ಡಾ. ವಿನಾಯಕ ಭಟ್ಟ ಗಾಳಿಮನೆಯವರ ಭಾರತೀಯ ಕ್ಯಾಲೆಂಡರ್‌ಗೆ ಹೆಚ್ಚಿದ ಬೇಡಿಕೆ

0

  • ಯುಗಾದಿಯಿಂದ ಯುಗಾದಿಯೆಡೆಗಿನ ದಿನದರ್ಶಿಕೆಯ ಪ್ರಕಟಣೆಗೆ ಜನಮೆಚ್ಚುಗೆ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಅವರು ಕಳೆದ ಒಂದೂವರೆ ವರ್ಷಗಳಿಂದ ಪ್ರತಿದಿನ ಭಾರತೀಯ ಕಾಲಮಾನಕ್ಕನುಗುಣವಾದ ದಿನದರ್ಶಿಕೆಯನ್ನು (ಕ್ಯಾಲೆಂಡರ್) ರೂಪಿಸುತ್ತಿದ್ದು, ಅದಕ್ಕೆ ಅಪಾರ ಬೆಂಬಲ ವ್ಯಕ್ತವಾಗಿದೆ.

ಪ್ರತಿದಿನವೂ ಸಾಮಾಜಿಕ ಜಾಲತಾಣಗಳ ಮೂಲಕ ಆಯಾ ದಿನದ ದಿನದರ್ಶಿಕೆಯನ್ನು ಪ್ರಸಾರ ಮಾಡುತ್ತಿರುವ ಡಾ.ವಿನಾಯಕ ಭಟ್ಟ ಅವರು ಕಳೆದ ವರ್ಷ ನಗರದ ಜಿ ಎಲ್ ಆಚಾರ್ಯ ಸ್ವರ್ಣೋದ್ಯಮ ಘಟಕ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಯುಗಾದಿಯಿಂದ ಯುಗಾದಿಯೆಡೆಗಿನ ಭಾರತೀಯ ಕಾಲಮಾನಕ್ಕನುಗುಣವಾದ ದಿನದರ್ಶಿಕೆಯನ್ನು ಮುದ್ರಿಣಗೊಳಿಸಿ ಭಾರತೀಯತೆಯೆಡೆಗೆ ಜನಜಾಗೃತಿ ಮೂಡಿಸಿದ್ದರು. ಹೀಗೆ ಮುದ್ರಿಣಗೊಳಿಸಿದ ಕ್ಯಾಲೆಂಡರ್ ರಾಜ್ಯಾದ್ಯಂತ ಪ್ರಚಾರ ಕಂಡು ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಪರಿಣಾಮವಾಗಿ ಈ ವರ್ಷವೂ ಮತ್ತೊಮ್ಮೆ ಭಾರತೀಯ ಕಾಲಗಣನೆಯ ದಿನದರ್ಶಿಕೆ ಮುದ್ರಣಗೊಳ್ಳುವಂತಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿಗೆ ಸಿಲುಕಿ ದೇಸೀಯ ಕಲ್ಪನೆಗಳು ಮರೆಯಾಗುತ್ತಿರುವ ಬಗೆಗೆ ಸಾಕಷ್ಟು ಮಂದಿ ಕಳವಳ ವ್ಯಕ್ತಪಡಿಸುತ್ತಿರುವ ಆಧುನಿಕ ಸಂದರ್ಭದಲ್ಲಿ ಭಾರತೀಯತೆಯ ಬಗೆಗೆ ಜಾಗೃತಿ ಮೂಡಿಸುವ ಪ್ರಯತ್ನ ಈ ದಿನದರ್ಶಿಕೆಯ ಮೂಲಕ ನಡೆಯುತ್ತಿದೆ.

’ಆಮ್ನಾಯಾಃ ಭಾರತೀಯ ದಿನದರ್ಶಿಕಾ – ಗನ್ದವಹಸದನಂ’ ಹೆಸರಿನಡಿ ಭಾರತೀಯ ದಿನದರ್ಶಿಕೆಯ ನಿತ್ಯ ಅವತರಣಿಕೆ ಹಾಗೂ ವಾರ್ಷಿಕ ಮುದ್ರಿತ ಪ್ರತಿಯ ಕಾರ್ಯ ನಡೆಯುತ್ತಿದೆ. ಡಾ.ವಿನಾಯಕ ಭಟ್ಟ ಅವರು ರೂಪಿಸುತ್ತಿರುವ ಈ ದಿನದರ್ಶಿಕೆ ಪಂಚಾಂಗದ ನೆಲೆಯಲ್ಲಿ ಸಿದ್ಧವಾಗಿದ್ದು, ಆಯಾ ದಿನದ ಗಳಿಗೆ, ಮುಹೂರ್ತ, ಮಾಸ ಇತ್ಯಾದಿಗಳನ್ನು ಭಾರತೀಯ ಕಾಲಮಾನಕ್ಕನುಗುಣವಾಗಿ ಸೂಚಿಸುತ್ತಿದೆ. ಇದರಿಂದಾಗಿ ಸುಲಭಕ್ಕೆ ಭಾರತೀಯ ಕಾಲಮಾನದ ಗಣನೆ ಸಾಧ್ಯವಾಗುತ್ತಿದೆ. ದಿನದರ್ಶಿಕೆಯಲ್ಲಿ ಆಯಾ ಭಾರತೀಯ ದಿನವನ್ನು ಯಾವ ತಾರೀಕಿನೊಂದಿಗೆ ಗುರುತಿಸಲಾಗುತ್ತದೆ ಎಂಬ ಆಧುನಿಕ ಕ್ಯಾಲೆಂಡರ್‌ನ ದಿನಾಂಕವನ್ನೂ ನಮೂದಿಸುವುದರಿಂದ ಜನರಿಗೆ ಸುಲಭಕ್ಕೆ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಹಾಗೆಯೇ ಭಾರತೀಯ ದಿನದರ್ಶಿಕೆಯನ್ನು ಕರಗತ ಮಾಡಿಕೊಳ್ಳುವುದಕ್ಕೂ ಇದು ಸಹಾಯ ಮಾಡುತ್ತಿದೆ. ಹಾಗೆಯೇ ಯುವಸಮುದಾಯದಲ್ಲಿ ಭಾರತೀಯ ಕಲ್ಪನೆಯ ಪ್ರಸರಣದಲ್ಲಿ ಈ ದಿನದರ್ಶಿಕೆ ಮಹತ್ವದ ಪಾತ್ರ ನಿರ್ವಹಿಸುತ್ತಿದೆ.

ಡಾ.ಗಾಳಿಮನೆಯವರ ಪ್ರೇರಣೆಯಿಂದ ಅದಾಗಲೇ ಕೆಲವು ಸಂಘ ಸಂಸ್ಥೆಗಳ ಮೂಲಕವೂ ಭಾರತೀಯ ದಿನದರ್ಶಿಕೆಗಳನ್ನು ಆಯಾ ದಿನ ರೂಪಿಸಿ ಪ್ರಸಾರ ಮಾಡುವ ಕಾರ್ಯ ನಡೆಯುತ್ತಿದೆ. ಜತೆಗೆ ಡಾ.ಗಾಳಿಮನೆಯವರ ದಿನದರ್ಶಿಕೆಯನ್ನು ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಮುದ್ರಿಸಿ ಆಯಾ ಪ್ರದೇಶದಲ್ಲಿ ಮನೆಗಳಿಗೆ ತಲಪಿಸುವ ಉತ್ಸಾಹವನ್ನೂ ತೋರಿದ್ದಾರೆ. ಹೀಗಾಗಿ ಭಾರತೀಯತೆಯೆಡೆಗಿನ ಸಣ್ಣ ಪ್ರಯತ್ನ ಸದ್ದಿಲ್ಲದೆ ಪಸರಿಸುವಂತಾಗಿದೆ. ಅಂಬಿಕಾ ಮಹಾವಿದ್ಯಾಲಯ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳ ಆಹ್ವಾನಪತ್ರಿಕೆಯಲ್ಲಿ ಆಧುನಿಕ ಕ್ಯಾಲೆಂಡರ್ ದಿನಾಂಕದೊಂದಿಗೆ ಡಾ.ವಿನಾಯಕ ಭಟ್ಟ ಅವರು ರೂಪಿಸಿರುವ ಭಾರತೀಯ ದಿನದರ್ಶಿಕೆಯ ಆಧಾರದ ದಿನಾಂಕವನ್ನೂ ನಮೂದಿಸುತ್ತಿರುವುದು ಉಲ್ಲೇಖನೀಯ.

ಡಾ.ವಿನಾಯಕ ಭಟ್ಟರ ಈ ಪ್ರಯತ್ನಕ್ಕೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿಗಳಾಗಿರುವ ರಾಜಶ್ರೀ ಎಸ್ ನಟ್ಟೋಜ ಬೆಂಬಲವಾಗಿ ನಿಂತಿದ್ದಾರೆ. ತಮ್ಮ ಸಂಸ್ಥೆಯ ವತಿಯಿಂದ ಹಣಕಾಸಿನ ಸಹಕಾರವನ್ನೂ ನೀಡಿ ದಿನದರ್ಶಿಕೆ ಮುದ್ರಣ ಕಾಣುವಲ್ಲಿ ಸಹಕರಿಸಿದ್ದಾರೆ. ಇವರ ಜತೆಗೆ ಪುತ್ತೂರಿನ ಜಿ.ಎಲ್.ಆಚಾರ್ಯ ಜ್ಯುವೆಲ್ಸ್‌ನ ಮಾಲಕರಾದ ಬಲರಾಮ ಆಚಾರ್ಯರೂ ಈ ದಿನದರ್ಶಿಕೆಯ ಪ್ರಾಯೋಜಕತ್ವದ ಒಂದು ಪಾಲನ್ನು ಭರಿಸುತ್ತಿದ್ದಾರೆ. ಇದರಿಂದಾಗಿ ಭಾರತೀಯತೆಯ ಪ್ರಸಾರಕ್ಕೆ ಸಾಕಷ್ಟು ಬಲಬಂದಂತಾಗಿದೆ.

ಈ ನಡುವೆ, ಡಾ.ವಿನಾಯಕ ಭಟ್ಟ ಅವರು ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಆಯಾ ದಿನಗಳ ದಿನದರ್ಶಿಕೆ ಪ್ರತಿನಿತ್ಯ ನಾಲ್ಕರಿಂದ ಐದು ಸಾವಿರ ಮಂದಿಗೆ ತಲಪುತ್ತಿದೆ. ಸಂಸ್ಕೃತ, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ತಯಾರಾಗುತ್ತಿರುವುದರಿಂದ ಆಯಾ ದಿನದ ಗಣನೆ ಲೆಕ್ಕಾಚಾರಗಳು ದೇಶ ಭಾಷೆಯನ್ನು ಮೀರಿ ಜನಸಮುದಾಯವನ್ನು ತಲಪುತ್ತಿದೆ. ಮುಂದೆ ಮತ್ತಷ್ಟು ಭಾಷೆಗಳಲ್ಲಿ ಇದನ್ನು ರೂಪಿಸಿ ’ಭಾರತಕ್ಕೆ ಭಾರತದ್ದೇ ದಿನದರ್ಶಿಕೆ’ ಕಲ್ಪನೆಯ ಸಾಕಾರದೆಡೆಗೆ ಹೆಜ್ಜೆಯಿಡುವ ಯೋಚನೆ ಭಟ್ಟರಿಗಿದೆ.

‘ನಾನು 2020 ರ ಲಾಕ್ ಡೌನ್ ಸಮಯದಲ್ಲಿ ’ಆಮ್ನಾಯಃ ಅಂತರ್ಜಾಲೀಯ ವೇದಸಂಸ್ಕೃತ ಶಾಲಾ’ ವನ್ನು ಸ್ಥಾಪಿಸಿ ಆ ಮೂಲಕ ಆಸಕ್ತರಿಗೆ ಸಂಸ್ಕೃತ ಹಾಗೂ ವೇದ ತರಗತಿ ಬೋಧಿಸುತ್ತಿರುವಾಗ ಮೂಡಿದ ಪರಿಕಲ್ಪನೆ ಈ ಭಾರತೀಯ ದಿನದರ್ಶಿಕಾ. ಮನೆ ಮನೆಗಳಲ್ಲಿ, ಆಹ್ವಾನ ಪತ್ರಿಕೆಗಳಲ್ಲಿ ಅಂತರಾಷ್ಟ್ರೀಯ ಕ್ಯಾಲಂಡರಿನೊಂದಿಗೆ ಈ ದಿನದರ್ಶಿಕೆ ಕೂಡ ರಾರಾಜಿಬೇಕೆಂಬುದು ನನ್ನ ಕನಸು. ನನ್ನ ಈ ಪ್ರಯತ್ನದ ಹಿಂದೆ ಸಂಸ್ಥೆಯ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಸಹಕಾರ, ಜಿ.ಎಲ್.ಆಚಾರ್ಯ ಜುವೆಲ್ಲರ‍್ಸ್ ಸಂಸ್ಥೆಯ ಪಾತ್ರ ಮಹತ್ತರವಾದದ್ದು’ ಎಂಬುದು ಡಾ.ವಿನಾಯಕ ಭಟ್ಟ ಅವರ ಮಾತು.

LEAVE A REPLY

Please enter your comment!
Please enter your name here