ಅಧಿಕಾರಿಗಳೇ ಕೆಲಸ ಸಿಗಲು, ಮೇಲೆ ಕೆಳಗೆ ಕೊಡಲು ಲಂಚ ಬೇಕೇ ಬೇಕು ಎಂದಾದರೆ ನಿಮ್ಮ ಬೇಡಿಕೆಯ ಪಟ್ಟಿ ನೀಡಿರಿ

0

  • ಜನಪ್ರತಿನಿಧಿಗಳಿಗೆ ತಿಳಿಸಿ ಬಸ್‌ಸ್ಟ್ಯಾಂಡ್ ಬಳಿ, ಕಛೇರಿ ಮುಂದೆ ವಂತಿಗೆ ಡಬ್ಬ ಇರಿಸಿ, ಹಣ ಸಂಗ್ರಹಿಸಿ ನೀಡುತ್ತೇವೆ.
  • ಲಂಚ, ಭ್ರಷ್ಟಾಚಾರ ರಹಿತ ಅಧಿಕಾರಿಗಳನ್ನು, ಗ್ರಾಮ ಪಂಚಾಯತ್‌ನವರನ್ನು ಮೆರವಣಿಗೆ ಮಾಡಿ ಸಾರ್ವಜನಿಕವಾಗಿ ಸನ್ಮಾನಿಸುತ್ತೇವೆ.

 

 

ಜನಸೇವಕರಾದ ಅಧಿಕಾರಿಗಳೇ ನಿಮ್ಮ ಕಷ್ಟದ ಅರಿವು ನಮಗಿದೆ. ಹಣ ಕೊಟ್ಟೇ ಕೆಲಸ ಪಡೆದಿದ್ದೀರಿ. ಇಲ್ಲಿ ಕೆಲಸ ಮಾಡಲು, ಉಳಿಯಲು, ವರ್ಗಾವಣೆಗೆ, ಮೇಲಿನವರಿಗೆ, ಕೆಳಗಿನವರಿಗೆ, ಜನಪ್ರತಿನಿಧಿಗಳಿಗೆ ಹಣ ಕೊಡಬೇಕು ಅದನ್ನು ಸಂಬಳದ ಹಣದಲ್ಲಿ ಪೂರೈಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಅನಿವಾರ್ಯವಾಗಿ ಲಂಚ, ಭ್ರಷ್ಟಾಚಾರ ಮಾಡಿ ಕಾನೂನನ್ನು ಉಪಯೋಗಿಸಿ, ಜನರನ್ನು ಹೆದರಿಸಿ, ಸುಲಿಗೆ ಮಾಡಿ ಹಣ ಪಡೆಯುತ್ತೇನೆ ಎಂದು ಹೇಳುತ್ತಿರುವ ನಿಮ್ಮ ಪರಿಸ್ಥಿತಿಯ ಅರಿವು ನಮಗಿದೆ. ನಿಮ್ಮ ಮೇಲಿನ ಕಷ್ಟಗಳನ್ನು ನಿವಾರಿಸದಿದ್ದರೆ, ಕೆಲಸ ಮಾಡಲು ಬೇಕಾದ ಸವಲತ್ತು ನೀಡದೆ, ಬೇಡಿಕೆಯನ್ನು ಪೂರೈಸದಿದ್ದರೆ ನೀವು ಕೆಲಸ ಮಾಡುವುದು, ಸಂಸಾರ ತೂಗಿಸುವುದು ಹೇಗೆ? ಭವಿಷ್ಯತ್ತಿನ ಚಿಂತೆ ನಿಮಗೂ ಇದೆ. ಆದರೆ ಅದಕ್ಕಾಗಿ ನಿಮ್ಮ ರಾಜರುಗಳಾದ ನಿಮ್ಮ ಸಂಬಳಕ್ಕೆ ತೆರಿಗೆ ಕಟ್ಟುವ ಜನರನ್ನು ಸತಾಯಿಸಿ ಸುಲಿಗೆ ಮಾಡಬೇಡಿ, ರಕ್ತ ಹೀರಬೇಡಿ, ಅವರ ಶಾಪ ಪಡೆಯಬೇಡಿ. ಅದಕ್ಕೆ ಪರಿಹಾರವಾಗಿ ನಿಮ್ಮ ಬೇಡಿಕೆಯ ಪಟ್ಟಿಯನ್ನು ಜನರಿಗೂ, ನಿಮ್ಮ ನಮ್ಮ ಜವಾಬ್ದಾರಿಯನ್ನು ಹೊತ್ತಿರುವ ಜನಪ್ರತಿನಿಧಿಗಳಿಗೂ ನೀಡಿರಿ. ಯಾವ ಕೆಲಸದ ಮೇಲೆ ಅಥವಾ ದಿನಕ್ಕೆ ಎಷ್ಟು ಹಣ ಲಂಚವಾಗಿ ಬೇಕಾಗುತ್ತದೆ ಎಂದು ಅದರಲ್ಲಿ ತಿಳಿಸಿರಿ. ಅದಕ್ಕೆ ಪರಿಹಾರ ಸಿಗದಿದ್ದರೆ ಜನಪ್ರತಿನಿಧಿಗಳಿಂದ ಸಾಧ್ಯವಾಗದಿದ್ದರೆ ಊರಿನ ಜನರೆಲ್ಲರೂ ಸೇರಿ ಸಾರ್ವಜನಿಕ ಸ್ಥಳದಲ್ಲಿ, ಬಸ್‌ಸ್ಟ್ಯಾಂಡ್‌ನಲ್ಲಿ, ನಿಮ್ಮ ಕಛೇರಿ ಮುಂದೆ ನಿಮಗೆಂದು ವಂತಿಗೆ ಡಬ್ಬಿ ಇರಿಸಿ ಹಣ ಸಂಗ್ರಹಿಸಿ ನೀಡುತ್ತೇವೆ. ದೇವಸ್ಥಾನದ ಹುಂಡಿಗೆ ಭಕ್ತಿ ಪೂರ್ವಕವಾಗಿ ನಮಗೆ ಒಳಿತಾಗಲಿ ಎಂದು ಹಣ ಹಾಕಿದಂತೆ ನಿಮ್ಮ ಉತ್ತಮ ಸೇವೆಗಾಗಿ ವಂತಿಗೆ ಡಬ್ಬಿಗೆ ಹಣ ಹಾಕಲು ಜನರಿಗೆ ಕರೆ ನೀಡುತ್ತೇವೆ. ಈಗಿನ ಕಾಲದಲ್ಲಿ ದೇವರನ್ನು ನಂಬದಿದ್ದರೂ, ಇಲ್ಲದಿದ್ದರೂ ಬದುಕಬಹುದೇನೋ? ಆದರೆ ಕೆಲಸ ನಿಮ್ಮಲ್ಲಿಯೇ ಆಗಬೇಕು ಎಂದಿರುವಾಗ ನಿಮ್ಮ ದಯೆ ಇಲ್ಲದೆ, ಸೇವೆಯ ಕೃಪೆ ಇಲ್ಲದೆ ಬದುಕುವುದು ಹೇಗೆ? ಆದುದರಿಂದ ನಿಮಗೆ ಹೇಗಾದರೂ ಮಾಡಿ ಹಣ ಒದಗಿಸುತ್ತೇವೆ. ಕಡಿಮೆ ಬಿದ್ದರೆ ಜನರ ತಲೆಗೆ ಇಷ್ಟೆಂದು ಸಂಗ್ರಹಿಸಿಯಾದರೂ, ಭಿಕ್ಷೆ ಬೇಡಿಯಾದರೂ ನೀಡುತ್ತೇವೆ. ನಮ್ಮ ಮತ್ತು ನಮ್ಮ ಊರಿನ ಅಭಿವೃದ್ಧಿಗೆ, ನಮ್ಮ ಸೇವೆಗೆ ಇರುವ ನಿಮ್ಮನ್ನು ದೇವರಂತೆ ನೋಡಿಕೊಳ್ಳುತ್ತೇವೆ, ನೋಡಿಕೊಳ್ಳಬೇಕು ಎಂದು ಜನತೆಗೆ ಕರೆ ನೀಡುತ್ತೇವೆ. ಆಗಬಹುದಲ್ಲವೇ..?

ಜನರೇ ಎದ್ದೇಳಿ. ಅಧಿಕಾರಿಗಳು, ನಾವು ಆರಿಸಿರುವ ಜನಪ್ರತಿನಿಧಿಗಳು ನಮ್ಮ ಸೇವೆಗಾಗಿ ಇರುವ ಜನಸೇವಕರೆಂದು ೭೫ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ವರ್ಷದ ಸಮಯದಲ್ಲಾದರೂ ಅರ್ಥ ಮಾಡಿಕೊಳ್ಳೋಣ. ನಾವು ಗುಲಾಮರಲ್ಲ, ರಾಜರುಗಳೆಂದು ತಿಳಿದು ವರ್ತಿಸೋಣ. ಈಗಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪ್ರಜಾಪ್ರಭುತ್ವದಲ್ಲಿಯ ನಮ್ಮ ಜವಾಬ್ದಾರಿ ಚಲಾಯಿಸೋಣ. ಅದಕ್ಕಾಗಿ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಮಾಡೋಣ. ಈ ಮೇಲಿನ ಮತ್ತು ಕೆಳಗಿನ ನಿರ್ಣಯಗಳನ್ನು ಕೈಗೊಳ್ಳೋಣ.

ಲಂಚ, ಭ್ರಷ್ಟಾಚಾರ ಇಲ್ಲದೆ ಈಗಿನ ವ್ಯವಸ್ಥೆಯಲ್ಲಿ ಓರ್ವ ಅಧಿಕಾರಿ ಕೆಲಸ ಮಾಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇದೆ. ಆದುದರಿಂದ ಈಗಿನ ರಾಜಕೀಯ, ಮೇಲಾಧಿಕಾರಿಗಳ, ಜನಪ್ರತಿನಿಧಿಗಳ, ಜನರ ಒತ್ತಡಕ್ಕೆ ಬಲಿಯಾಗದೆ, ಆಮಿಷಕ್ಕೆ ಲಂಚ, ಭ್ರಷ್ಟಾಚಾರಕ್ಕೆ ಒಳಗಾಗದೆ ಓರ್ವ ಅಧಿಕಾರಿ ಕೆಲಸ ಮಾಡುತ್ತಾನೆ ಎಂದಾದರೆ ದೇಶ ಕಾಯುವ ಸೈನಿಕರಂತೆ ನಮ್ಮ ಊರನ್ನು ಕಾಯುವ ಜನ ಸೇವೆ ಮಾಡುವವರನ್ನು ಗುರುತಿಸಿ ಗೌರವಿಸಿ, ಸನ್ಮಾನಿಸಬೇಕು.ಆತನನ್ನು ಮಹಾನ್ ಸಾಧಕ, ಜನಸೇವಕ ಎಂದೇ ಪರಿಗಣಿಸಬಹುದು. ಲಂಚ, ಭ್ರಷ್ಟಾಚಾರ ಮಾಡಿ ಶ್ರೀಮಂತನಾಗುವ, ಅಧಿಕಾರ ಚಲಾಯಿಸುವ ಅವಕಾಶ ಕಳೆದುಕೊಂಡು ಜನಸೇವೆಗಾಗಿ ಜೀವನ ಮುಡಿಪಿಡುವ ಅಂತವರನ್ನು ಲೇವಡಿ ಮಾಡುವುದನ್ನು ಬಿಟ್ಟು ಗೌರವಿಸಲು ಕಲಿಯಬೇಕು. ಅವರಿಗೆ ಇರುವ ಒತ್ತಡವನ್ನು ನಿವಾರಿಸಲು, ಉತ್ತಮ ಕೆಲಸ ಮಾಡಲು ಬೇಕಾದ ವ್ಯವಸ್ಥೆಯನ್ನು, ಬೆಂಬಲವನ್ನು ಜನರು ಒದಗಿಸಬೇಕು. ಉತ್ತಮ ಸೇವೆ ಮಾಡುವವರನ್ನು ಬೃಹತ್ ಜಾಥಾದ ಮೂಲಕ ಪೇಟೆಯಲ್ಲಿ ಮೆರವಣಿಗೆ ಮಾಡಿ ಸಾರ್ವಜನಿಕವಾಗಿ ಸನ್ಮಾನಿಸಬೇಕು. ಈಗಾಗಲೇ ಸುಳ್ಯದಲ್ಲಿ ೧೪ ಅಧಿಕಾರಿಗಳನ್ನು, ಪುತ್ತೂರಲ್ಲಿ ೧೨ ಮತ್ತು ಬೆಳ್ತಂಗಡಿಯಲ್ಲಿ ೮ ಅಧಿಕಾರಿಗಳನ್ನು ಲಂಚ ರಹಿತ, ಉತ್ತಮ ಸೇವೆ ನೀಡುವ ಅಧಿಕಾರಿಗಳೆಂದು ಜನರು ಗುರುತಿಸಿದ್ದಾರೆ. ಅವರ ಹೆಸರು, ಫೋಟೋ ಸುದ್ದಿ ಪತ್ರಿಕೆಯಲ್ಲಿ ಬಂದಿದೆ. ಇನ್ನು ಕೆಲವರ ಹೆಸರು ಪಟ್ಟಿಯಲ್ಲಿದೆ. ಸುದ್ದಿ ಜನಾಂದೋಲನ ಸಮಿತಿ ಅವರನ್ನೂ ಗುರುತಿಸಲಿದೆ. ಅವರೆಲ್ಲರನ್ನೂ ಮತ್ತು ಲಂಚ, ಭ್ರಷ್ಟಾಚಾರ ಮುಕ್ತ ಎಂದು ಘೋಷಣೆ ಮಾಡಿರುವ ಗ್ರಾಮ ಪಂಚಾಯತ್‌ನವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಸಾರ್ವಜನಿಕ ಸನ್ಮಾನ ಮಾಡುವ ಇರಾದೆ ನಮ್ಮಲ್ಲಿದೆ. ಅದಕ್ಕೆ ಜನ ಬೆಂಬಲ ಬೇಕಾಗಿದೆ.

ಅವರ ಕೆಲಸ ಇತರ ಅಧಿಕಾರಿಗಳಿಗೆ ಮಾದರಿಯಾಗಿ, ಆದರ್ಶಕ್ಕೆ ಕಾರಣವಾಗುವಂತಿರಬೇಕು. ಅಂತಹ ಅಧಿಕಾರಿಗಳು ಈ ಊರಿನಿಂದ ಕೆಲಸ ಮಾಡಿ ಹೋದ ಮೇಲೆಯೂ ಅವರ ನೆನಪು ಉಳಿಯುವಂತಹ ಕೆಲಸವಾಗಬೇಕು. ಅವರ ಫೋಟೋವನ್ನು ಆಯಾ ಕಚೇರಿಯಲ್ಲಿ ಇರಿಸಲು ಸಾಧ್ಯವಾಗದಿದ್ದರೂ ಅವರಿಂದ ಸೇವೆ ಪಡೆದವರು ಮತ್ತು ಊರಿನವರು ತಮ್ಮ ಮನಸ್ಸಿನಲ್ಲಿ, ಮನೆಯಲ್ಲಿ ಅಥವಾ ಊರಿನಲ್ಲಿ ಅವರ ನೆನಪು ಇರುವಂತೆ ಮಾಡುವ ಕೆಲಸ ಸಮಾಜದಿಂದ ಆಗಬೇಕು. ಈ ಕೆಲಸ ಗ್ರಾಮ ಗ್ರಾಮಗಳಲ್ಲಿ ನಡೆದು ನಾವು ಮತದಾನ ಮಾಡಿ ಆರಿಸಿದ ಜನಪ್ರತಿನಿಧಿಗಳನ್ನು ಲಂಚ, ಭ್ರಷ್ಟಾಚಾರ ನಿರ್ಮೂಲನೆಗೆ, ಉತ್ತಮ ಸೇವೆಗೆ ಪುರಸ್ಕಾರಕ್ಕೆ ಹೊಣೆಗಾರರನ್ನಾಗಿ ಮಾಡಬೇಕು. ಲಂಚವಾಗಿ ಕೊಟ್ಟ ಹಣವನ್ನು ವಾಪಸ್ ತೆಗೆಸಿಕೊಡಬೇಕು ಅಥವಾ ಅವರೇ ಕೊಡುವಂತೆ ಮಾಡಬೇಕು. ಹಾಗೆ ಮಾಡಿದರೆ ನಮ್ಮ ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಲಂಚ, ಭ್ರಷ್ಟಾಚಾರ ಮುಕ್ತವಾಗುವುದು ಖಂಡಿತ. -ಸಂ.

LEAVE A REPLY

Please enter your comment!
Please enter your name here