ಏಕಬಳಕೆ ಪ್ಲಾಸ್ಟಿಕ್ ಮುಕ್ತ ಪುತ್ತೂರು ಮಾಡುವತ್ತ ನಗರಸಭೆಯ ಚಿತ್ತ..!

0
  • ದೇಶಾದ್ಯಂತ ನಿಷೇಧಗೊಂಡಿದೆ ಏಕಬಳಕೆಯ ಪ್ಲಾಸ್ಟಿಕ್
  • ವರ್ತಕರು- ಉದ್ಯಮಿಗಳಲ್ಲಿ ಜಾಗೃತಿ ಮೂಡಿಸಲು ಸತತ ಸಭೆ
  •  ಬೇಕಿದೆ ಸರ್ವರ ಸಹಕಾರ

ಪುತ್ತೂರು: ಜುಲೈ 1ರಿಂದ ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ (Single Use Plastic) ಬಳಕೆ ಮೇಲೆ ನಿಷೇಧ ಹೇರಲಾಗಿದೆ. ಕಸದ ಮತ್ತು ನಿರ್ವಹಣೆಯಿಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧದ ಭಾಗವಾಗಿ, ಶಾಂಪೂ ಬಾಟಲಿಗಳು, ಪಾಲಿಥೀನ್ ಪ್ಲಾಸ್ಟಿಕ್ ಚೀಲಗಳು ಮತ್ತು ಬಿಸಾಡಬಹುದಾದ ಕಾಫಿ, ಟೀ ಪ್ಲಾಸ್ಟಿಕ್ ಕಪ್‌ಗಳಂತಹ ವಸ್ತುಗಳನ್ನು ನಿಷೇಧಿಸಲಾಗಿದೆ. ಕರ್ನಾಟಕ ಸರ್ಕಾರವು 2016ರಿಂದಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಇದೀಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹೊರಡಿಸಿದ ಈ ಆದೇಶವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (KSPCB) ಗಡಿ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲು ಇನ್ನಷ ಸಹಾಯಕವಾಗಿದೆ. ಈ ಆದೇಶವನ್ನು ಎಲ್ಲೆಡೆ ಜಾರಿಗೆ ತರಲಾಗುತ್ತಿದ್ದು, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದಕ್ಕೆ ನಿಷೇಧ: ಏಕಬಳಕೆಯ ಇಯರ್‌ಬಡ್ಸ್, ಸ್ಪೂನ್, ಐಸ್‌ಕ್ರೀಮ್, ಲಾಲಿಪೋಪ್ ಸ್ಟಿಕ್ಸ್, ಸ್ಟ್ರಾಗಳು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು, ಹಲವು ವಿಧಧ ಥರ್ಮೊಕೋಲ್‌ಗಳು ಇತ್ಯಾದಿಗಳ ಬಳಕೆಗೆ ನಿಷೇಧ ಹೇರಲಾಗಿದೆ. ಜೊತೆಗೆ ಈಗ ಬಳಕೆ ಮಾಡುವ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಇತ್ಯಾದಿಗಳನ್ನು ಕೂಡ ಸರ್ಕಾರದ ಮಾರ್ಗಸೂಚಿಯಂತೆ ಸಂಪೂರ್ಣ ನಿಷೇಧಿಸಲಾಗಿದೆ. ಇವುಗಳನ್ನು ನಿಯಂತ್ರಿಸುವುದು ಬಹಳ ದೊಡ್ಡ ಸವಾಲಾಗಿತ್ತು. ಯಾಕೆಂದರೆ ಇದು ಭೂಮಿಯಲ್ಲಿ ಸೇರಿಕೊಂಡರೆ ಸಾವಿರಾರು ವರ್ಷಗಳಾದರೂ ವಿಘಟನೆಯಾಗಿ ಕರಗುವುದಿಲ್ಲ. ಮನುಷ್ಯನ ಜೀವನ ಸರಾಸರಿ 80-90 ವರ್ಷಗಳಲ್ಲಿ ಮುಗಿದರೂ ಪ್ಲಾಸ್ಟಿಕ್‌ನ ಜೀವನ ಸಾವಿರ ವರ್ಷವಾದರೂ ಮುಗಿಯುವುದಿಲ್ಲ. ಪ್ರತೀವರ್ಷ ವಿಶ್ವಾದ್ಯಂತ 80 ಮಿಲಿಯನ್ ಟನ್ ಪ್ಲಾಸ್ಟಿಕ್‌ನ್ನು ಸಮುದ್ರಕ್ಕೆ ಹಾಕುತ್ತಿದ್ದೇವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟಿದೆ. ಜಲಚರಗಳು, ಪ್ರಾಣಿಸಂಕುಲಗಳನ್ನು ಉಳಿಸಬೇಕೆನ್ನುವ ನಿಟ್ಟಿನಲ್ಲಿ ಜೊತೆಗೆ ಮನುಷ್ಯ ಜೀವನದ ಮೇಲಾಗುವ ದುಷ್ಪರಿಣಾಮಗಳನ್ನು ಕೂಡ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ. ಇದರಂತೆ ಪುತ್ತೂರು ನಗರಸಭೆಯ ಮೂಲಕ ಪ್ಲಾಸ್ಟಿಕ್ ಮುಕ್ತ ಪುತ್ತೂರು ನಗರ ನಿರ್ಮಾಣಕ್ಕೆ ಸಿದ್ದತೆ ಆರಂಭಗೊಂಡಿದೆ.

 

ಪುತ್ತೂರು ನಗರಸಭೆಗೆ ಸಂಬಂಧಿಸಿದಂತೆ ನಗರದಲ್ಲಿರುವ ಎಲ್ಲಾ ಉದ್ದಿಮೆದಾರರ ಸಂಘಗಳನ್ನು ಕರೆದು ಸಭೆ ನಡೆಸಲಾಗಿದೆ. ಬೀದಿಬದಿ ವ್ಯಾಪಾರಸ್ಥರು, ಸಂಘ ಸಂಸ್ಥೆಗಳನ್ನು ಕರೆದು ಸಭೆ ನಡೆಸಲಿದ್ದೇವೆ. ಶಾಲಾ ಮಕ್ಕಳಿಗೂ ಅರಿವು ಮೂಡಿಸಲಾಗುತ್ತಿದೆ. ಮಾಂಸಾಹಾರ ಮಾರುಕಟ್ಟೆಗಳು, ಮೀನು ಮಾರುಕಟ್ಟೆಗಳ ವ್ಯಾಪಾರಸ್ಥರು ಹೀಗೆ ಎಲ್ಲರಿಗೂ ಅರಿವು ಮೂಡಿಸುವ ಕೆಲಸ ಆಗುತ್ತಿದೆ. ಇದನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬರು ಕೂಡ ಪ್ಲಾಸ್ಟಿಕ್ ಮುಕ್ತ ಪುತ್ತೂರು ನಗರವನ್ನು ನಿರ್ಮಿಸಲು ನಗರಸಭೆಯ ಜೊತೆಗೆ ಕೈಜೋಡಿಸಬೇಕು. ಕೈಜೋಡಿಸದೇ ಇದ್ದಲ್ಲಿ, ಸರ್ಕಾರದ ನಿಯಮಗಳಂತೆ ದಂಡ ವಿಧಿಸುವುದು, ಟ್ರೇಡ್ ಲೈಸೆನ್ಸ್ ಕ್ಯಾನ್ಸಲ್ ಮಾಡುವುದು, ಪ್ರಕರಣ ದಾಖಲಿಸುವುದು ಇತ್ಯಾದಿಗಳ ಮೂಲಕ ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರಯತ್ನಿಸುತ್ತೇವೆ ಎಂದು ಪುತ್ತೂರು ನಗರಸಭೆಯ ಪೌರಾಯುಕ್ತ ಮಧು ಎಸ್. ಮನೋಹರ್ ತಿಳಿಸಿದ್ದಾರೆ.

ಸತತ ಸಭೆ-ಜಾಗೃತಿ: ಏಕಬಳಕೆ ಪ್ಲಾಸ್ಟಿಕ್ ನಿಷೇಧ ಕಾನೂನು ಜಾರಿಗೊಳ್ಳುವ ಮೊದಲೇ ಅಂದರೆ ಜೂ.27ರಂದು ಎಲ್ಲಾ ವರ್ತಕರ ಸಂಘದ ಸಭೆಯನ್ನು ಕೂಡ ಕರೆಯಲಾಗಿತ್ತು. ವರ್ತಕರ ಸಂಘದ ಜೊತೆಗೆ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಕರೆಸಿ ಈಗಾಗಲೇ ಸಭೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಕೆಲವರು ಕಾಲಾವಕಾಶ ಕೇಳಿದ್ದರೂ ನಿಯಮಗಳ ಹಿನ್ನೆಲೆಯಲ್ಲಿ ನೀಡಲು ಸಾಧ್ಯವಿಲ್ಲ. ಈಗ ಸ್ಟಾಕ್ ಇರುವ ವರ್ತಕರು ಅದನ್ನು ಹಿಂದೆ ಕಳುಹಿಸಿ ಹಂತ ಹಂತವಾಗಿ ನಿಷೇಧ ಮಾಡಬೇಕು. ಪ್ರತೀ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಕೈಚೀಲ ದೊರೆಯುವುದಿಲ್ಲ, ಬಟ್ಟೆ ಕೈಚೀಲವನ್ನು ತರಬೇಕು ಇತ್ಯಾದಿ ಫಲಕಗಳನ್ನು ಹಾಕಬೇಕು. ಸಿಗರೇಟ್ ಪ್ಯಾಕ್ ಮೇಲಿನ ಪ್ಲಾಸ್ಟಿಕ್, ಸ್ವೀಟ್ ಅಂಗಡಿಗಳಲ್ಲಿ ಬಳಸುವ ತೆಳು ಪ್ಲಾಸ್ಟಿಕ್ ಹೀಗೆ ಎಲ್ಲದಕ್ಕೂ ನಿಷೇಧವಿದೆ. ಇದನ್ನು ಪಾಲಿಸದೇ ಇದ್ದಲ್ಲಿ ಮುಂದಿನ ಜನಾಂಗಕ್ಕೆ ಪ್ಲಾಸ್ಟಿಕ್ ಪರ್ವತವನ್ನು ನಿರ್ಮಿಸಿ ಕೊಟ್ಟಂತಾಗುತ್ತದೆ ಎನ್ನುತ್ತಾರೆ ಪೌರಾಯುಕ್ತರು.

ಸದ್ಯಕ್ಕಿಲ್ಲ ಕಾರ್ಯಾಚರಣೆ: ಸದ್ಯಕ್ಕೆ ನಗರಸಭೆಯು ಯಾವುದೇ ಕಾರ್ಯಾಚರಣೆ ಆರಂಭಿಸಿಲ್ಲ. ಪ್ರತೀ ಉದ್ದಿಮೆದಾರರಿಗೂ ಮೊದಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಾರದಲ್ಲಿ 3-4 ಸಭೆಗಳನ್ನು ಮಾಡಿ ಬೇರೆ ಬೇರೆ ಹಂತದ ಉದ್ದಿಮೆದಾರರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ. ಸಂಘಸಂಸ್ಥೆಗಳು, ಸ್ವಸಹಾಯ ಸಂಘಗಳನ್ನು ಕರೆದು ಎಲ್ಲಾ ಹಂತದಲ್ಲೂ ಜಾಗೃತಿ ಮೂಡಿಸಲಾಗುತ್ತದೆ. ಬಳಿಕ ಕಾರ್ಯಾಚರಣೆಗೆ ಇಳಿಯಲಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ತಲುಪಬೇಕು. ಇಲ್ಲದೇ ಇದ್ದಲ್ಲಿ ಸಮಂಜಸವಾಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬರಿಗೂ ಮಾಹಿತಿ ನೀಡಿ ನಂತರ ಕಾರ್ಯಾಚರಣೆಗೆ ಇಳಿಯಲಾಗುತ್ತದೆ ಎನ್ನುವುದು ಪೌರಾಯುಕ್ತರ ಮಾತು.

2016ರಲ್ಲೇ ರಾಜ್ಯ ಸರ್ಕಾರ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಿದೆ. ಈಗ ಕೇಂದ್ರ ಸರ್ಕಾರವೂ ಕೂಡ ಏಕಬಳಕೆ ಪ್ಲಾಸ್ಟಿಕ್‌ನ್ನು ಸಂಪೂರ್ಣ ನಿಷೇಧ ಮಾಡಿದೆ. ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ತುಂಬಾ ಹಾನಿಯಿದೆ. ಇದನ್ನು ತಡೆಗಟ್ಟಬೇಕಿದ್ದರೆ ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕು. ಉತ್ಪಾದನೆ ಮಾಡುವುದು, ಮಾರಾಟ ಮಾಡುವುದು, ಉಪಯೋಗ ಮಾಡುವುದು ಸಂಪೂರ್ಣ ನಿಲ್ಲಬೇಕು. ಇಲ್ಲದೇ ಇದ್ದಲ್ಲಿ ಈ ಕಾನೂನನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಲು ನಗರಸಭೆ ಕ್ರಮ ಕೈಗೊಳ್ಳಲಿದೆ. ದಂಡ ವಿಧಿಸುವುದು, ಕೇಸ್ ಹಾಕುವುದು, ಉದ್ದಿಮೆ ಪರವಾನಿಗೆ ರದ್ದುಪಡಿಸಲು ನಮಗೆ ಇಷ್ಟವಿಲ್ಲ. ಜನತೆ ಕೈಜೋಡಿಸಿದರೆ ಪುತ್ತೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಬಹುದು. ಮಧು ಎಸ್. ಮನೋಹರ್, ಪೌರಾಯುಕ್ತರು, ನಗರಸಭೆ ಪುತ್ತೂರು

ಬೀಳಲಿದೆ ದಂಡ: ಇನ್ನು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆಯೂ ಮಾಲಿನ್ಯ ನಿಯಂತ್ರಣಾ ಮಂಡಳಿ ಮತ್ತು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ದಂಡವನ್ನು ವಿಧಿಸುವ ಕಾನೂನು ಜಾರಿಗೆ ತಂದಿದೆ. ಯಾರು ಏಕಬಳಕೆ ಪ್ಲಾಸ್ಟಿಕ್‌ಗಳನ್ನು ಉತ್ಪಾದನೆ ಮಾಡುತ್ತಾರೋ ಆ ಕೈಗಾರಿಕೆ ಸಂಸ್ಥೆಗಳಿಗೆ ಒಂದು ದಂಡವನ್ನು ನಿಗದಿಪಡಿಸಲಾಗಿದೆ. ಮೊದಲನೇ ಉಲ್ಲಂಘನೆಗೆ 5 ಸಾವಿರ ರೂ., ಎರಡನೇ ಉಲ್ಲಂಘನೆಗೆ 10 ಸಾವಿರ, ಮೂರನೇ ಬಾರಿಗೆ 25 ಸಾವಿರ ನಾಲ್ಕನೇ ಹಂತದಲ್ಲಿ ಪರವಾನಿಗೆಯನ್ನೇ ರದ್ದುಪಡಿಸುವುದು ಜೊತೆಗೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದೆ. ರಿಟೈಲ್ ಶಾಪ್‌ಗಳಿಗೆ ಆರಂಭಿಕವಾಗಿ 2 ಸಾವಿರ, 5 ಸಾವಿರ, 10 ಸಾವಿರದವರೆಗೆ ದಂಡ ವಿಧಿಸಲು ಅವಕಾಶವಿದೆ. ಬೀದಿಬದಿ ವ್ಯಾಪಾರಸ್ಥರಿಗೆ ಕೂಡ ದಂಡ ವಿಧಿಸಲಾಗುತ್ತದೆ. ಈಗಾಗಲೇ ಸಮಯಾವಕಾಶ ಮುಕ್ತಾಯಗೊಂಡಿದೆ. ಉದ್ದಿಮೆ ಪರವಾನಿಗೆಗಳ ಸಂದರ್ಭ ಸಂಪೂರ್ಣ ಪರಿಶೀಲನೆ ಮಾಡಿ ನವೀಕರಣ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here