‘ಬಡವರಿಗೆ ಮನ್ನಣೆ ಸಿಗುವ ಕಾಲ ಬಂದಿದೆ’-ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮಾರೋಪದಲ್ಲಿ ಸಚಿವ ಕೋಟ

0

  • ಟೈಲರಿಂಗ್ ತರಬೇತಿಗೆ 55ಮಂದಿ
  • ಜೇನು ಸಾಕಾಣೆ ತರಬೇತಿಗೆ 20 ಮಂದಿ
  • ಮೊಬೈಲ್ ರಿಪೇರಿ ತರಬೇತಿಗೆ 22 ಮಂದಿ
  • ಕೃಷಿಯಂತ್ರೋಪಕರಣ ರಿಪೇರಿ ತರಬೇತಿಗೆ 7ಮಂದಿ
  • ವಿದ್ಯುತ್ ಉಪಕರಣ ರಿಪೇರಿ ತರಬೇತಿಗೆ 12 ಮಂದಿ

 

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ಸಮಾರೋಪ ಸಮಾರಂಭದ ಉದ್ಘಾಟನೆ

ವಿಟ್ಲ: ಭಾರತದಲ್ಲಿ ಆತ್ಮನಿರ್ಭರ ಯೋಜನೆಯಿಂದ ಹಲವಾರು ಬದಲಾವಣೆಯಾಗಿದೆ. ನಮ್ಮ ಯೋಚನೆ ಯೋಜನೆಗಳನ್ನು ಸಾಕಾರ ಮಾಡುವ ಮನಸ್ಸು ನಮ್ಮಲ್ಲಿರಬೇಕು. ಆಯುಶ್ಮಾನ್ ಭಾರತ ಯೋಜನೆಯಲ್ಲಿ ಹಲವರು ಪ್ರಯೋಜನ ಪಡೆದಿದ್ದಾರೆ. ಸ್ವಯಂ ಉದ್ಯೋಗ ಮಾಡಿ ನಮ್ಮ ಕಾಲಮೇಲೆ ನಾವು ನಿಲ್ಲುವಂತಾಗಬೇಕು. ದೇಶದ ಆರ್ಥಿಕ ಸ್ಥಿತಿಯಲ್ಲಿ ಹುದ್ದೆ ತುಂಬಲು ಬಲುಕಷ್ಟ. ನಮ್ಮ ಬದುಕನ್ನು ನಾವುಗಳೇ ರೂಪಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ರವರು ಹೇಳಿದರು.

ಅವರು ಮೇ.31ರಂದು ಇಡ್ಕಿದು ಸೇವಾಸಹಕಾರಿ ಸಂಘದ ಉರಿಮಜಲು ಕೇಂದ್ರ ಕಚೇರಿಯ ಶತಾಮೃತ ಸಂಕೀರ್ಣ ದಲ್ಲಿ ನಡೆದ, ಇಡ್ಕಿದು ಸೇವಾ ಸಹಕಾರಿ ಸಂಘ ನಿ., ಅಮೃತ ಸಿಂಚನ ರೈತ ಸೇವಾ ಒಕ್ಕೂಟ, ಇಡ್ಕಿದು ಇದರ ವತಿಯಿಂದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು ಇವರ ಸಹಯೋಗದಲ್ಲಿ ನಡೆಯುತ್ತಿರುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬದಲಾಗುತ್ತಿರುವ ಭಾರತಕ್ಕೆ ನಮ್ಮ ಪಾತ್ರವೇನು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ನಂಬಿಕೆ ನಮ್ಮನ್ನು ಉಳಿಸುತ್ತದೆ. ಬದಲಾದ ಭಾರತದಲ್ಲಿ ವಿಶ್ವವೇ ನಮಗೆ ಮನ್ನಣೆ ನೀಡುವಂತಾಗಿದೆ. ನಮ್ಮ ಕಾಲಮೇಲೆ ನಿಂತು ನಮ್ಮ ಉದ್ಯೋಗ ಸೃಷ್ಠಿ ಮಾಡಿಕೊಳ್ಳಲು ಇದೊಂದು ಸುವರ್ಣಾವಕಾಶ. ಈಗ ಭಾರತದ ಮನಸ್ಥಿತಿ ಬದಲಾಗಿದೆ. ಬಡವರಿಗೆ ಮನ್ನಣೆ ಸಿಗುವ ಕಾಲ ಬಂದಿದೆ. ದಾಸ್ಯದ ಬದುಕಿನ ಮಾನಸಿಕತೆಯನ್ನು ಬದಿಗಿಟ್ಟು ನಿಮ್ಮ ನಿಮ್ಮ ಕಾಲಮೇಲೆ ನಿಂತಾಗ ಇಂತಹ ಶಿಬಿರಗಳಿಗೆ ಅರ್ಥ ಬರುತ್ತದೆ ಎಂದರು.

 


ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ಮಾತನಾಡಿ ದೇಶ ಬದಲಾದಂತೆ ನಾವುಗಳು ಬದಲಾಗಬೇಕು. ನಾವು ಯಾವುದೇ ಉದ್ಯೋಗ ಮಾಡಿದರೂ ಅದು ಜನರ ಮನಸ್ಸನ್ನು ಮುಟ್ಟು ವಂತದ್ದಾಗಿರಬೇಕು. ಇಡ್ಕಿದು ಸೇವಾ ಸಹಕಾರಿ ಸಂಘ ಒಂದು ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದೆ. ಮೋದಿಯವರ ಕೆಲವೊಂದು ಕನಸನ್ನು ನನಸು ಮಾಡುವಲ್ಲಿ ಉದ್ಯೋಗ ನೈಪುಣ್ಯ ಶಿಬಿರ ಸಹಕಾರಿಯಾಗಿದೆ ಎಂದರು. ಆತ್ಮ ನಿರ್ಭರ ಭಾರತದ ಕನಸನ್ನು ನನಸುಮಾಡುವ ಕೆಲಸ ಇಲ್ಲಿಂದಲೇ ಆರಂಭವಾಗಬೇಕು. ಗ್ರಾಮ ವಿಕಾಸದ ಕಲ್ಪನೆ ಆತ್ಮ ನಿರ್ಭರ, ಸ್ವಾವಲಂಬನೆಯ ಕಲ್ಪನೆ ಎಂದವರು ಹೇಳಿದರು.

 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬಿ. ರವರು ಮಾತನಾಡಿ ನನ್ನ ಕನಸನ್ನು ಆಡಳಿತ ಮಂಡಳಿಯ ಸಹಕಾರದಿಂದ ನನಸು ಮಾಡುವ ಕೆಲಸ ನಡೆಯುತ್ತಿದೆ. ಸ್ವಾವಲಂಬಿ ಗ್ರಾಮ ನಿರ್ಮಾಣಕ್ಕೆ ಸಹಕಾರಿ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಥೆಯ ಶತಮಾನೋತ್ಸವದ ಸವಿನೆನಪಿಗಾಗಿ ಗ್ರಾಮಸ್ಥರ ಏಳಿಗೆಗಾಗಿ ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಉದ್ಯೋಗಾಮೃತ ಯೋಜನೆ ಒಂದು ಮಾದರಿ ಕಾರ್ಯಕ್ರಮವಾಗಿದೆ. ಶಿಬಿರಾರ್ಥಿಗಳಲ್ಲಿ ಹುರುಪು ತುಂಬಿಸುವ ಕೆಲಸ ಸಹಕಾರಿಯಿಂದಾಗಿದೆ. ಶಿಬಿರಾರ್ಥಿಗಳಿಗೆ ಬೇಕಾದ ಎಲ್ಲಾ ಮಾಹಿತಿಗಳಿಗೆ ನಮ್ಮನ್ನು ಸಂಪರ್ಕಿಸಬಹುದು. ಶಿಬಿರಾರ್ಥಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್‌ನಿಂದ ಸಾಲ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು. ಫಲಾಪೇಕ್ಷೆ ಇಲ್ಲದೆ ಗ್ರಾಮದ ಅಭಿವೃದ್ಧಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತಿದ್ದೇವೆ ಇದಕ್ಕೆ ನಮ್ಮ ಗ್ತಾಮಸ್ಥರ ಸಹಕಾರ ಅಗತ್ಯ ಎಂದರು.

 


ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ. ಎಂ. ಕೃಷ್ಣ ಭಟ್ ಕೋಂಕೋಡಿರವರು ಮಾತನಾಡಿ ಇಡ್ಕಿದು ಸೇವಾ ಸಹಕಾರಿ ಸಂಘ ಕೇವಲ ಒಂದು ಸಹಕಾರಿಯಾಗಿರದೆ ಈ ಗ್ರಾಮದ ಜನರ ಜೀವನಾಡಿಯಾಗಿದೆ. ಗ್ರಾಮ ಸ್ವಾವಲಂಬನೆಯ ಒಂದು ಆಧಾರ ಸ್ಥಂಭವಾಗಿರುವ ಈ ಸಹಕಾರಿ ಹತ್ತು ಹಲವು ಯೋಜನೆಯ ಜೊತೆಗೆ ವರ್ತಮಾನದ ದಿನಗಳನ್ನು ಗಣನೆಗೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತಿದೆ. ಕೊರೋನಾದ ಭೀಕರತೆಯ ಸಂದರ್ಭದಲ್ಲಿ ಸಂಘದ ಸೂಚನೆಯಂತೆ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಈ ಶಿಭಿರದ ಉದಯವಾಗಿದೆ. ಮೋದಿಯವರ ಆತ್ಮನಿರ್ಭರ ಯೋಜನೆಯ ಕನಸು ನನಸು ಮಾಡುವ ಕೆಲಸ ನಮ್ಮಿಂದ ಆಗಬೇಕಿದೆ. ಆ ಮೂಲಕ ಇಡ್ಕಿದು ಸೇವಾ ಸಹಕಾರಿ ಸಂಘ ಹಾಗೂ ವಿವೇಕಾನಂದ ವಿದ್ಯಾವರ್ದಕ ಸಂಘ ದೇಶಕ್ಕೆ ಮಾದರಿಯಾಗಬೇಕಾಗಿದೆ. ಇಂತಹ ಉದ್ಯೋಗ ನೈಪುಣ್ಯ ಶಿಬಿರಕ್ಕೆ ಸಚಿವರು ಪುಷ್ಠಿನೀಡಬೇಕಾಗಿದೆ ಎಂದರು.


ಇಡ್ಕಿದು ಗ್ರಾ.ಪಂ. ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಎಂ. ರವರು ಮಾತನಾಡಿ ಗ್ರಾಮದ ಅಭಿವೃದ್ದಿಯ ಚಿಂತನೆಯಲ್ಲಿ ಸಹಕಾರಿ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ. ಇದೊಂದು ಉತ್ತಮ ಶಿಭಿರವಾಗಿದೆ. ಶಿಬಿರಾರ್ಥಿಯ ಯಶಸ್ವು ಅವರ ಆತ್ಮ ಮನೋಭಾವದಿಂದ ತಿಳಿಯಲು ಸಾಧ್ಯ. ಈ ಶಿಬಿರ ಶಿಬಿರಾರ್ಥಿಯ ಬದುಕಿನಲ್ಲಿ ಬದಲಾವಣೆ ಪರ್ವ ಪ್ರಾರಂಭಿಸಿದೆ. ಬದುಕಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸ್ವ ಉದ್ಯೋಗ ಶಿಬಿರ ದಾರಿದೀವಿಗೆಯಾಗಿದೆ.

ವಿವೇಕಾನಂದ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಬಡವರನ್ನು ಸ್ವ ಉದ್ಯೋಗದ ಮೂಲಕ ಮೇಲಕ್ಕೆತ್ತುವ ಕೆಲಸ ಇಂತಹ ಶಿಬಿರದಿಂದ ಆಗುತ್ತಿದೆ. ಹೊಸ ಕೌಶಲ್ಯವನ್ನು ಸೇರಿಸುವ ಕೆಲಸ ನಮ್ಮ ಸಂಸ್ಥೆಯಿಂದ ಆಗಿದೆ. ಆದುನಿಕ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳಬೇಕು. ಇಡ್ಕಿದು ಗ್ರಾಮವನ್ನು ಅಭಿವೃದ್ಧಿಪಡಿಸುವಲ್ಲಿ ಇಂತಹ ಶಿಬಿರಗಳ ಪಾತ್ರ ಮಹತ್ತರವಾಗಿದೆ ಎಂದರು.

 

ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ರವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು. ಬಳಿಕ ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನು ಗೌರವಿಸಲಾಯಿತು. ಅಮೃತ ಸಿಂಚನ ರೈತ ಸೇವಾ ಒಕ್ಕೂಟದ ಅಧ್ಯಕ್ಷರಾದ ಪ್ರಕಾಶ್ ಕೆ. ಎಸ್. ಉರಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಚರಣ್ ಅಮೈ ವೈಯಕ್ತಿಕ ಗೀತೆಯನ್ನು ಹಾಡಿದರು. ಇಡ್ಕಿದು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಎನ್.ರಾಮ್ ಭಟ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ವಂದಿಸಿದರು. ಸಿಬ್ಬಂದಿ ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ 126ಮಂದಿ ಭಾಗಿ

ಮೇ.26ರಂದು ಆರಂಭಗೊಂಡ ಶಿಬಿರದಲ್ಲಿ ಒಟ್ಟು ೧೨೬ಮಂದಿ ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ.

LEAVE A REPLY

Please enter your comment!
Please enter your name here