ಸುದಾನದಲ್ಲಿ ವಿವಿಧ ಸಂಘಗಳ ಉದ್ಘಾಟನೆ, ಪ್ರಮಾಣವಚನ ಸ್ವೀಕಾರ

0

ಪುತ್ತೂರು: ಸುದಾನ ವಸತಿಯುತ ಶಾಲೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದ ಮಂತ್ರಿಮಂಡಲ ರಚನೆ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಕಲಾತ್ಮಕವಾಗಿ ರಚಿಸಲಾದ ‘ಒಂದೇ ಭೂಮಿ’ ಧ್ಯೇಯವಾಕ್ಯವುಳ್ಳ ಫಲಕವನ್ನು ನಿವೃತ್ತ ಪ್ರಾಧ್ಯಾಪಕರಾದ ಪ್ರೊ|ದತ್ತಾತ್ರೇಯ ರಾವ್‌ರವರು ಅನಾವರಣಗೊಳಿಸಿ ಮಾತನಾಡಿ, ಜೀವನ ಮೌಲ್ಯಗಳು ಭಾವನಾತ್ಮಕ ಸ್ಪಂದನವಿಲ್ಲದ ವಿದ್ಯಾಭ್ಯಾಸವು ಪರಿಪೂರ್ಣವಲ್ಲ. ನಿಸರ್ಗದ ಒಡನಾಟ, ಶಿಕ್ಷಣ ಮತ್ತು ಅನುಭವಗಳು ವ್ಯಕ್ತಿಯನ್ನು ಪರಿಪೂರ್ಣವಾಗಿಸಬಲ್ಲುದು ಮಾತ್ರವಲ್ಲ ನಾಯಕನಾಗಿ ರೂಪಿಸಬಲ್ಲುದು ಎಂದು ಹೇಳಿ ಸುಮಧುರ ಭಾವಗೀತೆಯನ್ನು ಹಾಡಿ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೇರಣೆಯನ್ನು ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕ ವಿಜಯ್ ಹಾರ್ವಿನ್‌ರವರು ಮಾತನಾಡಿ, ಭೂಮಿಯು ದೇವರು ನಮಗಿತ್ತ ವರ. ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಶಿಕ್ಷಣವು ಈ ಜಾಗೃತಿಯನ್ನು ಮೂಡಿಸಲಿ ಎಂದರು.

ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜುರವರು ಸ್ವಾಗತಿಸಿ, ಕಾರ್ಯಕ್ರಮದ ಮುನ್ನೋಟದೊಂದಿಗೆ ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣವಚನವನ್ನು ಬೋಧಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗಾಗಿ ರೂಪಿತವಾದ ವಿವಿಧ ಸಂಘಗಳ ಉಪಯೋಗವನ್ನು ಪಡೆಯುವಂತೆ ಅವರು ಕರೆ ನೀಡಿದರು.

ವಿದ್ಯಾರ್ಥಿ ಸಂಘಗಳಾದ ಪ್ರತಿಭಾ ಲಲಿತಕಲಾ ಸಂಘ(ಬಕುಳಾ), ಜಾಗೃತಿ ಸೋಶಿಯಲ್ ಕ್ಲಬ್(ಹರ್ಷಿತಾ ನಾಯಕ್), ಶಕ್ತಿ ಕ್ರೀಡಾ ಕ್ಲಬ್(ಜೀವಿತಾ ಎನ್.ಕೆ), ಅವನಿ ವಿಜ್ಞಾನ ಸಂಘ(ಸಾಧನಾ ಹೆಬ್ಬಾರ್), ದೃಷ್ಟಿ ಐಟಿ ಕ್ಲಬ್(ರಂಜಿತ್ ಮಥಾಯಿಸ್), ಲಹರಿ ಸಾಹಿತ್ಯ ಸಂಘ(ಜಯಸ್ಮಿತಾ) ಮತ್ತು ಇಂಟರ‍್ಯಾಕ್ಟ್ ಕ್ಲಬ್(ಲವೀನ ಗ್ರೇಸಿ ಡಿ’ಸೋಜ)ಗಳ ನಿರ್ದೇಶಕರು ತಮ್ಮ ವಾರ್ಷಿಕ ಚಟುವಟಿಕೆಗಳ ಬಗ್ಗೆ ವರದಿ ಮಂಡಿಸಿದರು.

ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಆಸ್ಕರ್ ಆನಂದ್‌ರವರು ಶುಭ ಹಾರೈಸಿದರು. ಉಪ ಮುಖ್ಯ ಶಿಕ್ಷಕಿ ಲವೀನಾ ನವೀನ್ ಹನ್ಸ್, ಸಂಯೋಜಕರಾದ ಪ್ರತಿಮಾ, ಗಾಯತ್ರಿ ಕೆ, ಅಮೃತವಾಣಿ, ಸಹ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹತ್ತನೇ ತರಗತಿ ವಿದ್ಯಾರ್ಥಿಗಳಾದ ಹಸೀಫಾ, ಸಫಾ ದೇಶಭಕ್ತಿಗೀತೆ ಹಾಡಿದರು. ಹತ್ತನೇ ತರಗತಿ ವಿದ್ಯಾಥೀನಿ ಪೂರ್ವಿ ಶೆಟ್ಟಿ ವಂದಿಸಿದರು. ಗ್ಲಾಡಿಸ್ ಜೆ ಮತ್ತು ರೇಷ್ಮಾ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು.

ಸುದಾನ ಶಾಲೆಯು ಪ್ರತಿ ಶೈಕ್ಷಣಿಕ ವರ್ಷದಲ್ಲಿ ಒಂದೊಂದು ಧ್ಯೇಯವಾಕ್ಯವನ್ನಿರಿಸಿಕೊಂಡು ಕಾರ್ಯಾಚರಿಸುತ್ತಿದ್ದು, ಪ್ರಸ್ತುತ ವರ್ಷ ‘ಒಂದೇ ಭೂಮಿ(One Earth)’ ಎಂಬ ಪರಿಕಲ್ಪನೆಯನ್ನು ಇರಿಸಿಕೊಂಡು, ಆ ಪರಿಕಲ್ಪನೆಯಡಿಯಲ್ಲಿ ಶೈಕ್ಷಣಿಕ ವರ್ಷದ ಎಲ್ಲಾ ಕಾರ್ಯಕ್ರಮಗಳು ಹೊಂದಿಕೊಂಡು ನಡೆಯಲಿವೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here