ಫಿಲೋಮಿನಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಿಕೆ ಪ್ರೊ|ವೆಂಕಟೇಶ್ವರಿರವರಿಗೆ ಬೀಳ್ಕೊಡುಗೆ ಸನ್ಮಾನ

0

ಪುತ್ತೂರು: ಮೂವತ್ತೇಳು ವರ್ಷಗಳ ಸುದೀರ್ಘ ವೃತ್ತಿಜೀವನದಿಂದ ಸೇವಾ ನಿವೃತ್ತರಾದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಿಕೆಯಾಗಿರುವ ಪ್ರೊ|ವೆಂಕಟೇಶ್ವರಿರವರಿಗೆ ಬೀಳ್ಕೊಡುಗೆ ಸನ್ಮಾನ ಇತ್ತೀಚೆಗೆ ಕಾಲೇಜಿನಲ್ಲಿ ನೆರವೇರಿತು.

ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಅಧ್ಯಾಪಕರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು. ವಿದ್ಯಾರ್ಥಿಗಳಿಗೆ ಸರಿಯಾದ ದಾರಿಯನ್ನು ತೋರಿಸುವ ಗುರುವಾಗಬೇಕು. ಬದುಕಿನಲ್ಲಿ ನೆಲೆ ಮತ್ತು ಬೆಲೆಯನ್ನು ತಂದುಕೊಟ್ಟ ತಮ್ಮ ವಿದ್ಯಾ ಸಂಸ್ಥೆಯನ್ನು ಎಂದಿಗೂ ಮರೆಯಬಾರದು. ಸಮಯ ಮತ್ತು ಅವಕಾಶ ಸಿಕ್ಕಾಗಲೆಲ್ಲ ಅದರ ಕುರಿತು ಪ್ರಶಂಸೆಯ ಮಾತು ನುಡಿಯಬೇಕು. ಇವು ಉದಾತ್ತ ವ್ಯಕ್ತಿತ್ವದ ಲಕ್ಷಣ. ಪ್ರೊ.ವೆಂಕಟೇಶ್ವರಿ ಇಂಥಹ ಒಬ್ಬ ಉದಾತ್ತ ಪ್ರಾಧ್ಯಾಪಿಕೆ ಎಂದರು.

ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಪ್ರೊ|ವೆಂಕಟೇಶ್ವರಿಯವರ ವ್ಯಕ್ತಿತ್ವ ವಿದ್ಯಾರ್ಥಿಗಳ ಮನಸ್ಸು ಗೆಲ್ಲುವಂಥದ್ದು. ಸರಳ ಮತ್ತು ನೇರ ಪಾಠ-ಪ್ರವಚನವಷ್ಟೇ ಅಲ್ಲ, ಇನ್ನಿತರ ಹೊಣೆಗಳನ್ನು ನಿಭಾಯಿಸಿ ಶಿಕ್ಷಣರಂಗಕ್ಕೆ ಮೂರು ದಶಕಗಳಿಗೂ ಮಿಕ್ಕಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಇವರ ಕರ್ತವ್ಯ ಬದ್ಧತೆ, ನೇರ ನಡೆ ನುಡಿ ವಿದ್ಯಾರ್ಥಿಗಳ ಮನ ಗೆದ್ದ ಅಂಶಗಳು ಎಂದು ಹೇಳಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಪ್ರೊ|ವೆಂಕಟೇಶ್ವರಿಯವರಿಗೆ ಶುಭಾಶಯ ಹೇಳುತ್ತ ಅವರ ಸರಳತನ, ಜ್ಞಾನ ಪ್ರಸಾರದ ಕೈಂಕರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇತಿಹಾಸ ಪ್ರಾಧ್ಯಾಪಕ ಡಾ|ನೋರ್ಬರ್ಟ್ ಮಸ್ಕರೇನ್ಹಸ್‌ರವರು ಶುಭಾಶಂಸನೆ ಮಾಡಿದರು. ಗಣಿತ ಪ್ರಾಧ್ಯಾಪಕ ಪ್ರೊ|ಗಣೇಶ್ ಭಟ್ ಸನ್ಮಾನ ಪತ್ರವನ್ನು ವಾಚಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ|ವೆಂಕಟೇಶ್ವರಿರವರು, ತಾವು ಇದು ತನಕ ಸಾಗಿ ಬಂದ ಶೈಕ್ಷಣಿಕ ಜೀವನಹಾದಿಯನ್ನು ಅವಲೋಕಿಸಿದರು. ತಮ್ಮ ವೃತ್ತಿಜೀವನಕ್ಕೆ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿದರು.

ಉಪ ಪ್ರಾಂಶುಪಾಲ ಪ್ರೊ|ಉದಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಟಾಫ್ ಎಸೊಸಿಯೇಶನ್ ಅಧ್ಯಕ್ಷರಾದ ಪ್ರೊ|ಝುಬೇರ್ ಸ್ವಾಗತಿಸಿ, ಕಾರ್ಯದರ್ಶಿ ಡಾ|ಡಿಂಪಲ್ ಫೆರ್ನಾಂಡಿಸ್ ವ೦ದಿಸಿದರು.  ವಾರಿಜಾ ಮತ್ತು ಶ್ರೀಮತಿ ಗೀತಾ ಪೂರ್ಣಿಮಾ ಪ್ರಾರ್ಥಿಸಿದರು. ಬಿಎಸ್‌ಡಬ್ಲೂ ವಿಭಾಗ ಮುಖ್ಯಸ್ಥ ಪ್ರೊ|ಪೌಲ್ ಹೆರಾಲ್ಡ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here