ಹೆದ್ದಾರಿ ಕಾಮಗಾರಿಗಾಗಿ ಮುಚ್ಚಲಾದ ಚರಂಡಿ ಉಪ್ಪಿನಂಗಡಿಯಲ್ಲಿ ಕೃತಕ ನೆರೆ

0

  • ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಗ್ರಾ.ಪಂ. ಅಧ್ಯಕ್ಷೆ
  • ಚರಂಡಿಯ ಮಣ್ಣು ತೆರವು ಕಾರ್ಯಾರಂಭ
ಪಂಚಾಯತ್ ಅಧ್ಯಕ್ಷೆ ಅಧಿಕಾರಿಗಳೊಂದಿಗೆ ಮಾತುಕತೆ ನಿರತರಾಗಿರುವುದು

ಉಪ್ಪಿನಂಗಡಿ : ಹೆದ್ದಾರಿ ಅಗಲೀಕರಣದ ಕಾಮಗಾರಿಯ ವೇಳೆ ಸ್ಥಳೀಯರಿಂದ ಯಾವುದೇ ಮಾಹಿತಿ ಪಡೆಯದೇ ಹೆದ್ದಾರಿ ಬದಿಯ ಚರಂಡಿಗಳನ್ನೆಲ್ಲಾ ಮಣ್ಣು ಹಾಕಿ ಮುಚ್ಚಿದ ಪರಿಣಾಮ ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಉಪ್ಪಿನಂಗಡಿಯಲ್ಲಿ ಕೃತಕ ನೆರೆಯುಂಟಾಗಿರುವ ಬಗ್ಗೆ ವರದಿಯಾಗಿದೆ.

ಉಪ್ಪಿನಂಗಡಿ ಪೇಟೆಯ ಎಲ್ಲಾ ಒಳ ಚರಂಡಿಗಳ ನೀರು ಒಟ್ಟುಗೂಡಿ ಸಾಗಿ ಹೋಗುವ ಪ್ರಧಾನ ಚರಂಡಿಯು ಹೆದ್ದಾರಿ ಪಾರ್ಶ್ವದಲ್ಲಿ ಇದ್ದು, ಪ್ರಸಕ್ತ ಹೆದ್ದಾರಿ ಅಗಲೀಕರಣದ ಕಾಮಗಾರಿಯ ವೇಳೆ ಸ್ಥಳೀಯರು ಎಚ್ಚರಿಸಿದ ಹೊರತಾಗಿಯೂ ಚರಂಡಿಗೆ ಮಣ್ಣು ಹಾಕಿ ಮುಚ್ಚಿದ್ದರಿಂದ ಕಳೆದೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯಲಾಗದೇ ತಡೆಹಿಡಿಯಲ್ಪಟ್ಟಿದೆ. ಪರಿಣಾಮವಾಗಿ ಪೇಟೆಯೊಳಗಿನ ತಗ್ಗು ಪ್ರದೇಶದ ಅಂಗಡಿಗಳಿಗೆ ಕೃತಕ ನೆರೆಯ ನೀರು ನುಗ್ಗಿ ಹಾನಿಯುಂಟಾಗಿದೆ. ಮಾತ್ರವಲ್ಲದೆ ಸ್ಥಳೀಯ ಸರಕಾರಿ ಮಾದರಿ ಶಾಲಾ ವಠಾರಕ್ಕೂ ನೀರು ನುಗ್ಗುವಂತಾಯಿತು.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ , ಪಂಚಾಯತ್ ಸದಸ್ಯ ಯು ಟಿ ತೌಶಿಫ್ ಹೆದ್ದಾರಿ ಅಗಲೀಕರಣದ ಕಾಮಗಾರಿ ನಿರತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಲ್ಲಿನ ಮಳೆಯ ಸ್ಥಿತಿಗತಿ, ಚರಂಡಿಗಳ ಪ್ರಾಧಾನ್ಯತೆಯ ಬಗ್ಗೆ ಯಾವುದೇ ಮಾಹಿತಿ ಪಡೆಯದೇ ಏಕಾಏಕಿ ಹೆದ್ದಾರಿ ಬದಿಯ ಚರಂಡಿಗಳನ್ನು ಮುಚ್ಚಿರುವುದನ್ನು ತೀವ್ರ ಆಕ್ಷೇಪಿಸಿದರು. ಹಾಗೂ ಜನಾಕ್ರೋಶ ಪ್ರಕಟೀಕರಣಗೊಳ್ಳುವ ಮೊದಲು ಮುಚ್ಚಿರುವ ಚರಂಡಿಯನ್ನು ಪುನರ್ ನಿರ್ಮಿಸಬೇಕೆಂದು ಆಗ್ರಹಿಸಿದರು.

ಮೊದಲಿಗೆ ಮೂರು ದಿನಗಳ ಕಾಲಾವಕಾಶ ಬೇಕೆಂದು ವಿನಂತಿಸಿದ ಕಾಮಗಾರಿ ಸಂಸ್ಥೆಯ ಅಧಿಕಾರಿಗಳು ಬಳಿಕ ಒತ್ತಡಕ್ಕೆ ಮಣಿದು ಮಣ್ಣು ಹಾಕಿ ಮುಚ್ಚಲ್ಪಟ್ಟ ಚರಂಡಿಯ ಮಣ್ಣು ತೆರವುಗೊಳಿಸಲು ತಕ್ಷಣವೇ ಮುಂದಾದರು.

ಈ ಸಂಧರ್ಭದಲ್ಲಿ ಉದ್ಯಮಿಗಳಾದ ಸುಂದರ ಗೌಡ ಸಚಿನ್, ನಿತ್ಯಾನಂದ ಕಿಣಿ, ಹರೀಶ್ ನಾಯಕ್ ಪಂಚಾಯತ್ ಪಿಡಿಒ ಮತ್ತವರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here