ಬೆಳ್ಳಿಪ್ಪಾಡಿಯಲ್ಲಿ ಮೇಲೈಸಿದ ಶಿಕ್ಷಕರ ದ್ವಿತೀಯ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನ

0

  • ಮಕ್ಕಳಿಂದ ಏಕರೂಪದ ಕಲಿಕೆ, ಶಿಕ್ಷಕರಿಂದ ಏಕರೂಪದ ಬೋಧನೆಯ ನಿರೀಕ್ಷೆ ಸಾಧುವಲ್ಲ-ದಿವಾಕರ ಆಚಾರ್ಯ ಗೇರುಕಟ್ಟೆ

 

ಪುತ್ತೂರು: ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟೇ ತಂತ್ರಜ್ಞಾನವನ್ನು ಅಳವಡಿಸಿಕೊಂಡರೂ ಶಿಕ್ಷಕರ ಸ್ಥಾನವನ್ನು ಪಲ್ಲಟಗೊಳಿಸಲು ಸಾಧ್ಯವಿಲ್ಲ. ಶಿಕ್ಷಕರು ಸದಾ ಹೊಸತನಕ್ಕೆ ತೆರೆದುಕೊಳ್ಳಬೇಕಾದ ಆವಶ್ಯಕತೆಯಿದೆ. ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಶಿಕ್ಷಕರು ಮಗುವಿನ ಆಸಕ್ತಿ ಮತ್ತು ಅಗತ್ಯಕ್ಕೆ ಸ್ಪಂದಿಸುವ ಹೊಣೆ ಹೊರಬೇಕಾಗುತ್ತದೆ. ಮಕ್ಕಳಿಂದ ಏಕ ರೂಪದ ಕಲಿಕೆ, ಶಿಕ್ಷಕರಿಂದ ಏಕರೂಪದ ಬೋಧನೆಯನ್ನು ನಿರೀಕ್ಷಿಸುವುದು ಸಾಧುವಲ್ಲ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಪುತ್ತೂರು, ಕಡಬ ತಾಲೂಕು ಶಿಕ್ಷಕರ ಸಾಹಿತ್ಯ ಪರಿಷತ್ ಮತ್ತು ಸಾಂಸ್ಕೃತಿಕ ಪರಿಷತ್, ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಪ್ಪಾಡಿ ಇದರ ಜಂಟಿ ಆಶ್ರಯದಲ್ಲಿ ಎ.೧೨ರಂದು ಬೆಳ್ಳಿಪ್ಪಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುತ್ತೂರು, ಕಡಬ ತಾಲೂಕು ಶಿಕ್ಷಕರ ದ್ವಿತೀಯ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಸೇವಾ ಪೂರ್ವ ತರಬೇತಿ ಮತ್ತುಸೇವಾಂತರ್ಗತ ತರಬೇತಿಗಳು ಶಿಕ್ಷಕರನ್ನು ಕಾಲ ಕಾಲಕ್ಕೆ ಸನ್ನದುಗೊಳಿಸುತ್ತಾ ಬಂದಿದೆ. ಸ್ವಾತಂತ್ರ್ಯಾನಂತರ ಭಾರತದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗಳಾಗಿ, ಪ್ರಾದೇಶಿಕವಾದ ಭಿನ್ನತೆಗಳಿದ್ದರೂ, ಸಂಸ್ಕಾರವನ್ನು ನೀಡಿ ಸಚ್ಚಾರಿತ್ರ್ಯವಂತರನ್ನು ರೂಪಿಸುವುದೇ ಶಿಕ್ಷಣದ ಪ್ರಮುಖ ಗುರಿಯಾಗಿದೆ. ಸಾರ್ವತ್ರಿಕ ಶಿಕ್ಷಣ ಮತ್ತು ಗುಣಮಟ್ಟದ ಶಿಕ್ಷಣ ನೀಡಬೇಕಾದ ವ್ಯವಸ್ಥೆಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ನಿರ್ವಹಿಸಬೇಕಾಗಿದೆ. ಒತ್ತಡಗಳ ಮಧ್ಯೆಯೂ ಶಿಕ್ಷಣ ಇಲಾಖೆಯ ಆಶಯಗಳಿಗೆ ಶಿಕ್ಷಕರು ಪ್ರಾಮಾಣಿಕವಾಗಿ ಸ್ಪಂಧಿಸುತ್ತಿರುವುದು ಪ್ರಸಂಶನೀಯ ಎಂದರು.

 

ಶಿಕ್ಷಕರಿಂದಾಗಿ ಕನ್ನಡ ದ.ಕ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದೆ-ರಾಮಚಂದ್ರ ಪೂಜಾರಿ:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ ಮಾತನಾಡಿ, ಶಿಕ್ಷಕರು ಹಾಗೂ ಯಕ್ಷಗಾನ ಕಲೆಗಳು ಕನ್ನಡದ ಎರಡು ಕಣ್ಣುಗಳಿದ್ದಂತೆ. ಪ್ರಸ್ತುತ ದಿನಗಳಲ್ಲಿನ ಆಂಗ್ಲ ಭಾಷಾ ವ್ಯಾಮೋಹದ ಮಧ್ಯೆ ದ.ಕ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಯಕ್ಷಗಾನ ಕಲೆಯಿಂದಾಗಿ ಕನ್ನಡ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವಂತಾಗಿದೆ ಎಂದರು. ನಗರದ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆ ತನ್ನ ಮಕ್ಕಳಿಗೆ ಶಿಕ್ಷಣ ನೀಡಲು ಸ್ಥಿತಿವಂತರಾಗಿದ್ದರೂ ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡರವರು ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸುವ ಮೂಲಕ ಕನ್ನಡಾಭಿಮಾನ ಉಳಿಸಿಕೊಂಡಿದ್ದಾರೆ. ಇದೇ ರೀತಿ ಕನ್ನಡ ಉಳಿಸಿ, ಬೆಳೆಸಲು ಪ್ರತಿಯೊಬ್ಬರು ಕೈ ಜೋಡಿಸಬೇಕಾದ ಆವಶ್ಯಕತೆಯಿದೆ ಎಂದ ಅವರು, ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಯೋಚನೆ ಹೊಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಕಾರ್ಯಕ್ರಮ ಸಂಯೋಜಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಶಿಕ್ಷಕರಲ್ಲಿರುವ ಪ್ರತಿಭೆಗಳ ಬೆಳವಣಿಗೆಗೆ ಸಹಕಾರಿ-ಲೋಕೇಶ್ ಸಿ.:
ಕರಕುಶಲ ಮಳಿಗೆ ಉದ್ಘಾಟಿಸಿ, ಶುಭ ನುಡಿಗಳನ್ನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಮಾತನಾಡಿ, ಶಿಕ್ಷಕರಲ್ಲೂ ಬಹಳಷ್ಟು ಮಂದಿ ಉತ್ತಮ ಪ್ರತಿಭಾನ್ವಿತರಿದ್ದಾರೆ. ಇದಕ್ಕಾಗಿ ಉತ್ತಮ ವೇದಿಕೆ ನೀಡುವ ನಿಟ್ಟಿನಲ್ಲಿ ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಕ ಪರಿಷತ್ ಶಿಕ್ಷಕರಿಗಾಗಿಯೇ ಇರುವ ವಿಶೇಷ ಯೋಜನೆಯಾಗಿದೆ. ಈ ವೇದಿಯನ್ನು ಪ್ರತಿಯೊಬ್ಬ ಶಿಕ್ಷಕರು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಯಾವುದೇ ರೀತಿಯ ತಾರತಮ್ಯ ಮಾಡಬಾರದು. ಶಿಕ್ಷಕರ ಸಾಹಿತ್ಯ, ಸಾಂಸ್ಕೃತಿಕ ಪರಿಷತ್ ಮೂಲಕ ಪ್ರತಿ ತಿಂಗಳಿಗೊಂದು ಚಟುವಟಿಕೆಗಳು ನಡೆಯಬೇಕು. ಶಿಕ್ಷಕರಿಗಾಗಿಯೇ ಮೀಸಲಿಟ್ಟ ವೇದಿಕೆಯಾಗಿದ್ದು ಶಿಕ್ಷಕರಲ್ಲಿರುವ ಪ್ರತಿಭೆಗಳು ಬೆಳೆಯಲು ವೇದಿಕೆ ಸಹಕಾರಿಯಾಗಲಿದೆ ಎಂದರು.

ಒಂಬತ್ತನೇ ಜ್ಞಾನಪೀಠ ಪ್ರಶಸ್ತಿ ದ.ಕ ಜಿಲ್ಲೆಗೆ-ಉಮೇಶ್ ನಾಯಕ್:
ಕನ್ನಡ ಭುವನೇಶ್ವರಿ ಮೆರವಣಿಗೆಗೆ ಚಾಲನೆ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಅದ್ಬುತ ಸಾಧನೆ ಮಾಡಿದ ಸಾಧಕರು ಪುತ್ತೂರಿನಲ್ಲಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಒಂಬತ್ತನೇ ಜ್ಞಾನಪೀಠ ಪ್ರಶಸ್ತಿಯು ದ.ಕ ಜಿಲ್ಲೆಗೆ ಲಭಿಸಲಿ ಎಂದರು. ಶಿಕ್ಷಕರ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಬೇಕು. ಮುಂದಿನ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕರಿಗಾಗಿ ವಿಶೇಷವಾಗಿ ಶಿಕ್ಷಕರ ಕವಿಗೋಷ್ಠಿಯನ್ನು ಆಯೋಜಿಸಲಾಗುವುದು. ಅಲ್ಲದೆ ಮೇ.೧ರಂದು ವಯೋಶ್ರೇಷ್ಠ ಕವಿ ಗೋಷ್ಠಿ ಆಯೋಜಿಸುವುದಾಗಿ ಅವರು ಭರವಸೆ ನೀಡಿದರು.

ಸಾಹಿತ್ಯ ಕ್ಷೇತ್ರದ ಸಾಧನೆ ಜಿಲ್ಲೆಯಲ್ಲಿ ಮೇಲ್ಪಂಕ್ತಿ-ಶಿವಪ್ರಸಾದ್ ಶೆಟ್ಟಿ:
ಪುಸ್ತಕ ಪ್ರದದರ್ಶನವನ್ನು ಉದ್ಘಾಟಿಸಿದ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಶಿಕ್ಷಕರ ಸಾಧನೆಯಲ್ಲಿ ಪುತ್ತೂರು ತಾಲೂಕು ಜಿಲ್ಲೆಯಲ್ಲಿ ಮೇಲ್ಪಂಕ್ತಿ ಹಾಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉತ್ತಮ ತಂಡವೇ ಇಲ್ಲಿದ್ದು ಪ್ರತಿಭೆಗಳ ಗಣಿಯೇ ಪುತ್ತೂರಿನಲ್ಲಿದೆ. ಸಾಹಿತ್ಯ, ಸಾಂಸ್ಕೃತಿಕ ಪರಿಷತ್ ಶಿಕ್ಷಕರಿಗೆ ಉತ್ತಮ ವೇದಿಕೆ ಒದಗಿಸಿದ್ದು ಶಿಕ್ಷಣ ಕ್ಷೇತ್ರದ ಹೊಸ ಕ್ರಾಂತಿಗೆ ನಾಂದಿಯಾಗಲಿ ಎಂದರು.

 



ಜ್ಞಾನ ವೃದ್ಧಿಸುವ ಔದಾರ್ಯತೆ ಶಿಕ್ಷಕರಲ್ಲಿರಬೇಕು-ರಮೇಶ್ ಉಳಯ:
ಅಧ್ಯಕ್ಷತೆ ಹಸ್ತಾಂತರ ಮಾಡಿದ ನಿಕಟಪೂರ್ವ ಅಧ್ಯಕ್ಷ ರಮೇಶ್ ಉಳಯ ಮಾತನಾಡಿ, ಶಿಕ್ಷಕರು ಓದಬೇಕು. ಶಿಕ್ಷಕರು, ತರಗತಿ ಕೊಠಡಿಗಳು ಗರ್ಭವಿದ್ದಂತೆ. ಗರ್ಭದಲ್ಲಿ ಮಗುವಿರುವಾಗ ತಾಯಿಯು ಮಗುವಿನ ಆರೋಗ್ಯ ಪೂರ್ಣ ಬೆಳವಣಿಗೆಗೆ ಪೂರಕವಾದ ಆಹಾರ, ಔಷಧಿಗಳನ್ನು ಸೇವಿಸುವಂತೆ, ತರಗತಿಯೆಂಬ ಗರ್ಭದಲ್ಲಿರುವ ಶಿಕ್ಷಕರು ಜ್ಞಾನದ ಔಷಧಿ, ಆಹಾರಗಳನ್ನು ಮೈಗೂಡಿಸಿಕೊಂಡು ಆರೋಗ್ಯವಂತ, ಸದೃಡ ಸಮಾಜ ನಿರ್ಮಾಣಕ್ಕೆ ಪೂರಕವಾದ ವಿದ್ಯಾರ್ಥಿಗಳನ್ನು ತಯಾರಿಸಬೇಕಾದ ಔದಾರ್ಯತೆಯ ಗುಣ ಶಿಕ್ಷಕರಲ್ಲಿರಬೇಕು ಎಂದರು.

ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ ಕಂಬಳತ್ತಡ್ಡ, ಕೋಡಿಂಬಾಡಿ ಗ್ರಾ.ಪಂ ಸದಸ್ಯ ರಾಮಣ್ಣ ಗೌಡ ಗುಂಡೋಳೆ, ಶಿಕ್ಷಕರ ಸಾಹಿತ್ಯ, ಸಾಂಸ್ಕೃತಿಕ ಪರಿಷತ್ ಕಡಬ ಘಟಕದ ಅಧ್ಯಕ್ಷ ಸೇಸಪ್ಪ ರೈ ರಾಮಕುಂಜ, ಬೆಳ್ಳಿಪ್ಪಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಭವ್ಯ ವಿ.ಶೆಟ್ಟಿ ಬೆಳ್ಳಿಪ್ಪಾಡಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಭುವನೇಶ್ವರಿ ಮೆರವಣಿಗೆ:
ಕಾರ್ಯಕ್ರಮದ ಪ್ರಾರಂಭದಲ್ಲಿ ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಕನ್ನಡದ ಭುವನೇಶ್ವರಿಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಚೆಂಡೆ ಬಡಿದು ಮೆರವಣಿಗೆಗೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಹಾಗೂ ಕಡಬ ಶಿಕ್ಷಕ ಸಾಹಿತ್ಯ, ಸಾಂಸ್ಕೃತಕ ಪರಿಷತ್ ಅಧ್ಯಕ್ಷ ಸೇಸಪ್ಪ ರೈ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು. ಸಾಹಿತ್ಯ ಸಮ್ಮೇಳದ ಅಧ್ಯಕ್ಷರನ್ನು ಅಲಂಕರಿಸಿದದ ತೆರೆದ ವಾಹನದಲ್ಲಿ ಸ್ವಾಗತಿಸಲಾಯಿತು. ಪೂರ್ಣಕುಂಭ ಸ್ವಾಗತ ಹಾಗೂ ಚೆಂಡೆ ವಾದನದೊಂದಿಗೆ ಸಮ್ಮೇಳದ ಅಧ್ಯಕ್ಷರು ಹಾಗೂ ಕನ್ನಡದ ಭುವನೇಶ್ವರಿ ಸ್ವಾಗತಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಪುಸ್ತಕ ಪ್ರದರ್ಶನ ಮಳಿಗೆ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.ಯವರು ಕರಕುಶಲ ಮಳಿಗೆ ಹಾಗೂ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ವಿಮಲ್ ಕುಮಾರ್ ಕುಟೀರವನ್ನು ಉದ್ಘಾಟಿಸಿದರು.

ಸಾಕ್ಷ್ಯ ಚಿತ್ರ ಬಿಡುಗಡೆ:
ಶಿಕ್ಷಕರ ಸಾಹಿತ್ ಮತ್ತು ಸಾಂಸ್ಕೃತಿಕ ಪರಿಷತ್‌ನ ಕಾರ್ಯಕ್ರಮಗಳ ಕುರಿತ ಮಾಹಿತಿಗಳನ್ನಾಧಾರಿತ ಕಿರು ಸಾಕ್ಷ್ಯ ಚಿತ್ರ ಸಂಚಯಿಕವನ್ನು ಸಮ್ಮೇಳಾಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ವಿಶೇಷ
ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷೆ ಉಷಾ ಲಕ್ಷ್ಮಣ, ಸದಸ್ಯರಾದ ಮೋಹಿನಿ, ಪುಷ್ಪಾ ಲೋಕಯ್ಯ ನಾಯ್ಕ, ಊರಿನ ಗಣ್ಯರಾದ ಮಾರ್ಷಲ್ ವೇಗಸ್, ನಿವೃತ್ತ ಮುಖ್ಯಗುರು ವೆಂಕಪ್ಪ ಗೌಡ ದೇವಸ್ಯ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಾಲಪ್ಪ ಗೌಡ ಮಳುವೇಲು, ಅಧ್ಯಕ್ಷ ನೀಲಪ್ಪ ಗೌಡ ಬೊಳಂದೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ಳಿಪ್ಪಾಡಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಗೌಡ ಕೆ., ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮೋಹನ ಪಕ್ಕಳ ಕುಂಡಾಪು, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕೇಶವ ಭಂಡಾರಿ ಕೈಪ, ನಿವೃತ್ತ ಮುಖ್ಯಗುರು ಪಾರ್ವತಿ ವೆಂಕಪ್ಪ ಗೌಡ, ತಾ.ಪಂ ಮಾಜಿ ಸದಸ್ಯೆ ನೇತ್ರಾವತಿ ಕೆ.ಪಿ ಗೌಡ, ಶಿಕ್ಷಣ ಸಮನ್ವಯಾಧಿಕಾರಿ ಶೋಭಾ, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ವಿಷ್ಣುಪ್ರಸಾದ್, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ವಿಮಲ್ ಕುಮಾರ್, ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀಲತಾ, ಬೆಳ್ಳಿಪ್ಪಾಡಿ ಶಾಲಾ ಮುಖ್ಯಗುರು ಯಶೋಧ, ಶಿಕ್ಷಕರ ಸಾಹಿತ್ಯ, ಹಾಗೂ ಸಾಂಸ್ಕೃತಿಕ ಸಮ್ಮೇಳದ ಸಂಚಾಲಕ ನಾರಾಯಣ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಚಿತ್ರಾ ಹೊಳ್ಳ, ಶುಭ ರಾವ್ ಹಾಗೂ ಪವಿತ್ರ ರೂಪೇಶ್ ಪ್ರಾರ್ಥಿಸಿದರು. ಶಿಕ್ಷಕರ ಸಾಹಿತ್ಯ ಪರಿಷತ್ ಮತ್ತು ಸಾಂಸ್ಕೃತಿಕ ಪರಿಷತ್‌ನ ಅಧ್ಯಕ್ಷ ಹರಿಕಿರಣ್ ಕೊಯಿಲ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜನಾ ಸಮಿತಿ ಅಧ್ಯಕ್ಷ ಸುಂದರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾ ಪಿ.ರೈ, ಬಾಲಕೃಷ್ಣ ಪೊರ್ದಾಳ್, ನವೀನ್ ರೈ ಸರ್ವೆ, ಸುಧಾಕರ ರೈ, ಪುಷ್ಪಲತಾ ಎಂ. ವಳಾಲು, ಚರಣ್ ಕುಮಾರ್, ಪ್ರಶಾಂತ್ ಅನಂತಾಡಿ, ಲಕ್ಷ್ಮಣ ನಾಯ್ಕ, ವೇದಾವತಿ, ಗಂಗಾವತಿ, ಶಾಂತಿ ಮೋರಾಸ್, ನಾಗೇಶ್ ಪಾಟಾಳಿ, ರಾಮಣ್ಣ ರೈ, ಮಹಮ್ಮದ್ ಅಶ್ರಫ್, ಓಬಲೇಶ್, ಪ್ರಶಾಂತ್ ಅನಂತಾಡಿ, ಚರಣ್ ಕೆ ಪುದು, ಸಂತೋಷ್ ಬೆಳ್ಳಿಪ್ಪಾಡಿ, ಯಶೋಧ, ನಾರಾಯಣ ಕೆ.,ಸುನೀತಾ ಸರ್ವೆ, ಮಹೇಶ್ ಕುಮಾರ್, ನವೀನ್ ವೇಗಸ್, ಬಾಲಕೃಷ್ಣ ಕಡಬ, ದೇವಕಿ, ನಾರಾಯಣ, ಬಾಲಕೃಷ್ಣ ಸವಣೂರು, ಜಯಂತಿ ಎಂ., ಇಂದಿರಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಹರಿಣಾಕ್ಷಿ ಉಪ್ಪಿನಂಗಡಿ ಹಾಗೂ ತಾರಾನಾಥ ಸವಣೂರು ಕಾರ್ಯಕ್ರಮ ನಿರೂಪಿಸಿ, ವೇದಾವತಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಹಿತ್ಯ ಗೋಷ್ಠಿಗಳು, ಸಾಂಸ್ಕೃತಕ ಗೋಷ್ಠಿಗಳು ನಡೆದವು. ಕಂರ್ಗೋಲು ನೃತ್ಯ, ಪ್ರತಿಭಾನ್ವಿತ ಗಾಯಕರಿಂದ ಗಾಯನ, ದಸರಾ ಬೊಂಬೆ ಪ್ರದರ್ಶನ ಸಮ್ಮೇಳನದಲ್ಲಿ ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಊಟ, ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

LEAVE A REPLY

Please enter your comment!
Please enter your name here