ಪುತ್ತೂರು ಜಾತ್ರೆಗೆ ಬರುವ ಭಕ್ತಾದಿಗಳು ಮನೆಯ ಬಗ್ಗೆ ಎಚ್ಚರ ವಹಿಸಿ-ಬೆಲೆಬಾಳುವ ವಸ್ತುಗಳು, ಮಕ್ಕಳ ಬಗ್ಗೆ ನಿಗಾ ಇರಲಿ: ಡಿವೈಎಸ್‌ಪಿ ಡಾ. ಗಾನ ಪಿ. ಕುಮಾರ್ ಮನವಿ

0

  • ಪುತ್ತೂರು ಜಾತ್ರೆಯಲ್ಲಿ ಭಕ್ತಾದಿಗಳ ಸುರಕ್ಷತೆಗೆ ಪೊಲೀಸ್ ಇಲಾಖೆಯಿಂದ ಬಿಗಿ ಕ್ರಮ
  • ಎ.16 ಮತ್ತು 17ರಂದು ನಗರದ ಸಂಚಾರ ವ್ಯವಸ್ಥೆಯಲ್ಲಿ  ಬದಲಾವಣೆ
  • ಬೆಲೆ ಬಾಳುವ ವಸ್ತುಗಳು, ಮಕ್ಕಳು, ಹಿರಿಯ ನಾಗರಿಕರ ಬಗ್ಗೆ ಜಾಗರೂಕತೆ ಇರಲಿ

 

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ಎ.10ರಂದು ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ವಿವಿಧೆಡೆಗಳಿಂದ ಆಗಮಿಸುವ ಸಾವಿರಾರು ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಕ್ತಾದಿಗಳಿಗೆ ಸುಗಮ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬಹಳಷ್ಟು ಕ್ರಮಗಳನ್ನು ಕೈಗೊಂಡಿದೆ. ಭಕ್ತರಿಗೆ ಸೂಕ್ತ ಭದ್ರತೆಗೆ ವ್ಯವಸ್ಥೆ ಕಲ್ಪಿಸುವ ಜೊತೆಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಎ.16ರಂದು ದೇವಾಲಯದಲ್ಲಿ ನಡೆಯುವ ಕೆರೆ ಉತ್ಸವ, ಬಲ್ನಾಡು ಉಳ್ಳಾಲ್ತಿ ದಂಡನಾಯಕನ ಭಂಡಾರ ಆಗಮನ ಹಾಗೂ ಎ.17ರ ಬ್ರಹ್ಮರಥೋತ್ಸವದಂದು ಸಂಜೆ 3 ಗಂಟೆಯಿಂದ ಪುತ್ತೂರು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ  ಮಾಡಲಾಗಿದೆ.ಇದರ ಜೊತೆಗೆ ಪೊಲೀಸ್ ಇಲಾಖೆ ಭಕ್ತಾದಿಗಳ ಸುರಕ್ಷತೆಯ ನಿಟ್ಟಿನಲ್ಲೂ ಕ್ರಮಗಳನ್ನು ಕೈಗೊಂಡಿದೆ. ದೇವಾಲಯದ ರಥಬೀದಿಯ ಸಮೀಪ ಪೊಲೀಸ್ ಔಟ್‌ಪೋಸ್ಟ್‌  ತೆರೆಯಲಾಗಿದ್ದು ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ಭಕ್ತಾದಿಗಳು ಜಾತ್ರಾ ಸಂದರ್ಭದಲ್ಲಿ ತಮ್ಮ ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗರೂಕತೆ ವಹಿಸಬೇಕು. ತಮ್ಮಲ್ಲಿರುವ ವಸ್ತುಗಳು ಕಳೆದುಹೋದಲ್ಲಿ ಅಥವಾ ತಮ್ಮ ಜೊತೆಗಿದ್ದ ಮಕ್ಕಳು ಕಾಣದೇ ಹೋದಲ್ಲಿ ದೇವಸ್ಥಾನದ ರಥಬೀದಿಯಲ್ಲಿರುವ ಪೊಲೀಸ್ ಔಟ್‌ಪೋಸ್ಟ್‌ ಸಂಪರ್ಕಿಸಿ ದೂರು ನೀಡಬಹುದು. ಮಕ್ಕಳು ಕಾಣೆಯಾದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ತುರ್ತು ಕರೆ ಮಾಡಬಹುದು. ಜೊತೆಗೆ 112 ಸಹಾಯವಾಣಿಯ ಸೇವೆಯೂ ನಿರಂತರ ಲಭ್ಯವಿದ್ದು, ಹತ್ತಿರದ ಪೊಲೀಸ್ ಠಾಣೆಗಳಿಗೆ ದೂರು ನೀಡಬಹುದು.  ದೇವಾಲಯದ ವತಿಯಿಂದಲೂ ಹೆಲ್ಪ್‌ಲೈನ್ ಸೇವೆಯಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿ ಯಾವುದೇ ಅಪರಾಧಗಳಾದಲ್ಲಿ ಸೆನ್ ಹೆಲ್ಪ್‌ಲೈನ್ 1930ಗೆ ಕರೆಮಾಡಿ ಮಾಹಿತಿ ನೀಡಬಹುದು ಎಂದು ಡಿವೈಎಸ್‌ಪಿ ಡಾ| ಗಾನ ಪಿ. ಕುಮಾರ್ ತಿಳಿಸಿದ್ದಾರೆ.

ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಎ.೧೪ರಂದು ʻಸುದ್ದಿʼಯೊಂದಿಗೆ ಮಾತನಾಡಿದ ಡಾ.ಗಾನ.ಪಿ.ಕುಮಾರ್‌ ಅವರು, ಜಾತ್ರೆಯ ಸಂದರ್ಭದಲ್ಲಿ ಮನೆಗಳನ್ನು ಬಿಟ್ಟು ಬರುವಾಗ ಮನೆಗಳ ಭದ್ರತೆಯನ್ನು ಸೂಕ್ತವಾಗಿ ಕಾಪಾಡಿಕೊಳ್ಳಬೇಕು. ಜಾತ್ರೆಗೆ ಬಂದು ವಾಪಸ್ ಹೋಗುವ ಸಂದರ್ಭದಲ್ಲಿ ಮಕ್ಕಳು, ಹಿರಿಯ ನಾಗರಿಕರು ಯಾರೊಡನೆ ವಾಪಸ್ ಹೋಗುತ್ತಾರೆ ಎನ್ನುವ ಬಗ್ಗೆ ಗಮನ ವಹಿಸಬೇಕು. ಭಕ್ತಾದಿಗಳ ಗಮನ ಬೇರೆಡೆ ಸೆಳೆದು ಹಾದಿ ತಪ್ಪಿಸಿ  ಬೆಲೆಬಾಳುವ ವಸ್ತುಗಳನ್ನು ಲಪಟಾಯಿಸಲು ಸಂಚು ಹೂಡಿ ಬರುವವರು ಇರುತ್ತಾರೆ. ಈ ನಿಟ್ಟಿನಲ್ಲಿ ಜಾಗರೂಕತೆ ಅಗತ್ಯ. ಈ ಸಂದರ್ಭದಲ್ಲಿ ಯಾವುದೇ ಸಹಾಯ ಬೇಕಾದರೆ ಅಲ್ಲಲ್ಲಿ ಪಾಯಿಂಟ್‌ಗಳಲ್ಲಿ ಪೊಲೀಸರು ಇದ್ದು, ಅವರ ನೆರವು ಪಡೆಯಬಹುದು. ಜೊತೆಗೆ ದೇವರ ಅವಭೃತದ ಸಮಯದಲ್ಲಿ ನದಿಯ ತೀರದಲ್ಲಿ ಸುರಕ್ಷತೆಯ ಬಗ್ಗೆಯೂ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ. ದೇವಸ್ಥಾನದ ಎಲ್ಲಾ ಭಾಗಗಳಲ್ಲೂ, ರಥಬೀದಿಯಲ್ಲಿ ಹಾಗೂ ನಗರದ ವಿವಿಧೆಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜಾತ್ರೋತ್ಸವದ ಸಂದರ್ಭದಲ್ಲಿ ಪ್ರತಿಯೊಂದು ವಿಚಾರವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಭಕ್ತಾದಿಗಳು ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಮಗೆ ಸಹಕರಿಸಬೇಕು ಎಂದು ವಿನಂತಿಸಿದ ಗಾನ ಪಿ. ಕುಮಾರ್‌ ಅವರು ಜಾತ್ರೆಯ ಹಿನ್ನೆಲೆಯಲ್ಲಿ ವಿಶೇಷ ಬಂದೋಬಸ್ತ್‌  ಏಪಡಿಸಲಾಗಿದೆ.  ಮುನ್ನೆಚ್ಚರಿಕಾ ಕ್ರಮವಾಗಿ  ಪುತ್ತೂರು ನಗರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಎಲ್ಲಾ ಮಾದರಿಯ ಮದ್ಯದಂಗಡಿಗಳನ್ನು ಬಂದ್‌ ಮಾಡಲಾಗುವುದು ಎಂದು  ತಿಳಿಸಿದ್ದಾರೆ. 

 

 

LEAVE A REPLY

Please enter your comment!
Please enter your name here