ಹಿರಿಯ ನಾಗರಿಕರಿಗಾಗಿ ಉಚಿತ ಯೋಗ, ಆರೋಗ್ಯ ಮಾಹಿತಿ ಶಿಬಿರದ ಸಮಾರೋಪ

0

  • ಲಂಚ, ಭ್ರಷ್ಟಾಚಾರ ವಿರುದ್ಧ ಘೋಷಣೆ, ಪ್ರತಿಜ್ಞೆ ಸ್ವೀಕಾರ
  • ಆರೋಗ್ಯಕ್ಕೆ ಒತ್ತು ಕೊಟ್ಟು ಪರಂಪರೆಯನ್ನು ಉಳಿಸುವಲ್ಲಿ ಪ್ರಧಾನಿ ದೂರ ದೃಷ್ಟಿತ್ವ -ಸಂಜೀವ ಮಠಂದೂರು
  • ಹಿರಿಯರ ಸ್ವಾಭಿಮಾನದ ಬದುಕಿಗೆ ಯೋಗ ಅಗತ್ಯ -ಡಾ.ಯು.ಪಿ.ಶಿವಾನಂದ
  • ಯೋಗ ಜೀವನದ ಒಂದು ಅಂಗ-ಡಾ.ಜೆ.ಸಿ.ಅಡಿಗ
  • ಕಾಯಿಲೆ ಬಾರದ ಹಾಗೆ ಆರೋಗ್ಯ ಕಾಪಾಡಬೇಕು-ಡಾ. ಭಾಸ್ಕರ್ ಎಸ್
  • ಶಿಬಿರ ಇಲ್ಲಿಗೆ ಮುಗಿಯುವುದಿಲ್ಲ. ಸಂದೇಹಗಳಿದ್ದರೆ ಪರಿಹಾರಕ್ಕೆ ಬದ್ಧ-ಡಾ.ಚೇತನಾ ಗಣೇಶ್
  • ಜಾತಿ ಮೀರಿ ಕಾರ್ಯಕ್ರಮಕ್ಕೆ ಸದಾ ಪ್ರೋತ್ಸಾಹ -ಚಿದಾನಂದ ಬೈಲಾಡಿ

 

ಪುತ್ತೂರು:ಪುತ್ತೂರು ಸಿಟಿ ಹಾಸ್ಪಿಟಲ್ ಚಾರಿಟೇಬಲ್ ಟ್ರಸ್ಟ್, ಆರೋಗ್ಯ ಭಾರತಿ ಪುತ್ತೂರು ಜಿಲ್ಲೆ ಹಾಗೂ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಸಹಯೋಗದೊಂದಿಗೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ 10 ದಿನಗಳು ನಡೆದ ಹಿರಿಯ ನಾಗರಿಕರಿಗಾಗಿ ಉಚಿತ ಯೋಗ ಮತ್ತು ಆರೋಗ್ಯ ಮಾಹಿತಿ ಶಿಬಿರದ ಸಮಾರೋಪ ಸಮಾರಂಭವು ಜೂ.28ರಂದು ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು.ಸಭಾ ಕಾರ್ಯಕ್ರಮದಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಜ್ಞೆ ಸ್ವೀಕರಿಸಲಾಯಿತು.


ಆರೋಗ್ಯಕ್ಕೆ ಒತ್ತು ಕೊಟ್ಟು ಪರಂಪರೆಯನ್ನು ಉಳಿಸುವಲ್ಲಿ ಪ್ರಧಾನಿ ದೂರ ದೃಷ್ಟಿತ್ವ: ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಜಗತ್ತು ಸಂಸ್ಕೃತಿಯನ್ನು ಕಾಣುವ ಮುಂಚೆಯೇ ಭಾರತದಲ್ಲಿ ಒಂದು ಆಧ್ಯಾತ್ಮಿಕ ಬದುಕಿನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಸಂಗತಿ ಆಗಿತ್ತು.ಆಧ್ಯಾತ್ಮಿಕ ಬದುಕಿನಿಂದ ನೆಮ್ಮದಿ ಮತ್ತು ಸಾಮರಸ್ಯ ಕೊಡಬಹುದು ಎಂದು ಇವತ್ತು ದೇಶದ ಪ್ರಧಾನಿಯವರು ಯೋಗದ ಮೂಲಕ ಜಗತ್ತಿಗೆ ಸಂದೇಶ ಕೊಟ್ಟಿದ್ದಾರೆ.ಸರಕಾರ ಒಂದಷ್ಟು ಆರೋಗ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಾ ಅದೇ ರೀತಿ ಪರಂಪರೆಯನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಇದಕ್ಕೆಲ್ಲಾ ನಮ್ಮ ಪ್ರಧಾನಿಯವರ ದೂರದೃಷ್ಟಿತ್ವ ಕಾರಣ ಎಂದರು.

ಇವತ್ತು ಸರಕಾರವು ಆರೋಗ್ಯಕ್ಕೆ ಒತ್ತು ಕೊಟ್ಟು ಸ್ವಚ್ಛ ಮಿಷನ್ ಎಂಬ ಇಲಾಖೆಯನ್ನೇ ಆರಂಭಿಸಿದೆ.ಆಯುಷ್ ಇಲಾಖೆ, ಜನೌಷಧಿ, ಆಯುಷ್ಮಾನ್ ಭಾರತ್, ಹೃದಯಸಂಬಂಧಿ ಕಾಯಿಲೆಗೆ ಸ್ಟಂಟ್ ಅಳವಡಿಸುವ ವ್ಯವಸ್ಥೆಯನ್ನು ಸರಕಾರ ನೀಡುತ್ತಿದೆ ಎಂದವರು ಹೇಳಿದರು.


ಹಿರಿಯರ ಸ್ವಾಭಿಮಾನದ ಬದುಕಿಗೆ ಯೋಗ ಅಗತ್ಯ: ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ ವಯಸ್ಸಾದ ಹಾಗೆ ಸ್ವಾಭಿಮಾನದ ಬದುಕು ಬಹಳ ಮುಖ್ಯ.ಈ ನಿಟ್ಟಿನಲ್ಲಿ ಯೋಗ ಚಿಕಿತ್ಸಕಿ ಡಾ.ಚೇತನಾ ಅವರು ಹಿರಿಯ ನಾಗರಿಕರಿಗೆ ಸ್ವಾಭಿಮಾನದ ಬದುಕನ್ನು ಕೊಟ್ಟಿದ್ದಾರೆ.ಯಾಕೆಂದರೆ ವಯಸ್ಸಾದ ಮೇಲೆ ಕೈ ಗಂಟು, ಮಂಡಿ, ಏಳುವಾಗ ಸೊಂಟ ನೋವು ಬರದ ಹಾಗೆ ಇರಬೇಕೆಂಬ ಆಸೆ ಎಲ್ಲರಿಗೂ ಇದೆ.ಬದುಕಿನ ಸ್ವಂತ ಕೆಲಸ ಮಾಡುವ ಶಕ್ತಿಯನ್ನು ಕೊಟ್ಟರೆ ಅದು ಆರೋಗ್ಯವಂತ ಎನ್ನಬಹುದು.ಇದನ್ನು ಯೋಗದಿಂದ ಪಡೆಯಲು ಸಾಧ್ಯ ಎಂದರು.ಇವತ್ತು ಕೇವಲ ಕಾಯಿಲೆಯನ್ನು ವಾಸಿ ಮಾಡಲು ಮಾತ್ರವಲ್ಲ ಆರೋಗ್ಯ ವೃದ್ಧಿ ಮಾಡಲೂ ಆಸ್ಪತ್ರೆ ಬೇಕು.ಆರೋಗ್ಯವಂತ ಸಮಾಜ ಸೃಷ್ಟಿಯಾಗಬೇಕಾದರೆ ಕಾಯಿಲೆ ಅಥವಾ ಕಾಯಿಲೆ ಗುಣ ಮಾಡುವುದು ಅಲ್ಲ. ಕಾಯಿಲೆ ಬಾರದಂತೆ ನೋಡುವುದೂ ಅಗತ್ಯ. ಆಗ ಆರೋಗ್ಯವಂತ ಸಮಾಜಕ್ಕೆ ಆಸ್ಪತ್ರೆ ಬೇಕೇ ಬೇಕು. ಯಾಕೆಂದರೆ ಆರೋಗ್ಯ ಕಾಪಾಡಲು ಆಹಾರ ತೆಗೆದುಕೊಳ್ಳುವ ವಿಧಾನ, ಇತರ ಸೂಚನೆಗಳನ್ನು ವೈದ್ಯರ ಮೂಲಕ ಪಡೆದಾಗ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ ಎಂದರು.

ಯೋಗ ಜೀವನದ ಒಂದು ಅಂಗ: ಶಿಬಿರದಲ್ಲಿ ಹೃದ್ರೋಗ, ಆಹಾರ ಮತ್ತು ಉತ್ತಮ ಜೀವನ ಶೈಲಿಯ ಕುರಿತು ಮಾಹಿತಿ ನೀಡಿದ ಚೇತನಾ ಆಸ್ಪತ್ರೆಯ ಡಾ.ಜೆ.ಸಿ.ಅಡಿಗ ಅವರು ಮಾತನಾಡಿ ಮನಸ್ಸಿನ ಆರೋಗ್ಯ ಮತ್ತು ದೈಹಿಕ ಆರೋಗ್ಯ ಸರಿಪಡಿಸುವ ಉತ್ತಮ ಮಾರ್ಗ ಯೋಗ.ಇದನ್ನೇ ಪ್ರಧಾನಿ ಮೋದಿಯವರು ಪ್ರಪಂಚಕ್ಕೆ ಪರಿಚಯಿಸಿದರು.ಇಲ್ಲಿ ಮಾನಸಿಕವಾಗಿ ನಾವು ನೆಮ್ಮದಿಯಿಂದ ಇರಲು ಬೇರೆ ಬೇರೆ ರೀತಿಯಲ್ಲಿ ಯೋಗಾಭ್ಯಾಸವಿದೆ.ಇದನ್ನು ಮಾಡಿದಾಗ ಬೇರೆ ಬೇರೆ ಸಮಸ್ಯೆಗಳಿಗೆ ಪರಿಹಾರವೂ ಸಿಗುತ್ತದೆ. ಹಾಗಾಗಿ ಯೋಗ ಜೀವನದ ಒಂದು ಅಂಗ ಎಂದರು.

ಕಾಯಿಲೆ ಬಾರದ ಹಾಗೆ ಆರೋಗ್ಯ ಕಾಪಾಡಬೇಕು: ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಭಾಸ್ಕರ್ ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮನುಷ್ಯ ಜೀವನ ಪೂರ್ತಿ ಹುಡುಕುವುದು ಶಾಂತಿಯನ್ನು.ಆದರೆ ನಿಜವಾದ ಶಾಂತಿ ನಮ್ಮೊಳಗಿದೆ.ನಮ್ಮೊಳಗಿನ ಶಾಂತಿಯನ್ನು ನಾವು ಯಾವ ರೀತಿಯಲ್ಲಿ ಪ್ರಕಟಪಡಿಸುವುದೆನ್ನುವುದು ಬಹಳ ಮುಖ್ಯ.ಇದಕ್ಕೆ ದೇಹದ ಆರೋಗ್ಯ ಅಗತ್ಯ.ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಮಾನಸಿಕ, ದೈಹಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ಸರಿಯಾಗಿರಬೇಕು.ಇದೆಲ್ಲವನ್ನು ಯೋಗದಲ್ಲಿ ಕಂಡು ಕೊಳ್ಳಬಹುದು.ವಯಸ್ಸಾದವರಿಗೂ ಯೋಗ ಮಾಡಬಹುದು. ಅವರಿಗೆ ಗುರುಗಳ ಮೂಲಕ ಯೋಗ ಕಲಿಸಲಾಗುತ್ತದೆ.ಇದರ ಜೊತೆಗೆ ಅವರಿಗೆ ಆರೋಗ್ಯದ ಮಾಹಿತಿಯನ್ನು ನೀಡಲಾಗುತ್ತದೆ. ಯಾಕೆಂದರೆ ಕಾಯಿಲೆ ಬಾರದ ಹಾಗೆ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.

ಶಿಬಿರ ಇಲ್ಲಿಗೆ ಮುಗಿಯುವುದಿಲ್ಲ. ಸಂದೇಹಗಳಿದ್ದರೆ ಪರಿಹಾರಕ್ಕೆ ಬದ್ಧ: ಯೋಗ ಶಿಬಿರದ ಪ್ರಮುಖ ರುವಾರಿ, ಯೋಗ ಚಿಕಿತ್ಸಕಿ ಡಾ.ಚೇತನಾ ಗಣೇಶ್ ಅವರು ಮಾತನಾಡಿ ಹಿರಿಯ ನಾಗರಿಕರಿಗೆ ಯೋಗ ಶಿಬಿರವನ್ನು ಆರಂಭದಲ್ಲಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಡೆಸಿಕೊಂಡು ಬರುತ್ತಿದ್ದೆವು.ಎರಡು ವರ್ಷದಿಂದ ಕೋವಿಡ್‌ನಿಂದಾಗಿ ಶಿಬಿರ ನಡೆಸಲು ಅಸಾಧ್ಯವಾಗಿತ್ತು.ಈ ವರ್ಷದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಧ್ಯೇಯ ವಾಕ್ಯ `ಮಾನವೀಯತೆಗಾಗಿ ಯೋಗ’ದಿಂದ ಪ್ರೇರೇಪಿತರಾಗಿ ದೊಡ್ಡ ಮಟ್ಟದಲ್ಲಿ ಒಕ್ಕಲಿಗ ಗೌಡ ಸಮುದಾಯದಲ್ಲಿ ಶಿಬಿರ ನಡೆಸಿದ್ದೇವೆ.ಒಟ್ಟು 10 ದಿನದ ಶಿಬಿರದಲ್ಲಿ 68ಶಿಬಿರಾರ್ಥಿಗಳು ತರಬೇತಿ ಪಡೆದು ಕೊಂಡಿದ್ದಾರೆ.ಮುಂದೆ ಅವರು ಸ್ವತಂತ್ರವಾಗಿ ಅಭ್ಯಾಸ ಮಾಡಲು ಸಾಮರ್ಥ್ಯ ಪಡೆದಿದ್ದಾರೆ ಎಂದು ಹೇಳಿದರಲ್ಲದೆ, ಈ ಶಿಬಿರ ಇಲ್ಲಿಗೆ ಮುಗಿಯುವುದಿಲ್ಲ ಮುಂದಿನ ದಿನಗಳಲ್ಲಿ ಹಿರಿಯ ನಾಗರಿಕರಿಗೆ ಅಥವಾ ಶಿಬಿರಾರ್ಥಿಗಳಿಗೆ ಯಾವುದೇ ಸಂದೇಹಗಳಿಗೆ ಪರಿಹಾರ ಕೊಡಲು ನಾವು ಸದಾ ಶಿದ್ದರಿದ್ದೇ ವೆ ಎಂದರು.

ಜಾತಿ ಮೀರಿ ಕಾರ್ಯಕ್ರಮಕ್ಕೆ ಸದಾ ಪ್ರೋತ್ಸಾಹ: ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಶಾಸಕ ಸಂಜೀವ ಮಠಂದೂರು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಸಂಘಟನೆಯಾಗಿದ್ದರೂ, ಗೌಡ ಸಮುದಾಯ ಭವನ ಜಾತಿ ಸಂಘಟನೆಯಾಗಿದ್ದರೂ ಜಾತಿಯನ್ನು ಮೀರಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ನಾವು ಚಿಂತಿಸಿದಂತೆ ಇಲ್ಲಿ ಅನೇಕ ಕಾರ್ಯಕ್ರಮ ನಡೆದಿದೆ.ಎಲ್ಲಾ ಕಾರ್ಯಕ್ರಮಕ್ಕೂ ಸಂಘ ಪ್ರೋತ್ಸಾಹ ನೀಡಿದೆ.ಇತ್ತೀಚೆಗೆ ಚೆಸ್ ಟೂರ್ನಮೆಂಟ್ ನಡೆದಿದೆ.ಅದೇ ರೀತಿ ವನಮಹೊತ್ಸವ, ವೈದ್ಯಕೀಯ ಶಿಬಿರ, ಕ್ಯಾರಿಯರ್ ಗೈಡೆನ್ಸ್, ಎರಡು ವರ್ಷದ ಹಿಂದೆಯೇ ಯೋಗ ಶಿಬಿರವೂ ನಡೆದಿದೆ ಎಂದರು.ಶಿಬಿರದಲ್ಲಿ ಭಾಗವಹಿಸಿದವರಲ್ಲಿ ರಾಮಚಂದ್ರ ಉಡುಪ, ಒಕ್ಕಲಿಗ ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ.ಗೌಡ, ವಿಠಲ್ ಭಟ್, ವಸಂತಿ ಅವರು ಅನಿಸಿಕೆ ವಕ್ತಪಡಿಸಿದರು.ಶಿಬಿರದಲ್ಲಿ ಮಕ್ಕಳ ತಜ್ಞ ಡಾ.ಎಮ್.ಎಸ್ ಶೆಣೈ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಯೋಗ ಪ್ರಾತ್ಯಕ್ಷಿಕೆ ನೀಡಲು ಸಹಕರಿಸಿದ ರಂಜಿನಿ ಕೆ, ಶೀತಲ್ ಜೆ ರೈ, ಸೋನಾಲಿ ರೈ ಅವರನ್ನು ಗುರುತಿಸಲಾಯಿತು.ಆರೋಗ್ಯ ಭಾರತಿ ಪುತ್ತೂರು ಜಿಲ್ಲೆ ಇದರ ಅಧ್ಯಕ್ಷ ಡಾ.ಗಣೇಶ್ ಪ್ರಸಾದ್ ಮುದ್ರಾಜೆ ಸ್ವಾಗತಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ವಂದಿಸಿದರು.ಯೋಗ ಶಿಕ್ಷಕಿ ವಾರಿಜಾ ಮತ್ತು ಡಾ.ಚೇತನಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

 

ಲಂಚ ಭ್ರಷ್ಟಾಚಾರ ಮುಕ್ತ ಆದಾಗ ಸಾಮಾಜಿಕ ಆರೋಗ್ಯ

ಲಂಚ ಭ್ರಷ್ಟಾಚಾರ ಮುಕ್ತ ದೇಶ ಆದಾಗ ಸಾಮಾಜಿಕ ಆರೋಗ್ಯ ಬರುತ್ತದೆ.ಆಗ ದೇಶದ ಅಭಿವೃದ್ಧಿಯಾಗುತ್ತದೆ.ಇದನ್ನು ನಾವು ಊರಿನಲ್ಲಿ ಕಾರ್ಯಗತಗೊಳಿಸುವುದು ಅಗತ್ಯ ಎಂದು ಹೇಳಿದ ಡಾ.ಯು.ಪಿ.ಶಿವಾನಂದ ಅವರು ವೇದಿಕೆಯ ಗಣ್ಯರಿಗೆ ಲಂಚ ಭ್ರಷ್ಟಾಚಾರ ಬಹಿಷ್ಕಾರದ ಫಲಕವನ್ನು ನೀಡಿ ಘೋಷಣೆ ಕೂಗಿ, ಲಂಚ-ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನೆರವೇರಿಸಿದರು.ಸಭೆಯಲ್ಲಿ ಲಂಚ ಭ್ರಷ್ಟಾಚಾರ ಬಹಿಷ್ಕಾರ ಕುರಿತು ಘೋಷಣೆ ಮತ್ತು ಪ್ರತಿಜ್ಞೆ ಸ್ವೀಕರಿಸಲಾಯಿತು.

ಶಿಬಿರದಲ್ಲಿ ಹಿರಿಯ ನಾಗರಿಕರಿಗೆ ಸರಳ ವ್ಯಾಯಾಮ, ಸರಳ ಯೋಗಾಸನಗಳು, ಪ್ರಾಣಾಯಾಮ, ಧ್ಯಾನ, ಮುದ್ರೆಗಳು, ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುವ ಆರೋಗ್ಯಕರ ಆಹಾರ ಹಾಗೂ ಜೀವನ ಶೈಲಿಯ ಬಗ್ಗೆ ಉಪನ್ಯಾಸವನ್ನು ನೀಡಲಾಗಿತ್ತು.ಹಿರಿಯ ನಾಗರಿಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಥೈರಾಯಿಡ್, ಹೃದ್ರೋಗ, ಗಂಟುನೋವುಗಳು, ಮೂಳೆ ಸವೆತ, ನಿದ್ರಾಹೀನತೆ, ಒತ್ತಡ, ದೃಷ್ಟಿ ಸಮಸ್ಯೆ ಮೊದಲಾದವುಗಳ ನಿಯಂತ್ರಣಕ್ಕೆ ಸಲಹೆ, ಸೂಚನೆಗಳನ್ನು ತಜ್ಞ ವೈದ್ಯರು 10 ದಿನಗಳ ಶಿಬಿರದಲ್ಲಿ ಮಾಹಿತಿ ನೀಡಿದರು.ವಿಶೇಷವಾಗಿ ಅಶಕ್ತರಿಗೆ ಕುರ್ಚಿಯಲ್ಲಿ ಕುಳಿತು ಸರಳ ಯೋಗಾಸನ, ಪ್ರಾಣಾಯಾಮ, ಧ್ಯಾನಗಳನ್ನು ಕಲಿಸಿಕೊಡಲಾಗಿತ್ತು.

LEAVE A REPLY

Please enter your comment!
Please enter your name here