ಪರಿವಾರ ಬಂಟರ ಸಂಘದ ಮಂಗಳೂರು ಕೇಂದ್ರ ಸಮಿತಿ ಮಹಾಸಭೆಯಲ್ಲಿ ಜಾತಿವಾರು ಮೀಸಲಾತಿ ನೀಡುವಂತೆ ಕೇಂದ್ರ, ಕೇರಳ ಸರಕಾರಕ್ಕೆ ಮನವಿಗೆ ನಿರ್ಧಾರ

0


ಪುತ್ತೂರು:ಜಾತಿವಾರು ಮೀಸಲಾತಿಯಲ್ಲಿ ಪರಿವಾರ ಬಂಟರ ಸಮಾಜವನ್ನು ಸೇರ್ಪಡೆಗೊಳಿಸುವಂತೆ ಕೇಂದ್ರ ಹಾಗೂ ಕೇರಳ ಸರಕಾರಕ್ಕೆ ಮನವಿ ಮಾಡುವುದಾಗಿ ಪರಿವಾರ ಬಂಟರ ಸಂಘ ಮಂಗಳೂರು ಕೇಂದ್ರ ಸಮಿತಿಯ ೪೮ನೇ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯು ಮಾ.೨೭ರಂದು ಕಲ್ಲಾರೆ ಶ್ರೀಗುರುರಾಘವೇಂದ್ರ ಮಠದ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎ.ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿಚಾರ ಮಂಡಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಸುಧಾಕರ ಕೆ.ಪಿ.ಮಾತನಾಡಿ, ಪರಿವಾರ ಬಂಟರ ಸಮಾಜವು ಕರ್ನಾಟಕ ರಾಜ್ಯ ಸರಕಾರ ಜಾತಿವಾರು ಮೀಸಲಾತಿಯಲ್ಲಿ ೩ಬಿಯಲ್ಲಿದೆ. ಆದರೆ ಕೇಂದ್ರ ಸರಕಾರದ ಜಾತಿ ಮೀಸಲಾತಿ ಪಟ್ಟಿಯಲ್ಲಿ ಪರಿವಾರ ಬಂಟರ ಸಮಾಜದ ಹೆಸರಿಲ್ಲ. ಅಲ್ಲದೆ ಕೇರಳ ಸರಕಾರದಲ್ಲಿ ೨೦೧೫ರ ತನಕ ಜಾತಿವಾರು ಮೀಸಲಾತಿಯನ್ನು ಹೊಂದಿತ್ತು. ಆನಂತರ ಜಾತಿವಾರು ಮೀಸಲಾತಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಕುರಿತು ಈಗಾಗಲೇ ಸರಕಾರಕ್ಕೆ ಮನವಿ ಮಾಡಲಾಗಿದ್ದು ಮತ್ತೋಮ್ಮೆ ಕೇಂದ್ರ ಹಾಗೂ ಕೇರಳ ಸರಕಾರಗಳಿಗೆ ಮನವಿ ಮಾಡಿ ಪರಿವಾರ ಬಂಟ ಸಮಾಜಕ್ಕೆ ಜಾತಿವಾರು ಮೀಸಲಾತಿ ನೀಡುವಂತೆ ಆಗ್ರಹಿಸಲಾಗುವುದು ಎಂದು ಸುಧಾಕರ್ ಕೆಪಿ. ತಿಳಿಸಿದರು. ಇದಕ್ಕೆ ಮಹಾಸಭೆಯು ಒಪ್ಪಿಗೆ ನೀಡಿತು.

ಚಾರಿಟೇಬಲ್ ಟ್ರಸ್ಟ್ ರಚನೆ:
ಪರಿವಾರ ಬಂಟರ ಸಂಘದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪರಿವಾರ ಬಂಟ ಚಾರಿಟೇಬಲ್ ಟ್ರಸ್ಟ್ ರಚಿಸುವ ಬಗ್ಗೆ ಸಭೆಯಲ್ಲಿ ತಿಳಿಸಿ, ಅಭಿಪ್ರಾಯ ಕೇಳಿದಾಗ ಮಹಾಸಭೆಯು ಟ್ರಸ್ಟ್ ರಚನೆಗೆ ಅನುಮೋದನೆ ನೀಡಿದೆ. ಟ್ರಸ್ಟ್ ರಚನೆಯ ಬಗ್ಗೆ ಮಾಹಿತಿ ನೀಡಿದ ಮನೋಹರ್ ಕೊಳಕ್ಕಿಮಾರ್ ಮಾತನಾಡಿ, ಟ್ರಸ್ಟ್ ರಚಿಸಿಕೊಂಡು ಮುಂದೆ ಸಂಘದ ಎಲ್ಲಾ ಕಾರ್ಯಚಟುವಟಿಕೆಗಳು ಟ್ರಸ್ಟ್ ಮುಖಾಂತರವೇ ನಡೆಯಲಿದೆ. ಟ್ರಸ್ಟ್‌ಗೆ ಎಲ್ಲಾ ವಲಯಗಳಿಂದ ಸದಸ್ಯರನ್ನು ಸೇರಿಸಿಕೊಳ್ಳಲಾಗುವುದು. ಅಲ್ಲದೆ ಟ್ರಸ್ಟ್ ಮುಖಾಂತರ ಮುಂದೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ತಪಾಸಣೆ, ಮನೆಕಟ್ಟಲು ನೆರವು ಮೊದಲಾದ ಸೇವಾಕಾರ್ಯಗಳನ್ನು ನಡೆಸುವುದಾಗಿ ತಿಳಿಸಿದರು.

ಸಂಘಕ್ಕೆ ಸ್ವಂತ ನಿವೇಶನ ಖರೀದಿಯ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಇದಕ್ಕಾಗಿ ಆರ್ಥಿಕ ನೆರವು ನೀಡುವಂತೆ ಪ್ರಧಾನ ಕಾರ್ಯದರ್ಶಿ ಸುಧಾಕರ್‌ರವರು ಸಭೆಯಲ್ಲಿ ವಿನಂತಿಸಿದಾಗ ಹಲವು ಮಂದಿ ವಾಗ್ದಾನ ಮಾಡಿದರು. ಸಂಘಕ್ಕೆ ಮುಂದಿನ ಎರಡು ವರ್ಷಗಳಲ್ಲಿ ೫೦ ವರ್ಷ ತುಂಬಲಿದ್ದು ಸಂಘಕ್ಕೆ ಸಭಾಭವನ ನಿರ್ಮಾಣವಾಗಬೇಕು ಎಂದು ಸಭೆಯಿಂದ ಅಭಿಪ್ರಾಯಗಳು ವ್ಯಕ್ತವಾಯಿತು. ನಿವೇಶನ ಖರೀದಿಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಕಟ್ಟಡ ನಿರ್ಮಾಣಕ್ಕೆ ಪ್ರಾರಂಭಿಸುವುದಾಗಿ ಸಮಿತಿಯ ಪದಾಧಿಕಾರಿಗಳು ಸ್ಪಷ್ಟಪಡಿಸಿದರು. ಸಂಘದಲ್ಲಿ ಈಗ ಸುಮಾರು ರೂ.೩.೨೦ಕೋಟಿಯ ಸ್ಥಿರಾಸ್ಥಿಯಿದೆ. ಸಭಾಭವನ ನಿರ್ಮಾಣಕ್ಕೆ ಸುಮಾರು ರೂ.೨ಕೋಟಿಯ ಆವಶ್ಯಕತೆಯಿದೆ ಎಂದು ಪ್ರಧಾನ ಕಾರ್ಯದರ್ಶಿ ಸುಧಾಕರ್ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಸಮಾಜ ಬಾಂಧವರು ಸಹಕಾರ, ಪ್ರೋತ್ಸಾಹ ನೀಡುವಂತೆ ವಿನಂತಿಸಿದರು. ಕೇಂದ್ರ ಸಮಿತಿ ಸದಸ್ಯ ನಾರಾಯಣ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪರಿವಾರ ಯುವ ಸಮಾಜದ ಧ್ವಜ, ಲಾಂಛನ ಬಿಡುಗಡೆ:
ಪರಿವಾರ ಬಂಟರ ಸಂಘದ ನೂತನ ಪರಿವಾರ ಯುವ ಸಮಾಜದ ನೂತನ ಧ್ವಜ ಹಾಗೂ ಲಾಂಛನವನ್ನು ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಬಿಡುಗಡೆಗೊಳಿಸಿದರು. ಪರಿವಾರ ಯುವ ಸಮಾಜದ ಅಧ್ಯಕ್ಷ ಅಭಿಜಿತ್ ಕೊಳಕ್ಕಿಮಾರ್ ಯುವ ಸಮಾಜದ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.

ಪದಾಧಿಕಾರಿಗಳ ಘೋಷಣೆ:
ಮಂಗಳೂರು ಕೇಂದ್ರ ಸಮಿತಿ ಹಾಗೂ ಪುತ್ತೂರು ತಾಲೂಕು ಸಮಿತಿ ನೂತನ ಪದಾಧಿಗಳ ಪಟ್ಟಿಯನ್ನು ಪ್ರಧಾನ ಕಾರ್ಯದರ್ಶಿ ಸುಧಾಕರ್ ಘೋಷಣೆ ಮಾಡಿದರು.

ಸತ್ಯನಾರಾಯಣ ಪೂಜೆ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಗೀತಾ ಸದಾಶಿವ ನಾಕ್ ಪ್ರಾರ್ಥಿಸಿದರು. ಕೇಂದ್ರ ಸಮಿತಿ ಉಪಾಧ್ಯಕ್ಷ ಪಿ.ಉಮೇಶ್ ನಾಕ್ ಸ್ವಾಗತಿಸಿದರು. ಕೋಶಾಧಿಕಾರಿ ಉದಯಶಂಕರ್ ನಾಕ್ ವರದಿ ವಾಚಿಸಿದರು. ಜತೆ ಕಾರ್ಯದರ್ಶಿ ಬಾಲಕೃಷ್ಣ ನಾಕ್ ಅಮೈ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸುಧಾಕರ ಕೆ.ಪಿ. ಕಾರ್ಯಕ್ರಮ ನಿರೂಪಿಸಿ, ಲೆಕ್ಕಪತ್ರ ಮಂಡಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here