ಅನಂತಾಡಿಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ‘ಗಣಿಗಾರಿಕೆ ನಿಲ್ಲಿಸಿ, ಐತಿಹಾಸಿಕ ಗುಹಾತೀರ್ಥ ಉಳಿಸಿ’ ಜನಜಾಗೃತಿ ಅಭಿಯಾನ

0

 

ವಿಟ್ಲ : ಅನಂತಾಡಿ ಗ್ರಾಮದ ಸುಳ್ಳಮಲೆ ಗುಹಾತೀರ್ಥದ ಬುಡದಲ್ಲೊಂದು ಗಣಿಗಾರಿಕೆ ನಡೆಯುತ್ತಿದೆ. ಒಂದು ಎಕ್ರೆ ಜಾಗದಲ್ಲಿ ಗಣಿಗಾರಿಕೆಗೆ ಅನುಮತಿ ಸಿಕ್ಕಿದೆ. ಆದರೆ ಅವರು ಮೂರು ಎಕ್ರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಅದರಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ. ಇಲ್ಲಿರುವವರು ಎಲ್ಲರೂ ಗೃಹಸ್ಥರೇ ಆಗಿದ್ದು, ತಿಳುವಳಿಕೆ ಇದ್ದ ಜನರು ಇದರ ವಿರುದ್ಧ ಬಹಳಷ್ಟು ಹೋರಾಟ ಮಾಡಿದ್ರು. ಆದರೆ ಹಣದ ಮುಂದೆ ಅವರಿಗೆ ಹಿನ್ನಡೆಯಾಗಿದೆ. ಇಲ್ಲಿ ನಡೆಯುವ ಅನ್ಯಾಯವನ್ನು ಎಲ್ಲರೂ ನೋಡುತ್ತಿದ್ದಾರೆ ಆದರೆ ಅದನ್ನು ಎದುರಿಸುವ ಶಕ್ತಿ ಇಲ್ಲದೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಚಿಂತೆಯಲ್ಲಿದ್ದಾರೆ. ನಾನೊಂದು ತೀರ್ಮಾನ ಮಾಡಿದ್ದೇ ನೆ ಆ ಬೆಕ್ಕಿಗೆ ನಾವು ಗಂಟೆ ಕಟ್ಟಿಯೇ ಸಿದ್ದ. ಧರ್ಮದ ಬಗ್ಗೆ ಮಾತನಾಡುವವರು ನಾಸ್ತಿಕರಂತೆ ಮಾತನಾಡುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

 


ಮೇ.೨೫ರಂದು ಅನಂತಾಡಿ ಗೋಳಿಕಟ್ಟೆಯಲ್ಲಿ ತುಂಬೆಕೋಡಿ ಗಣಿಗಾರಿಕೆಯ ವಿರುದ್ಧ ಮಾಣಿ ಮತ್ತು ಅನಂತಾಡಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ‘ಗಣಿಗಾರಿಕೆ ನಿಲ್ಲಿಸಿ, ಸುಳ್ಳಮಲೆ ಗುಹಾತೀರ್ಥ ಉಳಿಸಿ’ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ಜೀವ ಇದ್ದಿದ್ದರೆ ಆ ಗಣಿಗಾರಿಕೆಯನ್ನು ನಿಲ್ಲಿಸುವ ಕೆಲಸ ಅನಂತಾಡಿ ಗ್ರಾಮ ಪಂಚಾಯತ್ ನವರು ಮಾಡಬೇಕಿತ್ತು. ಜನರ ನೋವಿಗೆ ಧ್ವನಿಯಾಗಬೇಕು ಎನ್ನುವ ದೃಷ್ಟಿಯಿಂದ ನಾವಿಂದು ಇಲ್ಲಿ ಸಾಂಕೇತಿಕ ಹೋರಾಟವನ್ನು ಮಾಡುತ್ತಿದ್ದೇ ವೆ. ಗಣಿಗಾರಿಕೆಯಿಂದ ಈ ಭಾಗದ ಜನರಿಗೆ ಹಲವಾರು ರೀತಿಯಲ್ಲಿ ಅಪಾಯವಿದೆ. ರಾಜಕೀಯದ ದೃಷ್ಟಿಯಿಂದ ಮಾತ್ರ ಅವರು ಧರ್ಮದ ವಿಚಾರವನ್ನು ಮಾತನಾಡುವುದು ಎಂದು ನಾವು ಅರ್ಥಮಾಡಿಕೊಳ್ಳಬೇಕು. ಅವರಿಗೆ ಲಾಭಕ್ಕಾಗಿ ಮಾತ್ರ ಧರ್ಮ ಬೇಕು. ಗಣಿಗಾರಿಕೆ ಮಾಡುವವರು ಹಾಗೂ ಮಾಡಿಸುವವರು ಅರ್ಥಮಾಡಿಕೊಳ್ಳಬೇಕು. ಈ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಸರಕಾರ ಈ ಬಗ್ಗೆ ಗಮನವಹಿಸಬೇಕು ಎಂದ ಅವರು ಕ್ಷೇತ್ರ ರಕ್ಷಕರಂತೆ ವರ್ತಿಸುವವರೆಲ್ಲಾ ಇದೀಗ ಎಲ್ಲಿಹೋಗಿದ್ದೀರಿ ಎಂದು ಪ್ರಶ್ನಿಸಿದರು ಕೆ.ಪಿ.ಸಿ.ಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ಇದೀಗ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎನ್ನುವ ಹಂತ ತಲುಪಿದಾಗ ನಾಗರೀಕ ಹಿತರಕ್ಷಣಾ ವೇದಿಕೆಯನ್ನು ಹುಟ್ಟುಹಾಕಿ ಜನಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ. ಎಲ್ಲಾ ಜಾತಿ, ಧರ್ಮ, ಪಕ್ಷದವರು ಬದುಕಬೇಕಾದರೆ ನಾವೇಲ್ಲರೂ ಒಂದಾಗಬೇಕು. ನಾವಿಂದು ಭಯಭೀತ ವಾತಾವರಣದಲ್ಲಿzವೆ. ಈ ಸಮಸ್ಯೆಯ ನಿವಾರಣೆ ಅತೀ ಶೀಘ್ರದಲ್ಲೇ ಆಗಬೇಕಿದೆ. ಪರಿಸ್ಥಿತಿ ಕೈಮೀರಿ ಹೋಗುವ ಈ ಸಂದರ್ಭದಲ್ಲಿ ನಾವೆಲ್ಲರೂ ಜಾಗೃತರಾಗುವ ಅವಶ್ಯಕತೆಯಿದೆ. ಎಂದರು. ಸರಕಾರದ ಒಲವು ಯಾವಕಡೆಗೆ ಇದೆ ಎನ್ನುವುದನ್ನು ನಾವು ಮೊದಲು ತಿಳಿದುಕೊಳ್ಳಬೇಕಾಗಿದೆ. ಧರ್ಮವನ್ನು ದತ್ತು ತೆಗೆದುಕೊಂಡವರಂತೆ ವರ್ತಿಸುವ ಕೆಲವರು ಇಂದು ಈ ಗುಹಾತೀರ್ಥದ ಬಗ್ಗೆ ಮೌನವಹಿಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇದೇ ರೀತಿ ಮುಂದುವರಿದರೆ ತೀರ್ಥ ಕ್ಷೇತ್ರ ಕ್ರಮೇಣ ಇಲ್ಲದಾಗುತ್ತದೆ. ಇತಿಹಾಸವನ್ನೇ ಇಲ್ಲದಂತೆ ಮಾಡುವ ಹುನ್ನಾರ ಈ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರಕಾರ ಮಾಡುತ್ತಿದೆ ಎಂದ ಅವರು, ಈ ಗಣಿಗಾರಿಕೆಗೆ ಅಂತ್ಯ ಆಗದಿದ್ದಲ್ಲಿ ಇನ್ನು ನೂರಾರು ಸಮಸ್ಯೆಗಳು ಎದುರಾಗಲಿದೆ. ನಾವೆಲ್ಲರೂ ಜಾಗೃತ ರಾಗಬೇಕು. ಇದೀಗ ರಮಾನಾಥ ರೈಯವರು ಗಣಿಗಾರಿಕೆಯ ಬಗ್ಗೆ ಹೋರಾಟ ಮಾಡುತ್ತೇನೆ ಎಂದಾಗ ನಾವೆಲ್ಲರೂ ಒಟ್ಟಾಗಿ ಅವರ ಜೊತೆ ನಿಲ್ಲಬೇಕಾಗಿದೆ. ಇದು ಅಂತ್ಯವಾಗಬಾರದು ಆರಂಭವಾಗಬೇಕು. ಇದಕ್ಕೊಂದು ತಾರ್ಕಿಕ ಅಂತ್ಯ ಸಿಗುವವರೆಗೆ ನಾವೆಲ್ಲರೂ ಹೋರಾಟ ಮಾಡೋಣ ಎಂದರು.


ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆರವರು ಮಾತನಾಡಿ ಹಿತರಕ್ಷಣೆ ಎಂದರೆ ಅದು ಜನರ ರಕ್ಷಣೆ. ನಾವು ಆಲೋಚನೆ ಮಾಡಬೇಕು. ಈ ಭಾಗದ ಜನರು ಕಾಲಾನುಕಾಲದಿಂದ ಬದುಕಿಬಂದ ನಂಬಿಕೆ, ಸಿದ್ಧಾಂತ ಉಳಿದುಬರಬೇಕು. ಇಲ್ಲಿರುವ ಪ್ರಕೃತಿ ಉಳಿಯಬೇಕಾದರೆ ನಮ್ಮ ಜನ ಜಾಗೃತರಾಗಬೇಕು. ನಮ್ಮ ನಂಬಿಕೆಯ ಸುಳ್ಳಮಲೆಯ ತೀರ್ಥ ಉಳಿಸಿಕೊಳ್ಳಲು ನಾವೆಲ್ಲರೂ ಒಂದಾಗಬೇಕು ಎಂದರು.


ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆರವರು ಮಾತನಾಡಿ ಧರ್ಮ ಎಂದರೆ ನಾವು ನಡೆಯುವ ದಾರಿ ಎನ್ನುವುದನ್ನು ತೋರಿಸಿ ಇವತ್ತು ನೈಜ ಹಿಂದೂ ಯಾರೆಂದರೆ ಅದು ರಮಾನಾಥ ರೈರವರ ನೇತೃತ್ವದಲ್ಲಿ ಪಕ್ಷಾತೀತವಾಗಿ ಒಂದು ಪವಿತ್ರವಾದ ಕ್ಷೇತ್ರವನ್ನು ಉಳಿಸಲು ಹೋರಾಟ ಮಾಡಲು ಜಾತಿ ಪಕ್ಷ ಬಿಟ್ಟು ಒಟ್ಟು ಸೇರಿದ್ರಲ್ಲಾ ಅದು ನಿಜವಾದ ಹಿಂದುತ್ವ. ಇಲ್ಲಿಯ ಜನ ನೆಮ್ಮದಿಯ ಬದುಕು ಸಾಗಿಸಿದ್ರೆ ಮಾತ್ರ ಜಗತ್ತು ಜಗದ್ಗುರುವಾಗಲು ಸಾಧ್ಯ. ಜಾತ್ಯಾತೀತ ತತ್ವವನ್ನು ಒಪ್ಪಿಕೊಂಡವರು ನಾವು. ಭಾರತದ ಮಣ್ಣಿನ ಪರಿಕಲ್ಪನೆ ಇಂದಿಲ್ಲಿ ಸಾಕಾರವಾಗಿದೆ. ಈ ಸಮಾಜವನ್ನು ನೋಡುವಾಗ ನನಗೆ ಒಂದಷ್ಟು ಪ್ರಶ್ನೆ ಕಾಡಲಾರಂಭಿಸಿದೆ. ಕಾರಿಂಜದ ಮಣ್ಣಿನಲ್ಲಿ ನಿಂತು ಆರ್ಭಟಿಸ್ತಾರೆ, ಬೊಬ್ಬಿರಿಯುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಮಾನಾಥ ರೈರವರ ಹಾಗೂ ಅವರ ಬೆಂಬಲಿಗರ ತೇಜೋವದೆಯನ್ನು ಮಾಡ್ತಾರಲ್ಲ ಅವರಲ್ಲಿ ನಾನೊಂದು ಪ್ರಶ್ನೆ ಮಾಡ್ತೇನೆ, ಸುಳ್ಳಮಲೆ ಗಣಿಗಾರಿಕೆ ನಡೆಯುತ್ತಿರುವ ವೇಳೆ ಏಕೆ ನೀವೆಲ್ಲರು ಮೌನವಹಿಸಿದ್ದೀರಿ. ನಮ್ಮೊಂದಿಗೆ ನೀವು ಕೈಜೋಡಿಸಿ ಧಾರ್ಮಿಕ ನಂಬಿಕೆ, ಪಾವಿತ್ರ್ಯತೆ ಇತಿಹಾಸವನ್ನು ಉಳಿಸೋಣ ಎಂದರು.

 

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿರವರು ಮಾತನಾಡಿ ಮಾಜಿ ಸಚಿವ ರಮಾನಾಥ ರೈಯವರು ಅವರ ಆಡಳಿತಾವಧಿಯಲ್ಲಿ ಈ ಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದರು. ಆದರೆ ಇದೀಗ ಗಣಿಗಾರಿಕೆಯವರ ಭೀಮಗಾತ್ರದ ಲಾರಿಗಳು ಆ ರಸ್ತೆಯನ್ನು ಹಾಳುಗೆಡಹುತ್ತಿದೆ. ಇದೇ ರೀತಿ ಗಣಿಗಾರಿಕೆ ಮುಂದುವರಿದರೆ ಕೆಲವೇ ದಿನಗಳಲ್ಲಿ ತೀರ್ಥ ಗುಹೆ ಇಲ್ಲದಾಗುತ್ತದೆ. ಈ ಗುಹಾತೀರ್ಥ ಇತಿಹಾಸದ ಪುಟ ಸೇರಬಾರದು ಎನ್ನುವ ನಿಟ್ಟಿನಲ್ಲಿ ಅದನ್ನು ಉಳಿಸಬೇಕೆನ್ನುವ ಉದ್ದೇಶದಿಂದ ನಮ್ಮ ಹೋರಾಟವಾಗಿದೆ ಎಂದರು. ಗಣಿಗಾರಿಕೆಯನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು. ಕಾರಿಂಜದ ದೇವಾಲಯದ ಉಳಿವಿಗಾಗಿ ಜಗದೀಶ್ ಕಾರಂತರ ನೇತೃತ್ವದಲ್ಲಿ ಕಾರಿಂಜದಲ್ಲಿ ರಣಕಹಳೆ ಎಂಬ ಘೋಷವಾಕ್ಯವನ್ನು ಮಾಡಲಾಗಿತ್ತು. ಆದರೆ ಜಗದೀಶ್ ಕಾರಂತರಿಗೊಂದು ನಾನು ಬಹಿರಂಗ ಸವಾಲನ್ನು ಹಾಕುತ್ತೇನೆ. ನೀವು ರಣಕಹಳೆ ಊದಲು ಸಾಧ್ಯವಾಗದಿದ್ದರೂ ಪರವಾಗಿಲ್ಲ ಸುಳ್ಳಮಲೆಯಲ್ಲಿ ಶಂಕವನ್ನಾದರೂ ಊದಿ ಈ ಗಣಿಗಾರಿಕೆಯನ್ನು ನಿಲ್ಲಿಸಿಕೊಡಬೇಕೆಂದು ನಾವು ಕೇಳಿಕೊಳ್ಳುತ್ತಿದ್ದೇ ವೆ ಎಂದವರು ಹೇಳಿದರು.


ಮಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಮಾಣಿ – ಅನಂತಾಡಿ ಗ್ರಾಮಗಳು ತುಳುನಾಡ ಪುಣ್ಯಭೂಮಿಯಲ್ಲಿ ಧಾರ್ಮಿಕ ಆಚಾರ ವಿಚಾರದಲ್ಲಿ ಬಹಳಷ್ಟು ಸೇವೆಮಾಡಿದ ಗ್ರಾಮಗಳು. ರಾಜಕೀಯ ಪ್ರೇರಿತವಾಗಿ ಗಣಿಗಾರಿಕೆ ನಡೆಸುತ್ತಿರುವವರಿಗೆ ಗೊತ್ತಿದೆ ಸುಳ್ಳಮಲೆ ಅಳಿದು ಹೋದರೆ ಗ್ರಾಮಕ್ಕೆ ಘಂಡಾಂತರವಿದೆ ಎಂದು. ಆದರೆ ಹಣದ ಆಸೆಗೆ ಹೋಗಿ ಸುಳ್ಳಮಲೆಯೂ ಬೇಡ, ಧಾರ್ಮಿಕ ವಿಚಾರವೂ ಇಲ್ಲ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಂದು ಅಕ್ರಮವಾಗಿ ಬಹಳ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆಯು ತುಂಬೆದಕೋಡಿ ಹಾಗೂ ಎರ್ಮೆ ಮಜಲಿನಲ್ಲಿ ನಡೆಯುತ್ತಿದೆ. ಅದನ್ನು ನಿಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಂ.ಎಸ್. ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ ಕುಶಲ ಎಂ.ಪೆರಾಜೆ, ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಕೆಪಿಸಿಸಿ ಸಂಯೋಜಕ ಚಿತ್ತರಂಜನ್, ಕೆಪಿಸಿಸಿ ಮಹಿಳಾ ವಿಭಾಗದ ಕಾರ್ಯದರ್ಶಿ ಮಲ್ಲಿಕಾ ಪಕ್ಕಳ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಅಧ್ಯಕ್ಷೆ ಜಯಂತಿ ಪೂಜಾರಿ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮನಾಥ ವಿಟ್ಲ, ತಾ.ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂಪತ್ ಕುಮಾರ್ ಶೆಟ್ಟಿ, ಬಂಟ್ವಾಳ ತಾ.ಪಂ.ಮಾಜಿ ಉಪಾಧ್ಯಕ್ಷೆ ಕಾಂಚಲಾಕ್ಷಿ, ಬಂಟ್ವಾಳ ಪುರಸಭಾ ಸದಸ್ಯ ಜನಾರ್ಧನ ಚೆಂಡ್ತಿಮಾರು ಸಹಿತ ಹಲವರು ಉಪಸ್ಥಿತರಿದ್ದರು. ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿಕುಂದರ್ ವಂದಿಸಿದರು.

LEAVE A REPLY

Please enter your comment!
Please enter your name here