ಮಂಗಳೂರು ರಾಮಕೃಷ್ಣ ಮಠದ ಅಮೃತ ಮಹೋತ್ಸವ ಅಮೃತ ಸಂಗಮ, ರಾಜ್ಯ ಮಟ್ಟದ ಸಾಧು-ಭಕ್ತ ಸಮ್ಮೇಳನ

0

 

ಮಂಗಳೂರು: ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಮಂಗಳೂರು ರಾಮಕೃಷ್ಣ ಮಠದಲ್ಲಿ ಶುಕ್ರವಾರ ಮಠದ 75ನೇ ವರ್ಷದ ಸಂಭ್ರಮಾಚರಣೆ ‘ಅಮೃತ ಮಹೋತ್ಸವ’ ಹಾಗೂ ಅಮೃತ ಸಂಗಮ- ರಾಜ್ಯ ಮಟ್ಟದ ಸಾಧು- ಭಕ್ತ ಸಮ್ಮೇಳನ ಉದ್ಘಾಟನೆಗೊಂಡಿತು.

 


ಮಠದ ಅಮೃತಮಹೋತ್ಸವ ಅಂಗವಾಗಿ ನೂತನ ಮಹಾದ್ವಾರ ಅಮೃತ ಪಥವನ್ನು ಲೋಕಾರ್ಪಣೆ ಮಾಡಲಾಯಿತು. ಸ್ವಾಮಿ ವೀರೇಶ್ವರಾನಂದ ಸಾಧು ನಿವಾಸ ಉದ್ಘಾಟನೆಗೊಂಡಿತು. ವಿವೇಕಾನಂದ ತರಬೇತಿ ಕೇಂದ್ರ ಅಮೃತ ಭವನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿತು. ಸಾಧು ಭಕ್ತ ಸಮ್ಮೇಳನ, ಚಿಂತನ ಮಂಥನ ಕಾರ್ಯಕ್ರಮ ನಡೆಯಿತು.

ಅಮೃತ ಮಹೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಪಶ್ವಿಮ ಬಂಗಾಳ ಬೇಲೂರಿನ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಉಪಾಧ್ಯಕ್ಷರಾದ ಸ್ವಾಮಿ ಗೌತಮಾನಂದಜಿ ಮಹಾರಾಜ್, ಮಾನವತೆಯೇ ವಿಶ್ವ ಧರ್ಮ ಎಂದು ಸ್ವಾಮಿ ವಿವೇಕಾನಂದರು ಸಾರಿದ್ದರು. ಆ ನಿಟ್ಟಿನಲ್ಲಿ ನಾವು ಒಟ್ಟಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಮಂಗಳೂರಿನ ರಾಮಕಷ್ಣ ಆಶ್ರಮ ಯಾವುದೇ ಸದ್ದುಗದ್ದಲವಿಲ್ಲದೆ ಸಮಾಜ ಕಾರ್ಯಗಳನ್ನು ಮಾಡುತ್ತಿದೆ. ಮಂಗಳೂರಿನ ಮಠದಿಂದ ಇನ್ನಷ್ಟು ಸೇವೆಗಳು ನಡೆಯಲಿದೆ ಎಂದು ಹಾರೈಸಿದರು.

ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಪಶ್ಚಿಮ ಬಂಗಾಳ ಬೇಲೂರು ರಾಮಕೃಷ್ಣ ಮಠದ ವಿಶ್ವಸ್ಥರಾದ ಸ್ವಾಮಿ ಮುಕ್ತಿದಾನಂದಜಿ, ಮಂಗಳೂರಿನ ರಾಮಕೃಷ್ಣ ಮಠ ಅದ್ಭುತ ಸೇವಾ ಕಾರ್ಯ ಹಾಗೂ ಪ್ರಗತಿಪರ ಚಟುವಟಿಕೆಗಳನ್ನು ನಡೆಸುತ್ತಿದೆ. ಸೇವೆ ಮತ್ತು ಆಧ್ಯಾತ್ಮದ ಮೂಲಕ ಮಠ ಪ್ರಸಿದ್ಧಿ ಪಡೆದಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಮಾತನಾಡಿ, ಸ್ವಾಮಿ ವಿವೇಕಾನಂದರು ಮದ್ರಾಸ್‌ಗೆ ಆಗಮಿಸಿದ್ದಾಗ ಅಲ್ಲಿಗೆ ತೆರಳಿದ್ದ ಮಂಗಳೂರಿನ ಯುವಕರ ತಂಡವೊಂದು ಮಂಗಳೂರಿನಲ್ಲಿ ವಿವೇಕಾನಂದರ ಭಾವಧಾರೆಯನ್ನು ಪ್ರಚುರಪಡಿಸಿತು. ಅದರ ಫಲವಾಗಿ ೧೯೪೭ ಜೂನ್ ೩ರಂದು ಮಂಗಳೂರಿನಲ್ಲಿ ರಾಮಕೃಷ್ಣ ಆಶ್ರಮ ಆರಂಭವಾಯಿತು. ಬಳಿಕ ಹಲವು ಮಂದಿ ಸ್ವಾಮೀಜಿಗಳು ಈ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಇಂದು ಮಂಗಳೂರು ರಾಮಕೃಷ್ಣ ಮಠ ತನ್ನ ಆಧ್ಯಾತ್ಮ ಮತ್ತು ಸೇವಾ ಚಟುವಟಿಕೆ ಮೂಲಕ ಸ್ವಯಂಸೇವಕರ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಶ್ರೀಮಠದ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿದ ನಿಟ್ಟೆ ವಿಶ್ವವಿದ್ಯಾಲಯ ಕುಲಪತಿ ಡಾ. ಎನ್. ವಿನಯ ಹೆಗ್ಡೆ ಮಾತನಾಡಿ, ಕಳೆದ ೭೫ ವರ್ಷಗಳಿಂದ ಮಂಗಳೂರಿನ ರಾಮಕೃಷ್ಣ ಮಠ ಮಂಗಳೂರಿಗೆ, ಸಮಾಜಕ್ಕೆ ಕೊಡುಗೆ ನೀಡಿದೆ. ಇದಕ್ಕಾಗಿ ಧನ್ಯವಾದ ಹೇಳಲು ಅಮೃತ ಮಹೋತ್ಸವ ಸೂಕ್ತ ಸಮಯ. ಮಠದ ಸೇವಾ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ವೆಬ್‌ಸೈಟ್ ಬಿಡುಗಡೆ: ಶ್ರೀಮಠದ ವೆಬ್‌ಸೈಟ್ ಬಿಡುಗಡೆಗೊಳಿಸಿ ಮಾತನಾಡಿದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಮಾತನಾಡಿ, ‘ಜಗದ್ಗುರು ಭಾರತ’ ಸ್ವಾಮಿ ವಿವೇಕಾನಂದರ ಕಲ್ಪನೆ. ಭಾರತ ಜಗದ್ಗುರುವಾಗುವುದು ಇನ್ನೊಂದು ದೇಶದ ಮೇಲೆ ಆಕ್ರಮಣ ನಡೆಸಲು ಅಲ್ಲ. ಭಾರತ ಪರಮವೈಭವದೆಡೆಗೆ ಸಾಗುವ ಮೂಲಕ, ಜಗತ್ತಿಗೆ ತಾಯಿ ಭಾರತಿ ಮಾರ್ಗದರ್ಶನದ ಮೂಲಕ ಭಾರತ ವಿಶ್ವಗುರು ಆಗಬೇಕಿದೆ. ಶಿಕ್ಷಣ, ಸಂಸ್ಕಾರ, ಅಧ್ಯಾತ್ಮ, ಸಾಮಾಜಿಕ ಚಟುವಟಿಕೆ, ಸ್ವಚ್ಛ ಭಾರತ ಮೂಲಕ ಸ್ವಾಮಿ ವಿವೇಕಾನಂದರ ಕನಸುಗಳನ್ನು ರಾಮಕೃಷ್ಣ ಮಠ ಸಾಕಾರಗೊಳಿಸುತ್ತಿದೆ. ಭಾರತ ಜಗದ್ಗುರುವಾಗುವ ಸ್ವಾಮಿ ವಿವೇಕಾನಂದರ ಕನಸನ್ನು ನನಸುಗೊಳಿಸುವ ಕಾರ್ಯ ನರೇಂದ್ರ ಮೋದಿ ಅವರಿಂದ ಆಗುತ್ತಿದೆ ಎಂದರು.

ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ರಾಮಕೃಷ್ಣ ಮಠ ಸಾಮಾಜಿಕ ಚಟುವಟಿಕೆ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಇಂದು ಭೂಮಿ ಪೂಜೆ ನಡೆದ ವಿವೇಕಾನಂದ ತರಬೇತಿ ಕೇಂದ್ರ ‘ಅಮೃತ ಭವನ’ಕ್ಕೆ ಮಂಗಳೂರಿನ ಜನತೆ ತನು, ಮನ, ಧನದ ಸಹಕಾರ ನೀಡಬೇಕು ಎಂದು ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಮಾತನಾಡಿ, ಅಮೃತ ಭವನ ಕಟ್ಟಡಕ್ಕೆ ವಿಧಾನ ಪರಿಷತ್ ನಿಧಿಯಿಂದ ಅನುದಾನ ನೀಡುತ್ತೇನೆ ಎಂದರು.

ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಮಂಗಳೂರಿನ ರಾಮಕೃಷ್ಣ ಮಿಷನ್ ನಡೆಸಿದ ಸ್ವಚ್ಛತಾ ಕಾರ್ಯ, ಮಡಿಕೆ ಗೊಬ್ಬರ ಅಭಿಯಾನದಿಂದ ಮಂಗಳೂರು ಮಹಾನಗರ ಪಾಲಿಕೆ ಪ್ರಶಸ್ತಿ ಪಡೆಯುವಂತಾಗಿದೆ ಎಂದರು.

ಉದ್ಯಮಿ ರವೀಂದ್ರ ಪೈ ಮಾತನಾಡಿ, ಮಂಗಳೂರು ರಾಮಕೃಷ್ಣ ಮಠದ ಸೇವಾಕಾರ್ಯ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಅಮೃತ ಭವನ ಕಟ್ಟಡಕ್ಕೆ ನನ್ನ ತಂದೆ ದಯಾನಂದ ಪೈ ಅವರು ೨೫ ಲಕ್ಷ ರೂ. ನೆರವು ನೀಡುತ್ತಿದ್ದಾರೆ ಎಂದರು. ಗದಗ್ ಮಾಜಿ ಶಾಸಕ ಡಿ.ಆರ್. ಪಾಟೀಲ್ ಅತಿಥಿಯಾಗಿದ್ದರು.

ವಿಶೇಷ ಅಂಚೆ ಲಕೋಟೆ ಬಿಡುಗಡೆ: ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿ, ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು. ಗೌತಮಾನಂದಜಿ ಅವರ ಕೃತಿ ‘ಪಥದರ್ಶಿ’ ಬಿಡುಗಡೆಗೊಳಿಸಲಾಯಿತು. ರಾಮಕೃಷ್ಣ ಮಠಕ್ಕೆ ಜಾಗ ನೀಡಿದ ಸಾಹುಕಾರ್ ವೆಂಕಟೇಶ ಪೈ ಅವರ ಮೊಮ್ಮಗ ವೆಂಕಟೇಶ ಪೈ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಸ್ವಾಮಿ ಏಕಗಮ್ಯಾನಂದಜಿ ವಂದಿಸಿದರು. ಉಪನ್ಯಾಸಕಿ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here