ಶಾಸಕರ ನೇತೃತ್ವದಲ್ಲಿ 2 ದಿನಗಳ ಎಜ್ಯುಕೇಶನ್ ಎಕ್ಸ್‌ಪೋ-2022 ಉದ್ಘಾಟನೆ

0

  • ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ – ಸಂಜೀವ ಮಠಂದೂರು

ಪುತ್ತೂರು: ವಿದ್ಯಾರ್ಥಿಗಳಿಗೆ ಕಲಿಯುತ್ತಿರುವಾಗಲೇ ಸ್ಪರ್ಧಾತ್ಮಕ ವಿಚಾರಗಳ ಮಾಹಿತಿ ನೀಡುವ ಮೂಲಕ ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಒಂದೇ ಸೂರಿನಡಿ ವಿವಿಧ ಕಾಲೇಜುಗಳ ಕುರಿತು ಮಾಹಿತಿ ಪಡೆಯಲು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಎರಡು ದಿನ ತನ್ನ ನೇತೃತ್ವದಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಬಳಿಕ ಇರುವ ಕೋರ್ಸುಗಳ ಕುರಿತು ಉಚಿತ ಮಾಹಿತಿ `ಪುತ್ತೂರು ಎಜ್ಯುಕೇಶನನ ಎಕ್ಸ್‌ಪೋ -೨೦೨೨ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ಸಂಜೀವ ಮಠಂದೂರು ಇವರ ಸಹಕಾರದಲ್ಲಿ ಆದ್ಯ ಗ್ರೂಪ್ ಪುತ್ತೂರು ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎಜ್ಯುಕೇಶನ್ ಎಕ್ಸ್‌ಪೋ ಕಾರ್ಯಕ್ರಮ ನಡೆಯಿತು. ತನ್ನ ಎಸ್‌ಎಸ್‌ಎಲ್‌ಸಿ ಬಳಿಕ ಮುಂದೇನೊ ಅನ್ನುವ ಕುರಿತು ಸರಿಯಾದ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಪುಷ್ಟಿಕೊಡುವ ಕೆಲಸ ಆಗಬೇಕು. ವಿದ್ಯಾರ್ಥಿಗಳು ಕಲಿಯುತ್ತಿರುವಾಗಲೇ ಸ್ಪರ್ಧಾತ್ಮಕ ವಿಚಾರಗಳ ಕುರಿತು ಮಾಹಿತಿ ಪಡೆದರೆ ಮುಂದೆ ಅವರ ಜೀವನ ಪರಿಪೂರ್ಣ ಆಗಲಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರ ಆರಂಭಿಸಲಾಗಿದೆ. ಮಕ್ಕಳಿಗೆ ನಾನೇನಾಗಬೇಕೆಂಬ ಸಂದೇಶ ಆರಂಭಗೊಂಡಿದೆ ಎಂದರು.

ಸ್ವಾವಲಂಬನೆ ಮಕ್ಕಳಿಗೆ ಅಗತ್ಯ:
ಎಜ್ಯುಕೇಶನ್ ಎಕ್ಸ್‌ಪೋ ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಸುಧಾಕರ್ ಅವರು ಮಾತನಾಡಿ ಸ್ವಾವಲಂಭನೆಯನ್ನು ಮಕ್ಕಳಿಗೆ ಮನವರಿಕೆ ಮಾಡುವುದು ಇವತ್ತಿನ ದಿನದಲ್ಲಿ ಅಗತ್ಯವಾಗಿದೆ. ಯಾಕೆಂದರೆ ಶಿಕ್ಷಣದ ಫಲಿತಾಂಶವೇ ಎಲ್ಲವೂ ಅಲ್ಲ. ಅದರಿಂದಲೂ ಮುಂದುವರಿದ ಜೀವನ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಆಯ್ಕೆ ವಿಷಯ ಕಲಿಯುವ ಅವಕಾಶವಿದೆ. ಈ ನಿಟ್ಟಿನಲ್ಲಿ ಮಗುವಿನ ಸಾಧ್ಯತೆ ಒಂದೊಂದು ಮಜಲು ತಲುಪಬೇಕೆಂದು ಎಂದು ಹೇಳಿದ ಅವರು ಇಂತಹ ಕಾರ್ಯಾಗಾರ ಮುಂದೆ ಗೂಗಲ್ ಮೀಟ್ ಮೂಲಕವೂ ಮಾಡಬಹುದು ಮತ್ತು ಪ್ರತಿ ಮನೆ ತಲುಪುವ ಕೆಲಸ ಆಗಬಹುದು ಎಂದರು.


ವಿದ್ಯಾರ್ಥಿಗಳ ಏಳಿಗೆಗಾಗಿ ಶಾಸಕರೇ ಮುಂಚೂಣಿಯಲ್ಲಿರುವುದು ಅಭಿನಂದನೀಯ:
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಮಾತನಾಡಿ ಶೈಕ್ಷಣಿಕ ಮಾಹಿತಿ ಇವತ್ತು ಅತ್ಯಂತ ಉಪಯುಕ್ತ. ಈ ನಿಟ್ಟನಲ್ಲಿ ಶಾಸಕರೇ ಮುಂಚೂಣಿಯಲ್ಲಿ ನಿಂತು ಇಂತಹ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವುದು ಅಭಿನಂದನೀಯ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭ ಮುಖ್ಯಶಿಕ್ಷಕರ ಸಭೆ ಮಾಡುವ ಮೂಲಕ ಶಿಕ್ಷಕರಿಗೂ ಸ್ಪೂರ್ತಿ ನೀಡಿದ್ದಾರೆ ಎಂದ ಅವರು ಇಂತಹ ಕಾರ್ಯಗಾರ ಪ್ರತಿ ತಿಂಗಳಿಗೊಮ್ಮೆ ಕನಿಷ್ಠ ನಡೆಯಬೇಕು. ಇದು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅಗತ್ಯ ಎಂದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಯುವ ಒಕ್ಕಲಿಗ ಗೌಡ ಅಧ್ಯಕ್ಷ ನಾಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೀಕ್ಷಿತ್ ಸ್ವಾಗತಿಸಿದರು. ಆದ್ಯ ಗ್ರೂಪ್ಸ್‌ನ ಅನಿಲ್ ವಂದಿಸಿದರು. ಎಕ್ಸ್‌ಪೋದಲ್ಲಿ ಪಿಯುಸಿ, ಪಾಲಿಟೆಕ್ನಿಕ್, ಐಟಿಐ, ಪ್ಯಾರಮೆಡಿಕಲ್, ಕಂಪ್ಯೂಟರ್ ಟ್ರೈನಿಂಗ್, ಕೋಚಿಂಗ್ ಸೆಂಟರ್ ಮುಂತಾದ ಶಿಕ್ಷಣ ಸಂಸ್ಥೆಗಳು ಭಾಗವಹಿಸಿತ್ತು.

LEAVE A REPLY

Please enter your comment!
Please enter your name here