ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಯುರೇಕಾ ರಾಜ್ಯ ಮಟ್ಟದ ವಿಜ್ಞಾನ ಶಿಬಿರ

0

  • ಆಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಪರಿಹರಿಸಿದಾಗ ವ್ಯಕ್ತಿತ್ವದಗಟ್ಟಿತನ ಪ್ರಕಟ- ಅನು ಅಪ್ಪಯ್ಯ

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ಅದ್ಭುತ ಕನಸುಗಳ ಆಗರ. ಅವನ ಅಂತರಂಗದಲ್ಲಿ ಹರಿಯುವ ಕನಸುಗಳ ಶಕ್ತಿ ಸಾಮರ್ಥ್ಯಗಳು ಅಪಾರ. ಸೃಜನಶೀಲತೆ, ಧೈರ್ಯ ಮತ್ತು ಛಲ ಇದ್ದರೆ ಕನಸನ್ನು ನನಸಾಗಿಸಲು ಸಾಧ್ಯ. ಭವಿಷ್ಯದ ಬಗ್ಗೆ ಕನಸುಗಳು ಇದ್ದರೆ ಜೀವನ ಪರಿಪೂರ್ಣವಾಗಿರುತ್ತದೆ. ಕ್ಷಮತೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಎಲ್ಲವೂ ವ್ಯರ್ಥ. ವೈಯಕ್ತಿಕ ಕನಸಿನ ಜೊತೆಗೆ ದೇಶವನ್ನು ಉನ್ನತಿಗೇರಿಸುವ ಕನಸನ್ನು ಪ್ರತಿಯೊಬ್ಬರೂ ಕಾಣಬೇಕು ಎಂದು ಕೇಂದ್ರಿಯ ಆಹಾರ ಸಂಶೋಧನಾಲಯದ ನಿವೃತ್ತ ವಿಜ್ಞಾನಿ ಡಾ. ಅನು ಅಪ್ಪಯ್ಯ ಹೇಳಿದರು.

ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದು ಪ್ರಥಮ ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡ ಬಯಸುವ ವಿದ್ಯಾರ್ಥಿಗಳಿಗಾಗಿ ಹನ್ನೆರಡು ದಿನಗಳರಾಜ್ಯ ಮಟ್ಟದ ವಿಜ್ಞಾನ ಶಿಬಿರ “ಯುರೇಕಾ -2022” ಎರಡನೇ ದಿನದಂದು ಆಯೋಜಿಸಲಾದ ಶಿಕ್ಷಣ ಕ್ಷೇತ್ರದಲ್ಲಿ ಅಪರಿಮಿತ ಅವಕಾಶಎಂಬ ವಿಷಯದ  ಕುರಿತು ವಿದ್ಯಾರ್ಥಿಗಳೊಡನೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಪರಿಹರಿಸಿದಾಗ ವ್ಯಕ್ತಿತ್ವದಗಟ್ಟಿತನ ಪ್ರಕಟಗೊಳ್ಳುತ್ತದೆ. ವಿಪತ್ತಿನ ಸಂದರ್ಭದಲ್ಲಿ ಅಂಜಿಕೆಯಿಂದ ಅಳುಕಿ ನಡೆದರೆ ಅನಾಹುತ ಉಂಟಾಗುತ್ತದೆ. ಕಷ್ಟ ಬಂದಾಗ ಕುಗ್ಗದೆ ಮುನ್ನಡೆಯಬೇಕು. ಸೋತಾಗ ನಿರಾಶೆಯನ್ನು ಅನುಭವಿಸದೆ, ಬದುಕಿನ ಧ್ಯೇಯವನ್ನು ಮರೆಯದೆ, ಗೆಲುವಿನತ್ತ ಮುನ್ನುಗ್ಗಿದರೆ ಜೀವನ ಸಾರ್ಥಕವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿಅಪರಿಮಿತ ಅವಕಾಶಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ದೇಶದಲ್ಲಿಯೇ ಯುವ ಶಕ್ತಿ ಅತ್ಯಂತ ಪ್ರಮುಖವಾಗಿದ್ದು ವಿದ್ಯಾರ್ಥಿಗಳು ಮಾದರಿ ವ್ಯಕ್ತಿಗಳಾಗಿ, ಆದರ್ಶ ಪುರಷರಾಗಿ, ಉತ್ತಮ ನಾಗರಿಕರಾಗಿ ರೂಪುಗೊಳ್ಳುವ ಅಗತ್ಯವಿದೆ. ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ಮಾಡಬೇಕಲ್ಲದೆ, ಸಮಾಜದ ಆಸ್ತಿಗಳಾಗಿ ಹೊರ ಹೊಮ್ಮಬೇಕಾಗಿದೆ. ಶಿಕ್ಷಣವನ್ನು ಮೊಟಕುಗೊಳಿಸದೇ ದಿಟ್ಟತನದಿಂದ ವಿದ್ಯಾರ್ಥಿ ಜೀವನವನ್ನು ಕಳೆಯಬೇಕು. ಉತ್ತಮವಾಗಿ ಅಭ್ಯಸಿಸಿ ಒಳ್ಳೆಯ ಅಂಕಗಳನ್ನು ಗಳಿಸಬೇಕು. ಉತ್ತಮ ಅಂಕಗಳನ್ನು ಗಳಿಸಿದರೆ ಮಾತ್ರ ಇಂದು ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶ ದೊರೆಯಲು ಸಾಧ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯಡಾ. ಕೆ. ಎನ್. ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಕವಿತಾ ನಿರೂಪಿಸಿದರು. ಇದರ ಜೊತೆಗೆ ಇವತ್ತಿನ ಕಾರ್ಯಾಗಾರದಲ್ಲಿ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಪ್ರಯೋಗಗಳ ಮೂಲಕ ಕಲಿಕೆಯನ್ನು ಆಯೋಜಿಸಲಾಯಿತು.

LEAVE A REPLY

Please enter your comment!
Please enter your name here