ಪೆರ್ನೆ: ಮಹಿಳೆಯ ಕತ್ತು ಹಿಸುಕಿ ಕೊಲೆ-ಅಪ್ರಾಪ್ತ ಬಾಲಕನ ಮೇಲೆ ಸಂಶಯ

0

ಉಪ್ಪಿನಂಗಡಿ: ಪೆರ್ನೆ ಗ್ರಾ.ಪಂ. ವ್ಯಾಪ್ತಿಯ ಬಿಳಿಯೂರಿನ ದರ್ಖಾಸು ಎಂಬಲ್ಲಿ ಮಹಿಳೆಯೋರ್ವರನ್ನು ಕತ್ತು ಹಿಸುಕಿ ಕೊಲೆಗೈದ ಘಟನೆ ನಡೆದಿದ್ದು, ಇವರ ಅಕ್ಕನ ಮಗನಾದ ಅಪ್ರಾಪ್ತ ಬಾಲಕನ ಮೇಲೆ ತೀವೃ ಸಂಶಯ ವ್ಯಕ್ತವಾಗಿದೆ.


ಇಲ್ಲಿನ ಕಮಲಾ ಅವರ ಪುತ್ರಿ ಹೇಮಾವತಿ (37) ಮೃತ ಮಹಿಳೆ. ಇವರು ಜೂ.16ರಂದು ಮಧ್ಯರಾತ್ರಿ ಕಳೆದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿ ಹರಡಿದ್ದು, ಆದರೆ ಇವರ ಸಾವಿನ ಕುರಿತು ಸಾಕಷ್ಟು ಅನುಮಾನಗಳು ಮೂಡಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿ, ಮಹಜರು ನಡೆಸಿದ್ದು, ಆಗ ಇವರನ್ನು ರಾತ್ರಿಯಿಂದ ಬೆಳಗ್ಗಿನ ಜಾವದ ನಡುವಲ್ಲಿ ಕತ್ತು ಹಿಸುಕಿ ಕೊಲೆಗೈಯಲಾಗಿದೆ ಎಂದು ಸಾಬೀತಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆ ರಾತ್ರಿ ಆ ಮನೆಯಲ್ಲಿದ್ದ ಹೇಮಾವತಿ ಅವರ ಅಕ್ಕನ ಮಗನಾದ ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ಅಪ್ರಾಪ್ತ ಬಾಲಕನ ಮೇಲೆ ಸಂಶಯ ವ್ಯಕ್ತವಾಗಿದ್ದು, ಘಟನೆಯ ವಿಷಯವಾಗಿ ಈ ಅಪ್ರಾಪ್ತ ಬಾಲಕ, ಈತನ ತಂದೆ ಶಂಕರ ಹಾಗೂ ಅವರ ಇನ್ನಿಬ್ಬರ ಪುತ್ರರನ್ನು ಉಪ್ಪಿನಂಗಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಹೆಚ್ಚಿನ ವಿಚಾರಣೆಯಲ್ಲಷ್ಟೇ ಈ ಕೊಲೆ ಮಾಡಿದವರು ಯಾರು ಎಂಬುದು ಬೆಳಕಿಗೆ ಬರಬೇಕಿದೆ.


ಘಟನೆಯ ವಿವರ:
ಇಲ್ಲಿನ ಕಮಲಾ ಅವರಿಗೆ ಇಬ್ಬರು ಮಕ್ಕಳಿದ್ದು, ಅವರಲ್ಲಿ ನಿನ್ನೆ ಮೃತರಾದ ಹೇಮಾವತಿಯವರು ಕಿರಿಯ ಪುತ್ರಿಯಾಗಿದ್ದಾರೆ. ಇವರಿಗೆ ಪ್ರೇಮ ವಿವಾಹವಾಗಿದ್ದು, ಸುಮಾರು ಆರು ವರ್ಷಗಳ ಹಿಂದೆ ಗಂಡನಿಂದ ಬೇರ್ಪಟ್ಟು, ತಾಯಿ ಕಮಲಾ ಅವರ ಜೊತೆ ವಾಸವಾಗಿದ್ದರು. ಬೊಳುವಾರಿನಲ್ಲಿರುವ ಕ್ಯಾಂಟೀನೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಕಮಲಾ ಅವರ ಹಿರಿಯ ಪುತ್ರಿ ಕೂಡಾ ಅನ್ಯ ಜಾತಿಯ ವ್ಯಕ್ತಿಯನ್ನು ವರಿಸಿದ್ದು, ಕೆಲವು ವರ್ಷಗಳ ಹಿಂದೆ ಕೌಟುಂಬಿಕ ಸಮಸ್ಯೆಯಿಂದ ಕಮಲಾ ಅವರ ಮನೆಯಲ್ಲಿಯೇ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಳಿಕ ಹಿರಿಯ ಪುತ್ರಿಯ ಪತಿ ಶಂಕರ ಹಾಗೂ ಅವರ ಮೂವರು ಗಂಡು ಮಕ್ಕಳು ಕಮಲಾ ಅವರ ಮನೆಯ ಸಮೀಪದಲ್ಲಿಯೇ ಜೋಪಡಿಯೊಂದರಲ್ಲಿ ವಾಸ್ತವ್ಯವಿದ್ದರು. ಈ ಮನೆಯಲ್ಲಿ ಕಮಲಾ ಹಾಗೂ ಅವರ ಕಿರಿಯ ಪುತ್ರಿ ಹೇಮಾವತಿ ವಾಸ್ತವ್ಯವಿದ್ದರು. ಮೇಸ್ತಿ ಕೆಲಸ ಮಾಡಿಕೊಂಡಿದ್ದ ಕಮಲಾ ಅವರ ಹಿರಿಯ ಪುತ್ರಿಯ ಪತಿ ಶಂಕರ ಅನ್ನುವವರು ಸುಮಾರು ಎರಡು ತಿಂಗಳ ಹಿಂದೆ ಕರ್ವೇಲಿನಲ್ಲಿ ಬಾಡಿಗೆ ಮನೆಯನ್ನು ಪಡೆದು ಅದರಲ್ಲಿ ತನ್ನ ಮಕ್ಕಳೊಂದಿಗೆ ವಾಸ್ತವ್ಯವಿದ್ದರು. ಜೂ. 16ರಂದು ಶಂಕರ ಅವರ ಎರಡನೇ ಪುತ್ರನಾದ ಅಪ್ರಾಪ್ತ ಬಾಲಕ ತನ್ನ ಅಜ್ಜಿ ಮನೆಗೆ ಬಂದಿದ್ದು, ರಾತ್ರಿ ಈ ಮನೆಯಲ್ಲಿ ಅಜ್ಜಿ ಹಾಗೂ ಚಿಕ್ಕಮ್ಮನೊಂದಿಗೆ ತಂಗಿದ್ದ. ರಾತ್ರಿ ಸುಮಾರು 12:30ರ ಸುಮಾರಿಗೆ ಈತ ತನ್ನ ತಂದೆ ಶಂಕರ ಹಾಗೂ ಕೆಲ ಪರಿಚಯದವರಿಗೆ ಈತನ ಚಿಕ್ಕಮ್ಮ ಹೇಮಾವತಿಯವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದ ಎನ್ನಲಾಗಿದೆ.


ಸಂಶಯಕ್ಕೆ ಕಾರಣವೇನು?:
ಜೂ.17ರ ಬೆಳಗ್ಗೆ ಸುಮಾರು 6.30ಗೆ ಶಂಕರ ಅವರು ಮೃತ ಹೇಮಾವತಿಯವರ ಮನೆಯ ಪಕ್ಕದಲ್ಲಿರುವ ಮನೆಗೆ ತೆರಳಿದ್ದು, ಹೇಮಾವತಿಯವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದನ್ನಲ್ಲದೆ, ತನ್ನ ಮಗನ ಮೇಲೆಯೂ ಪರಚಿದ ಗಾಯಗಳಿದೆ ಎಂದು ಹೇಳಿದ್ದ. ಆಗ ಆ ಮನೆಯವರು ಈ ವಿಷಯವನ್ನು ನೀನು ಪೊಲೀಸರಿಗೆ ತಿಳಿಸದಿದ್ದರೆ, ನಾವು ಹೇಳಬೇಕಾಗುತ್ತದೆ ಎಂದಾಗ, ನಾನೇ ಹೇಳುತ್ತೇನೆ ಎಂದು ಹೇಳಿ ಅಲ್ಲಿಂದ ಬಂದು ಪೊಲೀಸರಿಗೂ ವಿಷಯ ತಿಳಿಸಿದ್ದ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಈಕೆಯನ್ನು ಕತ್ತು ಹಿಸುಕಿ ಕೊಲೆಗೈದಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಘಟನೆ ಕುರಿತಾಗಿ ನಿನ್ನೆ ರಾತ್ರಿ ಮನೆಯಲ್ಲಿದ್ದ ಈ ಅಪ್ರಾಪ್ತ ಬಾಲಕ, ಆತನ ತಂದೆ ಶಂಕರ ಹಾಗೂ ಶಂಕರನ ಇನ್ನಿಬ್ಬರು ಮಕ್ಕಳನ್ನು ಠಾಣೆಗೆ ಕರೆದೊಯ್ದ ಉಪ್ಪಿನಂಗಡಿ ಪೊಲೀಸರು ಇವರನ್ನು ತೀವೃ ವಿಚಾರಣೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಅವರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹೇಮಾವತಿಯವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.

ಮೃತರ ಪತಿಯಿಂದ ದೂರು ಕೊಲೆ ಪ್ರಕರಣ ದಾಖಲು
ಘಟನೆ ಕುರಿತು ಮೃತ ಹೇಮಾವತಿಯವರ ಪತಿ ಮಾಣಿ ಗ್ರಾಮದ ವಿಠಲ ಪೈ ಯಾನೆ ಶೈಲೇಶ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಹೆಂಡತಿ ಶ್ರೀಮತಿ ಹೇಮಾವತಿ (37ವ.) ಆಕೆಯ ತಾಯಿ ಮನೆಯಲ್ಲಿ ವಾಸ್ತವ್ಯವದ್ದು, ಆಕೆ ರಾತ್ರಿ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿ ಜೂ.17ರಂದು ಬೆಳಿಗ್ಗೆ ತನಗೆ ಮಾಹಿತಿ ಬಂದ ಮೇರೆಗೆ, ಹೆಂಡತಿಯ ಮನೆಯಾದ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ದರ್ಖಾಸು ಎಂಬಲ್ಲಿಗೆ ಬಂದು ನೋಡಿದಾಗ, ಹೆಂಡತಿಯ ಮೃತದೇಹದಲ್ಲಿದ್ದ ಗಾಯದ ಗುರುತುಗಳ ಬಗ್ಗೆ ಸಂಶಯ ಬಂದಿರುತ್ತದೆ. ಜೂ.16ರಂದು ತನ್ನ ಹೆಂಡತಿಯ ಅಕ್ಕನ ಮಗ ಹೆಂಡತಿಯ ಮನೆಗೆ ಬಂದಿದ್ದು, ರಾತ್ರಿ ಹೆಂಡತಿಯ ತಾಯಿ, ಹೆಂಡತಿಯ ಅಕ್ಕನ ಮಗ ಮತ್ತು ಹೆಂಡತಿ ಊಟ ಮಾಡಿ ಮಲಗಿದ್ದರು, ತನ್ನ ಹೆಂಡತಿಯನ್ನು ಜೂ.16ರ ರಾತ್ರಿಯಿಂದ ಜೂ.17ರಂದು ಬೆಳಿಗ್ಗಿನ ಜಾವದ ಮಧ್ಯದ ಅವಧಿಯಲ್ಲಿ, ಯಾರೋ ವ್ಯಕ್ತಿಗಳು ಕುತ್ತಿಗೆಯನ್ನು ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿದೆ ಎಂದು ವಿಠಲ ಪೈ ಯಾನೆ ಶೈಲೇಶ್ ಅವರು ನೀಡಿದ ದೂರಿನಂತೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ (ಅ.ಕ್ರ: 68/2024) ಕಲಂ:302 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here