ಅಗತ್ಯ ವಸ್ತುಗಳು, ಇಂಧನ ಬೆಲೆ ಏರಿಕೆ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

0

ಪುತ್ತೂರು:ಅಗತ್ಯ ವಸ್ತಗಳ ಹಾಗೂ ಇಂಧನ ಬೆಲೆ ಏರಿಕೆ ವಿರುದ್ಧ ಸೋಶಿಯಲ್ ಡೆಕಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಎ.15ರಂದು ಈಶ್ವರಮಂಗಲ, ಪುರುಷರಕಟ್ಟೆ, ರೆಂಜ, ಕುಂಬ್ರ, ಪುಣಚ, ವಿಟ್ಲ, ಕಬಕ ಹಾಗೂ ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಯಿತು.

ಕಬಕ ವೃತ್ತದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಎಸ್‌ಡಿಪಿಐ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಮಾತನಾಡಿ, ಶಾಸಕರನ್ನು ಖರೀದಿಸಿದ ಬಿಜೆಪಿ ಇಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಒಬ್ಬರಿಗಿಂತ ಒಬ್ಬ ಸಚಿವರು ಭ್ರಷ್ಟಾಚಾರಿಗಳು. ಅವರಿಗೆ ಜನ ಸಾಮಾನ್ಯರ ಕೂಗು ಕೇಳುವುದಿಲ್ಲ. 2014 ರಲ್ಲಿ ಭಾವನಾತ್ಮಕ ವಿಚಾರಗಳ ಮೂಲಕ ಮರಳು ಮಾಡಿ ಬಿಜೆಪಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದರೆ ನಂತರದ ಅವಧಿಯಲ್ಲಿಯೂ ಪಾಕಿಸ್ಥಾನ, ಪುಲ್ವಾಮ ವಿಚಾರಗಳ ಮೂಲಕ ಭಾವನಾತ್ಮಕವಾಗಿ ಜನರನ್ನು ಮೋಸ ಮಾಡಿ ಮತಗಳಿಸಿ ಆಡಳಿತಕ್ಕೆ ಬಂದಿದೆ. ಈಗ ಜನರಿಗೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಾಂತಾಗಿದೆ. ಜನರನ್ನು ಭಾವನಾತ್ಮಕ ವಿಚಾರಗಳಿಗೆ ಜನರು ಮರುಳಾಗಿ ಜನತೆ ಮತಕೊಟ್ಟು ಈಗ ಬೆಲೆ ಏರಿಕೆಯ ಪೆಟ್ಟು ಹೊಡೆಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ರಸ್ತೆಗಳಲ್ಲಿ ಕೊರಳಿಗೆ ನೇಣು ಹಾಕಿ ನೇತಾಡುವಂತ ಪರಿಸ್ಥಿತಿ ಬರಬಹುದು ಎಂದರು.

ಕಬಕ ಗ್ರಾ.ಪಂ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ, ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ, ಹೋರಾಟ ನಡೆಸುವ ಮುಖಾಂತರ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇಂದು ಜನತೆಗೆ ನಿರಂತರವಾಗಿ ಬೆಲೆ ಏರಿಕೆಯ ಬಿಸಿ ನೀಡುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್, ಅಚ್ಚೇದಿನ್ ಮೊದಲಾದ ತಲೆಬರಹಗಳು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಜನರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ದೇಶ ಕಟ್ಟುವ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇಂದು ಧ್ವೇಷಕಾರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಎಸ್‌ಡಿಪಿಐ ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಕಬಕ ಗ್ರಾ.ಪಂ ಸದಸ್ಯ ನಝೀರ್, ಗ್ರಾಮ ಸಮಿತಿ ಅಧ್ಯಕ್ಷ ಶೌಕತ್, ಸದಸ್ಯ ಬದ್ರು, ಪಿಎಫ್‌ಐಯ ಶಮೀರ್ ಮುರ, ರಫೀಕ್ ಮಿತ್ತೂರು ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗಿಗಳಾಗಿದ್ದರು.

LEAVE A REPLY

Please enter your comment!
Please enter your name here