ಶಿರಾಡಿ: ಹಸಿ ಮೀನು ಮಾರಾಟದ ಹಕ್ಕು ಏಲಂ 3 ವಾರ್ಡ್‌ಗಳಲ್ಲಿ ರೂ,4.5೦ ಲಕ್ಷಕ್ಕೆ ಏಲಂ ಖಾಯಂ

0

ನೆಲ್ಯಾಡಿ: ಶಿರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟದ ಹಕ್ಕಿನ ಬಹಿರಂಗ ಏಲಂ ಎ.5ರಂದು ಗ್ರಾ.ಪಂ.ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ವಿನೀತಾ ತಂಗಚ್ಚನ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. 3 ವಾರ್ಡ್‌ಗಳಲ್ಲಿ 1 ವರ್ಷಕ್ಕೆ ಒಟ್ಟು 4.5೦ ಲಕ್ಷ ರೂಪಾಯಿಗೆ ಹಸಿ ಮೀನು ಮಾರಾಟದ ಹಕ್ಕು ಖಾಯಂಗೊಂಡಿದೆ.

2022ರ ಎ.6ರಿಂದ 2032ರ ಮಾ.31ರ ತನಕದ ಅವಧಿಗೆ ಶಿರಾಡಿ ಗ್ರಾಮ ಪಂಚಾಯತ್‌ನ ಉದನೆ ವ್ಯಾಪ್ತಿಯ ವಾರ್ಡ್ 1ರಲ್ಲಿ ಮೀನು ಮಾರಾಟದ ಹಕ್ಕನ್ನು 1.5೦ ಲಕ್ಷ ರೂಪಾಯಿಗೆ ವಿ.ಜೆ.ಮ್ಯಾಥ್ಯುರವರು ಪಡೆದುಕೊಂಡಿದ್ದಾರೆ. ಶಿರಾಡಿ, ಅಡ್ಡಹೊಳೆ, ಗುಂಡ್ಯ ವ್ಯಾಪ್ತಿಯ ವಾರ್ಡ್ 2ರಲ್ಲಿ ಮೀನು ಮಾರಾಟದ ಹಕ್ಕನ್ನು 1.5೦ ಲಕ್ಷ ರೂಪಾಯಿಗೆ ತೋಮಸ್ ಹಾಗೂ ವಾರ್ಡ್ ೩ರಲ್ಲಿ ಮೀನು ಮಾರಾಟದ ಹಕ್ಕನ್ನು 1.5೦ ಲಕ್ಷ ರೂಪಾಯಿಗೆ ಕೆ.ಎಂ.ಹನೀಫ್‌ರವರು ಪಡೆದುಕೊಂಡಿದ್ದಾರೆ. ಅಬ್ದುಲ್ ರಜಾಕ್, ಸುಜಿತ್, ದಿಲಕ್ ಕುಮಾರ್‌ರವರು ಬಿಡ್ಡುದಾರರಾಗಿ ಏಲಂನಲ್ಲಿ ಭಾಗವಹಿಸಿದ್ದರು

ಗ್ರಾ.ಪಂ.ಅಧ್ಯಕ್ಷೆ ವಿನೀತಾ ತಂಗಚ್ಚನ್‌ರವರು ಮಾತನಾಡಿ, ಹಸಿ ಮೀನು ಮಾರಾಟದ ಹಕ್ಕನ್ನು ಏಲಂನಲ್ಲಿ ಪಡೆದುಕೊಂಡವರು ಮುಂದಿನ ದಿನಗಳಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದು. ಏಲಂ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಷರತ್ತು ಉಲ್ಲಂಘನೆ ಮಾಡಿರುವುದು ಗ್ರಾಮ ಪಂಚಾಯತ್‌ನ ಗಮನಕ್ಕೆ ಬಂದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ. ಗುಣಮಟ್ಟದ ಮೀನು ಮಾರಾಟ ಮಾಡುವ ಮೂಲಕ ಗ್ರಾಮಸ್ಥರಿಗೆ ಉತ್ತಮ ಸೇವೆ ನೀಡಬೇಕೆಂದು ಹೇಳಿದರು. ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್, ಸದಸ್ಯರಾದ ಎಂ.ಕೆ.ಪೌಲೋಸ್, ಸಣ್ಣಿ ಜಾನ್, ರಾಧಾ ತಂಗಪ್ಪನ್, ಲಕ್ಷ್ಮಣ ಕುದ್ಕೋಳಿ ಉಪಸ್ಥಿತರಿದ್ದರು. ಪಿಡಿಒ ವೆಂಕಟೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಶಾರದಾರವರು ಏಲಂನ ಷರತ್ತುಗಳನ್ನು ತಿಳಿಸಿದರು. ಸಿಬ್ಬಂದಿ ಏಲಿಯಾಸ್‌ರವರು ಏಲಂ ಪ್ರಕ್ರಿಯೆ ನಡೆಸಿಕೊಟ್ಟರು.

2021-22ನೇ ಸಾಲಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟದ ಹಕ್ಕನ್ನು ರೂ.1.34 ಲಕ್ಷಕ್ಕೆ ಅಬ್ದುಲ್ ರಜಾಕ್‌ರವರು ಪಡೆದುಕೊಂಡಿದ್ದಾರೆ. 2022-23ನೇ ಸಾಲಿಗೆ ಪಿಡಿಒ ವೆಂಕಟೇಶ್‌ರವರ ಸಲಹೆಯಂತೆ ಆಡಳಿತ ಮಂಡಳಿಯಲ್ಲಿ ಕೈಗೊಂಡ ನಿರ್ಣಯದಂತೆ 3 ವಾರ್ಡ್‌ಗಳಲ್ಲಿ ಹಸಿ ಮೀನು ಮಾರಾಟದ ಹಕ್ಕನ್ನು ಪ್ರತ್ಯೇಕವಾಗಿ ಬಹಿರಂಗ ಏಲಂ ಮಾಡಲಾಗಿದೆ. ಒಟ್ಟು 4.5೦ ಲಕ್ಷ ರೂಪಾಯಿಗೆ ಏಲಂ ಖಾಯಂಗೊಂಡಿದ್ದು ಗ್ರಾ.ಪಂ.ಗೆ ಹೆಚ್ಚಿನ ಆದಾಯ ಬಂದಿದೆ-ಎಂ.ಕೆ.ಪೌಲೋಸ್, ಸದಸ್ಯರು ಗ್ರಾ.ಪಂ.ಶಿರಾಡಿ

LEAVE A REPLY

Please enter your comment!
Please enter your name here