ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ: ಧಾರ್ಮಿಕದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಿಂದ ಮಾನಸಿಕ ನೆಮ್ಮದಿ – ಕೆ.ಸೀತಾರಾಮ ರೈ ಸವಣೂರು

0

ಪುತ್ತೂರು: ಧಾರ್ಮಿಕ ಕಾರ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ವಿಚಾರ. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಹೇಳಿದರು.

ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಸಂದರ್ಭ ದೇವಳದ ಎದುರು ಗದ್ದೆಯಲ್ಲಿರುವ ಶ್ರೀ ಪಾರ್ವತಿ ವೇದಿಕೆಯಲ್ಲಿ 10 ದಿನಗಳು ನಡೆಯುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎ.10ರಂದು ಸಂಜೆ ಅವರು ಚಾಲನೆ ನೀಡಿದರು. ಎರಡು ವರ್ಷದ ಕೊರೋನಾ ಎಂಬ ಭೂತ ನಮ್ಮನ್ನು ಸರಿಯಾಗಿ ವ್ಯವಸ್ಥೆಯಾಗಿ ಹೋಗಲು ಬಿಡಲಿಲ್ಲ. ಆದರೆ ಇವತ್ತು ಮಹಾಲಿಂಗೇಶ್ವರ ನಿಟ್ಟಿಸಿರು ಬಿಡಲು ಸಹಕರಿಸಿದ್ದಾರೆ. ಹಾಗಾಗಿ ಎಲ್ಲಾ ಉತ್ಸವಗಳು ಮರುಕಳಿಸಲಿವೆ ಎಂದರು.

ದೇವರ ಉಪಾಸನೆ ಸಾಂಸ್ಕೃತಿಕತೆ ಒಂದು ಭಾಗ:
ಧಾರ್ಮಿಕ ಉಪನ್ಯಾಸ ನೀಡಿದ ನರಿಮೊಗರು ಸರಸ್ವತಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಅವಿನಾಶ್ ಕೊಡೆಂಕೇರಿ, ದೇವರ ಉಪಾಸನೆಗೆ ಸಾಂಸ್ಕೃತಿಕತೆಯು ಒಂದು ಭಾಗ. ಜಾತ್ರೆ ಒಂದು ಯಾತ್ರೆ. ಇಲ್ಲಿ ಸಾಂಸ್ಕೃತಿಕ, ಆಧ್ಯಾತ್ಮಿಕತೆಯ ಯಾತ್ರೆಯು ಆಗಬೇಕು. ಅದಕ್ಕೆ ಇಂದಿನ ಕಾರ್ಯಕ್ರಮ ಪೂರಕ ಎಂದರು.

ಸಾಂಸ್ಕೃತಿಕತೆಗೆ ಪೂಜೆಯಷ್ಟೆ ಫಲ:
ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವನು ಸಾಮಗಾನ, ನಟರಾಜ ಪ್ರಿಯ. ಹಾಗಾಗಿ ಸಾಂಸ್ಕೃತಿಕತೆ ಅವನ ಪಾಲಿಗೆ ಪೂಜೆಯಷ್ಟೇ ಫಲ ಕೊಡಲಿದೆ. ಆತ ಈ ಪೂಜೆಯನ್ನು ಸ್ವೀಕರಿಸುತ್ತಾನೆ ಎಂದ ಅವರು ಮುಂದೆ 10 ದಿವಸಗಳಲ್ಲಿ ಈ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಒಟ್ಟು ೩೬ ತಂಡಗಳು ಹಲವು ಪ್ರದರ್ಶನ ಕೊಡಲಿದ್ದಾರೆ ಎಂದರು.

ಸನ್ಮಾನ:
ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕೆ ಸೀತಾರಾಮ ರೈ ಸವಣೂರು ಅವರನ್ನು ದೇವಾಲಯದ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಾಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಪ್ರಧಾನ ಅರ್ಚಕ ವೆಂಕಟೇಶ ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೀಣಾ ಬಿ.ಕೆ., ಡಾ.ಸುಧಾ ಶ್ರೀಪತಿ ರಾವ್, ಬಿ.ಐತ್ತಪ್ಪ ನಾಯ್ಕ, ರವೀಂದ್ರನಾಥ ರೈ ಕೆ.ಎಸ್., ರಾಮದಾಸ ಗೌಡ ಎಸ್, ಶೇಖರ ನಾರಾವಿ, ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಓಂಕಾರ, ಶಂಖನಾದ ಮೊಳಗಿತು. ಪ್ರೀತಿಕಲಾ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ|ಸುಧಾ ಶ್ರೀಪತಿ ರಾವ್ ಸ್ವಾಗತಿಸಿ, ರಾಮದಾಸ ಗೌಡ ಎಸ್ ವಂದಿಸಿದರು. ರಾಜೇಶ್ ಬನ್ನೂರು ನಿರೂಪಿಸಿದರು.

ಸಮಾರಂಭದ ಆರಂಭದಲ್ಲಿ ಕಾಸರಗೋಡು ಕಂಬಾರು ಶ್ರೀ ದುರ್ಗಾಪರಮೇಶ್ವರಿ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ಸಭಾ ಕಾರ್ಯಕ್ರಮದ ಬಳಿಕ ಚಿಂತನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಪುತ್ತೂರು ಮತ್ತು ರೋಟೊರ‍್ಯಾಕ್ಟ್ ಶೈನಿಂಗ್ ಸ್ಟಾರ್ ಡ್ಯಾನ್ಸ್ ಕ್ಲಬ್ ಪುತ್ತೂರು ಅವರಿಂದ ಜನಪದ ನೃತ್ಯ, ಚಿಕ್ಕಮುಡ್ನೂರು ಬಾಬು ಅವರಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here