ನಿವೃತ್ತ ದೈ.ಶಿ.ಶಿ ದಯಾನಂದ ರೈ ಕೋರ್ಮಂಡರವರಿಗೆ ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನಿಂದ ಅಭಿನಂದನೆ ಸನ್ಮಾನ

0

  •  ಸಾಧು, ಸಜ್ಜನ, ಶಿಸ್ತಿನ ಸಿಪಾಯಿ ದಯಾನಂದ ರೈಯವರು-ಚಂದ್ರಹಾಸ ಶೆಟ್ಟಿ

 

ಪುತ್ತೂರು: ಸೇವೆಯಿಂದ ನಿವೃತ್ತರಾದ ದಯಾನಂದ ರೈಯವರು ತನ್ನ ವೃತ್ತಿಜೀವನದಲ್ಲಿ ಅನೇಕ ವಿದ್ಯಾರ್ಥಿಗಳ ಪ್ರತಿಭೆಗೆ ನೀರೆರೆದು ಅವರನ್ನು ರಾಜ್ಯ, ರಾಷ್ಟ್ರಮಟ್ಟದತ್ತ ಬೆಳಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಿಜಕ್ಕೂ ದಯಾನಂದ ರೈಯವರೋರ್ವ ಸಾದು, ಸಜ್ಜನ ಹಾಗೂ ಶಿಸ್ತಿನ ಸಿಪಾಯಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಹೇಳಿದರು.|




ಶಿಕ್ಷಕ ಸೇವೆಯಿಂದ ನಿವೃತ್ತಗೊಂಡ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರೂ ಹಾಗೂ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ದಯಾನಂದ ರೈ ಕೋರ್ಮಂಡರವರಿಗೆ ಜೂ.೪ ರಂದು ಸಂಜೆ ದರ್ಬೆ ಬಳಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನಿಂದ ಹಮ್ಮಿಕೊಂಡ ಬೀಳ್ಕೊಡುಗೆ ಅಭಿನಂದನಾ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನಿಸಿ ಮಾತನಾಡಿದರು. ಫಿಲೋಮಿನಾ ಕಾಲೇಜಿನಲ್ಲಿ ನಾನು ಮತ್ತು ದಯಾನಂದ ರೈಯವರು ಒಂದು ತಿಂಗಳ ಬ್ಯಾಚ್‌ಮೇಟ್ ಆಗಿದ್ದವರು. ದಯಾನಂದ ರೈಯವರಿಗೆ ಯಾವುದಾದರೂ ಜವಾಬ್ದಾರಿ ನೀಡಿದರೆ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂಬುದಕ್ಕೆ ನಮ್ಮ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಂಸ್ಥೆಯಾಗಿದೆ. ಅವರ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಇಂದು ನಮ್ಮ ಸಂಸ್ಥೆ ಜಿಲ್ಲೆಯಲ್ಲಿಯೇ ಬಹಳ ಶಿಸ್ತುಬದ್ಧವಾಗಿ, ದೃಢತೆಯಿಂದ ನಡೆಸಿಕೊಂಡು ಬಂದಿರುವುದಾಗಿದೆ. ಶಿಕ್ಷಕರನ್ನು ಎಂದಿಗೂ ಮಾಜಿ ಶಿಕ್ಷಕ ಎಂದು ಕರೆಯುವುದಿಲ್ಲ. ಅವರನ್ನು ಜೀವನ ಪರ್ಯಂತ ಶಿಕ್ಷಕನೆಂದೇ ಸಮಾಜ ಗುರುತಿಸಲ್ಪಡುತ್ತದೆ. ದಯಾನಂದ ರೈಯವರು ಸದಾ ವಿದ್ಯಾರ್ಥಿಗಳೊಂದಿಗಿದ್ದು, ಇದೀಗ ನಿವೃತ್ತಿ ಅವರಿಗೆ ಬೇಸರ ಉಂಟುಮಾಡುವುದು ಸಹಜವಾಗಿದೆ. ದಯಾನಂದ ರೈಯವರ ಮುಂದಿನ ನಿವೃತ್ತಿ ಬದುಕು ಸುಖ-ನೆಮ್ಮದಿ ಹಾಗೂ ಆಯುರಾರೋಗ್ಯದಿಂದ ಕೂಡಿರಲಿ ಎಂದು ಹಾರೈಸುತ್ತೇನೆ ಎಂದರು.

ದಯಾನಂದ ರೈಯವರು ಅನೇಕ ಕ್ರೀಡಾ ಪ್ರತಿಭೆಗಳನ್ನು ಹುಟ್ಟು ಹಾಕಿದ್ದಾರೆ-ಈಶ್ವರ್ ಭಟ್:
ಬನ್ನೂರು ರೈತ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್‌ರವರು ಮಾತನಾಡಿ, ದಯಾನಂದ ರೈಯವರು ನನಗೆ ಚಂದ್ರಣ್ಣರವರಿಂದ ಪರಿಚಯವಾದವರು. ಸರಕಾರಿ ಹುದ್ದೆಯಲ್ಲಿದ್ದವರು ಒಂದು ದಿನ ನಿವೃತ್ತಿ ಪಡೆಯಲೇ ಬೇಕಾಗುತ್ತದೆ. ಸೇವೆಗೆ ಸೇರಿದಂದಿನಿಂದ ನಿವೃತ್ತಿಯಾಗುವ ತನಕ ನಾವು ಏನು ಒಳ್ಳೆಯ ಕೆಲಸ ಮಾಡಿದ್ದೇವೆ ಅದು ಮಾತ್ರ ನೆನಪಿನಲ್ಲಿ ಉಳಿಯುವಂತಾದುದಾಗಿದೆ. ದಯಾನಂದ ರೈಯವರು ತನ್ನ ವೃತ್ತಿ ಸಂದರ್ಭದಲ್ಲಿ ಅನೇಕ ಕ್ರೀಡಾ ಪ್ರತಿಭೆಗಳನ್ನು ಹುಟ್ಟು ಹಾಕಿದ್ದಾರೆ. ಆ ಮೂಲಕ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಅವರು ಭಾಜನರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸೇವೆ ಸಮಾಜಕ್ಕೆ ಹಾಗೂ ಯುವಪೀಳಿಗೆಗೆ ಸಿಗಲಿ ಎಂದು ಹೇಳಿ ಅವರ ನಿವೃತ್ತ ಜೀವನಕ್ಕೆ ಶುಭಹಾರೈಸಿದರು.

ದಯಾನಂದ ರೈಯವರು ಕ್ರೀಡಾರಂಗಕ್ಕೆ ದಾರಿದೀಪ ಎನಿಸಿದ್ದಾರೆ-ಎಲ್ಯಾಸ್ ಪಿಂಟೋ:
ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋರವರು ಮಾತನಾಡಿ, ದಯಾನಂದ ರೈಯವರು ತನ್ನ ಸ್ವಂತ ಕೈನಿಂದ ಹಣವನ್ನು ಖರ್ಚು ಮಾಡಿ ಹಳ್ಳಿಯಲ್ಲಿನ ಪ್ರತಿಭಾವಂತ ಕ್ರೀಡಾಪಟುಗಳನ್ನು ಹುಟ್ಟು ಹಾಕಿ ಕ್ರೀಡಾರಂಗಕ್ಕೆ ಅವರು ದಾರಿದೀಪ ಎನಿಸಿದ್ದಾರೆ ಮಾತ್ರವಲ್ಲದೆ ಅವರ ರಾಷ್ಟ್ರಮಟ್ಟದ ಆದರಣೀಯತೆಯನ್ನು ನಾವು ಇಂದು ಅನುಕರಣೆ ಮಾಡುತ್ತಿದ್ದೇವೆ. ಅಂತಹ ಮಹಾನುಭಾವ ದಯಾನಂದ ರೈಯವರಿಗೆ ನಿವೃತ್ತಿ ಎಂಬುದು ಇಂದು ಬಹಳ ತೃಪ್ತಿ ನೀಡಬಲ್ಲುದು. ಮುಂದಿನ ದಿನಗಳಲ್ಲಿ ದಯಾನಂದ ರೈಯವರು ಫಿಲೋಮಿನಾ ಕಾಲೇಜಿನ ಕ್ರೀಡಾಂಗಣಕ್ಕೆ ಆಗಮಿಸಿ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಮುಕ್ತ ಅವಕಾಶವಿದೆ ಎಂದು ಹೇಳಿ ಅವರ ನಿವೃತ್ತ ಬದುಕು ಹಸನಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಎಲ್ಲರನ್ನೂ ಆತ್ಮೀಯತೆಯಿಂದ, ಶಿಸ್ತಿನ ಸಿಪಾಯಿಯಂತೆ ಮುನ್ನೆಡೆಸುವ ಚಾಕಚಾಕ್ಯತೆ ಅವರಲ್ಲಿತ್ತು-ಪ್ರಕಾಶ್ ಡಿ’ಸೋಜ:
ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜರವರು ಮಾತನಾಡಿ, ದಯಾನಂದ ರೈಯವರಿಗೆ ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿ. ಅವರ ಗರಡಿಯಲ್ಲಿ ಕ್ರಿಕೆಟಿಗ ರಾಬಿನ್ ಉತ್ತಪ್ಪರವರಂತಹ ಐದಾರು ಕ್ರಿಕೆಟ್‌ಪಟುಗಳನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ. ಯಾವುದೇ ಕ್ರೀಡಾ ಕಾರ್ಯಕ್ರಮವಿರಲಿ, ಎಲ್ಲರನ್ನೂ ಆತ್ಮೀಯತೆಯಿಂದ ಶಿಸ್ತಿನ ಸಿಪಾಯಿಯಂತೆ ಕಾರ್ಯಕ್ರಮವನ್ನು ಮುನ್ನೆಡೆಸಿಕೊಂಡು ಹೋಗುವ ಚಾಕಚಾಕ್ಯತೆ ಅವರಲ್ಲಿದೆ. ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರೂ ದಯಾನಂದ ರೈಯವರು ಕಾರ್ಯಕ್ರಮಗಳಿಗೆ ಹಾಜರಾಗಿ ಎನ್ನುವಂತೆ ವೈಯಕ್ತಿಕ ಮೆಸೇಜ್‌ಗಳನ್ನು ಹಾಕುತ್ತಿದ್ದದು ಅವರ ಸ್ವಭಾವವಾಗಿದ್ದು ಅವರ ಮುಂದಿನ ನಿವೃತ್ತ ಜೀವನ ಯಶಸ್ವಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.

ದಯಾನಂದ ರೈಯವರು ಎಲ್ಲೆಡೆ ಹೋಗಲಿ ಅವರ ಶಿಷ್ಯಂದಿರು ಕಾಣ ಸಿಗುತ್ತಾರೆ-ಸುಧಾಕರ್ ರೈ:
ಮುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸುಧಾಕರ್ ರೈಯವರು ಮಾತನಾಡಿ, ನನಗೆ ಸಿಪಿಎಡ್, ಬಿಪಿಎಡ್ ಕೋರ್ಸ್ ಕಲಿಯಲು ದಯಾನಂದ ರೈಯವರು ಪ್ರೇರಣೆಯಾಗಿದ್ದವರು. ಕ್ರೀಡಾಕ್ಷೇತ್ರದಲ್ಲಿ ಅವರೋರ್ವ ಪರಿಣತ ಕ್ರೀಡಾ ತರಬೇತುದಾರರಾಗಿರುತ್ತಾರೆ. ಕ್ರೀಡಾಕ್ಷೇತ್ರದಲ್ಲಿ ‘ಗನ್ ಸ್ಟಾರ್ಟ್’ ಅನ್ನು ಪರಿಚಯಿಸಿದ್ದು ದಯಾನಂದ ರೈಯವರು. ಜಿಲ್ಲೆಯಲ್ಲಿನ ನಾಲ್ಕು ಜನ ಸ್ಟಾರ್ಟರ್‌ಗಳ ಪೈಕಿ ದಯಾನಂದ ರೈಯವರೋರ್ವ ಅತ್ತ್ಯುತ್ತಮ ಸ್ಟಾರ್ಟರ್ ಆಗಿರುತ್ತಾರೆ. ದಯಾನಂದ ರೈಯವರು ಎಲ್ಲೆಡೆ ಹೋಗಲಿ ಅವರ ಶಿಷ್ಯಂದಿರು ಕಾಣ ಸಿಗುತ್ತಾರೆ ಎನ್ನುವುದು ದಯಾನಂದ ರೈಯವರ ವಿಶೇಷತೆಯಾಗಿದೆ. ಮುಂದಿನ ದಿನಗಳಲ್ಲಿ ದಯಾನಂದ ರೈಯವರ ನಿವೃತ್ತ ಬದುಕು ಆಯುರಾರೋಗ್ಯದಿಂದ ಕೂಡಿರಲಿ ಎಂದು ಹಾರೈಸುತ್ತೇವೆ ಎಂದರು.

ದಯಾನಂದ ರೈಯವರ ಶಿಷ್ಯಂದಿರು ಸಮಾಜದಲ್ಲಿ ಉತ್ತಮ ಬದುಕನ್ನು ಕಂಡುಕೊಂಡಿದ್ದಾರೆ-ಸತ್ಯನಾರಾಯಣ ರೈ:
ಪೆರ್ನೆ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸತ್ಯನಾರಾಯಣ ರೈಯವರು ಮಾತನಾಡಿ, ರನ್ನಿಂಗ್ ರೇಸ್ ಹಾಗೂ ಕ್ರಿಕೆಟ್ ದಯಾನಂದ ರೈಯವರದ್ದು ಅತ್ತ್ಯುತ್ತಮ ಕ್ರೀಡೆಯಾಗಿದೆ. ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟರ್ ಆಗಿ ಆಗಮಿಸಿ ಕೊನೆಯವರಾಗಿ ಔಟಾಗುವುದು ಅವರ ವಿಶೇಷತೆಯಾಗಿದೆ. ದಯಾನಂದ ರೈಯವರ ಗರಡಿಯಲ್ಲಿ ಪಳಗಿದ ಶಿಷ್ಯಂದಿರು ಇಂದು ಸಮಾಜದಲ್ಲಿ ಉತ್ತಮ ಬದುಕನ್ನು ಕಂಡುಕೊಂಡಿದ್ದಾರೆ. ಕ್ರೀಡಾ ತರಬೇತಿಗೆ ಸರಿಯಾಗಿ ಆಗಮಿಸದ ಕ್ರೀಡಾಪಟುಗಳನ್ನು ತರಬೇತಿಗೆ ಬಿಡುತ್ತಿರಲಿಲ್ಲ. ಸರಿಯಾಗಿ ತರಬೇತಿಗೆ ಬಂದ್ರೆ ಮಾತ್ರ ಸ್ಪಷ್ಟವಾದ ಫಲಿತಾಂಶ ದಕ್ಕುವುದು ಎಂದು ದಯಾನಂದ ರೈಯವರ ದೃಢ ನಿರ್ಧಾರವಾಗಿತ್ತು ಎಂದು ಹೇಳಿ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ತಾನು ಈ ಹಂತಕ್ಕೆ ಬರಲು ದಯಾನಂದ ರೈ ಸರ್ ಕಾರಣರಾಗಿದ್ದಾರೆ-ರಾಧಾಕೃಷ್ಣ:
ದಯಾನಂದ ರೈಯವರ ಶಿಷ್ಯ, ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಧಾಕೃಷ್ಣರವರು ಮಾತನಾಡಿ, ತಾನು ಈ ಹಂತಕ್ಕೆ ಬರಲು ದಯಾನಂದ ರೈ ಸರ್ ಕಾರಣರಾಗಿದ್ದಾರೆ. ಅವರ ಗರಡಿಯಲ್ಲಿ ಸತತ ಮೂರು ವರ್ಷ ನಮ್ಮ ರಿಲೇ ತಂಡ ಜಿಲ್ಲೆಯಲ್ಲಿ ಚಾಂಪಿಯನ್ ಆಗಿತ್ತು. ಬೆಳಿಗ್ಗೆ ಮತ್ತು ಸಂಜೆ ನಿರಂತರ ತರಬೇತಿ ನೀಡುತ್ತಾ ನಮ್ಮನ್ನು ಪ್ರೋತ್ಸಾಹಿಸಿ ಕ್ರೀಡಾಪಟುಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೊಂಡೊಯ್ದಿದ್ದಾರೆ ದಯಾನಂದ ರೈಯವರು. ಅವರ ಮುಂದಿನ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಹೇಳಿ ಶುಭ ಹಾರೈಸಿದರು.

ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ಸುರೇಂದ್ರ ರೈ, ರೆಫ್ರೀ ಬೋರ್ಡ್‌ನ ಅಧ್ಯಕ್ಷ ಆಸಿಫ್ ತಂಬುತ್ತಡ್ಕ, ಉದ್ಯಮಿ ಶಿವರಾಂ ಆಳ್ವ, ಶಶಿಕಿರಣ್ ರೈ ನೂಜಿಬೈಲು, ಗಂಗಾಧರ ಶೆಟ್ಟಿ ಕೈಕಾರ, ಹಬೀಬ್ ಮಾಣಿ, ರಾಧಾಕೃಷ್ಣ ರೈ ಪಟ್ಟೆ, ನವನೀತ್ ಬಜಾಜ್, ಬಿಪಿನ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಬನ್ನೂರು,  ಕೋಶಾಧಿಕಾರಿ ರಝಾಕ್ ಬಿ.ಎಚ್, ವಿಕ್ರಂ ಶೆಟ್ಟಿ ಅಂತರ, ಮಂಜುನಾಥ ಗೌಡ ತೆಂಕಿಲ, ಸನ್ಮಿತ್ ರೈ, ಮಹೇಶ್ ರೈರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ರಫೀಕ್ ಎಂ.ಕೆ ವಂದಿಸಿದರು. ವಿವೇಕಾನಂದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಗ್ರಾಮೀಣ ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸುವ ಆಶಯ ಹೊಂದಿದ್ದೆ…
ಬಾಲ್ಯದಲ್ಲಿ ನಾನು ಕ್ರಿಕೆಟ್‌ನೊಂದಿಗೆ ವಾಲಿಬಾಲ್‌ನಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದೆ. ಅಲೋಶಿಯಸ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ ಫಿಲೋಮಿನಾ ಕಾಲೇಜಿಗೆ ಬಂದಾಗ ಫಿಲೋಮಿನಾದಲ್ಲಿ ಪ್ರಥಮ ಪದವಿಯಲ್ಲಿಯೇ ಉತ್ತಮ ಕ್ರೀಡಾಪಟುವಾಗಿ ಮೂಡಿ ಬಂದಿದ್ದೆ. ಬಿಪಿಎಡ್ ಶಿಕ್ಷಣದಲ್ಲಿ ಮೂರನೇ ರ‍್ಯಾಂಕ್ ಗಳಿಸಿಕೊಂಡಿರುವೆ. ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳನ್ನು ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸಬೇಕು ಎನ್ನುವ ಆದಮ್ಯ ಆಶಯವನ್ನು ತಾನು ಹೊಂದಿದ್ದೆ. ಮಕ್ಕಳ ಕ್ರೀಡಾ ಪ್ರತಿಭೆಗೆ ವರ್ಷಕ್ಕೆ ೪೦-೫೦ಸಾವಿರ ಖರ್ಚು ಮಾಡಿದ್ದರೂ ಅದರಲ್ಲಿ ನನಗೆ ತೃಪ್ತಿಯಿದೆ. ಅದರಲ್ಲೂ ಇಂದು ತನ್ನ ಅನೇಕ ಶಿಷ್ಯಂದಿರು ದೈಹಿಕ ಶಿಕ್ಷಣ ಶಿಕ್ಷಕರಾಗಿರುವುದು, ಪೊಲೀಸ್ ಸೇವೆಯಲ್ಲಿರುವುದು ಖುಶಿ ಎನಿಸಿದೆ. ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ, ಸತ್ಯ, ಧರ್ಮದಲ್ಲಿ ದುಡಿದಿರುತ್ತೇನೆ ಮತ್ತು ಈ ಸಂಸ್ಥೆಯ ಪ್ರತಿಯೋರ್ವರೂ ನನಗೆ ಸಹಾಯ ನೀಡಿದ್ದಾರೆ ನಿಜಕ್ಕೂ ನಾನು ಕೃತಜ್ಞತೆ ಅರ್ಪಿಸಬೇಕಾಗಿದೆ. -ದಯಾನಂದ ರೈ ಕೋರ್ಮಂಡ, ಸನ್ಮಾನಿತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು

LEAVE A REPLY

Please enter your comment!
Please enter your name here