ಪುತ್ತೂರು ಬ್ಲಾಕ್ ಕಾಂಗ್ರೆಸ್ ವಾರ್ಷಿಕ ಮಹಾಸಭೆ

0

ಪುತ್ತೂರು: ಬಿಜೆಪಿ ದುರಾಡಳಿತವನ್ನು ಕೊಣೆಗಾನಿಸುವ ನಿಟ್ಟಿನಲ್ಲಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಿದ ಮಾದರಿಯಲ್ಲಿ ಬಿಜೆಪಿ ತೊಲಗಿಸಿ ಎಂದು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯಬೇಕು. ಕಪ್ಪು ಹಣ ಮಾರಾಟ ಮಾಡಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ರಚಿಸಿದೆ. ರಾಜಾಸ್ಥಾನ ಅವರು ಮುಂದಿನ ಗುರಿಯಾಗಿದ್ದು ಬಿಜೆಪಿ ಭಾರತೀಯ ಜನತಾ ಪಾರ್ಟಿಯಲ್ಲ. ಅದು ಬಿಸ್‌ನೆಸ್ ಜನತಾ ಪಾರ್ಟಿಯಾಗಿದೆ ಎಂದು ಕೆಪಿಸಿಸಿ ಉಪಾಧಕ್ಷರು, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಯಾಗಿರುವ ಮಧು ಬಂಗಾರಪ್ಪ ಹೇಳಿದರು.


ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯ ಮೇಲಂತಸ್ಥಿನ ಸಭಾಂಗಣದಲ್ಲಿ ಜು.5ರಂದು ನಡೆದ ಪುತ್ತೂರು ಬ್ಲಾಕ್ ಕಾಂಗ್ರೆಸ್ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಧಾರ್ಮಿಕ, ಶೈಕ್ಷಣಿಕ, ವ್ಯವಹಾರಿಕವಾಗಿ ಬಿಜೆಪಿಯವರು ಸಮಾಜವನ್ನು ಒಡೆಯುತ್ತಿದ್ದಾರೆ. ಅಂಬೇಡ್ಕರ್‌ರವರ ಸಂವಿಧಾನದಿಂದಾಗಿ ಅಧಿಕಾರಕ್ಕೆ ಬಂದಿದ್ದರೂ ಈಗ ಅದೇ ಸಂವಿಧಾನವನ್ನು ತಿದ್ದುಪಡಿ ಮಾಡಲು ಹೊರಟಿರುವ ಬಿಜೆಪಿಯವರು ದಡ್ಡರು ಎಂದರು. ಕುಮಾರ್ ಬಂಗಾರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕೆ ನೀಡಿದ ಕೊಡುಗೆ ಇಂದಿಗೂ ಜನ ಮಾನಸದಲ್ಲಿ ಜೀವಂತವಾಗಿದೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿ ರೈತರಿಗೆ ಉಚಿತ ವಿದ್ಯುತ್, ಅಕ್ರಮ-ಸಕ್ರಮ ಯೋಜನೆ, ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿ ಅನ್ನಭಾಗ್ಯವನ್ನು ನೀಡಿರುತ್ತಾರೆ. ಆಶ್ರಯ ಯೋಜನೆಯಲ್ಲಿ ಸಾಕಷ್ಟು ಮನೆಗಳು, ಗ್ರಾ.ಪಂ., ತಾ.ಪಂ. ಹಾಗೂ ಜಿ.ಪಂಗಳಿಗೆ ಸಾಕಷ್ಟು ಅನುದಾನಗಳು ಸಿದ್ದರಾಮಯ್ಯನವರ ಅವಧಿಯಲ್ಲಿ ಬಂದಿದ್ದು ಕರಾವಳಿಗೆ ಕಾಂಗ್ರೆಸ್‌ನ ಆವಶ್ಯಕತೆಯಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆಯನ್ನು ಜಾರಿಗೆ ತಂದಿರುವುದು ಕಾಂಗ್ರೆಸ್‌ನ ಕೊಡುಗೆಯಾಗಿದೆ. ಆದರೂ ನಾರಾಯಣ ಗುರುಗಳು, ಉಳ್ಳಾಲ ರಾಣಿ ಅಬ್ಬಕರನ್ನು ಪಠ್ಯಪುಸ್ತಕದಲ್ಲಿ ಕೈ ಬಿಡುವ ಮೂಲಕ ಬಿಜೆಪಿ ಕರಾವಳಿಗೆ ಅನ್ಯಾಯ ಮಾಡುತ್ತಿದೆ. ಅವರು ಸಂಪ್ರದಾಯಗಳನ್ನು ಒಡೆದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಬೆಳಿಗ್ಗೆಯಿಂದ ಸಂಜೆ ತನಕ ಸುಳ್ಳು ಹೇಳುತ್ತಿದ್ದಾರೆ. ಮೋದಿಯವರು ತಾನು ಮಾಡಿದ ತಪ್ಪನ್ನು ಮರೆ ಮಾಚಲು ಬಾಂಬ್ ಸ್ಪೋಟ ಮಾಡುತ್ತಿದ್ದಾರೆ ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಕಾರ್ಯಕರ್ತರೇ ಪಕ್ಷದ ಜೀವಾಳ. ಕಾರ್ಯಕರ್ತರಿಂದ ಪಕ್ಷದ ಸಂಘಟನೆ ಬಲೀಷ್ಠವಾಗಿ ಬೆಳೆದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಜಯಗಳಿಸುವುದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಇದಕ್ಕಾಗಿ ಬಿಜೆಪಿ ಸರಕಾರದ ವಿಫಲತೆ ಹಾಗೂ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದರು. ಪುತ್ತೂರಿನಲ್ಲಿ ಶಾಸಕರಿಂದ ಮಾಡಲಾಗದ ಕೆಲಸಗಳನ್ನು ಕಾಂಗ್ರೆಸ್‌ನ ಕಾರ್ಯಕರ್ತರು, ನಾಯಕರು ಮಾಡಿದ್ದಾರೆ. ಬಿಜೆಪಿ ಹಿಂದುತ್ವ ಮೋದಿ ಹೆಸರಿನಲ್ಲಿ ಮಾತ್ರ. ರಾಜಸ್ಥಾನದಲ್ಲಿ ಕನ್ನಯ್ಯಲಾಲ್ ಹತ್ಯೆಯಾದಾಗ ಹೋರಾಟ ಮಾಡಿದವರು ಇಲ್ಲಿ ನಡು ರಸ್ತೆಯಲ್ಲಿ ಮಹಿಳೆಯ ಹತ್ಯೆಯಾದಾಗ ಧ್ವನಿ ಎತ್ತಿಲ್ಲ. ಕೊಲೆಗಾರ ಯಾರೇ ಇರಲಿ ಕಠಿಣ ಶಿಕ್ಷೆಯಾಗಬೇಕು ಎಂದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪುತ್ತೂರು ಬ್ಲಾಕ್ ಉಸ್ತುವಾರಿ ರಕ್ಷಿತ್ ಶಿವರಾಮ್ ಮಾತನಾಡಿ, ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಇತರ ಎಲ್ಲಾ ಸಮೀಕ್ಷೆಗಳಲ್ಲಿಯೂ ಮುಂದಿನ ಬಾರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವರದಿ ನೀಡಿದೆ. ಹೀಗಾಗಿ ಜಿಲ್ಲೆಯ ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದೆ. ಇದರಲ್ಲಿ ಪುತ್ತೂರು ಸೇರಿಕೊಳ್ಳಬೇಕು ಎಂದರು. ಇದಕ್ಕಾಗಿ ಪಕ್ಷವನ್ನು ಬೂತ್‌ಮಟ್ಟದಲ್ಲಿ ಬಲೀಷ್ಠಗೊಳಿಸಬೇಕು. ಪ್ರತಿಯೊಬ್ಬರು ಒಮ್ಮತದಿಂದ ಕೆಲಸ ಮಾಡಿ ಒಡೆದ ಮನಸ್ಸುಗಳನ್ನು ಮತ್ತೆ ಕಾಂಗ್ರೆಸ್‌ಗೆ ಕರೆತಂದು ಅವರಿಗೆ ದೈರ್ಯ ತುಂಬುವ ಕೆಲಸವಾಗಬೇಕು. ಈ ಹಿಂದೆ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಪಾಯ ಬಂದಾಗಲೂ ಕರ್ನಾಟಕದ ಕಾಂಗ್ರೆಸ್ ಶಕ್ತಿ ನೀಡಿದೆ. ಅದು ಈ ಭಾರಿಯೂ ನಡೆಯಬೇಕು. ಪಕ್ಷದ ಮೇಲೆ ಪ್ರೀತಿಯಿಂದ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ದೃಢ ಸಂಕಲ್ಪದಿಂದ ಪ್ರತಿಯೊಬ್ಬರು ಒಮ್ಮತದಿಂದ ಕೆಲಸ ಮಾಡಬೇಕು ಎಂದು ಹೇಳಿದ ಅವರು ಕೆಪಿಸಿಸಿಯ ನಿರ್ದೇಶನಗಳನ್ನು ತಿಳಿಸಿದರು.


ಕೆಪಿಸಿಸಿ ಸಂಯೋಜಕ ಟಿ.ಪಿ ರಮೇಶ್ ಮಾತನಾಡಿ, ವಿಧಾನ ಸಭಾ ಚುನಾವಣೆಗೆ 284 ದಿನಗಳು ಮಾತ್ರ ಬಾಕಿಯಿದೆ. ಇದಕ್ಕಾಗಿ ಮತಗಟ್ಟೆಗಳಲ್ಲಿ ಪಕ್ಷ ಬಲಿಷ್ಠ ಗೊಳಿಸಬೇಕು. ಪ್ರತಿ ಮತಗಟ್ಟೆಗೆ 50 ಜನರ ತಂಡ ರಚಿಸಿ ಪಕ್ಷವನ್ನು ಬಲಿಷ್ಟವಾಗಿ ಸಂಘಟಿಸುವುದು ಕೆಪಿಸಿಸಿ ಸೂಚನೆಯಂತೆ ಶೇ.50ರಷ್ಟು ಯುವಕರನ್ಮು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಮೂವತ್ತು ಮನೆಗಳಿಗೆ ಮೂರು ಮಂದಿಯನ್ನು ನೇಮಿಸಿಕೊಂಡು ಪಕ್ಷ ಸಂಘಟಿಸಿ ಬಿಜೆಪಿಯನ್ನು ಸೋಲಿಸಬೇಕು. ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಧ್ವನಿ ಎತ್ತಬೇಕು. ಅಭ್ಯರ್ಥಿ ಯಾರೇ ಆಗಿರಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಂಬ ಧ್ಯೇಯದಲ್ಲಿ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ವಿಶಿಷ್ಠ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾದರಿಯಾಗಿ ಕೆಲಸ ಮಾಡುತ್ತಿದೆ. ಶಿಸ್ತು, ಪ್ರಾಮಾಣಿಕತೆಯ ಕೆಲಸಗಳಿಗೆ ಪುತ್ತೂರು ಬ್ಲಾಕ್ ಸಾಕ್ಷಿಯಾಗಿದೆ. ಎಂ.ಬಿ ವಿಶ್ವನಾಥ ರೈಯವರನ್ನು ಅಧ್ಯಕ್ಷರ ನೇಮಕದ ಸಂದರ್ಭಲ್ಲಿದ್ದ ಗೊಂದಲಗಳಿಗೆ ಸಂಘಟನೆಯ ಮೂಲಕ ಉತ್ತರಕೊಟ್ಟಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಪಕ್ಷವನ್ನು ಬಲೀಷ್ಠವಾಗಿ ಸಂಘಟಿಸಿರುವುದನ್ನು ಶ್ಲಾಘಿಸಿದರು. ಶೀಘ್ರದಲ್ಲೇ ತಾ.ಪಂ, ಜಿ.ಪಂ ಚುನಾವಣೆಗಳು ಬರಲಿದ್ದು ಮತ ಗಳಿಕೆಯೇ ಪ್ರಮುಖ ಗುರಿಯಾಗಿಸಿಕೊಂಡು ಎಲ್ಲಾ ಘಟಕಗಳು ಒಗ್ಗಟ್ಟಿನಿಂದ ಬೂತ್ ಮಟ್ಟದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಲಾಕ್ ಕಾಂಗ್ರೆಸ್‌ನ ನೂತನ ಸಮಿತಿ ವರ್ಷ ಪೂರೈಸಿದ್ದು ಮಹಾಸಭೆ ನಡೆಸಲಾಗುತ್ತಿದೆ. ಇಲ್ಲಿ ತಂಡವಾಗಿ ಎಲ್ಲಾ ಬೂತ್‌ಗಳಿಗೆ ಭೇಟಿ ನೀಡಲಾಗುತ್ತಿದೆ. ಬೂತ್, ವಿವಿಧ ಘಟಕಗಳ ಮಾಸಿಕ ಸಭೆಗಳ ವರದಿಯನ್ನು ಪಡೆಯಲಾಗುತ್ತಿದೆ. ಪ್ರತಿಯೊಬ್ಬರು ಪಕ್ಷದಲ್ಲಿ ಶಿಸ್ತು ಬದ್ದವಾಗಿ ಕೆಲಸ ಮಾಡುತ್ತಿದ್ದಾರೆ. 15,000 ಸದಸ್ಯತ್ವ ನೋಂದಾವಣೆಯ ಗುರಿ ಹಾಕಿಕೊಳ್ಳಲಾಗಿದ್ದು 11,186 ಸದಸ್ಯತ್ವ ನೋಂದಾವಣೆ ಮಾಡಲಾಗಿದೆ. ಪಕ್ಷದ ಕಚೇರಿಗೆ ಬರುವವರಿಗೆ, ಪಕ್ಷದ ಮೇಲಿನ ಪ್ರೀತಿ ಇರುವವರಿಗೆ ಜವಾಬ್ದಾರಿ ಹಂಚಲಾಗಿದೆ ಎಂದರು.

ಜಿ.ಪಂ ಮಾಜಿ ಸದಸ್ಯ ಎಂ,ಎಸ್ ಮಹಮ್ಮದ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಮಹಮ್ಮದ್ ಬಡಗ್ನನೂರು, ವೇದನಾಥ ಸುವರ್ಣ, ಮಹೇಶ್ ರೈ ಅಂಕೊತ್ತಿಮಾರ್, ಮುರಳೀಧರ ರೈ ಮಠಂತಬೆಟ್ಟು, ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ ಉಪಸ್ಥಿತರಿದ್ದರು.

ಸನ್ಮಾನ:
ಕೆಪಿಸಿಸಿ ಉಪಾಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮಧು ಬಂಗಾರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪುತ್ತೂರು ಬ್ಲಾಕ್ ಉಸ್ತುವಾರಿ ರಕ್ಷಿತ್ ಶಿವರಾಮ್, ಬ್ಲಾಕ್ ಕಾಂಗ್ರೆಸ್ ಹಿರಿಯ ಸದಸ್ಯ ಗಂಗಾಧರ ಗೌಡ ಕೆಮ್ಮಾರ ದಂಪತಿಯನ್ನು ಸನ್ಮಾನಿಸಲಾಯಿತು. ಮಹಿಳಾ ಘಟಕ ಉತ್ತಮ ಘಟಕ ಪುರಸ್ಕಾರ, ಪಾಣಾಜೆ ವಲಯ ಕಾಂಗ್ರೆಸ್ ಉತ್ತಮ ವಲಯ ಹಾಗೂ ಬ್ಲಾಕ್ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ಜಾನ್ ಸಿರಿಲ್ ರೋಡ್ರಿಗಸ್‌ರವರಿಗೆ ಉತ್ತಮ ಪದಾಧಿಕಾರಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಯಿತು.

ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ ಸೋಜ ಹಾಗೂ ಪುತ್ತೂರು ಬ್ಲಾಕ್ ಅಧ್ಯಕ್ಷ ವಿಶ್ವಜಿತ್ ವಂದೇ ಮಾತರಂ ಹಾಡಿದರು. ಎಂ.ಬಿ ವಿಶ್ವನಾಥ ರೈ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ವಾರ್ಷಿಕ ವರದಿ ವಾಚಿಸಿದರು. ಪೂರ್ಣೇಶ್ ಕುಮಾರ್ ಹಾಗೂ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಿದ್ದೀಕ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ವಂದಿಸಿದರು. ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಆಯಾ ಘಟಕಗಳ ವರದಿಯನ್ನು ಮಂಡಿಸಿದರು.

LEAVE A REPLY

Please enter your comment!
Please enter your name here