ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ಯಂತ್ರ ಹಸ್ತಾಂತರ, ಉದ್ಘಾಟನೆ

0

  • ಮೆಷಿನ್ ಕೊಟ್ಟು ತುಂಬಾ ಧನ್ಯತೆ ಬಂದಿದೆ – ಡಾ| ಡಿ.ವೀರೇಂದ್ರ ಹೆಗ್ಡೆ
  • ಸಿಟಿ ಸ್ಕ್ಯಾನ್ ವೈದ್ಯರಿಗೆ ವಿಶೇಷ ಕಣ್ಣು ಕೊಟ್ಟಂತೆ – ಡಾ.ಯು.ಪಿ.ಶಿವಾನಂದ
  • ದೇಹವು ಆರೋಗ್ಯ ತಪಾಸಣೆ ಮುಖ್ಯ – ಗಿರೀಶ್ ನಂದನ್
  • ಅಪ್‌ಗ್ರೇಡೇಷನ್ ಅಗತ್ಯ – ಡಾ. ನರಸಿಂಹ ಶರ್ಮ
  • ರೋಗ ಮುಕ್ತ ಜೀವನ ಎಲ್ಲರಿಗೂ ಸಿಗಲಿ – ಕೇಶವಪ್ರಸಾದ್ ಮುಳಿಯ
  • ಡಯಲಿಸಿಸ್ ಘಟಕಕ್ಕೆ ಮನವಿ – ಕೆ.ಜೀವಂಧರ್ ಜೈನ್
  • ಗುಣಮಟ್ಟದ ಸೇವೆ ನಮ್ಮ ಗುರಿ – ಡಾ. ಶ್ರೀಪತಿ ರಾವ್

 

 

ಪುತ್ತೂರು: ಅನ್ನದಾನ, ಅಭಯದಾನ, ವಿದ್ಯಾದಾನ ಮತ್ತು ಔಷಧದಾನಗಳೆಂಬ ಚತುರ್ದಾನ ಪರಂಪರೆ ಧರ್ಮದೇವತೆಗಳ ಅಪ್ಪಣೆಯಂತೆ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದೆ. ಪ್ರತೀ ಸಂಕ್ರಾಂತಿಯಂದು ಧರ್ಮದೇವತೆಗಳು ದಾನ ಪರಂಪರೆಯ ಬಗ್ಗೆ ಕೇಳುತ್ತವೆ. ಇದು ನಮ್ಮ ಬಾಧ್ಯತೆಯಾಗಿದೆ. ಸಿ.ಟಿ. ಸ್ಕ್ಯಾನ್ ಯಂತ್ರ ಕೊಡುಗೆ ಕ್ಷೇತ್ರದ ಔಷಧದಾನ ಪರಂಪರೆಯೊಳಗೆ ಸೇರುತ್ತದೆ. ಅದನ್ನು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಕೊಟ್ಟು ತುಂಬಾ ಧನ್ಯತೆ ಬಂದಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಡೆಯವರು ಹೇಳಿದರು.


ಪುತ್ತೂರಿನಲ್ಲಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೀಡಲಾದ ರೂ. ೨ ಕೋಟಿ ವೆಚ್ಚದ ಸಿ.ಟಿ. ಸ್ಕ್ಯಾನ್ ಯಂತ್ರವನ್ನು ಅವರು ಮಾ.೩೦ರಂದು ಲೋಕಾರ್ಪಣೆ ಮಾಡಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ೨೦೨೧-೨೨ನೇ ಸಾಲಿನಲ್ಲಿ ಯೋಜನೆಯ ವತಿಯಿಂದ ರಾಜ್ಯದ ೩ ಆಸ್ಪತ್ರೆಗಳಿಗೆ ೬ ಕೋಟಿ ರೂ. ವೆಚ್ಚದಲ್ಲಿ ಸಿ.ಟಿ. ಸ್ಕ್ಯಾನ್ ಯಂತ್ರ ಒದಗಿಸಲಾಗಿದೆ. ಕಾಸರಗೋಡಿಗೆ ಜನಾರ್ದನ ಆಸ್ಪತ್ರೆ, ಪುತ್ತೂರಿನ ಪ್ರಗತಿ ಆಸ್ಪತ್ರೆ ಮತ್ತು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ನಾಗೇಶ್ ಆಸ್ಪತ್ರೆಗೆ ನೀಡಲಾಗಿದೆ. ೨೦೨೨-೨೩ನೇ ಸಾಲಿನಲ್ಲಿ ರಾಜ್ಯದ ಇನ್ನೂ ೩ ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್ ಯಂತ್ರ ಒದಗಿಸಲಾಗುತ್ತದೆ ಎಂದವರು ನುಡಿದರು. ಗ್ರಾಮೀಣ ಭಾಗಕ್ಕೆ ವೈದ್ಯಕೀಯ ಸವಲತ್ತುಗಳ ಫಲ ಸಿಗಬೇಕು ಎಂಬುದು ಈ ಪರಿಕಲ್ಪನೆಯಲ್ಲಿದ್ದು, ಈ ನಿಟ್ಟಿನಲ್ಲಿ ಔಷಧೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ಸಂಶೋಧನೆ ಮೂಲಕ ಹೊಸ ಸವಲತ್ತುಗಳನ್ನು ಕಲ್ಪಿಸಲು ಸಾಧ್ಯವಿದೆ ಎಂದ ಅವರು ರೋಗಿಗಳು ಸೌಲಭ್ಯ ಪಡೆದು ಗುಣಮುಖರಾಗಿ ಧೀರ್ಘಾಯುಷಿಗಳಾಗಲಿ. ಸುತ್ತಮುತ್ತಲಿನ ಎಲ್ಲಾ ಆಸ್ಪತ್ರೆಗಳು ಈ ಸೌಲಭ್ಯವನ್ನು ಬಳಸಿಕೊಳ್ಳುವಂತಾಗಲಿ ಎಂದರು.

ಸಂಪೂರ್ಣ ಸುರಕ್ಷ ವಿಮಾ ಮೊತ್ತ ರೂ. 20 ಸಾವಿರ ಹೆಚ್ಚಳ:
ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ವಿಮಾ ಕವಚಕ್ಕೆ ೨೦೨೨-೨೩ನೇ ಸಾಲಿನಲ್ಲಿ ೭,೮೪,೯೫೮ ಲಕ್ಷ ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ. ೬೪೨ ಆಸ್ಪತ್ರೆಗಳಲ್ಲಿ ಇದರ ಸಔಲಭ್ಯ ಸಿಗಲಿದೆ. ಸಂಪೂರ್ಣ ಸುರಕ್ಷ ವೈಯಕ್ತಿಕ ವಿಮಾ ಮೊತ್ತವನ್ನು ರೂ. ೧೦ ಸಾವಿರ ರೂಪಾಯಿಂದ ರೂ. ೨೦ ಸಾವಿರ ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ವಿಮಾ ಯೋಜನೆಯ ಫಲವನ್ನು ಹೆಚ್ಚಿಸಿದ್ದೇವೆ. ಫಲವನ್ನು ಗಂಡ ಹೆಂಡತಿ ಇಬ್ಬರು ಪಡೆಯಬಹುದು ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ ಅವರು ಎಸ್‌ಕೆಆರ್‌ಡಿಪಿ ಮೂಲಕ ರೂ. ೧೭ ಸಾವಿರ ಕೋಟಿ ಸಾಲ ನೀಡಲಾಗಿದೆ. ಆದರೂ ನಾನು ನಗುತ್ತಲೇ ಇದ್ದೇನೆ. ಇದಕ್ಕೆ ಕಾರಣ ಶೇ. ೯೯.೯೯ರಷ್ಟು ಸಾಲ ವಸೂಲಾತಿಯಾಗಿದೆ. ಈ ತೃಪ್ತಿ ನನಗಿದೆ ಎಂದವರು ತಿಳಿಸಿದರು.

ಸಿಟಿ ಸ್ಕ್ಯಾನ್ ವೈದ್ಯರಿಗೆ ವಿಶೇಷ ಕಣ್ಣು ಕೊಟ್ಟಂತೆ:
ಮುಖ್ಯ ಅತಿಥಿಯಾಗಿ ಭಾಗವಹಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಮಾತನಾಡಿ ಹಿಂದೆ ವೈದ್ಯರುಗಳಿಗೆ ಮನುಷ್ಯನ ದೇಹದ ಒಳಭಾಗದಲ್ಲಿ ಆಗುವ ತೊಂದರೆ ಕಾಣುತ್ತಿರಲಿಲ್ಲ. ಇವತ್ತು ವಿಶೇಷ ಕಣ್ಣು ದೇಹದ ಒಳಗಿನ ಭಾಗಗಳನ್ನು ಕಣ್ಣಿಗೆ ಕಾಣುವ ರೀತಿಯಲ್ಲಿ ಪದಪದಗಳನ್ನು ಬೇರೆ ಬೇರೆಯಾಗಿ ತೋರಿಸುವ ಮೆಷಿನ್‌ನಿಂದಾಗಿ ರೋಗವನ್ನು ಬೇಗ ಪತ್ತೆ ಮಾಡಲು ಸಾಧ್ಯವಿದೆ. ಇದು ವೈದ್ಯರಿಗೂ ಮತ್ತು ರೋಗಿಗಳಿಗೂ ತುಂಬಾ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ಡಾ. ಡಿ.ವಿರೇಂದ್ರ ಹೆಗ್ಡೆಯವರು ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ನೀಡಿದ ಕೊಡುಗೆ ಪುತ್ತೂರು, ಸುಳ್ಯದ ಎಲ್ಲಾ ಜನರ ಆರೋಗ್ಯಕ್ಕೆ ಪ್ರಯೋಜನ ಆಗಲಿದೆ. ಡಾ. ಶ್ರೀಪತಿ ರಾವ್ ಅವರು ಯಾವುದೇ ಸಂದರ್ಭದಲ್ಲಿ ಪ್ರಗತಿಯಲ್ಲಿ ನಗುನಗುತಾ ಇರುವ ವೈದ್ಯರು. ಎಷ್ಟು ಸಮಯಕ್ಕೂ ಪೋನ್ ಕರೆಗೆ ಸ್ಪಂಧಿಸುವ ವೈದ್ಯರಾಗಿರುವ ಅವರಿಂದ ಜನರಿಗೆ ಉತ್ತಮ ಆರೋಗ್ಯ ಚಿಕಿತ್ಸೆ ಸಿಗುವಂತಾಗಲಿ. ರೋಗಿಗಳಿಗ ಸಂಬಂಧಿಸಿ ಯಾವುದೇ ವಿಭಾಗವನ್ನು ಹಂಚಿಕೊಳ್ಳುವುದಾದರೆ ಸುದ್ದಿ ಮಾದ್ಯಮ ನಿಮ್ಮೊಂದಿಗೆ ಇದೆ ಎಂದರು.

ದೇಹವು ಆರೋಗ್ಯ ತಪಾಸಣೆ ಮುಖ್ಯ:
ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ಮಾತನಾಡಿ ದೇಹವು ಒಂದು ಮೆಷಿನ್, ಇದಕ್ಕೂ ಸೂಫರ್ ಕಂಫ್ಯೂಟರ್ ಅಗತ್ಯ. ನಮ್ಮ ವಾಹನಗಳನ್ನು ಹೇಗೆ ನಾವು ತಪಾಸಣೆಗೊಳಪಡಿಸುತ್ತೇವೆಯೋ ಅದೇ ರೀತಿ ದೇಹದ ಆರೋಗ್ಯ ತಪಾಸಣೆಯೂ ಅಗತ್ಯ. ಇಂತಹ ಸಂದರ್ಭದಲ್ಲಿ ತಂತ್ರಜ್ಞಾನದ ಮೂಲಕ ಅತಿ ಕಡಿಮೆ ಸಮಯದಲ್ಲಿ ರೋಗ ಪತ್ತೆ ಮಾಡುವ ಮೆಷಿನ್ ಮೂಲಕ ಆರೋಗ್ಯ ಕಾಪಾಡುವುದು ಜನರಿಗೆ ಪ್ರಯೋಜವಾಗಲಿದೆ ಎಂದರು.

ಅಪ್‌ಗ್ರೇಡೇಷನ್ ಅಗತ್ಯ:
ಐ.ಎಮ್.ಎ ಅಧ್ಯಕ್ಷ ಡಾ. ನರಸಿಂಹ ಶರ್ಮ ಅವರು ಮಾತನಾಡಿ ಮುಂದುವರಿಯುವ ಸಂದರ್ಭದಲ್ಲಿ ಅಪ್‌ಗ್ರೇಡೇಷನ್ ಮುಖ್ಯ. ನಮಗೆಲ್ಲಾ ಮಾರ್ಗದರ್ಶಕರಾದ ಡಾ. ಶ್ರೀಪತಿ ರಾವ್ ಅವರು ಯಾವತ್ತು ಕೂಡಾ ಹೊಸ ವಿಚಾರದಲ್ಲೇ ಇರುತ್ತಾರೆ. ಅವರ ಈ ಹೊಸ ವಿಚಾರಗಳು, ಅಪ್‌ಗ್ರೇಡೇಷನ್ ಜನರ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದರು.

ರೋಗ ಮುಕ್ತ ಜೀವನ ಎಲ್ಲರಿಗೂ ಸಿಗಲಿ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ರೋಗಗ್ರಸ್ತ ಮತ್ತು ರೋಗಮುಕ್ತ ಜೀವನದಲ್ಲಿ ರೋಗಮುಕ್ತ ಜೀವನವೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರು ಕೊಡುಗೆಯಾಗಿ ನೀಡಿದ ಹೊಸ ತಂತ್ರಜ್ಞಾನ ಅಳವಡಿಸಿಕೊಂಡ ಸಿಟಿ ಸ್ಕ್ಯಾನ್‌ನಿಂದ ಎಲ್ಲರಿಗೂ ರೋಗ ಮುಕ್ತ ಜೀವನ ಲಭಿಸಲಿ ಎಂದರು.

ಡಯಾಲಿಸಿಸ್ ಘಟಕಕ್ಕೆ ಮನವಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷ ಕೆ. ಜೀವಂಧರ ಜೈನ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಪುತ್ತೂರಿನ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಿ.ಟಿ. ಸ್ಕ್ಯಾನ್ ಯಂತ್ರ ಲಭ್ಯವಾಗಿರುವುದು ಪುತ್ತೂರಿನ ಪಾಲಿಗೆ ವರದಾನವಾಗಿದೆ. ಈ ಭಾಗದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವವರಿಗಾಗಿ ಸಾಕಷ್ಟು ಪ್ರಮಾಣದಲ್ಲಿ ಡಯಾಲಿಸಿಸಿ ಯಂತ್ರಗಳಿಲ್ಲ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ೫ ಯಂತ್ರಗಳಿದ್ದರೂ ಸಾಲುತ್ತಿಲ್ಲ. ಧರ್ಮಸ್ಥಳ ವತಿಯಿಂದ ಡಯಾಲಿಸಿಸ್ ಘಟಕ ಒದಗಿಸುವ ಬಗ್ಗೆ ಆದ್ಯತೆ ನೀಡಬೇಕು ಎಂದು ಡಾ. ಹೆಗ್ಗಡೆಯವರಿಗೆ ಮನವಿ ಮಾಡಿದರು.

42 ಪ್ರಕರಣಗಳನ್ನು ಸ್ಕ್ಯಾನ್ ಮಾಡಿ ವರದಿ ಪಡೆಯಬಹುದು:
ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಅವರು ಮಾತನಾಡಿ ಸಿ.ಟಿ. ಸ್ಕ್ಯಾನ್ ಯಂತ್ರದ ಬಗ್ಗೆ ಅಪೇಕ್ಷೆ ಆಹ್ವಾನಿಸಿದಾಗ ರಾಜ್ಯದ ೧೮ ಆಸ್ಪತ್ರೆಗಳಿಂದ ಬೇಡಿಕೆ ಬಂದಿದ್ದು, ಆಯ್ಕೆ ಸಮಿತಿಯು ಆಸ್ಪತ್ರೆಗಳಿಗೆ ಭೇಟಿ ನೀಡಿ ವರದಿ ನೀಡಿದ ಬಳಿಕ ೩ ಆಸ್ಪತ್ರೆಗಳನ್ನು ಆಯ್ಕೆ ಮಾಡಿ ರೂ. ೬ ಕೋಟಿ ಮಂಜೂರು ಮಾಡಲಾಯಿತು. ಯಂತ್ರದ ನಿರ್ವಹಣೆ, ತಂತ್ರಜ್ಞರ ನೇಮಕ ಆಸ್ಪತ್ರೆ ವತಿಯಿಂದ ನಡೆಯುತ್ತದೆ. ನ್ಯಾಯಯುತ ದರದಲ್ಲಿ ದೇಹದ ೪೨ ಪ್ರಕರಣಗಳನ್ನು ಈ ಯಂತ್ರದಲ್ಲಿ ಸ್ಕ್ಯಾನ್ ಮಾಡಿ ವರದಿ ಪಡೆಯಬಹುದಾಗಿದೆ. ಈ ಮೆಷಿನ್ ಅನ್ನು ಉಚಿತವಾಗಿ ನೀಡಿಲ್ಲ. ತಿಂಗಳ ಆದಾಯದ ಶೇ.೩೦ ಅನ್ನು ಆಸ್ಪತ್ರೆಯವರು ಎಸ್‌ಕೆಡಿಆರ್‌ಡಿಪಿಗೆ ಪಾವತಿಸಬೇಕು. ೭೦ ಶೇ. ಆಸ್ಪತ್ರೆಗೆ ಸಂದಾಯವಾಗುತ್ತದೆ. ಯಂತ್ರವನ್ನು ೩ ವರ್ಷಗಳ ಕಾಲ ಕಂಪನಿಯವರೇ ಸರ್ವಿಸ್ ಮಾಡುತ್ತಾರೆ ಎಂದರು.

ಗುಣಮಟ್ಟದ ಸೇವೆ ನಮ್ಮ ಗುರಿ:
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಶ್ರೀಪತಿ ರಾವ್ ಅವರು ಸ್ವಾಗತಿಸಿ ಮಾತನಾಡಿ ಗ್ರಾಮೀಣ ಮಟ್ಟದ ಜನರಿಗೆ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಅವರಿಗೆ ಗುಣಮಟ್ಟದ ಸೇವೆ ಸಿಗಬೇಕೆಂಬುದು ನಮ್ಮ ದೇಯ. ಅದರಂತೆ ಕೇವಲ ೧೦ ಬೆಡ್‌ನ ಆಸ್ಪತ್ರೆಯಿಂದ ಇವತ್ತು ನೂರು ಬೆಡ್ ಆಸ್ಪತ್ರೆಯನ್ನು ಮಾಡಿಕೊಂಡು ಜನರಿಗೆ ಆರೋಗ್ಯ ಕೊಡುವ ಭರವಸೆ ನೀಡಿದ್ದೇವೆ. ೨೦೧೬ರಲ್ಲಿ ಪ್ರಥಮವಾಗಿ ಪುತ್ತೂರಿನಲ್ಲಿ ಎನ್‌ಎಬಿಎಚ್, ಐಎಸ್‌ಒ ಪ್ರಮಾಣ ಪತ್ರ ಲಭಿಸಿತ್ತು. ಇದರ ಜೊತೆಗೆ ಎ.ಎಮ್.ಸಿ ಆಸ್ಪತ್ರೆಯೊಂದಿಗೆ ಟೈಅಪ್ ಮಾಡಿಕೊಂಡಿದ್ದೆವೆ. ಒಟ್ಟಿನಲ್ಲಿ ಆಸ್ಪತ್ರೆಯಿಂದ ರೋಗಿಗಳಿಗೆ ಉತ್ತಮ ಸೌಲಭ್ಯ ಸಿಗಬೇಕೆಂಬುದು ನಮ್ಮ ಗುರಿ ಎಂದರು. ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಮಹಾಬಲ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಸ್ಮಿತಾ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವತಿಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಕಚೇರಿ, ಯೋಜನಾಧಿಕಾರಿ ಕಚೇರಿ, ಜನಜಾಗೃತಿ ವೇದಿಕೆ, ಎಸ್.ಬಿ.ಎಮ್ ಬ್ಯಾಂಕ್‌ನ ಶಶಿಕಿರಣ್ ಅವರು ಡಾ. ಹೆಗ್ಗಡೆಯವರಿಗೆ ಅಭಿವಂದನೆ ಸಲ್ಲಿಸಿದರು. ಪ್ರಗತಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಸುದಾ ರಾವ್ ವಂದಿಸಿದರು. ಅನ್ನಪೂರ್ಣ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರು. ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ತಾಲೂಕು ಯೋಜನಾಧಿಕಾರಿ ಆನಂದ್, ಕೃಷಿಯಂತ್ರಧಾರ ಯೋಜನೆಯ ಯೋಜನಾಧಿಕಾರಿ ಉಮೇಶ್, ತಾಲೂಕು ಕೃಷಿ ಅಧಿಕಾರಿ ಉಮೇಶ್ ಸಹಕರಿಸಿದರು.

LEAVE A REPLY

Please enter your comment!
Please enter your name here