ಕರ್ನಾಟಕ ಕಂಬಳ ಫೆಡರೇಶನ್ ಅಸ್ತಿತ್ವಕ್ಕೆ ತರಲು ಸರಕಾರ ನಿರ್ಧಾರ

0

  • ಕಂಬಳ ಸಮಿತಿಗಳನ್ನು ನೋಂದಾಯಿಸಲು, ಬೈಲಾ ರಚಿಸಲು ನಿರ್ಣಯ
  • ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ  ಅಶೋಕ್ ರೈ ಭಾಗಿ

ಪುತ್ತೂರು: ಪಾರಂಪರಿಕ ಮತ್ತು ಆಧುನಿಕ ಕಂಬಳವನ್ನು ಉಳಿಸಿ ಬೆಳೆಸಲು ಕರ್ನಾಟಕ ಕಂಬಳ ಫೆಡರೇಷನ್ ಅಸ್ತಿತ್ವಕ್ಕೆ ತರಲು ಸರಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿರುವ ವಿಧಾನಸೌಧದಲ್ಲಿ ಎ.19ರಂದು ನಡೆದ ವಿಶೇಷ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ. ತುಳುನಾಡಿನ ಪ್ರಾಚೀನ ಕಂಬಳವನ್ನು ಪ್ರೋತ್ಸಾಹಿಸುವ ಸಲುವಾಗಿ ಅಸ್ತಿತ್ವಕ್ಕೆ ತರುವ ಕರ್ನಾಟಕ ಕಂಬಳ ಫೆಡರೇಷನ್ ಮೂಲಕ ಕಂಬಳ ಕೂಟಗಳನ್ನು ಆಯೋಜಿಸಲು ಮತ್ತು ಫೆಡರೇಶನ್ ಮೂಲಕವೇ ವಿಶೇಷ ಅನುದಾನ ನೀಡಲು ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ, ಕಂಬಳ ಸಮಿತಿಗಳನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಕಂಬಳ ಸಮಿತಿಗಳು ಬೈಲಾ ರಚಿಸಿಕೊಳ್ಳಬೇಕು, ಫೆಡರೇಶನ್ ಸೂಚಿಸುವ ಮಾರ್ಗದರ್ಶಿಗಳನ್ನು ಕಂಬಳ ಸಮಿತಿಗಳು ಅನುಸರಿಸಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯ ಕ್ರೀಡಾ ಸಚಿವ ನಾರಾಯಣ ಗೌಡರವರ ಮಾರ್ಗದರ್ಶನದಲ್ಲಿ ನಡೆದ ಈ ಸಭೆಯಲ್ಲಿ ವಿಧಾನ ಪರಿಷತ್‌ನ ಸಭಾಭತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಮುಂಜುನಾಥ ಭಂಡಾರಿ, ಹರೀಶ್ ಕುಮಾರ್, ಕಂಬಳ ಸಂರಕ್ಷಣಾ ನಿರ್ವಹಣಾ ಮತ್ತು ತರಬೇತಿ ಅಕಾಡೆಮಿಯ ಅಧ್ಯಕ್ಷರೂ ಅಗಿರುವ ಹಿರಿಯ ತೀರ್ಪುಗಾರ ಗುಣಪಾಲ ಕಡಂಬ, ಸರಕಾರದ ಅಧೀನ ಕಾರ್ಯದರ್ಶಿಗಳು, ಕ್ರೀಡಾ ಖಾತೆಯ ಅಧಿಕಾರಿಗಳು ಸಹಿತ ಹಲವರು ಭಾಗವಹಿಸಿದ್ದರು.

ಅಶೋಕ್ ರೈ ಭಾಗಿ: ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಭಾಗವಹಿಸಿದ್ದರು. ಕಂಬಳದ ಉಳಿವಿಗಾಗಿ ನಿರಂತರವಾಗಿ ಕಾನೂನು ಹೋರಾಟ ನಡೆಸುತ್ತಿರುವ ಮತ್ತು ಕಂಬಳ ಕೂಟಕ್ಕೆ ವಿಶೇಷ ಅನುದಾನ ದೊರಕಿಸಲು ಪ್ರಯತ್ನ ನಡೆಸುತ್ತಿರುವ ಅಶೋಕ್ ರೈಯವರು ಈ ಸಭೆಗೆ ಆಹ್ವಾನಿಸಲ್ಪಟ್ಟಿದ್ದರು.

.

LEAVE A REPLY

Please enter your comment!
Please enter your name here