ಎ.23: ಕಾಂಚನದಲ್ಲಿ’ ಕಾಂಚನೋತ್ಸವ 2022’

0

ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಪ್ರಸ್ತುತ ಪಡಿಸುವ 68ನೇ ವರ್ಷ ಕಲಾಸೇವೆಯ ’ಕಾಂಚನೋತ್ಸವ 2022’, 68ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರುಗಳಾದ ಸಂಗೀತರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯ ದಿನಾಚರಣೆ ಎ.23ರಂದು ಬಜತ್ತೂರು ಗ್ರಾಮದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ರೋಹಿಣಿ ಸುಬ್ಬರತ್ನಂರವರು ತಿಳಿಸಿದ್ದಾರೆ.

 

ಬೆಳಿಗ್ಗೆ ವೇ.ಬ್ರ.ನಾರಾಯಣ ಬಡಕಿಲ್ಲಾಯರವರ ನೇತೃತ್ವದಲ್ಲಿ ಗಣಹೋಮ ನಡೆಯಲಿದೆ. ಬೆಳಿಗ್ಗೆ ೮.೩೦ಕ್ಕೆ ’ಊಂಛ ವೃತ್ತಿ’ ಸಂತ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಮತ್ತು ದಿವ್ಯನಾಮ ಸಂಕೀರ್ತನೆಗಳ ವಾದ್ಯ-ಗಾಯನ-ಭಜನೆಗಳೊಂದಿಗೆ ಸಂಗೀತ ನಡಿಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯವರೆಗೆ ನಡೆಯಲಿದೆ. ೯.೩೦ಕ್ಕೆ ಶ್ರೀ ಪುರಂದರದಾಸರ ಪಿಳ್ಳಾರಿ ಗೀತೆಗಳು ಮತ್ತು ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾನ, ೧೧ ಗಂಟೆಯಿಂದ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ ೧೨ ಗಂಟೆಗೆ ಕರ್ನಾಟಕ ಕಲಾಶ್ರೀ ದಿ.ಕಾಂಚನ ವಿ.ಸುಬ್ಬರತ್ನಂರವರ ಶಿಷ್ಯರಾದ ವಿದ್ವಾನ್ ದಿ.ಯು.ಎಸ್.ರಾಮಕೃಷ್ಣ ಭಟ್ಟರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಗಾಯನದಲ್ಲಿ ಅಭಿಷೇಕ್ ಎನ್.ಎಸ್., ಪಿಟೀಲುನಲ್ಲಿ ಕುಮಾರಿ ಋತ ಕೆ.ಜೆ., ದ್ವಂದ್ವ ಮೃದಂಗದಲ್ಲಿ ಶಿವಕುಮಾರ್ ಕಲ್ಕೂರ್ ಮತ್ತು ಶ್ರೇಯಸ್ ರಂಗನಾಥ್‌ರವರು ಭಾಗವಹಿಸಲಿದ್ದು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ ೧ ಗಂಟೆಯಿಂದ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮುಂದುವರಿಯಲಿದೆ.

ಸಂಗೀತ ಕಛೇರಿ:
ಸಂಜೆ ೬ ಗಂಟೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ವಿದ್ವಾನ್ ಕುನ್ನಕುಡಿ ಬಾಲಮುರಳಿ ಕೃಷ್ಣ, ವಿದುಷಿ ಅಕ್ಕರೈ ಸ್ವರ್ಣಲತಾ, ಮೃದಂಗದಲ್ಲಿ ವಿದ್ವಾನ್ ಅರ್ಜುನ್ ಕುಮಾರ್‌ರವರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಸಂಜೆ ೭ ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾನಮಸ್ಕಾರ ಪೂಜೆ, ಪ್ರಸಾದ ವಿತರಣೆ, ಮಹಾಪೂಜೆ, ಮಂತ್ರಾಕ್ಷತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಮಧ್ಯಾಹ್ನ ಮತ್ತು ರಾತ್ರಿ ಭೋಜನದ ವ್ಯವಸ್ಥೆ ಇದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here