ಕೊಯಿಲ ಸರಕಾರಿ ಶಾಲೆ ಆವರಣದಲ್ಲಿ 450 ಅಡಿಕೆ ಗಿಡ ನಾಟಿ

0

  • ನರೇಗಾ ಯೋಜನೆ, ದಾನಿಗಳ ನೆರವು – ಊರವರ, ಪೋಷಕರ ಶ್ರಮ ಸೇವೆ

ರಾಮಕುಂಜ: ಸರ್ಕಾರಿ ಶಾಲೆಯ ಶಾಲಾಭಿವೃದ್ದಿ ಸಮಿತಿ, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಒಟ್ಟಾಗಿ ಶಾಲೆಯ ಅರ್ಥಿಕತೆಗೆ ಉದ್ದೇಶವಿಟ್ಟುಕೊಂಡು ಶಾಲಾ ಆವರಣದ ಸುತ್ತ ಅಡಿಕೆ ತೋಟ ನಿರ್ಮಾಣ ಮಾಡಿದ್ದಾರೆ. ಸರ್ಕಾರಿ ಶಾಲೆಯೊಂದರ ಈ ಕಾರ್ಯಯೋಜನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕೊಯಿಲ ಗ್ರಾಮದ ಕೆ.ಸಿ.ಫಾರ್ಮ್ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಕಾರ್ಯ ಮಾಡಲಾಗಿದೆ. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶಶಿ ಪುತ್ಯೆ ಮುಂದಾಳತ್ವದಲ್ಲಿ ಈ ನಾಟಿ ಕಾರ್ಯ ನಡೆದಿದೆ. ಶಾಲಾ ಕೊಠಡಿಗಳ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಸುಮಾರು 450 ಅಡಿಕೆ ಸಸಿ ನಾಟಿ ಮಾಡಲಾಗಿದೆ. ಆರಂಭದಲ್ಲಿ ನೆಲ ಸಮತಟ್ಟುಗೊಳಿಸಿ ಬಳಿಕ ನರೇಗಾ ಯೋಜನೆಯಡಿ ಹೊಂಡ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಶಾಲಾ ಆವರಣದ ಸುತ್ತ ಸುಮಾರು ೩೦ ತೆಂಗಿನ ಸಸಿ ನೆಡುವ ಸಲುವಾಗಿ ಹೊಂಡ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆಲ್ಲ ಶಾಲೆಯ ಕೊಳವೆ ಬಾವಿಯಿಂದ ನೀರು ಪೂರೈಸಲಾಗುತ್ತದೆ. ನೀರಾವರಿಗಾಗಿ ಪೈಪುಗಳನ್ನು ಅಳವಡಿಸಲಾಗಿದೆ. ಶಾಲಾ ಅವರಣವನ್ನು ಭದ್ರಪಡಿಸಲಾಗಿದೆ.

 

ದಾನಿಗಳ ಸಹಾಯ:
ಗ್ರಾಮದ ಪ್ರಗತಿಪರ ಕೃಷಿಕ ರಾಮ ನಾಯ್ಕ ಏಣಿತ್ತಡ್ಕರವರು ತನ್ನ ನರ್ಸರಿಯಿಂದ ಮಂಗಳ ತಳಿಯ ಸುಮಾರು ೫೦೦ ಅಡಿಕೆ ಸಸಿಗಳನ್ನು ಉಚಿತವಾಗಿ ನೀಡಿದ್ದಾರೆ. ಧಾರ್ಮಿಕ ಮುಂದಾಳು ಲಿಂಗಪ್ಪ ಗೌಡ ಕಡೆಂಬ್ಯಾಲು ಧನ ಸಹಾಯದೊಂದಿಗೆ ರಸಗೊಬ್ಬರ ಉಚಿತವಾಗಿ ನೀಡಿದ್ದಾರೆ. ಹಿರಿಯ ವಿದ್ಯಾರ್ಥಿ, ಉದ್ಯಮಿ ದಾಮೋದರ ಪುತ್ಯೆಯವರು ವಿದ್ಯುತ್ ಪಂಪು ಶೆಡ್ ನಿರ್ಮಾಣದ ವೆಚ್ಚ ಭರಿಸಿದ್ದಾರೆ. ಪ್ರಗತಿಪರ ಕೃಷಿಕ ಉದಯ ಭಟ್ ಪೂರಿಂಗ, ಮುಖ್ಯ ಶಿಕ್ಷಕಿ ರೇಖಾರವರು ಹೆಚ್ಚಿನ ಧನ ಸಹಾಯ ನೀಡಿ ಪ್ರೋತ್ಸಾಹಿಸಿದ್ದಾರೆ. ಇನ್ನುಳಿದಂತೆ ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಕೈಲಾದಷ್ಟು ಧನ ಸಹಾಯ ನೀಡಿದ್ದಾರೆ. ಊರವರು, ಶಾಲಾಭಿವೃದ್ದಿ ಸಮಿತಿಯ ಸದಸ್ಯರು ಶ್ರಮ ಸೇವೆಯಲ್ಲಿ ಪಾಲ್ಗೊಂಡು ತಮ್ಮ ಸೇವೆ ಸಲ್ಲಿಸಿ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಇನ್ನೂ ಹಲವಾರು ಮಂದಿ ಧನ ಸಹಾಯ ನೀಡುವ ಭರವಸೆ ನೀಡಿದ್ದಾರೆ ಎಂದು ಶಾಲಾಭಿವೃದ್ದಿ ಸಮಿತಿಯವರು ತಿಳಿಸಿದ್ದಾರೆ.

ಆರ್ಥಿಕ ಚೈತನ್ಯಕ್ಕೆ ಈ ಯೋಜನೆ:
ನಾಟಿ ಮಾಡಲಾದ ಅಡಿಕೆ ಕೃಷಿಯನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಳ್ಳುವ ಜವಬ್ದಾರಿಯನ್ನು ಶಾಲಾಭಿವೃದ್ದಿ ಸಮಿತಿ ವಹಿಸಿಕೊಳ್ಳಲಿದೆ. ಇದರಿಂದ ಬರುವ ಆದಾಯವನ್ನು ಶಾಲೆಯ ಅಭಿವೃದ್ದಿಗೆ ಬಳಸಿಕೊಳ್ಳಲಾಗುತ್ತದೆ. ಮುಖ್ಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಅವರ ಸಂಬಳವನ್ನು ಇದರ ಅದಾಯದಿಂದ ನಿಭಾಯಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಎಸ್‌ಡಿಎಂಸಿಯವರು ಹೇಳಿದ್ದಾರೆ.

ಆರಂಭದಲ್ಲಿ ಯೋಜನೆ ರೂಪಿಸುವಾಗ ಅಪಸ್ವರ ಎದ್ದಿತ್ತು. ಆದರೂ ನಿರ್ಧಾರ ಬದಲಾಯಿಸದೆ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾದಾಗ ಹಲವು ದಾನಿಗಳು ವಿವಿಧ ರೂಪದ ಸಹಾಯದಿಂದ ಯೋಜನೆ ಅನುಷ್ಠಾನಿಸಲು ಸಾಧ್ಯವಾಯಿತು. ನರೇಗಾ ಯೋಜನೆಯಡಿ ಹೊಂಡ ನಿರ್ಮಾಣ ಮಾಡಲು ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್ ಅವರ ಅಡಳಿತದ ತಂಡ, ಅಧಿಕಾರಿಗಳ ಪ್ರೋತ್ಸಾಹ ನಮ್ಮ ಕೆಲಸಕ್ಕೆ ಬಲ ತುಂಬಿತ್ತು.ಶಶಿ ಕುಮಾರ್ ಪುತ್ಯೆ, ಅಧ್ಯಕ್ಷರು, ಶಾಲಾಭಿವೃದ್ದಿ ಸಮಿತಿ

LEAVE A REPLY

Please enter your comment!
Please enter your name here