ರೋಟರಿ ಸೆಂಟ್ರಲ್, ರೋಟರಿ ಸ್ವರ್ಣ, ರೋಟರಿ ಎಲೈಟ್‌ನಿಂದ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥಾಪಕರ ದಿನಾಚರಣೆ

0

  • ರೋಟರಿಯಿಂದ ಸೇವೆ, ಸಹಬಾಳ್ವೆ, ನಾಯಕತ್ವ, ಐಕ್ಯತೆ, ವೈವಿಧ್ಯತೆ-ಡಾ.ಭಾಸ್ಕರ್

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ಇಡೀ ವಿಶ್ವಕ್ಕೆ ಏನೆಲ್ಲಾ ಕೊಡುಗೆಗಳನ್ನು ನೀಡಿದೆ ಎಂಬುದು ಜಗತ್ತಿಗೆ ತಿಳಿದಿದೆ. ರೋಟರಿ ಸಂಸ್ಥೆಯಲ್ಲಿ ಜಾತಿ, ಮತ, ಬೇಧಭಾವವಿಲ್ಲ. ರೋಟರಿಯಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯವಿದೆ. ರೋಟರಿ ಸಂಸ್ಥೆಯಲ್ಲಿ ಸೇವೆ, ಸಹಬಾಳ್ವೆ, ನಾಯಕತ್ವ, ಐಕ್ಯತೆ ಹಾಗೂ ವೈವಿಧ್ಯತೆಯು ಮೇಳೈಸಿದೆ ಎಂದು ರೋಟರಿ ಜಿಲ್ಲೆ 3180 ಇದರ ಪಿಡಿಜಿ ಡಾ.ಭಾಸ್ಕರ್ ಎಸ್‌ರವರು ಹೇಳಿದರು.

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಎಲೈಟ್ ಇವುಗಳ ಜಂಟಿ ಆಶ್ರಯದಲ್ಲಿ ಎ.೧೯ ರಂದು ಪುತ್ತೂರು ಬೈಪಾಸ್ ರಸ್ತೆಯಲ್ಲಿನ ಆಶ್ಮಿ ಕಂಫರ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥಾಪಕ ಪಾವ್ಲ್ ಪಿ.ಹ್ಯಾರಿಸ್‌ರವರ ೧೫೪ನೇ ಜನ್ಮದಿನಾಚರಣೆಯನ್ನು ಪುತ್ತೂರು ರೋಟರಿ ಸಂಸ್ಥೆಗಳ ಸಂಸ್ಥಾಪಕರಾದ ಕೆ.ಆರ್ ಶೆಣೈರವರ ಜೊತೆಗೂಡಿ ದೀಪ ಬೆಳಗಿಸಿ, ಪಾವ್ಲ್ ಹ್ಯಾರಿಸ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುತ್ತಾ ಹಾಗೂ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ದಿನಿತ್ಯದ ಜಂಜಾಟದಿಂದ ಮುಕ್ತರಾಗಲು ನಾಲ್ವರು ಸ್ನೇಹಿತರೊಡಗೂಡಿ ಪಾವ್ಲ್ ಹ್ಯಾರಿಸ್‌ರವರು ೧೯೦೫ರಲ್ಲಿ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯನ್ನು ಆರಂಭಿಸಿದರು ಮಾತ್ರವಲ್ಲದೆ ಇದೇ ರೋಟರಿ ಮುಖೇನ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ರೋಟರಿ ಸಂಸ್ಥೆಯನ್ನು ವಿಶ್ವಕ್ಕೆ ಪರಿಚಯಿಸಿದರು ಎಂದ ಅವರು ರೋಟರಿ ಸದಸ್ಯರು ಸಮಾಜದಲ್ಲಿ ಜೀವಿಸುವ ಸಂದರ್ಭದಲ್ಲಿ ಉತ್ತಮವಾದ ಎಥಿಕ್ಸ್‌ನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿನ ರೋಟರಿ ಸದಸ್ಯರು ಯಾವುದೇ ಕಪ್ಪು ಚುಕ್ಕೆ ಬಾರದಂತೆ ರೋಟರಿ ಸಂಸ್ಥೆಯನ್ನು ಬೆಳೆಸಿಕೊಂಡು ಮುಂದುವರೆಸುವಂತಾಗಬೇಕು ಎಂದು ಅವರು ಹೇಳಿದರು.

ರೋಟರಿ ವಲಯ ಐದರ ವಲಯ ಕಾರ್ಯದರ್ಶಿ ಅಬ್ಬಾಸ್ ಕೆ.ಮುರರವರು ಮಾತನಾಡಿ, ರೋಟರಿ ಸಂಸ್ಥೆಯು ಏನೆಲ್ಲಾ ಆಶಯಗಳನ್ನು ಇಟ್ಟುಕೊಂಡಿದೆಯೋ ಅಂತಹ ಆಶಯಗಳಿಗೆ ರೋಟರಿ ಸದಸ್ಯರು ಬದ್ಧರಾಗಿ ಉತ್ತಮ ರೊಟೇರಿಯನ್ಸ್ ಎಂಬುದಾಗಿ ಸಮಾಜದಲ್ಲಿ ಗುರುತಿಸಿಕೊಂಡಾಗ ನಿಜಕ್ಕೂ ನಾವು ರೋಟರಿ ಸಂಸ್ಥಾಪಕ ಪಾವ್ಲ್ ಹ್ಯಾರಿಸ್‌ರವರಿಗೆ ನೀಡುವ ಜನ್ಮದಿನಾಚರಣೆಯ ಶುಭಾಶಯಗಳಾಗಿದೆ ಎಂದರು.

ರೋಟರಿ ವಲಯ ಐದರ ವಲಯ ಸೇನಾನಿ ಜಯಂತ್ ಶೆಟ್ಟಿರವರು ಮಾತನಾಡಿ, ರೋಟರಿ ಸಂಸ್ಥೆಯನ್ನು ಸ್ಥಾಪನೆ ಮಾಡಿದ ಪಾವ್ಲ್ ಹ್ಯಾರಿಸ್‌ರವರು ಇಂದು ಜಗತ್ತಿನಲ್ಲಿ ಅತ್ಯಂತ ಗೌರವದ ಹಾಗೂ ಪ್ರೀತಿಯ ವ್ಯಕ್ತಿಯಾಗಿದ್ದಾರೆ. ಅವರು ಸ್ಥಾಪನೆ ಮಾಡಿದ ಬಳಿಕ ಅಂದಿನಿಂದ ಇಂದಿನವರೆಗೂ ರೋಟರಿ ಸಂಸ್ಥೆಯು ಅನೇಕ ಸಮಾಜಮುಖಿ ಕಾರ್ಯಗಳನ್ನು ನೀಡುತ್ತಾ ಬಂದಿದೆ. ರೋಟರಿ ಸಂಸ್ಥಾಪಕರ ಹುಟ್ಟುಹಬ್ಬವನ್ನು ಆಯೋಜಿಸಿದ ರೋಟರಿ ಸೆಂಟ್ರಲ್, ಸ್ವರ್ಣ ಹಾಗೂ ಎಲೈಟ್‌ರವರಿಗೆ ಶುಭಾಶಯಗಳು ಎಂದರು.

ಈ ಸಂದರ್ಭದಲ್ಲಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿರುವ ರೋಟರಿ ಸೆಂಟ್ರಲ್, ರೋಟರಿ ಎಲೈಟ್‌ನ ಸದಸ್ಯರನ್ನು ಅಭಿನಂದಿಸಲಾಯಿತು. ರೋಟರಿ ಸೆಂಟ್ರಲ್‌ನ ಕೋಶಾಧಿಕಾರಿ ಶಿವರಾಂ, ರೋಟರಿ ಎಲೈಟ್‌ನ ಕಾರ್ಯದರ್ಶಿ ರಂಜಿತ್ ಮಥಾಯಿಸ್‌ರವರು ಹುಟ್ಟುಹಬ್ಬ ಆಚರಿಸುತ್ತಿರುವ ಸದಸ್ಯರ ಹೆಸರನ್ನು ಓದಿದರು. ಕು|ರಿಯಾರಾಮ್ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ನವೀನ್‌ಚಂದ್ರ ನಾಕ್ ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ಎಲೈಟ್‌ನ ನಿಯೋಜಿತ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್ ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ಭಾಸ್ಕರ ಕೋಡಿಂಬಾಳರವರು ಅತಿಥಿಗಳ ಪರಿಚಯ ಮಾಡಿದರು. ಪತ್ರಕರ್ತ ರೋಟರಿ ಎಲೈಟ್‌ನ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.

ರೋಟರಿಯಿಂದ ಬೆಳೆಯಲು ಅವಕಾಶ…
೨೫ ವರುಷದ ಹಿಂದೆ ನನಗೆ ರೋಟರಿ ಸಂಸ್ಥೆಯು ಏನು ಮಾಡುತ್ತಿದೆ ಎಂಬುದಾಗಿ ಅರ್ಥವಾಗಿರಲಿಲ್ಲ. ಆದರೆ ಇಂದು ನಾನು ರೋಟರಿ ಸಂಸ್ಥೆಗೆ ಸೇರ್ಪಡೆಯಾದ್ದರಿಂದ ನನಗೆ ರೋಟರಿ ಸಂಸ್ಥೆಯ ಮೌಲ್ಯದ ಬಗ್ಗೆ ಅರಿವಾಗುತ್ತದೆ. ಏಕೆಂದರೆ ಇದೇ ರೋಟರಿ ಸಂಸ್ಥೆಯಲ್ಲಿ ಸೇರಿದ ಬಳಿಕ ನಾನು ರೋಟರಿಯಲ್ಲಿ ವಲಯ ಸೇನಾನಿಯಾಗಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷನಾಗಿ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ. ರೋಟರಿ ಸಂಸ್ಥೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದಾಗ ಹುದ್ದೆಗಳು ತಾನಾಗಿಯೇ ಒದಗಿ ಬರುತ್ತದೆ. ರೋಟರಿ ಸಂಸ್ಥೆಯು ನನಗೆ ಬೆಳೆಯಲು ಒಳ್ಳೆಯ ಅವಕಾಶವನ್ನು ನೀಡಿದೆ.
ಪುತ್ತೂರು ಉಮೇಶ್ ನಾಯಕ್, ವಲಯ ಸೇನಾನಿ, ವಲಯ ೫

LEAVE A REPLY

Please enter your comment!
Please enter your name here