ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಪ್ರತಿ ತಿಂಗಳ ಷಷ್ಠಿಗೆ ಸಾಮೂಹಿಕ ಆಶ್ಲೇಷಾ ಬಲಿ ಪೂಜೆಗೆ ಚಾಲನೆ

0

ಪುತ್ತೂರು; ನಾಗದೋಷ ಪರಿಹಾರಕ್ಕಾಗಿ ಭಕ್ತಾದಿಗಳಿಗೆ ಕಡಿಮೆ ಖರ್ಚಿನಲ್ಲಿ ಆಶ್ಲೇಷ ಬಲಿ ಪೂಜಾ ಸೇವೆ ನಡೆಸಲು ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಪ್ರತಿ ತಿಂಗಳ ಷಷ್ಠಿಯ ದಿನ ವಿಶೇಷವಾಗಿ ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯಲಿದ್ದು ಜೂ.5ರಂದು ಇದಕ್ಕೆ ಚಾಲನೆ ದೊರೆಯಿತು.



ಸುಬ್ರಹ್ಮಣ್ಯನ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಇಂತಹ ಸೇವಾ ಕಾರ್ಯಗಳು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ನಡೆಯುತ್ತಿದೆ. ಅರ್ಚಕ ನಾಗೇಶ್ ಕುದ್ರೆತ್ತಾಯರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿತು. ಪೂಜಾ ಪ್ರಾರಂಭದಲ್ಲಿ ಸಾಮೂಹಿಕ ಪ್ರಾರ್ಥನೆ, ಆಶ್ಲೇಷ ಬಲಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಸಾಮೂಹಿಕ ಆಶ್ಲೇಷ ಬಲಿ ಪೂಜಾ ಸೇವೆಗೆ ಪ್ರಥಮ ದಿನವೇ ಭಕ್ತಾದಿಗಳಿಂದ ಬಹಳಷ್ಟು ಬೇಡಿಕೆ ವ್ಯಕ್ತವಾಗಿದ್ದು ದೂರದ ಮಂಗಳೂರಿನ ಭಕ್ತರು ಸೇರಿದಂತೆ ಸುಮಾರು ೨೫ ಮಂದಿ ಭಕ್ತರು ಆಶ್ಲೇಷ ಬಲಿ ಪೂಜಾ ಸೇವೆಗಳನ್ನು ನೆರವೇರಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರವಿ ಶೆಟ್ಟಿ ನೇಸರ ಕಂಪ, ಸದಸ್ಯರಾದ ಸದಾಶಿವ ಶೆಟ್ಟಿ ಪಟ್ಟೆ, ರಾಮಣ್ಣ ಗೌಡ ತೌಡಿಂಜ, ಭವಾನಿ ರಮೇಶ್ ಗೌಡ, ಉತ್ಸವ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಭಾಸ್ಕರ್ ಆಚಾರ್ ಹಿಂದಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳಿಧರ ಭಟ್ ಬಂಗಾರಡ್ಕ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಬಾಲಕೃಷ್ಣ ಕಣ್ಣಾರಾಯ, ಭಜನಾ ಮಂಡಳಿ ಅಧ್ಯಕ್ಷ ಧನಂಜಯ ಕುಲಾಲ್, ಸುಧೀರ್ ಶೆಟ್ಟಿ ನೇಸರ ಕಂಪ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನವು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಷ್ಟೇ ಪ್ರಾಮುಖ್ಯತೆ ಪಡೆದಿದ್ದು, ಇಲ್ಲಿ ನೆಲೆಯಾಗಿರುವ ಶ್ರೀ ಸುಬ್ರಾಯ ದೇವರು ಅತ್ಯಂತ ಕಾರಣಿಕ ಮಹಿಮೆಯನ್ನು ಹೊಂದಿದೆ. ಹೀಗಾಗಿ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸಬೇಕಾದ ಸೇವೆಗಳು ಹಾಗೂ ನಾಗದೋಷಗಳಿಗೆ ಸಂಬಂಧಿಸಿದ ಪರಿಹಾರಕ್ಕಾಗಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗತಂಬಿಲ ಸೇವೆಗಳನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಲ್ಲಿಸುವ ಸೇವೆಯಷ್ಟೇ ಶಕ್ತಿಶಾಲಿ ಹಾಗೂ ಪ್ರಾಮುಖ್ಯತೆಯನ್ನು ಕುಕ್ಕಿನಡ್ಕ ಶ್ರೀ ಸುಬ್ರಾಯ ಸಾನಿಧ್ಯವು ಹೊಂದಿದೆ ಎನ್ನುವುದು ದೇವಸ್ಥಾನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದ್ದು ಇದಕ್ಕೆ ಪೂರಕವಾಗಿ ವ್ಯವಸ್ಥಾಪನಾ ಸಮಿತಿಯು ಪ್ರತಿ ತಿಂಗಳ ಷಷ್ಠಿಯ ದಿನ ಸಾಮೂಹಿಕ ಆಶ್ಲೇಷ ಬಲಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಕ್ತಾದಿಗಳಿಗೆ ಕಡಿಮೆ ಖರ್ಚಿನಲ್ಲಿ ಆಶ್ಲೇಷ ಬಲಿ ಪೂಜೆ ನಡೆಸಲು ಅವಕಾಶ ಕಲ್ಪಿಸಲಾಗುತ್ತಿದ್ದು ರೂ.೫೦೦ ಪಾವತಿಸಿ, ದೇವಸ್ಥಾನದ ಕಚೇರಿಯಿಂದ ರಶೀದಿ ಪಡೆದುಕೊಳ್ಳಬೇಕು. ಬೆಳಿಗ್ಗೆ ೯.೩೦ ಕ್ಕೆ ಪ್ರಾರಂಭಗೊಂಡು ಮಧ್ಯಾಹ್ನ ೧೨ ಗಂಟೆಯ ತನಕ ನಡೆಯಲಿದೆ. ಸೇವಾದಾರರಿಗೆ ಸಂಕಲ್ಪ ನಡೆಯಲಿದೆ. ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ಕಚೇರಿ ಅಥವಾ ದೂರವಾಣಿ 9353507991 ನಂಬರನ್ನು ಸಂಪರ್ಕಿಸುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here