ವಳಾಲು: 2 ದನ, 1 ಹೆಣ್ಣು ಕರು ಕಳವು-ದೂರು

0

ನೆಲ್ಯಾಡಿ: ಮನೆ ಸಮೀಪವೇ ಕಟ್ಟಿ ಹಾಕಿದ್ದ 2 ದನ ಹಾಗೂ 1 ಹೆಣ್ಣು ಕರು ಕಳವುಗೊಂಡಿರುವ ಘಟನೆ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಎ.11ರಂದು ರಾತ್ರಿ ನಡೆದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಬಜತ್ತೂರು ಗ್ರಾಮದ ವಳಾಲು ನಿವಾಸಿ ಬಿ.ಹೆಚ್.ಮಹಮ್ಮದ್ ರಜಾಕ್ ಎಂಬವರಿಗೆ ಸೇರಿದ ಹಾಲು ಕರೆಯುವ 2 ದನ ಹಾಗೂ 1 ಹೆಣ್ಣು ಕರುವನ್ನು ಕಳವುಗೈಯ್ಯಲಾಗಿದೆ. ವಳಾಲುನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೇ ಮಹಮ್ಮದ್ ರಜಾಕ್‌ರವರ ಮನೆಯಿದ್ದು ಮನೆಯ ಹಿಂಬದಿ ಕಿಟಕಿಗೆ ಹೆಣ್ಣು ಕರುವನ್ನು ಕಟ್ಟಿಹಾಕಲಾಗಿತ್ತು. ಮನೆ ಸಮೀಪದಲ್ಲೇ ತೆಂಗಿನ ಮರಕ್ಕೆ 2 ದನಗಳನ್ನು ಕಟ್ಟಿಹಾಕಲಾಗಿತ್ತು. ಮನೆಯವರು ಬೆಳಿಗ್ಗೆ 5.30ರ ವೇಳೆಗೆ ಹಾಲು ಕರೆಯಲೆಂದು ಹೋದ ವೇಳೆ ದನ ಹಾಗೂ ಕರು ಕಳವುಗೊಂಡಿರುವುದು ಬೆಳಕಿಗೆ ಬಂದಿದೆ. ರಜಾಕ್‌ರವರ ಪುತ್ರಿ ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ 1 ಗಂಟೆ ತನಕ ಎಚ್ಚರವಿದ್ದು ಓದುತ್ತಿದ್ದರು. ಉಪವಾಸವಿದ್ದ ಹಿನ್ನೆಲೆಯಲ್ಲಿ ಮನೆಯವರು 3 ಗಂಟೆ ವೇಳೆಗೆ ಎದ್ದಿದ್ದರು. ರಾತ್ರಿ 1 ಗಂಟೆಯಿಂದ 3 ಗಂಟೆಯ ಮಧ್ಯೆ ದನ ಹಾಗೂ ಕರುವನ್ನು ಕಳವುಗೈದಿರುವ ಸಾಧ್ಯತೆ ಇದೆ. ದನ ಕಟ್ಟಿ ಹಾಕಿದ್ದಲ್ಲಿಗೆ ವಾಹನ ಬಂದಿರುವ ಹಾಗೂ ದನ ಕಟ್ಟಿಹಾಕಿದ್ದಲ್ಲಿ ದನ ಹೊರಳಾಡಿದ ಕುರುಹುಗಳು ಗೋಚರಿಸಿವೆ. ಮಹಮ್ಮದ್ ರಜಾಕ್‌ರವರು ವಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿದ್ದು ಪ್ರತಿದಿನ 7 ರಿಂದ 8 ಲೀ.ಹಾಲು ಸಂಘಕ್ಕೆ ಹಾಕುತ್ತಿದ್ದರು. ಇದೀಗ ಅವರ ಹಾಲು ಕರೆಯುವ ಎರಡೂ ದನ ಹಾಗೂ 1 ಹೆಣ್ಣು ಕರ ಕಳವುಗೊಂಡಿರುವುದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಘಟನೆ ಬಗ್ಗೆ ಬಿ.ಹೆಚ್.ಮಹಮ್ಮದ್ ರಜಾಕ್‌ರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರಿಂದ ಮಹಜರು:
ದೂರು ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಎ.12ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸಮೀಪದಲ್ಲಿರುವ ಉಪ್ಪಿನಂಗಡಿ ಸಿಎ ಬ್ಯಾಂಕ್‌ನ ಬಜತ್ತೂರು ಶಾಖಾ ಕಟ್ಟಡದಲ್ಲಿನ ಹಾಗೂ ವಳಾಲು ಮಸೀದಿಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here