ದೇವಾಲಯಗಳಲ್ಲಿ ಧಾರ್ಮಿಕ ಶಿಕ್ಷಣ ಅಗತ್ಯ: ಸುನೀಲ್ ಕುಮಾರ್

0

ಉಪ್ಪಿನಂಗಡಿ: ಭಾರತದ ಆತ್ಮ ಇರುವುದು ಧರ್ಮದ ಆಧಾರದಲ್ಲಿ. ಆದ್ದರಿಂದ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಧಾರ್ಮಿಕ ಶಿಕ್ಷಣ ಪದ್ಧತಿಯನ್ನು ಎಲ್ಲಾ ದೇವಾಲಯಗಳಲ್ಲಿ ಅನುಷ್ಠಾನಿಸುವ ಅಗತ್ಯವಿದೆಯೆಂದು ರಾಜ್ಯ ಇಂಧನ ಖಾತೆ ಮತ್ತು ಕನ್ನಡ ಸಂಸ್ಕೃತಿ ಇಲಾಖಾ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ೫ ರಿಂದ ೧೫ ವರ್ಷದ ಮಕ್ಕಳಿಗೆ ಆಯೋಜಿಸಲಾಗಿರುವ ಧಾರ್ಮಿಕ ಶಿಕ್ಷಣ ಯೋಜನೆಯನ್ನು ಸೋಮವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಶಿಕ್ಷಣ ಪದ್ಧತಿಯಲ್ಲಿ ಕೇವಲ ಅಂಕ ತೆಗೆಯುವುದಕ್ಕೆ ಮಾತ್ರ ಆದ್ಯತೆ ನೀಡುತ್ತಿzವೆ. ಸಂಸ್ಕಾರ ಕಲಿಸುವುದು ಇಂದಿನ ಅಗತ್ಯತೆ ಮತ್ತು ಅನಿವಾರ್ಯತೆಯಾಗಿದೆ. ಇಂದಿನ ದಿನಗಳಲ್ಲಿ ಸಮಾಜದಲ್ಲಿ ಧರ್ಮ ವಿರೋಧಿ, ಸಮಾಜ ವಿರೋಧಿ ಚಟುವಟಿಕೆಗಳ ಹೆಚ್ಚಳವಾಗುತ್ತಿದೆ. ಆದ್ದರಿಂದ ಇದನ್ನೆಲ್ಲಾ ತೊಡೆದು ಹಾಕಲು ಧಾರ್ಮಿಕ ಶಿಕ್ಷಣದ ಅನುಷ್ಠಾನ ಅಗತ್ಯವಿದೆ. ಪಠ್ಯ ಶಿಕ್ಷಣದಲ್ಲಿ ಸಿಗದ ಶಿಕ್ಷಣ ಇಲ್ಲಿ ದೊರೆಯಲು ಸಾಧ್ಯ. ದೇವಾಲಯಗಳು ಕೇವಲ ಭಕ್ತಿಯ ಕೇಂದ್ರಗಳಾಗದೇ ಸಮಾಜಕ್ಕೆ ಶಕ್ತಿಯ ಕೇಂದ್ರಗಳಾಗಿ ರೂಪುಗೊಳ್ಳಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಧಾರ್ಮಿಕ ಶಿಕ್ಷಣದಿಂದ ಸಮಾಜವನ್ನು ವಂಚಿತರನ್ನಾಗಿಸಿದ ಫಲವನ್ನು ಇಡೀ ಸಮಾಜದ ಅನುಭವಿಸಿದೆ. ಧಾರ್ಮಿಕ ಶಿಕ್ಷಣ ವಿಹಿತ ಬದುಕು ವ್ಯಕ್ತಿಯನ್ನು ದುರ್ಬಲಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ಸುಸಂಸ್ಕೃತ ಸಮಾಜವನ್ನು ಕಾಣುವಂತಾಗಬೇಕಾದರೆ ಇಂದು ಧಾರ್ಮಿಕ ಶಿಕ್ಷಣವನ್ನು ನೀಡುವ ಅನಿವಾರ್ಯತೆ ಉಂಟಾಗಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಆಶಯ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಕಾರ್ಯ ನಿರ್ವಹಣಾಧಿಕಾರಿ ನಿಂಗಯ್ಯ, ಸದಸ್ಯೆ ಪ್ರೇಮಲತಾ ಕಾಂಚನ, ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಬಿ. ಐತ್ತಪ್ಪ ನಾಯ್ಕ್, ಉಪನ್ಯಾಸಕಿ ವಿಜಯ ಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ, ಡಾ. ಯತೀಶ್ ಶೆಟ್ಟಿ , ಎನ್. ಉಮೇಶ್ ಶೆಣೈ, ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ, ಸೂರ್ಯಂಬೈಲು ಶಾಂತಾರಾಮ ಭಟ್, ಅರ್ತಿಲ ಕೃಷ್ಣ ರಾವ್, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಲೊಕೇಶ್ ಬೆತ್ತೋಡಿ, ವಿಜಯ ಕುಮಾರ್ ಕಲ್ಲಳಿಕೆ, ಸಿಎ ಬ್ಯಾಂಕ್ ಅಧ್ಯಕ್ಷ ಕೆ.ವಿ. ಪ್ರಸಾದ್, ಯು.ಜಿ. ರಾಧ, ರವೀಂದ್ರ ಆಚಾರ್ಯ, ಐ. ಚಿದಾನಂದ ನಾಯಕ್, ಜಯಂತ ಪೊರೋಳಿ, ಹರಿರಾಮಚಂದ್ರ, ಮಹೇಶ್ ಬಜತ್ತೂರು, ರಾಮ ನಾಯ್ಕ್, ಸುನಿಲ್ ಅನಾವು, ಹರಿಣಿ ರವೀಂದ್ರ, ಸ್ವರ್ಣೇಶ್, ಕೈಲಾರ್ ರಾಜಗೋಪಾಲ ಭಟ್, ಕೆ ಜಗದೀಶ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here