ರಾಮಕುಂಜ: 50ಕ್ಕೂ ಹೆಚ್ಚು ಗಿಡ ನೆಟ್ಟು ಬೇಬಿ ಕಸ್ವಿ ಹುಟ್ಟುಹಬ್ಬ ಆಚರಣೆ

ರಾಮಕುಂಜ: ರಾಮಕುಂಜ ಗ್ರಾಮದ ಕಾರಿಜಾಲ್ ಕೇಶವ ಮತ್ತು ಶ್ರದ್ಧಾ ದಂಪತಿಯ ಪುತ್ರಿ ಬೇಬಿ ಕಸ್ವಿಯ ಪ್ರಥಮ ವರ್ಷದ ಹುಟ್ಟುಹಬ್ಬ ಅಂಗವಾಗಿ ರಾಮಕುಂಜ ಗ್ರಾಮದ ಇಂದ್ರಾಂಡ ಅಂಗನವಾಡಿ, ಕಲ್ಲೇರಿ ಅಸುಪಾಸಿನ ಸಾರ್ವಜನಿಕ ಸ್ಥಳದಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಮಾದರಿಯಾಗಿ ಆಚರಿಸಲಾಯಿತು.

ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಭಟ್ ಬಿಳಿನೆಲೆರವರು ಮಾತನಾಡಿ, ಹುಟ್ಟುಹಬ್ಬಕ್ಕೆ ಎಲ್ಲರೂ ಉಡುಗೊರೆ ಅಪೇಕ್ಷಿಸಿದರೆ ಕೇಶವ ಗೌಡ ದಂಪತಿ ಗಿಡ ನೆಡುವ ಮೂಲಕ ಇವರೇ ಸಮಾಜಕ್ಕೆ ಒಂದು ದೊಡ್ಡ ಉಡುಗೊರೆ ಕೊಟ್ಟಿದ್ದಾರೆ ಎಂದರು. ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ ಮಾತನಾಡಿ, ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು ಪ್ರತಿಯೊಬ್ಬರೂ ಇದನ್ನು ಅನುಸರಿಸುವಂತಾಗಲಿ ಎಂದರು. ಜೆಸಿಐ ಮುಖಂಡ ಪ್ರದೀಪ್ ಬಾಕಿಲ ಮಾತನಾಡಿ, ಜೆಸಿಐನಲ್ಲಿದ್ದುಕೊಂಡು ಕೇಶವ ಅವರ ಆಲೋಚನೆ ಹಾಗೂ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇದೊಂದು ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದರು.

ಕೇಶವ ಗೌಡರವರು ಮಾತನಾಡಿ, ಅಭಿವೃದ್ಧಿ, ರಸ್ತೆ ಅಗಲೀಕರಣದ ನೆಪದಲ್ಲಿ ಮರಗಳನ್ನು ನಾಶಮಾಡಲಾಗುತ್ತಿದೆ. ಅಭಿವೃದ್ಧಿ ಬೇಕು, ಆದರೆ ಕಡಿದ ಮರದ ಬದಲಿಗೆ ಮತ್ತೆ ಗಿಡ ನೆಡುವ ಬಗ್ಗೆಯೂ ಚಿಂತಿಸಬೇಕಾಗಿದೆ. ಈಗಾಗಲೇ ಜಾರಿಯಲ್ಲಿರೋ ಸೀಡ್ ಬಾಲ್, ವನಮಹೋತ್ಸವ ಹೀಗೆ ಸರಕಾರದ ಯೋಜನೆಯ ಜತೆಗೆ ಸಾರ್ವಜನಿಕರ ಸಹಕಾರವು ಅಗತ್ಯ. ಇದೊಂದು ನಾವು ನಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಅತಿ ದೊಡ್ಡ ಉಡುಗೊರೆ ಎಂದರು.

ಹುಟ್ಟುಹಬ್ಬ ಆಚರಣೆ ವೈವಿದ್ಯಮಯ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮದೊಂದಿಗೆ ನಡೆಯಿತು. ಹಾಸ್ಯ ಕಲಾವಿದ, ರಾಜ್ ಸೌಡ್ಸ್ ಆಂಡ್ ಲೈಟ್ಸ್ ಚಲನಚಿತ್ರದಲ್ಲಿ ಹಾಸ್ಯ ನಟರಾಗಿ ಮಿಂಚಿದ ರವಿ ರಾಮಕುಂಜ, ಫಾದರ್ಸ್ ಡೇ ಪ್ರಯುಕ್ತ ಬಹುಮುಖ ಪ್ರತಿಭೆ (ಶಾಸ್ತ್ರಿಯ, ಭರತನಾಟ್ಯ, ಯಕ್ಷಗಾನ )ರಾಶಿ ಅವರ ತಂದೆ ಗಂಗಾಧರ ಗೌಡ ಎತ್ತರಪಡ್ಪುರವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಆದರ್ಶ ದಂಪತಿ ಸ್ಪರ್ಧೆಯಲ್ಲಿ ವಳಕಡಮ ವಿಶ್ವನಾಥ ಹಾಗೂ ಸರೋಜ ದಂಪತಿಯ ವಿಜೇತರಾದರು. ಕಾರ್ಯಕ್ರಮವನ್ನು ಹಾರ್ಟ್ಲಿ ಫ್ರೆಂಡ್ಸ್ ಬೆಂಗಳೂರು ಇದರ ಕಿರಣ್ ಪಜ್ಜಡ್ಕ ನಿರೂಪಿಸಿದರು. ಅರಣ್ಯಾಧಿಕಾರಿ ಪೂವಪ್ಪ, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಕದ್ರ, ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ರಾಮಕುಂಜ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಪವರ್‌ಮ್ಯಾನ್ ವಿಶ್ವನಾಥ್, ಮನು, ಆಲಂಕಾರು ಜೆಸಿಐ ಸದಸ್ಯರು, ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದು ಶುಭಕೋರಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.