ಜನಪ್ರತಿನಿಧಿಗಳೇ, ಅಧಿಕಾರಿಗಳೇ ಊರನ್ನು ಲಂಚ ಭ್ರಷ್ಟಾಚಾರ ಮುಕ್ತ ಮಾಡಿ-ಊರಿನ, ರಾಜ್ಯದ, ದೇಶದ, ಜಗತ್ತಿನ ಭೂಪಟದಲ್ಲಿ ರಾರಾಜಿಸುವಂತೆ ಮಾಡಿರಿ

0

  • ಮಕ್ಕಳ ಉತ್ತಮ ಭವಿಷ್ಯಕ್ಕೆ, ಊರಿನ ಜನರ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿರಿ

ನಮ್ಮ ಊರಿನಲ್ಲಿ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು ಲಂಚ, ಭ್ರಷ್ಟಾಚಾರ ರಹಿತರಾಗಿದ್ದಾರೆ, ಉತ್ತಮ ಸೇವೆ ನೀಡುತ್ತಿದ್ದಾರೆ. ಜನರು ಅವರನ್ನು ಗುರುತಿಸಿದ್ದಾರೆ. ಅವರ ಫೊಟೋ ಸಹಿತ ಹೆಸರು ಸುದ್ದಿ ಪತ್ರಿಕೆಯಲ್ಲಿ ಬರುತ್ತಿದೆ ಎಂದು ತಿಳಿಸಲು ಸಂತೋಷ ಪಡುತ್ತಿದ್ದೇನೆ. ಅನಿವಾರ್ಯ ಕಾರಣಗಳಿಂದ ಅಥವಾ ವ್ಯವಸ್ಥೆಯ ಒತ್ತಡಕ್ಕೆ ಒಳಗಾಗಿ ಅಥವಾ ಹಣದ ಆಸೆಗೆ ಬಿದ್ದು ಕೆಲವರು ಲಂಚ, ಭ್ರಷ್ಟಾಚಾರದ ವ್ಯಸನಕ್ಕೆ, ಜಾಲಕ್ಕೆ ತುತ್ತಾಗಿದ್ದಾರೆ. ಆ ಮೂಲಕ ಜನರ ಸುಲಿಗೆಗೆ, ಕಣ್ಣೀರಿಗೆ ಶಾಪಕ್ಕೆ ಕಾರಣರಾಗಿದ್ದಾರೆ. ಊರಿನ ಅಭಿವೃದ್ಧಿಗೆ ಕಂಟಕವಾಗಿ ನಾಶಕ್ಕೂ ಕಾರಣರಾಗುತ್ತಿದ್ದಾರೆ. ಅಂತಹ ಅಧಿಕಾರಿಗಳೇ, ಜನಪ್ರತಿನಿಧಿಗಳೇ ನೀವು ಲಂಚ, ಭ್ರಷ್ಟಾಚಾರ ಮಾಡುವುದು ನಿಲ್ಲಿಸದಿದ್ದರೆ ಜನರೇ ಎಚ್ಚೆತ್ತು ಎರಡನೇ ಸ್ವಾತಂತ್ರ್ಯ ಹೋರಾಟ ಮಾಡಿ (ಲಂಚದ ಭಿಕ್ಷೆಯ ಡಬ್ಬಿ ಇರಿಸಿ) ನಿಮ್ಮನ್ನು ಊರಿನಿಂದಲೇ ಬಹಿಷ್ಕರಿಸಿ ಜನತೆಯನ್ನು, ಊರನ್ನು ರಕ್ಷಿಸಬೇಕಾಗುವ ಪರಿಸ್ಥಿತಿ ಬರಬಹುದು. ನೀವು ಲಂಚ ರಹಿತವಾಗಿ ಉತ್ತಮ ಕೆಲಸ ಮಾಡಿದರೆ ಊರು ಸಮೃದ್ಧಿಯಾಗಿ ರಾಮರಾಜ್ಯವಾಗುವುದು ಖಂಡಿತ. ಯಾಕೆಂದರೆ ಇಂದು ಸರಕಾರದ ಅನುದಾನದ ಅನುಷ್ಠಾನಕ್ಕೆ ಕಾಯಬೇಕಾಗಿಲ್ಲ, ನಮ್ಮೂರು ಲಂಚ, ಭ್ರಷ್ಟಾಚಾರ ಮುಕ್ತವಾದರೆ ಊರಿನ ಜನರು ಸಮಸ್ಯೆಗಳ ಪರಿಹಾರಕ್ಕೆ, ಅಭಿವೃದ್ಧಿಗೆ ನಿಮ್ಮೊಂದಿಗೆ ಕೈ ಜೋಡಿಸಲಿದ್ದಾರೆ. ಊರಿನಲ್ಲಿರುವವರು ಮಾತ್ರವಲ್ಲ ಜಗತ್ತಿನಾದ್ಯಂತ ಇರುವ, ಪರವೂರಿನಲ್ಲಿರುವ ನಮ್ಮ ಊರಿನವರು ಊರಿನ ಅಭಿವೃದ್ಧಿಗೆ ಕಾರ್ಯಕ್ಕೆ ಸಹಾಯ ಮತ್ತು ಕೊಡುಗೆ ನೀಡಲಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿರುವ ದ.ಕ., ಉಡುಪಿ ಜಿಲ್ಲೆಯವರು ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಸುದ್ದಿ ಮಾಹಿತಿ ಟ್ರಸ್ಟ್‌ನ ನೇತೃತ್ವದಲ್ಲಿ ಏರ್ಪಡಿಸಿದ `ನಮ್ಮೂರು ನಮ್ಮ ಹೆಮ್ಮೆ’ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿರುವ ನಮ್ಮೂರಿನವರು ಊರಿನ ಅಭಿವೃದ್ಧಿಗೆ ಶ್ರಮ ಪಡುವುದಾಗಿ, ಸಹಾಯ ಮತ್ತು ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ. ಆ ಬಗ್ಗೆ ಸರಕಾರ ಮತ್ತು ಸರಕಾರೇತರ, ಖಾಸಗಿ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ಬಗ್ಗೆಯೂ ಚಿಂತನೆ, ಚರ್ಚೆ ನಡೆಸಿದ್ದಾರೆ. ಅದಕ್ಕಾಗಿ ದೆಹಲಿಯಲ್ಲಿರುವ ನಮ್ಮ ಜಿಲ್ಲೆಗಳ ಪ್ರತಿ ತಾಲೂಕಿನ ಜನರನ್ನು ಪ್ರತಿನಿಧಿಗಳನ್ನಾಗಿ ಮಾಡಿ ಅಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದರೆ ಅಲ್ಲಿರುವ ಎಲ್ಲರ ಮನಸ್ಸಿನಲ್ಲಿರುವ ಚಿಂತೆ ಲಂಚ, ಭ್ರಷ್ಟಾಚಾರದ್ದೇ ಆಗಿದೆ. ಈಗಿನ ೪೦% ಮೇಲ್ಪಟ್ಟ ಕಮಿಷನ್ ವ್ಯವಹಾರ ಮತ್ತು ದಂಧೆಯಲ್ಲಿ ತಮ್ಮ ಪ್ರಯತ್ನ, ಶ್ರಮ, ಹಣ ಹಾಳಾಗಬಾರದು, ಭ್ರಷ್ಟಾಚಾರಿಗಳ ಪಾಲಾಗಬಾರದು ಎಂಬ ಕಳಕಳಿ ಅವರೆಲ್ಲರಲ್ಲಿದೆ. ಅದಕ್ಕಾಗಿ ಊರಿನ ಜನರು ತೊಡಗಿಸಿಕೊಳ್ಳುವ, ಭಾಗವಹಿಸುವ ಮತ್ತು ಬಯಸುವ ಲಂಚ, ಭ್ರಷ್ಟಾಚಾರ ರಹಿತ ಯೋಜನೆಗಳಿಗೆ ಅವರು ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಮುಂದಕ್ಕೆ ಆ ಬಗ್ಗೆ ದೆಹಲಿಯಲ್ಲಿರುವ ದ.ಕ. ಜಿಲ್ಲೆಯ ಎಲ್ಲರನ್ನು ಕರೆದು ಸಭೆ ನಡೆಸಿ, ಚರ್ಚಿಸುವುದಾಗಿ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ವಿಚಾರವನ್ನು ಬೆಂಗಳೂರಿನಲ್ಲಿರುವ ನಮ್ಮ ಸುಳ್ಯದವರಾದ ಚೆಯರ್‌ಮೆನ್ ಎಮಿರಿಟಸ್ ಆಂಡ್ ಚೀಫ್ ಮೆಂಟರ್ ಪಿ.ಆರ್.ಸಿ.ಐ. ಇಂಡಿಯಾದ ಎಂ.ಬಿ. ಜಯರಾಮ್‌ರವರಲ್ಲಿ ತಿಳಿಸಿ ಅಂತಹುದೇ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಇಟ್ಟುಕೊಳ್ಳುವ ಬಗ್ಗೆ ಪ್ರಸ್ತಾಪಿಸಿದಾಗ ಅವರು ಇದಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಇದೇ ಜೂನ್ ೧೮ ಶನಿವಾರದಂದು ಬೆಂಗಳೂರಿನಲ್ಲಿರುವ ದ.ಕ., ಉಡುಪಿ ಜಿಲ್ಲೆಯ ಪ್ರಮುಖರ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಅವರು ಕೂಡ ನಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತವಾಗಿರಬೇಕು. ಹಾಗಿದ್ದರೆ ಮಾತ್ರ ಯಾವುದೇ ಕಾರ್ಯ, ಯೋಜನೆ ಯಶಸ್ವಿಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪರವೂರಿನಲ್ಲಿರುವವರು ತಮ್ಮ ತಮ್ಮ ಊರಿನ ಅಭಿವೃದ್ಧಿಗೆ ಕೊಡುಗೆ ನೀಡಲು ಬಯಸುತ್ತಾರೆ ಎಂಬುವುದಕ್ಕೆ ಹಲವಾರು ಉದಾಹರಣೆಗಳಿವೆ. ಇತ್ತೀಚೆಗೆ ಅಬುಧಾಬಿಯಲ್ಲಿರುವ ಜಯರಾಮ ರೈ ಎಂಬ ಮಿತ್ರರು ಪುತ್ತೂರಿನ ಬಂಟರಭವನದ ಯೋಜನೆಗೆ ೧೦ ಲಕ್ಷ ರೂ. ದೇಣಿಗೆ ನೀಡಿದ್ದು ಅದಕ್ಕೆ ಉತ್ತಮ ಸಾಕ್ಷಿ. ಅಂತಹವರು ತುಂಬಾ ಜನರಿದ್ದಾರೆ. ಅವರು ನೀಡುವ ಹಣ ದುರುಪಯೋಗವಾಗುವುದಿಲ್ಲ, ಸದುಪಯೋಗವಾಗುತ್ತದೆ ಎಂಬ ವಿಶ್ವಾಸ ನಮ್ಮ ಮೇಲೆ ಇದ್ದರೆ ಊರಿನ ಅಭಿವೃದ್ಧಿಗೆ ಅಂತಹವರು ಎಷ್ಟೋ ಕೊಡುಗೆ ನೀಡಬಹುದು. ನಮ್ಮೂರಿನ ಶಾಲೆಗಳು, ಆಸ್ಪತ್ರೆಗಳು ಮತ್ತು ಊರಿನ ಎಲ್ಲಾ ವ್ಯವಸ್ಥೆಗಳು ಅಭಿವೃದ್ಧಿಯಾಗಬೇಕೆಂದು ಜಗತ್ತಿನಾದ್ಯಂತ ಇರುವ ಆಯಾ ಊರಿನವರು ಬಯಸುವುದು ಖಂಡಿತ. ಅವರು ತಮ್ಮ ಕೈಯಲ್ಲಾದ ಸಹಾಯ, ಕೊಡುಗೆ ನೀಡಿದರೆ, ಸರಕಾರದ ಯೋಜನೆಗಳು ಕೂಡಾ ಸರಿಯಾಗಿ ಅನುಷ್ಠಾನಗೊಂಡರೆ, ನಮ್ಮ ಊರಿನ ಜನರು ಅದಕ್ಕೆ ಸಹಕಾರ ನೀಡಿದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಲಂಚ, ಭ್ರಷ್ಟಾಚಾರ ರಹಿತವಾಗಿ ಪ್ರಾಮಾಣಿಕ ಕೆಲಸ ಮಾಡಿದರೆ ನಮ್ಮ ಊರು ಸ್ವರ್ಗವಾದೀತು, ಮಹಾತ್ಮ ಗಾಂಧಿ ಕಂಡ ಗ್ರಾಮಸ್ವರಾಜ್ಯ, ರಾಮರಾಜ್ಯ ಬಂದೀತು ಎಂದು ಹೇಳಲು ಸಂತೋಷ ಪಡುತ್ತೇನೆ. ಈ ಯೋಜನೆ ಯಶಸ್ವಿಯಾದರೆ ಅದನ್ನು ಮುಂದೆ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ಯೋಚನೆ ಇಟ್ಟುಕೊಂಡಿದ್ದೇವೆ.

ಈ ಮೇಲಿನ ವಿಚಾರಗಳ ಹಿನ್ನಲೆಯಲ್ಲಿ ತಮ್ಮ ವೈಯುಕ್ತಿಕ ಸ್ವಾರ್ಥಕ್ಕಾಗಿ ಜನರನ್ನು, ಸಮಾಜವನ್ನು ಬಲಿಕೊಡದೆ ಲಂಚ, ಭ್ರಷ್ಟಾಚಾರ ಮುಕ್ತ ಉತ್ತಮ ಸೇವೆಯ ಸಮಾಜಕ್ಕಾಗಿ ಕೈಜೋಡಿಸೋಣ, ಶ್ರಮಿಸೋಣ, ನಮ್ಮ ಅಭಿವೃದ್ಧಿ ಹಳ್ಳಿಯಿಂದ ಡೆಲ್ಲಿಗೆ, ಜಗತ್ತಿಗೇ ತಲುಪುವಂತೆ ಮಾಡೋಣ. ಮಕ್ಕಳ ಉತ್ತಮ ಭವಿಷ್ಯಕ್ಕೆ ಊರಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗೋಣ ಎಂದು ಅಧಿಕಾರಿಗಳಲ್ಲಿ, ಜನಪ್ರತಿನಿಧಿಗಳಲ್ಲಿ, ಜನರಲ್ಲಿ ವಿನಂತಿಸುತ್ತಿದ್ದೇನೆ. ಅದಕ್ಕಾಗಿ ನಮ್ಮ ಊರಿನ, ತಾಲೂಕಿನ ಎಲ್ಲಾ ಇಲಾಖೆಗಳು, ಜನಪ್ರತಿನಿಧಿಗಳು ಲಂಚ, ಭ್ರಷ್ಟಾಚಾರ ಮುಕ್ತ ಉತ್ತಮ ಸೇವೆ ನೀಡುವ ಸಂಕಲ್ಪ ಮಾತ್ರವಲ್ಲ, ಪ್ರತಿಜ್ಞೆ ಮಾಡಬೇಕು.ಅದು ಎಲ್ಲಾ ಗ್ರಾಮಗಳಲ್ಲಿ ನಡೆಯಬೇಕು. ಲಂಚ, ಭ್ರಷ್ಟಾಚಾರ ಮುಕ್ತ ಊರು ಮತ್ತು ತಾಲೂಕಿನ ಘೋಷಣೆ ಮೊಳಗಬೇಕು. ಆ ಮೂಲಕ ರಾಜ್ಯದ, ದೇಶದ, ಜಗತ್ತಿನ ಭೂಪಟದಲ್ಲಿ ಲಂಚ ಭ್ರಷ್ಟಾಚಾರ ಮುಕ್ತ ತಾಲೂಕು ಎಂದು ದಾಖಲಾಗಿ, ರಾರಾಜಿಸುವಂತೆ ಮಾಡಬೇಕು ಎಂದು ಕರೆ ನೀಡುತ್ತಿದ್ದೇನೆ. ಹಾಗೆ ಮಾಡಿದರೆ ನಮ್ಮ ಊರಿನ ಅಭಿವೃದ್ಧಿಯ ಬಾಗಿಲು ಜಗತ್ತಿಗೆ ತೆರೆದಂತೆ ಆಗುವುದು ಖಂಡಿತ ಎಂದು ತಿಳಿಸಲು ಇಚ್ಛಿಸುತ್ತೇನೆ.

ಈ ವಿಚಾರವನ್ನು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನದಟ್ಟು ಮಾಡಲು ಪ್ರತಿ ಕಛೇರಿಗೆ ಸುದ್ದಿ ಜನಾಂದೋಲನ ಮತ್ತು ಮಾಹಿತಿ ಟ್ರಸ್ಟ್‌ನ ತಂಡ ಭೇಟಿ ನೀಡಲಿದೆ. ಪ್ರತಿಯೊಬ್ಬ ಜನಪ್ರತಿನಿಧಿಯನ್ನು ಸಂಪರ್ಕಿಸಲಿದೆ. ಪ್ರತೀ ಗ್ರಾಮದಲ್ಲಿ ಸಭೆ ಏರ್ಪಡಿಸಲಿದೆ. ಈ ವಿಷಯವನ್ನು ಮುಂದುವರಿಸಲು ಪ್ರತೀ ಗ್ರಾಮದಲ್ಲಿ ಜನರು ಮುಂದೆ ಬರಬೇಕಾಗಿದೆ. ಪ್ರತಿ ಗ್ರಾಮಗಳಲ್ಲಿ ಕೈ ಜೋಡಿಸಲು ಬಯಸುವವರು ಸಲಹೆ, ಅಭಿಪ್ರಾಯಗಳೊಂದಿಗೆ ಸುದ್ದಿ ಜನಾಂದೋಲನ ವೇದಿಕೆ ಮತ್ತು ಸುದ್ದಿ ಮಾಹಿತಿ ಟ್ರಸ್ಟ್‌ಗೆ ಬರೆಯಬೇಕಾಗಿ ವಿನಂತಿ.
                                                                                                                                                                       – ಡಾ. ಯು.ಪಿ. ಶಿವಾನಂದ

LEAVE A REPLY

Please enter your comment!
Please enter your name here