ಆಲಂಕಾರು: ಕಂದಾಯ ಇಲಾಖೆಯಿಂದ ನಿವೃತ್ತ ಸೈನಿಕರಿಗೆ ನೀಡಲಾದ ಜಾಗದಲ್ಲಿ ಫಲಾನುಭವಿಗಳಿಂದ ಬೇಲಿ ನಿರ್ಮಾಣ

0

  • ಅರಣ್ಯ ಇಲಾಖೆಯಿಂದ ಬೇಲಿ ನಿರ್ಮಾಣಕ್ಕೆ ಆಕ್ಷೇಪ-ಸ್ಥಳದಲ್ಲಿ ಜಮಾವಣೆ

ಕಡಬ: ಕಂದಾಯ ಇಲಾಖೆಯಿಂದ ನಿವೃತ್ತ ಸೈನಿಕರಿಗೆ ಆಲಂಕಾರು ಗೇರು ತೋಪಿನಲ್ಲಿ ಖಾದಿರಿಸಲಾಗಿದ್ದ ಭೂಮಿಯನ್ನು ೧೨ ಮಂದಿ ನಿವೃತ್ತ ಸೈನಿಕರಿಗೆ ನೀಡಲಾಗಿದ್ದು, ಅಲ್ಲದೆ ಸರ್ವೆ ಇಲಾಖೆಯಿಂದ ಗಡಿ ಗುರುತು ಮಾಡಲಾಗಿತ್ತು, ಈ ಹಿನ್ನಲೆಯಲ್ಲಿ ಮಾಜಿ ಸೈನಿಕರು ಗಡಿ ಗುರುತು ಮಾಡಲಾದ ಜಾಗದಲ್ಲಿ ಬೇಲಿ ನಿರ್ಮಾಣ ಮಾಡಿದ್ದು, ಇದೀಗ ಅರಣ್ಯ ಇಲಾಖೆಯವರು ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಬೇಲಿ ಹಾಕುವ ಕೆಲಸಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳದಲ್ಲಿ ತನ್ನ ಸಿಬ್ಬಂದಿಗಳೊಂದಿಗೆ ಠಿಕಾಣಿ ಹೂಡಿರುವ ಘಟನೆ ಏ.10ರಂದು ನಡೆದಿದೆ.


ಇತ್ತೀಚೆಗೆ ಕಂದಾಯ ಇಲಾಖೆಯ ಐತ್ತೂರು ಗ್ರಾಮ ವಾಸ್ತವ್ಯದಲ್ಲಿ ೧೨ ಮಂದಿ ಮಾಜಿ ಸೈನಿಕ ಫಲಾನುಭವಿಗಳಿಗೆ ಸಚಿವ ಎಸ್. ಅಂಗಾರ ಅವರು ಹಕ್ಕು ಪತ್ರ ಹಸ್ತಾಂತರ ಮಾಡಿದ್ದರು. ಬಳಿಕ ಈ ಜಾಗದ ಗಡಿ ಗುರುತು ಕೂಡ ಮಾಡಲಾಗಿತ್ತು, ಈ ಹಿನ್ನಲೆಯಲ್ಲಿ ಮಾಜಿ ಸೈನಿಕರು ತಮಗೆ ನೀಡಲಾದ ಜಾಗಕ್ಕೆ ಬೇಲಿ ಹಾಕುವ ಕಾಮಗಾರಿ ಪ್ರಾರಂಭಿಸಿದ್ದರು. ಆದರೇ ಅರಣ್ಯ ಇಲಾಖೆ ಹೊಸ ವರಸೆ ಪ್ರಾರಂಭಿಸಿದ್ದು, ಈ ಜಾಗವು ಮೀಸಲು ಅರಣ್ಯ ಪ್ರದೇಶವಾಗಿದ್ದು ಇದನ್ನು ಕೆ.ಸಿ.ಡಿ.ಸಿ.ಯವರಿಗೆ ಗೇರು ಅಭಿವೃದ್ದಿಗೆ ನೀಡಲಾಗಿದೆ. ಇಲ್ಲಿ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಯ ಗಮನಕ್ಕೆ ತಾರದೆ ಮಾಜಿ ಸೈನಿಕರಿಗೆ ನಿವೇಶನ ಖಾದಿರಿಸಲಾಗಿದೆ ಎಂದು ವಾದಿಸುತ್ತಿದೆ. ಉಪವಲಯರಣ್ಯಾಧಿಕಾರಿಗಳಾದ ಸಂತೋಷ್, ಅಜಿತ್, ಜಯಕುಮಾರ್, ಕೆ.ಸಿ.ಡಿ.ಸಿ. ಅಧೀಕ್ಷಕ ರವಿ ಪ್ರಸಾದ್, ಸಿಬ್ಬಂದಿಗಳಾದ ಸುರೇಶ್ ಕುಮಾರ್, ಶೇಖರ ಪೂಜಾರಿ, ಅರಣ್ಯ ಪಾಲಕರಾದ ಸುಬ್ರಹ್ಮಣ್ಯ, ಮಹೇಶ್,ಬಾಲಚಂದ್ರ ಮಾಜಿ ಸೈನಿಕರಾದ ಹರೀಶ್.ಯು, ವಿಶ್ವನಾಥ ಪಿ, ರವಿಚಂದ್ರ, ಶಿವಪ್ಪ ಗೌಡ, ಸುರೇಂದ್ರ ಕುಮಾರ್, ಶೇಷಪ್ಪ ಗೌಡ, ಚೆನ್ನಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಕಂದಾಯ ಇಲಾಖೆ ನೀಡಿದರೂ ಅರಣ್ಯ ಇಲಾಖೆಯಿಂದ ಅಡ್ಡಿ-ಆರೋಪ
ಈಗಾಗಲೇ ಈ ಹಿಂದೆಯೇ ಮಾಜಿ ಸೈನಿಕರಿಗೆ ಇಲ್ಲಿ ಸುಮಾರು ೧೨ ಎಕ್ರೆ ಭೂಮಿ ಮೀಸಲು ಇರಿಸಲಾಗಿತ್ತು, ಬಳಿಕ ಸೈನಿಕರ ನಿರಂತರ ಹೋರಾಟದ ಬಳಿಕ ೧೨ ಜನ ಮಾಜಿ ಸೈನಿಕರಿಗೆ ೫೦ ಸೆಂಟ್ಸ್‌ನಂತೆ ವಿಂಗಡಿಸಿ ಕಂದಾಯ ಇಲಾಖೆ ಮಾಜಿ ಸೈನಿಕರಿಗೆ ಹಕ್ಕು ಪತ್ರ ನೀಡಿ, ಪಹಣಿ ಪತ್ರ ಕೂಡ ದಾಖಲು ಮಾಡಲಾಗಿದೆ. ಇದೀಗ ಅರಣ್ಯ ಇಲಾಖೆಯವರ ಆಕ್ಷೇಪದಿಂದ ಮಾಜಿ ಸೈನಿಕರು ಹಕ್ಕುಪತ್ರ ಇದ್ದರೂ ಜಾಗ ಕೈಗೆ ಸಿಗದೆ ಕಂಗಲಾಗಿದ್ದೇವೆ ಎಂದು ಮಾಜಿ ಸೈನಿಕರು ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೈನಿಕರಿಗೆ ಖಾದಿರಿಸಿದ ಜಾಗವು ಮೀಸಲು ಅರಣ್ಯ-ಮಂಜುನಾಥ (ಆರ್.ಎಫ್.ಒ)
ಈ ಬಗ್ಗೆ ಪಂಜ ವಲಯಾರಣ್ಯಾಧಿಕಾರಿ ಮಂಜುನಾಥ ಅವರು ಪ್ರತಿಕ್ರಿಯೆ ನೀಡಿ, ಆಲಂಕಾರಿನಲ್ಲಿ ಈಗಾಗಲೇ ಮಾಜಿ ಸೈನಿಕರಿಗೆ ನೀಡಲಾದ ಜಾಗವು ಮೀಸಲು ಅರಣ್ಯಕ್ಕೆ ಸೇರಿದ್ದು ಬಳಿಕ ಕೆ.ಸಿ.ಡಿ.ಸಿ,ಯವರಿಗೆ ಲೀಸಿಗೆ ನೀಡಲಾಗಿದೆ. ಈ ಜಾಗವನ್ನು ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಬೇಕು ಆಗ ಮಾತ್ರ ಜಾಗ ಯಾರಿಗೆ ಸೇರಿದ್ದು ಎಂದು ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ.

ನಿವೃತ್ತ ಸೈನಿಕರಿಗೆ ಮೀಸಲಿರಿಸಲಾಗಿದೆ- ಅನಂತಶಂಕರ್ (ತಹಸೀಲ್ದಾರ್)
ಈ ಬಗ್ಗೆ ಕಡಬ ತಹಸೀಲ್ದಾರ್ ಅನಂತಶಂಕರ್ ಪ್ರತಿಕ್ರಿಯೆ ನೀಡಿ, ಮಾಜಿ ಸೈನಿಕರಿಗೆ ಮೀಸಲಿಟ್ಟಿದ್ದು, ಅರಣ್ಯ ಇಲಾಖೆಯ ಜಾಗ ಅಲ್ಲ, ಜಿಲ್ಲಾಧಿಕಾರಿಗಳ ಆದೇಶದಂತೆ ಮಂಜೂರುಗೊಳಿಸಲಾಗಿದೆ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ, ಮಾಹಿತಿ ಬಂದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದಂತೆ ೧೨ ಜನ ನಿವೃತ್ತ ಸೈನಿಕರಿಗೆ ತಲಾ ೫೦ ಸೆಂಟ್ಸ್‌ನಂತೆ ಜಾಗ ಮಂಜೂರು ಮಾಡಲಾಗಿದೆ. ಇಲಾಖೆಯಿಂದಲೇ ಜಾಗ ಮಂಜೂರು ಮಾಡಿ ಹಕ್ಕು ಪತ್ರ ನೀಡಿ, ಬಳಿಕ ಸರಕಾರಿ ಸರ್ವೇಯರ್‌ನಿಂದ ಗಡಿ ಗುರುತು ಮಾಡಿ ಫಲಾನುಭವಿಗಳಿಗೆ ನೀಡಿದ ಬಳಿಕ ೧೨ ಜನ ಮಾಜಿ ಮಾಜಿ ಸೈನಿಕರು ಜಾಗಕ್ಕೆ ಬೇಲಿ ನಿರ್ಮಾಣ ಮಾಡಿದ್ದಾರೆ, ಈ ವೇಳೆ ಅರಣ್ಯ ಇಲಾಖೆ ಮಧ್ಯಪ್ರವೇಶಿಸಿ ಜಾಗ ಅರಣ್ಯ ಇಲಾಖೆದ್ದು ಎಂದು ಹೇಳಿದರೆ ಫಲಾನುಭವಿಗಳು ಏನು ಮಾಡಬೇಕು ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಜಾಗ ಮಂಜೂರು ಮಾಡುವ ಮೊದಲೇ ಕಂದಾಯ ಹಾಗೂ ಅರಣ್ಯ ಇಲಾಖೆ ಒಟ್ಟಿಗೆ ಸೇರಿ ತೀರ್ಮಾಣ ತೆಗೆದುಕೊಳ್ಳಬೇಕಿತ್ತು, ಇದೀಗ ಕಂದಾಯ ಇಲಾಖೆ ಸರಕಾರಿ ಜಾಗ, ಮಾಜಿ ಸೈನಿಕರಿಗೆ ಮೀಸಲು ಇಡಲಾಗಿದೆ ಎಂದರೆ, ಅರಣ್ಯ ಇಲಾಖೆ ಜಾಗ ನಮ್ಮದು ಎಂದು ಹೇಳುತ್ತಿರುವುದು ಒಟ್ಟು ಇಲಾಖೆಗಳ ನಡುವಿನ ಗೊಂದಲಕ್ಕೆ ಫಲಾನುಭವಿಗಳು ಪರದಾಡುವಂತಾಗಿದೆ. ಇಲಾಖೆಗಳ ಕಥೆ ಈ ರೀತಿಯಾದರೆ ಸಾಮಾನ್ಯ ಜನರ ಪಾಡೇನು ಎಂಬ ಪ್ರಶ್ನೆ ಮೂಡಿದೆ.

LEAVE A REPLY

Please enter your comment!
Please enter your name here