ಆಲಂಕಾರು ವಲಯ ಒಕ್ಕಲಿಗ ಗೌಡ ಸಂಘದಿಂದ ಎಸ್‌ಎಸ್‌ಎಲ್‌ಸಿ ದ್ವಿತೀಯ ಸ್ಥಾನಿ ಜೀವನ್‌ಗೆ ಗೌರವಾರ್ಪಣೆ

0

ರಾಮಕುಂಜ: 2021-22ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625ರಲ್ಲಿ 624 ಅಂಕ ಪಡೆದುಕೊಂಡು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡ ರಾಮಕುಂಜ ಗ್ರಾಮದ ಸಂಪ್ಯಾಡಿ ನಿವಾಸಿ ದಿ.ಹುಕ್ರಪ್ಪ ಗೌಡ ಹಾಗೂ ಮೀನಾಕ್ಷಿ ದಂಪತಿ ಪುತ್ರ, ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಜೀವನ್‌ಗೆ ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಮೇ 25ರಂದು ಸಂಪ್ಯಾಡಿಯಲ್ಲಿರುವ ಜೀವನ್‌ನ ಮನೆಯಲ್ಲಿ ಗೌರವಾರ್ಪಣೆ ಮಾಡಿ ಧನಸಹಾಯ ನೀಡಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಬಿ.ದೋಳರವರು, ಗೌಡ ಸಮಾಜದ ವಿದ್ಯಾರ್ಥಿ ಜೀವನ್‌ನ ಸಾಧನೆ ಸಮಾಜದ ಎಲ್ಲರಿಗೂ ಹೆಮ್ಮೆ ತಂದಿದೆ. ಆತನ ಮುಂದಿನ ಭವಿಷ್ಯಕ್ಕೆ ಪ್ರೇರಣೆ ಸಿಗಬೇಕೆಂಬ ಉದ್ದೇಶವಿಟ್ಟುಕೊಂಡು ಆಲಂಕಾರು ವಲಯ ಸಮಿತಿಯಿಂದ ಗೌರವಾರ್ಪಣೆ ಮಾಡಲಾಗಿದೆ. ಮುಂದೆಯೂ ಆತ ಉತ್ತಮ ಸಾಧನೆ ಮಾಡುವಂತಾಗಬೇಕು. ಜೀವನ್ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಮುಂದುವರಿಸುವುದೇ ಆದಲ್ಲಿ ಸ್ವಾಮೀಜಿಯವರ ಜೊತೆ ಮಾತುಕತೆ ನಡೆಸಿ ಸಮಾಜದ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದರು.

ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಗೌರವಾಧ್ಯಕ್ಷ ಚಕ್ರಪಾಣಿ ಬಾಕಿಲ ಮಾತನಾಡಿ, ಪ್ರತಿಭೆ ಎಂಬುದು ಯಾರಿಗೂ ಸೀಮಿತವಾಗಿಲ್ಲ. ಬಡ ಕೃಷಿ ಕುಟುಂಬದ ವಿದ್ಯಾರ್ಥಿಯಾಗಿರುವ ಜೀವನ್ ಪ್ರತಿಭಾವಂತ ವಿದ್ಯಾರ್ಥಿ. ಎಸ್‌ಎಸ್‌ಎಲ್‌ಸಿಯಲ್ಲಿ 624 ಅಂಕ ಪಡೆದುಕೊಂಡು ಆತ ಮಾಡಿರುವ ದೊಡ್ಡ ಸಾಧನೆ ಇತರೇ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಮುಂದಿನ ದಿನಗಳಲ್ಲಿಯೂ ಜೀವನ್‌ನ ಸಾಧನೆ ಇದೇ ರೀತಿ ಮುಂದುವರಿಯಬೇಕು. ಇದಕ್ಕೆ ಗೌಡ ಸಮಾಜದಿಂದ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ. ಆತನ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕಿ, ಆಲಂಕಾರು ಶಾಖಾ ಸಲಹಾ ಸಮಿತಿ ಅಧ್ಯಕ್ಷರೂ ಆದ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ ಮಾತನಾಡಿ, ಸಾಧನೆಗೆ ಮನಸ್ಸು, ಛಲ ಮುಖ್ಯ. ಜೀವನ್ ಸಾಧನೆಗೆ ಆತನ ತಾಯಿಯ ಸಹಕಾರವೂ ಸಿಕ್ಕಿದೆ. ಆತನ ಮುಂದಿನ ವಿದ್ಯಾಭ್ಯಾಸವೂ ಉತ್ತಮ ರೀತಿಯಲ್ಲಿ ನಡೆಯಲಿ. ಆತನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.


ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಹಿರಿಯ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ, ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಸಲಹೆಗಾರ ಪದ್ಮಪ್ಪ ಗೌಡ ರಾಮಕುಂಜ, ಉಪಾಧ್ಯಕ್ಷ ಶೇಖರ ಗೌಡ ಕಟ್ಟಪುಣಿ,  ಕೋಶಾಧಿಕಾರಿ ಆನಂದ ಗೌಡ ಪಜ್ಜಡ್ಕ,  ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ತಾಲೂಕು ಸಮಿತಿ ಸಾಂಸ್ಕೃತಿಕ ಕಾರ್ಯದರ್ಶಿ ಪ್ರದೀಪ್ ಬಾಕಿಲ, ಪೆರಾಬೆ ಗ್ರಾಮ ಯುವ ಸಂಘದ ಅಧ್ಯಕ್ಷ ನಾರ್ಣಪ್ಪ ಕೆಮ್ಮಿಂಜೆ, ಹಳೆನೇರೆಂಕಿ ಗ್ರಾಮ ಯುವ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಕೊಯಿಲ ಗ್ರಾಮ ಹಿರಿಯ ಸಂಘದ ಅಧ್ಯಕ್ಷ ಭವಾನಿಶಂಕರ ಗೌಡ ಪರಂಗಾಜೆ, ಗೌರವ ಸಲಹೆಗಾರ ಲಿಂಗಪ್ಪ ಗೌಡ ಕಡೆಂಬ್ಯಾಲ್, ಆಲಂಕಾರು ವಲಯ ಹಿರಿಯ ಸಮಿತಿ ಕೋಶಾಧಿಕಾರಿ ದಯಾನಂದ ಗೌಡ ಆಲಡ್ಕ, ಉಪಾಧ್ಯಕ್ಷ ಶಿವಣ್ಣ ಗೌಡ ಕಕ್ವೆ, ಆಲಂಕಾರು ವಲಯ ಮಹಿಳಾ ಸಮಿತಿ ಕಾರ್ಯದರ್ಶಿ ದೀಪಾ ಸಂಕೇಶ, ರಾಮಕುಂಜ ಗ್ರಾಮ ಒಕ್ಕಲಿಗ ಯುವ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಸಂಪ್ಯಾಡಿ ಪಟ್ಟೆ, ಹಳೆನೇರೆಂಕಿ ಗ್ರಾಮ ಒಕ್ಕಲಿಗ ಗೌಡ ಸಂಘದ ಹಿರಿಯ ಸಮಿತಿ ಅಧ್ಯಕ್ಷ ಶೇಖರ ಗೌಡ ಹಿರಿಂಜ, ಬಾಲಕೃಷ್ಣ ಗೌಡ ಕತ್ಲಡ್ಕ, ಜಿನ್ನಪ್ಪ ಗೌಡ ಮಾರಂಗ, ಪೂವಪ್ಪ ಗೌಡ ಕೊಂಡ್ಯಾಡಿ, ವಾಸಪ್ಪ ಸಂಪ್ಯಾಡಿ, ರಮೇಶ ಸಂಪ್ಯಾಡಿ, ಲಕ್ಷ್ಮೀ ಸಂಪ್ಯಾಡಿ, ಸುಜಾತ ಸಂಪ್ಯಾಡಿ ಪಟ್ಟೆ,  ಮತ್ತಿತರರು ಉಪಸ್ಥಿತರಿದ್ದರು. ಜೀವನ್ ತಾಯಿ ಮೀನಾಕ್ಷಿ ಸಂಪ್ಯಾಡಿ, ಸಹೋದರ ಸುದರ್ಶನ್ ಸಂಪ್ಯಾಡಿ ಸಹಕರಿಸಿದರು.

 

 

LEAVE A REPLY

Please enter your comment!
Please enter your name here