ಕೆಯ್ಯೂರು ಕೆಪಿಎಸ್ ವಿದ್ಯಾರ್ಥಿಗಳಿಗೆ 10 ನೇ ವರ್ಷದ ಪುಸ್ತಕ ವಿತರಣೆ, ವಿದ್ಯಾಸಿರಿ ಪುರಸ್ಕಾರ

0

  • ಮಕ್ಕಳ ಅವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ನಮ್ಮದಾಗಬೇಕು : ಸಂಜೀವ ಮಠಂದೂರು

 

ಪುತ್ತೂರು: ಸರಕಾರಿ ಶಾಲೆಗಳನ್ನು ಸರಕಾರ ಮಾತ್ರ ನೋಡಿಕೊಳ್ಳುವುದಲ್ಲ ನಮ್ಮ ಕೊಡುಗೆಯೂ ಇದೆ ಎಂಬುದನ್ನು ದಾನಿಗಳು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ. ಡಾ.ಹರ್ಷ ಕುಮಾರ್‌ರವರ ನೇತೃತ್ವದಲ್ಲಿ ಕಳೆದ 10 ವರ್ಷಗಳಿಂದ ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯುತ್ತಾ ಬಂದಿರುವುದು ಖುಷಿ ತಂದಿದೆ. ಅದೇ ರೀತಿ ಈ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ಕೈಜೋಡಿಸಿ ಮಕ್ಕಳ ಅವಶ್ಯಕತೆಗಳನ್ನು ಪೂರೈಸುವ ಕೆಲಸವನ್ನು ಮಾಡುವ ಮೂಲಕ ತಾಲೂಕಿಗೆ ಮಾದರಿಯಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

 

 

ಅವರು ಜೂ.17 ರಂದು ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಯುವ ಇದರ ಸಹಯೋಗದೊಂದಿಗೆ ಜನ್ಮ ಫೌಂಡೇಷನ್ ಟ್ರಸ್ಟ್ ಪುತ್ತೂರು ನೇತೃತ್ವದಲ್ಲಿ ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ 10 ನೇ ವರ್ಷದ ಪುಸ್ತಕ ವಿತರಣೆ ಮತ್ತು ವಿದ್ಯಾಸಿರಿ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ, ವಿದ್ಯಾಸಿರಿ ಪುರಸ್ಕಾರ ನೆರವೇರಿಸಿ ಮಾತನಾಡಿದರು.

 

 

ಊರಿನಲ್ಲಿರುವ ದಾನಿಗಳನ್ನು, ಹಿರಿಯ ವಿದ್ಯಾರ್ಥಿಗಳನ್ನು, ಸಂಘ ಸಂಸ್ಥೆಗಳನ್ನು ಜೋಡಿಸಿಕೊಂಡು ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಅನ್ನು ರೋಲ್ ಮಾಡೆಲ್ ಸ್ಕೂಲ್ ಆಗಿ ಪರಿವರ್ತನೆ ಮಾಡುವ ಕೆಲಸ ಆಗಬೇಕಾಗಿದೆ ಎಂದ ಶಾಸಕರು, ಹೊಸತನ, ಹೊಸ ವ್ಯವಸ್ಥೆಯೊಂದಿಗೆ ಸರಕಾರಿ ಶಾಲೆಗಳು ರೂಪುಗೊಳ್ಳಬೇಕು ಇದಕ್ಕೆ ಊರಿನ ವಿದ್ಯಾಭಿಮಾನಿಗಳು, ದಾನಿಗಳ ಸಹಕಾರ ಬಹಳ ಅಗತ್ಯ ಎಂದರು.

ಕೆಯ್ಯೂರು ಶಾಲೆಗೆ ಪುರಾತನ ಇತಿಹಾಸವಿದೆ
ಕೆಯ್ಯೂರು ಶಾಲೆಯು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಬೇಕಾದರೆ ಇದರ ಹಿಂದೆ ದೊಡ್ಡ ಇತಿಹಾಸವಿದೆ ಎಂದ ಶಾಸಕರು ಇದು ಕಳೆದ ೨೫ ವರ್ಷಗಳ ಹಿಂದಿನಿಂದಲೇ ತಾಲೂಕಿನಲ್ಲೆ ಶಾಸಕರ ಶಾಲೆ ಎಂದು ಗುರುತಿಸಿಕೊಂಡಿದೆ. ಈ ಶಾಲೆಗೆ ೧೪ ಎಕರೆಯಷ್ಟು ಜಾಗವಿದೆ. ಸುಮಾರು ೭೦೦ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು ೨ ಕೋಟಿ ರೂ.ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಯ್ಯೂರು ಕೆಪಿಎಸ್ ತಾಲೂಕಿನಲ್ಲೇ ಒಂದು ವ್ಯವಸ್ಥಿತ, ಎಲ್ಲಾ ಸೌಲಭ್ಯಗಳಿರುವ ಶಾಲೆಯಾಗಿ ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.

ಸಮಾಜಕ್ಕೆ ಕೊಡುಗೆ ನೀಡುವ ಪ್ರಜೆಗಳಾಗಿ: ಉಮೇಶ್ ನಾಯಕ್
ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್‌ರವರು ಮಾತನಾಡಿ, ಕಳೆದ ೧೦ ವರ್ಷಗಳಿಂದ ಮಕ್ಕಳಿಗೆ ಪುಸ್ತಕ ವಿತರಿಸಿ, ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಿಕೊಂಡು ಬಂದಿರುವ ಡಾ.ಹರ್ಷಕುಮಾರ್ ರೈಯವರ ಕೆಲಸ ಎಲ್ಲರಿಗೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳು ಬರೆದು ಓದಿ ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಕೊಡುಗೆ ನೀಡುವ ಪ್ರಜೆಗಳಾಗಬೇಕು ಆ ಮೂಲಕ ತಮ್ಮ ಹೆತ್ತವರ ಹಾಗೂ ಗುರುಗಳ ಹೆಸರನ್ನು ಹತ್ತೂರಿಗೆ ಪಸರಿಸುವವರಾಗಬೇಕು ಎಂದು ಹೇಳಿ ಶುಭ ಹಾರೈಸಿದರು.

ಹಿರಿಯರಿಗೆ, ಹೆತ್ತವರಿಗೆ, ಗುರುಗಳಿಗೆ ಗೌರವ ಕೊಡುವುದನ್ನು ಕಲಿಯಬೇಕು: ಡಾ.ಅಬೂಬಕ್ಕರ್ ಆರ್ಲಪದವು
ಕೆಯ್ಯೂರು ಶಾಲೆಯ ವಿದ್ಯಾರ್ಥಿಗಳು ತುಂಬಾ ಒಳ್ಳೆಯ ವಿದ್ಯಾರ್ಥಿಗಳು ಏಕೆಂದರೆ ಶಿಕ್ಷಕರು ವೇದಿಕೆ ಹತ್ತಿದಾಗ ಮಕ್ಕಳಿಗಾದ ಖುಷಿಯನ್ನು ಅವರ ಚಪ್ಪಾಳೆಯಲ್ಲಿ ಕಂಡಾಗ ಇಲ್ಲಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇರುವ ಪ್ರೀತಿ, ಅನುಬಂಧವನ್ನು ತಿಳಿದುಕೊಂಡೆ ಎಂದ ಆರ್ಲಪದವುರವರು, ಯಾವಾಗ ನಾವು ಹಿರಿಯರಿಗೆ, ಹೆತ್ತವರಿಗೆ ಮತ್ತು ಗುರುಗಳಿಗೆ ಗೌರವವನ್ನು ಕೊಡುವುದನ್ನು ಕಲಿಯುತ್ತೇವೋ ಆಗಲೇ ನಮ್ಮಲ್ಲಿ ಸಂಸ್ಕಾರ, ಸಂಸ್ಕೃತಿ ಹುಟ್ಟಿಕೊಳ್ಳುತ್ತೆ ಮತ್ತು ನಾವು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮಲು ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು. ತಮ್ಮ ಹಿರಿಯರ ನೆನಪಿನಲ್ಲಿ ಕಳೆದ ೧೦ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುತ್ತಿರುವ ಡಾ.ಹರ್ಷ ಕುಮಾರ್ ರೈಯವರ ಸಮಾಜಮುಖಿ ಕೆಲಸ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿ ಶುಭ ಹಾರೈಸಿದ ಆರ್ಲಪದವುರವರು ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ೫೦೦ ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಶಾಲೆಗೆ ಹೆಚ್ಚುವರಿ ಶಿಕ್ಷಕರ ಅಗತ್ಯ ಇದೆ. ಈ ಬಗ್ಗೆ ಶಾಸಕರು ಕೂಡಲೇ ಗಮನಹರಿಸಿ ಶಿಕ್ಷಕರ ನೇಮಕ ಮಾಡುವಂತೆ ಅವರು ವಿನಂತಿಸಿಕೊಂಡರು.

ಉತ್ತಮ ಪ್ರಜೆಗಳಾಗಿ : ರಾಜೇಶ್ವರಿ ಆಚಾರ್
ರೋಟರಿ ಕ್ಲಬ್ ಪುತ್ತೂರು ಯುವದ ನಿಯೋಜಿತ ಅಧ್ಯಕ್ಷೆ ರಾಜೇಶ್ವರಿ ಆಚಾರ್‌ರವರು ಮಾತನಾಡಿ, ದಾನಿಗಳು ಕೊಟ್ಟ ಪುಸ್ತಕ ಪರಿಕರಗಳನ್ನು ಉತ್ತಮವಾಗಿ ಬಳಸಿಕೊಂಡು ಉತ್ತಮವಾಗಿ ಓದಿ ಬರೆದು ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ ಸಮಾಜಕ್ಕೆ ಒಳ್ಳೆಯದನ್ನು ಮಾಡಿ ಎಂದು ಮಕ್ಕಳಿಗೆ ಹಿತವಚನ ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಕೆಯ್ಯೂರು ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಸದಸ್ಯರುಗಳಾದ ಜಯಂತ ಪೂಜಾರಿ ಕೆಂಗುಡೇಲು, ಮೀನಾಕ್ಷಿ ವಿ.ರೈ, ಕೆಯ್ಯೂರು ಕೆದಂಬಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಶಿಧರ್ ರಾವ್ ಬೊಳಿಕ್ಕಲ, ಕೆಯ್ಯೂರು ಕೆಪಿಎಸ್ ಉಪ ಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ಉಪಸ್ಥಿತರಿದ್ದರು. ಕೆಯ್ಯೂರು ಕೆಪಿಎಸ್ ಪ್ರಾಥಮಿಕ ವಿಭಾಗದ ಮುಖ್ಯಗುರು ಬಾಬು ಎಂ ಸ್ವಾಗತಿಸಿದರು. ಜನ್ಮ ಫೌಂಡೇಷನ್ ಟ್ರಸ್ಟ್‌ನ ಅಧ್ಯಕ್ಷ, ಪುಸ್ತಕ ವಿತರಣೆಯ ರೂವಾರಿ ಡಾ. ಹರ್ಷ ಕುಮಾರ್ ರೈ ಮಾಡಾವು ಅತಿಥಿಗಳಿಗೆ ಶಾಲು, ಹೂ ನೀಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಶಾಲಿನಿ ವಂದಿಸಿದರು. ಶಿಕ್ಷಕ ಗಂಗಾಧರ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸುಪ್ರಭಾ, ಶೈಲಜಾ, ಆಗ್ನೇಸ್ ಪ್ರಸಿಲ್ಲಾ ಫಾಯಸ್, ಅತಿಥಿ ಶಿಕ್ಷಕರಾದ ಸೌಮ್ಯ, ಗೀತಾ, ಕಮಲ, ಗೌರವ ಶಿಕ್ಷಕಿಯರಾದ ಪ್ರಿಯಾ, ಅಶ್ವನಿ ಸಹಕರಿಸಿದ್ದರು.

ವಿದ್ಯಾಸಿರಿ ಪುರಸ್ಕಾರ
ಕೆಯ್ಯೂರು ಕೆಪಿಎಸ್‌ನ 202122 ನೇ ಶೈಕ್ಷಣಿಕ ವರ್ಷದ 8 ನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿ ಹಾಗೂ ಎನ್.ಎನ್.ಎಂ.ಎಸ್‌ನಲ್ಲಿ ತಾಲೂಕಿನಲ್ಲಿ 6ನೇ ಸ್ಥಾನ ಪಡೆದ ಸೌಜನ್ಯರವರನ್ನು ಈ ಸಂದರ್ಭದಲ್ಲಿ ಶಾಸಕರು ಶಾಲು, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.

ಪುಸ್ತಕ, ಬ್ಯಾಗ್ ವಿತರಣೆ
ಪ್ರತಿ ತರಗತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು. ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಓದುವ ಪುಸ್ತಕ ಮತ್ತು ಬರೆಯುವ ನೋಟ್ ಪುಸ್ತಕಗಳನ್ನು ಒಟ್ಟು 1700 ಪುಸ್ತಕ ವಿತರಿಸಲಾಯಿತು.

` ಕಳೆದ 10 ವರ್ಷಗಳಿಂದ ಕೆಯ್ಯೂರು ಕೆಪಿಎಸ್ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಶಾಲಾ ಮುಖ್ಯಗುರು ಸೇರಿದಂತೆ ಶಿಕ್ಷಕ ವೃಂದದವರು ಸಹಕಾರ ನೀಡುತ್ತಾ ಬಂದಿದ್ದಾರೆ. ಈ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಕೈ ಜೋಡಿಸಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ’ಡಾ.ಹರ್ಷ ಕುಮಾರ್ ರೈ ಮಾಡಾವು, ಅಧ್ಯಕ್ಷರು ಜನ್ಮ ಫೌಂಡೇಷನ್ ಟ್ರಸ್ಟ್ ಪುತ್ತೂರು

LEAVE A REPLY

Please enter your comment!
Please enter your name here