ್ಲೂರಾಯ ಕಡ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಂಡೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಕೊರಗಪ್ಪ ಸೊರಕೆ, ಮಾಜಿ ನಿರ್ದೇಶಕ ಶಿವರಾಮ ರೈ, ಮುಂಡೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಮುಲಾರ್ ಮತ್ತಿತರರು ಉಪಸ್ಥಿತರಿದ್ದರು. ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕ ಸುಧೀರ್ ಕೃಷ್ಣ ಪಡ್ಡಿಲ್ಲಾಯ ಸ್ವಾಗತಿಸಿದರು. ಉಪಾಧ್ಯಕ್ಷ ಯಾಕೂಬ್ ಮುಲಾರ್ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here