ಕೋಡಿಂಬಾಡಿಯ ಪರನೀರು ರಸ್ತೆ ವಿವಾದ: ಎ.ಸಿ. ಭೇಟಿ, ಸರ್ವೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ತಹಶೀಲ್ದಾರ್ ಗೆ ಸೂಚನೆ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಪರನೀರು ಎಂಬಲ್ಲಿಯ 14 ಕುಟುಂಬಗಳು ಎದುರಿಸುತ್ತಿರುವ ರಸ್ತೆ ಸಮಸ್ಯೆಯನ್ನು ಪರಸ್ಪರ ಸೌಹಾರ್ದಯುತ ಇತ್ಯರ್ಥ ಪಡಿಸಿಕೊಳ್ಳಬೇಕು, ಇಲ್ಲದಿದ್ದಲ್ಲಿ ತಹಶೀಲ್ದಾರ್ ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದ್ದಾರೆ.
ಕಳೆದ 23 ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ರಸ್ತೆ ನೀಡಬೇಕೆಂದು ನಿರಂತರವಾಗಿ ಬೇಡಿಕೆ ಮುಂದಿಟ್ಟಿರುವ ಪರನೀರು ನಿವಾಸಿಗಳ ಬೇಡಿಕೆಗೆ ಸ್ಪಂದಿಸಿ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಜೂನ್ 10ರಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದರು.

ಘಟನೆಯ ಹಿನ್ನೆಲೆ:
ಕೋಡಿಂಬಾಡಿ ಗ್ರಾಮದ ಪರನೀರು ಎಂಬಲ್ಲಿ ಸುಮಾರು ೧೪ ಕುಟುಂಬಗಳ ಜಮೀನು ಹಾಗೂ ತೋಟ ಇದೆ. ಅದರಲ್ಲಿ ನಾಲ್ಕು ಕುಟುಂಬಗಳು ಮನೆ ನಿರ್ಮಿಸಿ ವಾಸಿಸುತ್ತಿದೆ. ಇಲ್ಲಿ ವಾಹನ ಸಂಚರಿಸಲು ರಸ್ತೆಯ ವ್ಯವಸ್ಥೆ ಇಲ್ಲ. ಹೀಗಾಗಿ ಕೋಡಿಂಬಾಡಿ ಗ್ರಾಮದ ಡೆಕ್ಕಾಜೆಯಿಂದ ಪರನೀರುವರೆಗೆ ಸರಕಾರಿ ಜಮೀನಿನಲ್ಲಿ ರಸ್ತೆಗೆ ಜಾಗ ನೀಡಬೇಕು ಎಂದು ಆಗ್ರಹಿಸಿ ಕಳೆದ ಹಲವಾರು ವರ್ಷಗಳಿಂದ ಪರನೀರು ನಿವಾಸಿಗಳು ಸರಕಾರದ ವಿವಿಧ ಇಲಾಖೆಗಳಿಗೆ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ. ೧೯೯೯ರಿಂದ ಈ ವಿವಾದ ಚಾಲ್ತಿಯಲ್ಲಿದೆ. ವಿವಾದಕ್ಕೆ ಸಂಬಂಧಿಸಿ ನ್ಯಾಯಾಲಯದ ಮೆಟ್ಟಿಲೇರಿ ನಮ್ಮ ಪರ ಆದೇಶ ಆಗಿದ್ದರೂ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಪರನೀರು ನಿವಾಸಿಗಳು ಹಲವು ಬಾರಿ ಸಂಬಂಧಿಸಿದವರ ಗಮನ ಸೆಳೆದಿದ್ದರು. ಮೂಲಭೂತ ಸೌಕರ್ಯಕ್ಕಾಗಿ ಇಷ್ಟು ಪ್ರಯತ್ನಿಸಿದರೂ ನಮಗೆ ನ್ಯಾಯ ದೊರಕುತ್ತಿಲ್ಲ ಎಂದು ಪರನೀರು ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದರಲ್ಲದೆ ಕಳೆದ ಬಾರಿ ಚುನಾವಣಾ ಬಹಿಷ್ಕಾರಕ್ಕೂ ಮುಂದಾಗಿದ್ದರು. ಇತ್ತೀಚೆಗೆ ಹೈಕೋರ್ಟ್ ನಮ್ಮ ಪರ ತೀರ್ಪು ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪರನೀರು ನಿವಾಸಿಗಳು ಜಿಲ್ಲಾಧಿಕಾರಿಯವರ ಗಮನ ಸೆಳೆದಿದ್ದರು. ಈ ಮಧ್ಯೆ, ಈ ಕುಟುಂಬಗಳು ಬೇಡಿಕೆ ಸಲ್ಲಿಸಿರುವ ರಸ್ತೆ ತನ್ನ ಕುಮ್ಕಿ ಜಮೀನು‌ ಆಗಿದೆ ಹಾಗೂ ಆದರಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ಧೇನೆ ಎಂದು ಡೆಕ್ಕಾಜೆ ನಿವಾಸಿ ವೀರಪ್ಪ ಪೂಜಾರಿ ಆಕ್ಷೇಪಣೆ ಸಲ್ಲಿಸಿದ್ದರು. ಹೀಗಾಗಿ ಈ ರಸ್ತೆ ಬೇಡಿಕೆ ನೆನೆಗುದಿಗೆ ಬಿದ್ದಿದೆ. ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಜಾಗದ ಅಳತೆ ಮಾಡಲು ಇತ್ತೀಚೆಗೆ ತಹಶೀಲ್ದಾರ್ ಸಿದ್ಧತೆ ನಡೆಸಿದ್ದರಾದರೂ ಕೊನೇಯ ಕ್ಷಣದಲ್ಲಿ ಸರ್ವೆ ಮಾಡುವುದನ್ನು ಸ್ಥಗಿತಗೊಳಿಸಿದ್ದರು. ರಾಜಕೀಯ ಒತ್ತಡದಿಂದಾಗಿ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಬಳಿಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಯವರನ್ನು ಭೇಟಿ ಮಾಡಿದ್ದ ಪರನೀರು ಕುಟುಂಬಸ್ಥರು ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡಿದ್ದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಸಹಾಯಕ ಆಯುಕ್ತರಿಗೆ ಸೂಚಿಸಿದ್ದರು.

ಈ ನಿಟ್ಟಿನಲ್ಲಿ ಸಹಾಯಕ ಆಯುಕ್ತ ಗಿರೀಶ್ ನಂದನ್ ಮತ್ತು ತಹಸೀಲ್ದಾರ್ ರಮೇಶ್ ಬಾಬುರವರು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರಸ್ತೆಗೆ ಜಾಗ ನೀಡಲು ಡೆಕ್ಕಾಜೆ ವೀರಪ್ಪ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು. ಸಹಾಯಕ ಆಯುಕ್ತರು 500 ಮೀಟರ್ ದೂರ ಕ್ರಮಿಸಿ ಜಾಗ ಪರಿಶೀಲನೆ ನಡೆಸಿದರು. ಬಳಿಕ ಅವರು ಸದ್ಯ ಈ ರಸ್ತೆಗೆ ಸಂಬಂಧಪಟ್ಟ ಕಡತ ತಹಶೀಲ್ದಾರ್ ಕಚೇರಿಯಲ್ಲಿದೆ, ಅವರು ಅದಕ್ಕೆ ಸಂಬಂಧಿಸಿ ಕಾನೂನಿನಂತೆ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಅಲ್ಲದೆ, ರಸ್ತೆಗೆ ಜಾಗ ದೊರಕಿಸಿಕೊಡುವ ಬಗ್ಗೆ ಸರ್ವೆ ನಡೆಸುವಂತೆಯೂ ತಹಶೀಲ್ದಾರ್ ಗೆ ಸೂಚಿಸಿದರು. ಈ ಜಮೀನು ಮಾತ್ರವಲ್ಲದೇ ಈ ಕುಟುಂಬಗಳಿಗೆ ರಸ್ತೆ ನಿರ್ಮಿಸಲು ಬೇರೆ ಕಡೆಯಿಂದ ಆಯ್ಕೆಗಳಿದ್ದರೆ ಅದನ್ನು ಪರಿಶೀಲನೆ ನಡೆಸಬೇಕು. ಅಲ್ಲಿ ಆ ಜಾಗಕ್ಕೆ ಸಂಬಂಧಪಟ್ಟವರ ಒಪ್ಪಿಗೆ ಪಡೆದು ರಸ್ತೆಗೆ ಅಗತ್ಯ ಜಾಗ ಗುರುತು ಮಾಡಿ ಕೊಡಬೇಕು ಎಂದು ತಹಶೀಲ್ದಾರ್ ರಮೇಶ್ ಬಾಬುರವರಿಗೆ ಸಹಾಯಕ ಆಯುಕ್ತರು ಸೂಚಿಸಿದರು.

ರಸ್ತೆಗಾಗಿ ಮನವಿ ಸಲ್ಲಿಸಿದ ಹಾಗೂ ರಸ್ತೆಗೆ ಆಕ್ಷೇಪಣೆ ಸಲ್ಲಿಸಿದವರಿಗೆ ಹಿತವಚನ ಹೇಳಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಇಂತಹ ಸಣ್ಣ ತಕರಾರುಗಳನ್ನು ನಿಮ್ಮ ನಿಮ್ಮಲ್ಲೇ ಮುಗಿಸಬಹುದು. ಕೋರ್ಟು ಕಟ್ಲೆ ಅಂತಾ ಹೋಗಿ ಸಮಯ ಹಾಗೂ ಹಣ ಹಾಳು ಮಾಡಬೇಡಿ ಎಂದು ಹೇಳಿದರಲ್ಲದೆ ೧೦ ದಿವಸದೊಳಗೆ ತಮ್ಮ ತಮ್ಮಲ್ಲೇ ವಿವಾದ ಇತ್ಯರ್ಥಪಡಿಸಿಕೊಳ್ಳಿ. ಇಲ್ಲದೆ ಹೋದರೆ ಬಳಿಕ ತಹಶೀಲ್ದಾರ್ ಕಾನೂನಿನ ಅನ್ವಯ ಏನು ಮಾಡಬೇಕು ಅದನ್ನು ಮಾಡುತ್ತಾರೆ ಎಂದು ತಿಳಿಸಿದರು.

ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಗ್ರಾಮಕರಣಿಕರಾದ ಶರಣ್ಯ, ರೈತ ಸಂಘದ ಮುಖಂಡ ರೂಪೇಶ್ ರೈ ಅಲಿಮಾರ, ಗ್ರಾ. ಪಂ ಸದಸ್ಯರುಗಳಾದ ಜಯಪ್ರಕಾಶ್ ಬದಿನಾರು, ಜಗನ್ನಾಥ ಶೆಟ್ಟಿ ನಡುಮನೆ, ಗ್ರಾ. ಪಂ. ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಸ್ಥಳೀಯ ನಿವಾಸಿಗಳಾದ ಪಧ್ಮಪ್ಪ ಪೂಜಾರಿ, ಪಧ್ಮನಾಭ ಆಚಾರ್ಯ, ಶೀನಪ್ಪ ಪೂಜಾರಿ, ಶಾಶ್ವತ್ ಸಾಲಿಯಾನ್, ವೀರಪ್ಪ ಪೂಜಾರಿ ಡೆಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here