ಒಬಿಸಿ ಮೀಸಲು ನಿಗದಿ ಆಯೋಗಕ್ಕೆ ಜೂನ್ 8ರೊಳಗೆ ಅಹವಾಲು ಸಲ್ಲಿಸಲು ಸೂಚನೆ

0

  • ಜಿ.ಪಂ.,ತಾ.ಪಂ. ಚುನಾವಣೆ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಕುರಿತಂತೆ ವರದಿ ಸಲ್ಲಿಸಲು ರಚಿತವಾಗಿರುವ ನ್ಯಾ|ಭಕ್ತವತ್ಸಲ ನೇತೃತ್ವದ ಆಯೋಗಕ್ಕೆ ಅಹವಾಲು ಅಥವಾ ಸಲಹೆಗಳನ್ನು ಜೂನ್ ೮ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಮೂರು ತಿಂಗಳೊಳಗೆ ವಿಚಾರಣಾ ವರದಿಯನ್ನು ಸಲ್ಲಿಸಲು ರಾಜ್ಯ ಸರಕಾರವು ಆಯೋಗಕ್ಕೆ ಸೂಚಿಸಿದೆ.ಈ ನಿಟ್ಟಿನಲ್ಲಿ ಸಾರ್ವಜನಿಕರು, ವಿಶೇಷವಾಗಿ ಜನ ಪ್ರತಿನಿಧಿಗಳು, ಕಾರ್ಯದರ್ಶಿಗಳು, ನ್ಯಾಯಮೂರ್ತಿ ಕೆ. ಭಕ್ತವತ್ಸಲ ವಿಚಾರಣಾ ಆಯೋಗ, ಕೊಠಡಿ ಸಂಖ್ಯೆ : 133 ಮತ್ತು ೧೩೪, ಮೊದಲನೇ ಮಹಡಿ ವಿಕಾಸ ಸೌಧ, ಡಾ ಅಂಬೇಡ್ಕರ್ ರಸ್ತೆ, ಬೆಂಗಳೂರು – ೫೬೦ ೦೦೧ ಇವರಿಗೆ ತಮ್ಮ ಅಹವಾಲು ಅಥವಾ ಸಲಹೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಅಥವಾ ವಿವರಗಳು ಅವಶ್ಯಕತೆ ಇದ್ದಲ್ಲಿ, ಆಯೋಗದ ಕಾರ್ಯದರ್ಶಿಯವರನ್ನು ದೂರವಾಣಿ ಸಂಖ್ಯೆ:080 – 2235 2152 ಹಾಗೂ 80-22034004 ಮೂಲಕ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.

ರಾಜ್ಯದ ಜಿ.ಪಂ ಹಾಗೂ ತಾ.ಪಂ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಹೈಕೋರ್ಟ್ 12ವಾರಗಳ ಗಡುವು ವಿಧಿಸಿ ಮೇ ೨೪ರಂದು ಸೂಚಿಸಿತ್ತಲ್ಲದೆ,ಹೆಚ್ಚಿನ ಕಾಲಾವಕಾಶ ಕೇಳದಂತೆ ರಾಜ್ಯ ಸರಕಾರಕ್ಕೆ ತಾಕೀತು ಮಾಡಿತ್ತು. ಜಿ.ಪಂ, ತಾ.ಪಂ ಕ್ಷೇತ್ರ, ಮೀಸಲಾತಿ ನಿಗದಿಗೆ ರಾಜ್ಯ ಸರಕಾರ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚನೆ ಮಾಡಿರುವುದರಿಂದ ಚುನಾವಣೆ ನಡೆಸಲು ವಿಳಂಬವಾಗುತ್ತಿದೆ ಎಂದು ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಮಂಗಳವಾರ ಈ ನಿರ್ದೇಶನ ನೀಡಿದೆ.


ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು ವಾದಿಸಿ, ನಿವೃತ್ತ ನ್ಯಾಯಮೂರ್ತಿ ಡಾ.ಕೆ.ಭಕ್ತವತ್ಸಲ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಮೀಸಲು ನಿಗದಿಗೆ ಆಯೋಗ ರಚಿಸಲಾಗಿದೆ ಅದರ ವರದಿಗಾಗಿ ಕಾಲಾವಕಾಶ ನೀಡಬೇಕೆಂದು ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಅವರು, ರಾಜ್ಯ ಸರಕಾರ ಪದೇ ಪದೇ ಹೆಚ್ಚಿನ ಸಮಯ ಕೇಳಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.ಇದನ್ನು ಮಾನ್ಯ ಮಾಡಿದ್ದ ನ್ಯಾಯಪೀಠ 12 ವಾರಗಳ ಗಡುವು ವಿಧಿಸಿ ವಿಚಾರಣೆ ಮುಂದೂಡಿದೆ.ಕಳೆದ ವರ್ಷ ಎಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಅವಧಿ ಪೂರ್ಣಗೊಂಡ ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದ್ದ ಚುನಾವಣಾ ಆಯೋಗವು ಈ ಸಂಬಂಧ ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಪ್ರಕಟಿಸಿತ್ತು.ಅಂತೆಯೇ ಮೀಸಲಾತಿ ಕರಡು ಸಹ ಪ್ರಕಟಿಸಲಾಗಿತ್ತು.ಇನ್ನೇನು, ಚುನಾವಣೆಗೆ ದಿನಾಂಕ ಘೋಷಣೆ ಮಾಡಬೇಕು ಎನ್ನುವ ಸಂದರ್ಭದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದಿದ್ದ ಸರಕಾರ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿತ್ತು. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.ಇದೀಗ ಒಬಿಸಿ ಮೀಸಲಾತಿ ಕುರಿತು ಜೂನ್ ೮ರೊಳಗೆ ಅಹವಾಲು ಸಲ್ಲಿಸುವಂತೆ ನ್ಯಾ ಭಕ್ತವತ್ಸಲಂ ನೇತೃತ್ವದ ಆಯೋಗ ಪ್ರಕಟಣೆ ಹೊರಡಿಸಿದೆ.

 

LEAVE A REPLY

Please enter your comment!
Please enter your name here