ಬರಗೂರು ರಾಮಚಂದ್ರಪ್ಪ ಸಮಿತಿ ಸೂಚಿಸಿದ ಪಠ್ಯ ಪುಸ್ತಕವನ್ನೇ ಮುಂದುವರಿಸುವಂತೆ ದ.ಕ ಜಿಲ್ಲಾ ಸಂವಿಧಾನ ರಕ್ಷಣಾ ಸಮಿತಿ ಪುತ್ತೂರು ಘಟಕದಿಂದ ಮುಖ್ಯಮಂತ್ರಿಗಳಿಗೆ ಮನವಿ

0

ಪುತ್ತೂರು: ಪಠ್ಯಪುಸ್ತಕದ ವಿಚಾರದಲ್ಲಿ ನಾಡಗೀತೆ ಮತ್ತು ಕುವೆಂಪು ಅವರನ್ನು ಅವಮಾನಿಸಲಾಗಿದೆ. ಹಾಗಾಗಿ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ರದ್ದುಪಡಿಸಿ ಬರಗೂರು ರಾಮಚಂದ್ರಪ್ಪ ಸಮಿತಿ ಸೂಚಿಸಿದ ಪಠ್ಯ ಪುಸ್ತಕವನ್ನೇ ಮುಂದುವರಿಸುವಂತೆ ದ.ಕ.ಜಿಲ್ಲಾ ಸಂವಿಧಾನ ರಕ್ಷಣಾ ಸಮಿತಿ ಪುತ್ತೂರು ಘಟಕದಿಂದ ಸಹಾಯಕ ಕಮೀಷನರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.


ಭವ್ಯ ಭಾರತದ ನಾಗರಿಕತೆ, ಸಂಸ್ಕೃತಿಯನ್ನೇ ನಾಶ ಮಾಡುವ ಹಾಗೂ ಪಠ್ಯದಲ್ಲಿ ಶ್ರೇಷ್ಟತೆ ವ್ಯಸನದ ಭಯೋತ್ಪಾದನೆ ನಡೆಸುವ ಆಳುವ ವರ್ಗದ ಹುನ್ನಾರವನ್ನು ನಾವು ಖಂಡಿಸುತ್ತೇವೆ. ಭವಿಷ್ಯದ ಮಕ್ಕಳಲ್ಲಿ ದ್ವೇಷ ಭಾವನೆ, ನಕಲೀ ದೇಶಪ್ರೇಮ, ಅನಾಗರಿಕತೆ, ಮೌಢ್ಯ ತುಂಬಿಸುವ ವಿಚಾರಗಳನ್ನು ಹಾಗೂ ಈ ದೇಶಕ್ಕಾಗಿ ಏನೂ ಮಾಡದೆ ಬ್ರಿಟೀಷರ ಗುಲಾಮರಂತೆ ಇದ್ದವರನ್ನೇ ಭಾರತ ಶ್ರೇಷ್ಟ ವ್ಯಕ್ತಿಗಳೆಂದು ಬಿಂಬಿಸುವ ಸರಕಾರದ ಧೋರಣೆಗನುಗುಣವಾಗಿ ರಚಿಸಿದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ರದ್ದುಪಡಿಸಬೇಕು ಮತ್ತು ಅದರಲ್ಲಿ ಇರುವ ವ್ಯಕ್ತಿಗಳು ನಾಡಗೀತೆ ಮತ್ತು ಕುವೆಂಪುರವರನ್ನು ಅವಮಾನಿಸಿದವರೂ ಸೇರಿದ್ದಾರೆ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಮಾನತೆಗಾಗಿ, ಸಮಾಜ ಸುಧಾರಣೆಗಾಗಿ ದುಡಿದವರ ವಿಚಾರಗಳನ್ನು, ಪ್ರಗತಿಪರ ಲೇಖಕರ ಸಾಹಿತ್ಯವನ್ನು ಲೋಪಪಡಿಸಿ, ಭಾರತವನ್ನು ಹಿಂದಕ್ಕೊಯ್ಯೂವ ಹಾಗೂ ಮನುವಾದಿ ಸಂಸ್ಕೃತಿಯನ್ನು ಕಲಿಸುವುದರ ಜೊತೆಗೆ ದೇಶಕ್ಕಾಗಿ ಏನನ್ನೂ ಕೊಡುಗೆ ನೀಡದವರ ಆದರ್ಶವನ್ನು ಕಲಿಸಲು ಮುಂದಾಗಿರುವುದಲ್ಲದೆ ಮಕ್ಕಳಲ್ಲಿ ಧರ್ಮಾಧರಿತವಾಗಿ ದ್ವೇಷಭಾವನೆ ಬೆಳೆಸುವ ರೀತಿ ಪಠ್ಯವನ್ನು ಮಾಡುವುದು ಆತಂಕಕಾರಿವಿಚಾರವಾಗಿದೆ.

ಸ್ವಾತಂತ್ರ್ಯ ಹೋರಾಟ ಮಾಡಿದ ಹೆಸರು ಬಿಡಲಾಗಿದೆ:

ರಾಜ್ಯದ ಬಿಜೆಪಿ ಸರಕಾರ ನೂತನ ಶಿಕ್ಷಣ ನೀತಿಯಜಾರಿಗೆ ಮುಂದಾಗಿ ಪಠ್ಯ ಪುಸ್ತಕ ಪುನರ್ ಪರಿಕ್ಷರಣ ಸಮಿತಿ ರಚಿಸಿದ್ದು, ಈ ಸಮಿತಿಯ ಅದ್ಯಕ್ಷ ರೋಹಿತ್‌ಚಕ್ರತೀರ್ಥ ಆರ್.ಎಸ್.ಎಸ್. ಸೈದ್ದಾಂತಿಕ ಹಿನ್ನೆಲೆಯುಳ್ಳವರು. ಇದರ ಪರಿಣಾಮವಾಗಿ ಈ ಸಮಿತಿ ಶಿಫಾರಸ್ಸು ಮಾಡಿರುವ ಪಠ್ಯಕ್ರಮದಲ್ಲಿ ಈ ಮೊದಲಿದ್ದ 10 ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ದೇಶ ಪ್ರೇಮಿ ಭಗತ್ ಸಿಂಗ್ ಮತ್ತು ಸಮಾಜ ವಿಜ್ಙಾನದಲ್ಲಿ ಸಾಮಾಜಿಕ ಸುಧಾರಕ ಶ್ರೀ ನಾರಾಯಣಗುರು, ಪೆರಿಯಾರ್‌ರವರ ಕುರಿತ ಪಾಠ ಸೇರಿದಂತೆ ಇತರ ಪಾಠಗಳನ್ನು ಕೈಬಿಡಲಾಗಿದೆ. ಬದಲಿಗೆ ಸಂಘಪರಿವಾರದ ಸಂಸ್ಥಾಪಕ ಹಡಗೇವಾರ್ ಭಾಷಣ ಹಾಗೂ ಮತಾಂಧತೆ, ಮೌಡ್ಯ, ಲಿಂಗ ತಾರತಮ್ಯ ಜಾತೀಯತೆ ಬಿತ್ತುವ ಪಠ್ಯಗಳನ್ನು ಸೇರ್ಪಡೆ ಮಾಡಿ ನಾಡಿನ ಮಕ್ಕಳು ಓದುವ ಪಠ್ಯ ಪುಸ್ತಕಗಳ ಕೇಸರೀಕರಣಕ್ಕೆ ಮುಂದಾಗಿರುವುದನ್ನು ನಾವು ಗಮನಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಠ್ಯವನ್ನು ಕೈಬಿಟ್ಟು ಸ್ವಾತಂತ್ರ್ಯ ಚಳವಳಿಯಿಂದ ದೂರವಿದ್ದ ಆರ್.ಎಸ್.ಎಸ್. ಸ್ಥಾಪಕ ಹೆಡಗೇವಾರ್ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಾಡಿದ ಅವಮಾನವಾಗಿದೆ. ಮಾತ್ರವಲ್ಲ ಈ ಮೂಲಕ ದೇಶಕ್ಕೆ ಆದರ್ಶರಾದ ಭಗತ್ ಸಿಂಗ್, ಮಹಾತ್ಮಾ ಗಾಂಧಿ, ಅಂಬೇಡ್ಕರ್, ಬಸವಣ್ಣ, ನಾರಾಯಣಗುರು ಪೆರಿಯಾರ್, ಕುವೆಂಪು ಮುಂತಾದವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಓದದಂತೆ ಮಾಡುವ ಹಹುನ್ನಾರ ಇದರರೊಳಗೆ ಅಡಗಿದೆ ಹಾಗೂ ಇದುದೇಶದ ಸಮಗ್ರತೆಗೆ, ಐಖ್ಯತೆಗೆ ದೊಡ್ಡ ಅಪಾಯಕಾರಿಯಾಗಿದೆ. ಪ್ರಗತಿಪರ ಚಿಂತನೆಯ ಲೇಖರನ್ನೂ ಗುರುತಿಸಿ ಪಿ.ಎಂಕೇಸ್, ಜಿ ರಾಮಕೃಷ್ಣ, ಸಾರಾಅಬೂಬಕ್ಕರ್, ಎ.ಎನ್. ಮೂರ್ತಿ, ಶಿವಕೋಟ್ಯಾಚಾರ್ಯರ ಬರೆದ ವಿಷಯಗಳ ಪಾಠಗಳನ್ನು ಕೈಬಿಡಲಾಗಿದೆ. ದೇಶಕ್ಕಾಗಿ ಬಲಿದಾನಗೈದವರ ಆದರ್ಶದ ಪಾಠವನ್ನು ಮಕ್ಕಳಿಗೆ ನೀಡಬೇಕೇ ವಿನಃ ಸಮಾಜವನ್ನು ಹಿಂದೊಯ್ಯುವ ಅಶಾಂತಿಗೆ ಅಭದ್ರತೆಗೆ ಕಾರಣವಾಗುವ ಪಾಠಗಳನ್ನಲ್ಲ. ಆದ್ದರಿಂದ ಭವ್ಯ ಭಾರತದ ವೈವಿದ್ಯತೆಯಲ್ಲಿ ಏಕತೆಯನ್ನು ಭಯಸುವ ವಿವಿದ ಸಂಸ್ಕೃತಿಯ ಭಾರತದ ಕಣ್ಣೋಟವಿರುವ ಭವಿಷ್ಯ ಬರಗೂರು ರಾಮಚಂದ್ರಪ್ಪ ಸಮಿತಿ ನೀಡಿದ ಪಠ್ಯ ಪುಸ್ತಕವನ್ನೇ ಮುಂದುವರಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಮನವಿಯಲ್ಲಿ ವಿವರಿಸಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರು ಪ್ರಗತಿಪರ ಚಿಂತಕರು ಆಗಿರುವ ಬಿ.ಎಂ ಭಟ್, ನ್ಯಾಯವಾದಿಗಳಾದ ಪಿ.ಕೆ.ಸತೀಶನ್, ಭಾಸ್ಕರ್ ಕೋಡಿಂಬಾಳ, ದಾಮೋದರ್ ಭಟ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here