ವೀರಮಂಗಲದಲ್ಲಿ ಗಾಂಜಾವನ್ನಿರಿಸಿಕೊಂಡಿದ್ದ ಬಂಧಿತ ಆರೋಪಿಗಳ ವಿಚಾರಣೆ -ಗಾಂಜಾ ಸರಬರಾಜುದಾರ ಪ್ರಮುಖ ಆರೋಪಿ ಮಹಮ್ಮದ್ ಮುವಾಝ್ ಬಂಧನ

0

  • ಪಿಸ್ತೂಲ್, ಸಜೀವ ಗುಂಡು, ಕಾರು, ಗಾಂಜಾ ಸೇರಿದಂತೆ ರೂ. ೫.೮೬ ಲಕ್ಷದ ಸೊತ್ತು ವಶ
  • ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ನಸ್ರೀನ್ ತಾಜ್ ಚಟ್ಟರಕಿ ಅವರ ನೇತೃತ್ವದ ಕಾರ್ಯಾಚರಣೆ
  • ಆರೋಪಿಗಳನ್ನು ವಿಚಾರಿಸಿ ಗಾಂಜಾ ಸಾಗಾಟದ ಆರೋಪಿಗಳ ಬೆನ್ನಟ್ಟಿದ ಮೊದಲ ಪ್ರಕರಣ

ಪುತ್ತೂರು: ಶಾಂತಿಗೋಡು ಗ್ರಾಮದ ವೀರಮಂಗಲದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ರೈಲ್ವೇ ಹಳಿಯಲ್ಲಿ ಗಾಂಜಾವನ್ನು ಇರಿಸಿಕೊಂಡಿದ್ದ ಬಂಧಿತ ಆರೋಪಿಗಳ ವಿಚಾರಣೆ ವೇಳೆ ಗಾಂಜಾ ಸರಬರಾಜುದಾರ ಆರೋಪಿ ವಿಟ್ಲ ಕುಂಡಡ್ಕ ನಿವಾಸಿ ಇಬ್ರಾಹಿಂ ಅವರ ಪುತ್ರ ಮಹಮ್ಮದ ಮುವಾಝ್(೩೦ವ) ಎಂಬವರನ್ನು ಮೇ ೨೨ರಂದು ಸಂಜೆ ವೇಳೆ ಕೆದಿಲ ಗ್ರಾಮದ ಪೇರಮೊಗ್ರು ಎಂಬಲ್ಲಿ ಬಂಧಿಸಿ ಆತನಿಂದ ಪಿಸ್ತೂಲ್, ಸಜೀವ ಗುಂಡು, ಕಾರು, ಗಾಂಜಾ ಸೇರಿದಂತೆ ಸುಮಾರು ರೂ. ೫.೮೬ ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ವೀರಮಂಗಲ ರೈಲ್ವೇ ಹಳಿಗಳ ಸಮೀಪ ಬ್ಯಾಗ್ ಅನ್ನು ಹಿಡಿದು ಕೊಂಡು ನಿಂತಿದ್ದ ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕೋಚಕಟ್ಟೆ ಉಮ್ಮರಬ್ಬ ಎಂಬವರ ಪುತ್ರ ಶಫೀಕ್ ಕೆ.ವಿ(೨೪ವ) ಮತ್ತು ಕುಂತೂರು ಎರ್ಮಲ ನಿವಾಸಿ ಅಬ್ದುಲ್ಲ ಎಂಬವರ ಪುತ್ರ ರಾಝೀಕ್(೨೮ವ)ರವರನ್ನು ವಿಚಾರಿಸಿದ ಪೊಲೀಸರಿಗೆ ಅವರ ಬಳಿ ಗಾಂಜಾ ಇರುವುದು ಬೆಳಕಿಗೆ ಬಂದಂತೆ ಅವರಿಬ್ಬರನ್ನು ಬಂಧಿಸಿ ವಿಚಾರಿಸಿದಾಗ ಅವರ ಸ್ನೇಹಿತ ವಿಟ್ಲದ ಕುಂಡಡ್ಕ ಶಾಂತಿಮಾರು ನಿವಾಸಿ ಮಹಮ್ಮದ್ ಮುವಾಝ್(೩೦ವ) ಅವರು ಗಾಂಜಾ ಸರಬರಾಜು ಮಾಡುವ ಕುರಿತು ತಿಳಿಸಿದ್ದರು. ಮಹಮ್ಮದ್ ಮುವಾಝ್ ಅವರು ಮಂಗಳೂರಿನಿಂದ ಗಾಂಜಾ ಮಾರಾಟ ಮಾಡಿಕೊಂಡು ಕಾರಿನಲ್ಲಿ ಬರುತ್ತಿದ್ದಂತೆ ಅವರನ್ನು ಬಂಧಿತ ಆರೋಪಿಗಳ ಮೂಲಕ ಕೆದಿಲ ಗ್ರಾಮದ ಪೇರಮೊಗ್ರು ಸಮೀಪ ಬರುವಂತೆ ಮಾಡಿ ಅಲ್ಲಿ ಕಾರನ್ನು ನಿಲ್ಲಿಸಿ ಆರೋಪಿ ಪರಾರಿಯಾಗುತ್ತಿದ್ದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಪಿಸ್ತೂಲ್, ಸಜೀವ ಗುಂಡು, ಕಾರು, ಗಾಂಜಾ ಸೇರಿದಂತೆ ರೂ. ೫.೮೬ ಲಕ್ಷದ ಸೊತ್ತು ವಶ:
ಆರೋಪಿ ಮಹಮ್ಮದ್ ಮುವಾಝ್ ಅವರನ್ನು ಬಂಧಿಸಿದ ಬಳಿಕ ಆತನ ಪ್ಯಾಂಟ್ ಕಿಸೆಯನ್ನು ಪರಿಶೀಲಿಸಿದಾಗ ಪರವಾನಿಗೆ ಇಲ್ಲದ ರೂ. ೫೦ಸಾವಿರ ಮೌಲ್ಯದ ಪಿಸ್ತೂಲ್ ಮತ್ತು ಎರಡು ಸಜೀವ ಗುಂಡುಗಳು, ಕಾರನ್ನು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಯಲ್ಲಿ ೨.೦೭೫ ಕೆ.ಜಿ ಗಾಂಜಾ, ಗಾಂಜಾ ತುಂಬಿದ ೫೦ ಗ್ರಾಂ ತೂಕದ ೫ ಪ್ಯಾಕೆಟ್, ರೂ. ೩೩೦ ನಗದು, ಪಾನ್ ಕಾರ್ಡ್, ಜಗದೀಶ್ ಪ್ರಸಾದ್ ಎಂಬವರ ಬ್ಯಾಂಕ್ ಆಫ್ ಬರೋಡದ ಎಟಿಎಂ ಕಾರ್ಡ್, ೧೦ ಕರ್ಣಾಟಕ ಬ್ಯಾಂಕ್‌ನ ಎಟಿಂ ಕಾರ್ಡ್, ಹೊಟೇಲ್ ಸಾಯಿ ಸಿದ್ದಾರ್ಥ ಲಾಡ್ಜ್‌ನ ವಿಸಿಟಿಂಗ್ ಕಾರ್ಡ್, ಸ್ಟೀಲ್ ಸ್ಟಿಕ್, ರೂ. ೫ಸಾವಿರ ಮೌಲ್ಯದ ಮೊಬೈಲ್ ಪೋನ್‌ಗಳು, ಪಿಸ್ತೂಲ್ ಮಾದರಿಯ ಸಿಗರ್ ಲೈಟ್, ಮಾತ್ರೆಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹುಂಡೈ ಐ ೨೦ ಕಾರು ಸೇರಿದಂತೆ ಒಟ್ಟು ರೂ. ೫,೮೬,೫೩೦ ಸೊತ್ತುಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮತ್ತು ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಅವರ ಮಾರ್ಗದರ್ಶನದಂತೆ ಎಸ್.ಐ ನಸ್ರೀನ್ ತಾಜ್ ಚಟ್ಟರಕಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸಾರ್ವಜನಿಕರಿಂದ ಪ್ರಶಂಸೆ:
ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ನಸ್ರೀನ್ ತಾಜ್ ಚಟ್ಟರಕಿ ಅವರ ನೇತೃತ್ವದದ ಕಾರ್ಯಾಚರಣೆಯಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಮೊದಲ ಬಾರಿಗೆ ಆರೋಪಿಗಳನ್ನು ವಿಚಾರಿಸಿ ಗಾಂಜಾ ಸಾಗಾಟದ ಆರೋಪಿಗಳನ್ನು ಬೆನ್ನಟ್ಟಿ ಪತ್ತೆ ಮಾಡಿ ಬಂಧಿಸಿದ ಮೊದಲ ಪ್ರಕರಣವಾಗಿದೆ ಎಂದು ಸಾರ್ವಜನಿಕ ವಲಯಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here