ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ|ದಿನಕರ ರಾವ್‌ರವರಿಗೆ ಬೀಳ್ಕೊಡುಗೆ

0

ಪುತ್ತೂರು:ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಹಾಗೂ ಕಾಲೇಜಿನ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ|ದಿನಕರ್ ರಾವ್‌ರವರ ಬೀಳ್ಕೊಡುಗೆ ಸಮಾರಂಭ ಮಾ.31 ರಂದು ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಜರಗಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೆನ್ಹಸ್‌ರವರು ನಿವೃತ್ತರಾದ ಪ್ರೊ|ದಿನಕರ್ ರಾವ್‌ರವರನ್ನು ಬೀಳ್ಕೊಡುಗೆ ಸನ್ಮಾನವನ್ನು ನೆರವೇರಿಸಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪಾವಿತ್ರ್ಯದ್ದು. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಕರ್ತವ್ಯ, ಹೊಣೆಗಾರಿಕೆ ಶಿಕ್ಷಕರಿಗೆ ಇದೆ. ವೃತ್ತಿಗೆ ಸಂಪೂರ್ಣ ಬದ್ಧತೆ, ನಿಷ್ಠೆಯಿಂದ ಕರ್ತವ್ಯವನ್ನು ನಿರ್ವಹಿಸುವ ಶಿಕ್ಷಕರನ್ನು ವಿದ್ಯಾರ್ಥಿಗಳು ಮೆಚ್ಚಿಕೊಳ್ಳುತ್ತಾರೆ. ವಿದ್ಯಾರ್ಥಿಗಳನ್ನು ತಮ್ಮ ಪಾಠ ಪ್ರವಚನಗಳಿಂದ ಮೆಚ್ಚಿಸಬೇಕೇ ಹೊರತು, ಪಾಠ ಮಾಡದೇ ಹೆಚ್ಚಿನ ಅಂಕ ನೀಡಿ ಮೆಚ್ಚುಗೆ ಗಳಿಸುವುದಲ್ಲ. ಶಿಸ್ತಿನ ವರ್ತನೆ ಇಂದು ವಿದ್ಯಾರ್ಥಿಗಳಿಗೆ ಖುಷಿ ಕೊಡದೆ ಹೋದರೂ, ಮುಂದೊಂದು ದಿನ ಅವರು ಮೆಚ್ಚಿಕೊಳ್ಳುವುದು ಶಿಸ್ತಿನ ಶಿಕ್ಷಕರನ್ನು. ಪ್ರೊ.ದಿನಕರ ರಾವ್‌ರಂಥಹ ಪ್ರಾಧ್ಯಾಪಕರು ತಮ್ಮ ವೃತ್ತಿಯಲ್ಲಿ ತೋರಿದ ಬದ್ಧತೆ, ಶಿಸ್ತು, ಪ್ರಾಮಾಣಿಕತೆ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಪ್ರೊ|ದಿನಕರ ರಾವ್‌ರವರು ಫಿಲೋಮಿನಾ ಕಾಲೇಜಿಗೆ ಅನನ್ಯ ಸೇವೆ ನೀಡಿದ್ದಾರೆ. ಕಾಲೇಜಿನ ಗ್ರಾಹಕ ವೇದಿಕೆಯ ಸಂಚಾಲಕರಾಗಿ ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕು ಮತ್ತು ಕರ್ತವ್ಯದ ಕುರಿತು ಅರಿವು ಮೂಡಿಸಿದ್ದಾರೆ. ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸಮಾಜದೊಂದಿಗೆ ಕಾಲೇಜಿನ ಸಂಪರ್ಕವನ್ನು ಬಹಳಷ್ಟು ವಿಸ್ತರಿಸಿದವರು. ಅವರ ಶೈಕ್ಷಣಿಕ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ವಾರ್ಷಿಕ ಸಂಚಿಕೆಯ ಸಂಪಾದಕರಾದ ಪ್ರೊ|ವಿನಯಚಂದ್ರರವರು ಸಂಚಿಕೆಯ ಕುರಿತು ಮಾಹಿತಿ ನೀಡಿದರು. ವಿಜ್ಞಾನ ನಿಕಾಯದ ಡೀನ್ ಪ್ರೊ|ಉದಯ, ಶಿಕ್ಷಕರ ಕಾರ್ಯದರ್ಶಿ ಪ್ರೊ|ಗಣೇಶ್ ಭಟ್, ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರೊ|ಝುಬೇರ್ ಸ್ವಾಗತಿಸಿದರು. ಪ್ರೊ|ಪ್ರಶಾಂತ್ ರೈ ಪ್ರಾರ್ಥಿಸಿದರು. ಶಿಕ್ಷಕರ ಸಂಘದ ಕಾರ್ಯದರ್ಶಿ ಡಾ|ಡಿಂಪಲ್ ಫೆರ್ನಾ೦ಡಿಸ್ ವಂದಿಸಿದರು. ಶ್ರೀಮತಿ ವಾರಿಜಾ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್

ಸನ್ಮಾನವನ್ನು ಸ್ವೀಕರಿಸುತ್ತ ತನ್ನ ಮೂವತ್ತೇಳು ವರ್ಷಗಳ ಶೈಕ್ಷಣಿಕ ಹಾದಿಯನ್ನು ಮೆಲುಕು ಹಾಕಿದ ಪ್ರೊ|ದಿನಕರ ರಾವ್‌ರವರು, ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಸಲ್ಲದು, ವಿದ್ಯಾರ್ಥಿಗಳು ಶಿಕ್ಷಕರ ಕುರಿತು ನಿಜವಾದ ಮೌಲೀಕರಣವನ್ನು ಮಾಡುತ್ತಾರೆ. ಉತ್ತಮ ಪ್ರಾಧ್ಯಾಪಕರಾಗಲು ಶ್ರಮ ವಹಿಸಬೇಕು ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here