ರಾಮಕುಂಜ ಪ.ಪೂ.ಕಾಲೇಜಿನಲ್ಲಿ ‘ವಿಜ್ಞಾನ ವನ’ ಉದ್ಘಾಟನೆ

0

  • ಸಮರ್ಪಣಾ ಮನೋಭಾವದಿಂದ ಬದುಕು ಸಾರ್ಥಕ: ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

 

ರಾಮಕುಂಜ: ಶ್ರೀ ಖಿಂಚಾ ಮತ್ತು ಖಾರಿವಾಲ್ ಫ್ಯಾಮಿಲೀಸ್ ಕ್ಯಾಪ್ಸ್ ಫೌಂಡೇಶನ್ ವತಿಯಿಂದ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಹೊರಾಂಗಣದಲ್ಲಿ ಸುಮಾರು 25ಲಕ್ಷ ರೂ.,ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವೈಜ್ಞಾನಿಕ ಪ್ರಯೋಗಗಳ ಅಪರೂಪದ ಯೋಜನೆಯಾಗಿರುವ ಶ್ರೀ ವಿಶ್ವೇಶತೀರ್ಥ ಸೈನ್ಸ್‌ಪಾರ್ಕ್(ವಿಜ್ಞಾನ ವನ)ನ ಉದ್ಘಾಟನೆ ಜು.9ರಂದು ಬೆಳಿಗ್ಗೆ ನಡೆಯಿತು.


ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ವಿಜ್ಞಾನವನ ಉದ್ಘಾಟಿಸಿದರು. ಬಳಿಕ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಮನುಷ್ಯ ಸಮಾಜದಿಂದ ಬೇಕಾದಷ್ಟು ಪಡೆದುಕೊಂಡು ಸಿರಿವಂತನಾದಾಗ ತಾನು ಗಳಿಸಿದ ಒಂದಂಶವನ್ನು ಸಮಾಜಕ್ಕೆ ಸಮರ್ಪಣೆ ಮಾಡಿ ಬದುಕು ಸಾರ್ಥಗೊಳಿಸಬೇಕು. ಇಂತಹ ಸಮರ್ಪಣಾ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕೆಂದು ನುಡಿದರು. ಕ್ಯಾಂಪ್ಸ್ ಫೌಂಡೇಶನ್‌ನ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮುಂಡ್ಕೂರು ತಾನು ಬೆಳೆಯುವದರೊಂದಿಗೆ ಇತರರನ್ನೂ ಬೆಳೆಸಿ ಸಮಾಜಕ್ಕೆ ತನ್ನನ್ನು ಸಮರ್ಪಿಸಿಕೊಂಡು ದೇಶದ ಏಳಿಗೆಗ ಮಹತ್ತರವಾದ ಕೊಡುಗೆ ನೀಡುತ್ತಿದ್ದಾರೆ. ಇಂತವರಿಗೆ ಸಮಾಜದ ನೈತಿಕ ಪ್ರೋತ್ಸಾಹ ಅಗತ್ಯವಿದೆ. ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ನಮ್ಮ ನಿರ್ನಾಮಕ್ಕೆ ಕಾರಣವಾದೀತು ಎಂದು ಸ್ವಾಮೀಜಿ ಎಚ್ಚರಿಸಿದರು.

ಕ್ಯಾಪ್ಸ್ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮುಂಡ್ಕೂರು ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ಬಾರಿ ಭಾರತದ ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ಭದಲ್ಲಿ ಹೊರಾಂಗಣದಲ್ಲಿ ವೈಜ್ಞಾನಿಕ ಪ್ರಯೋಗಗಳ ಅಪರೂಪದ ಯೋಜನೆ ವಿಜ್ಞಾನ ವನ ರಾಮಕುಂಜ ಸೇರಿ ದ.ಕ.ಜಿಲ್ಲೆಯ ಮೂರು ಕಡೆಗಳಲ್ಲಿ ನಿರ್ಮಾಣವಾಗಿದೆ. ಇದೊಂದು ವಿನೂತನ ಪರಿಕಲ್ಪನೆಯಾಗಿದೆ. ಇದರಲ್ಲಿರುವುದು ಆಟದ ಸಾಮಾಗ್ರಿಯಲ್ಲ, ಬುದ್ಧಿವಂತಿಕೆಗೆ ಬಳಸುವ ಸಾಧನ ಆಗಿದೆ. ಎಲ್ಲಾ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ರಾಮಕುಂಜ ಅಲ್ಲದೇ ಪರಿಸರದ ಶಾಲೆ, ಕಾಲೇಜಿನ ವಿದ್ಯಾರ್ಥಿಗಳೂ ಇದರ ಬಳಕೆ ಮಾಡಬಹುದೆಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕಟೀಲು ಪದವಿಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕ ಅತ್ತಾವರ ನಿರೇಂದ್ರರವರು ಮಾತನಾಡಿ, ನನ್ನ ಸುದೀರ್ಘ ೩೭ ವರ್ಷದ ಸೇವೆಯಲ್ಲಿ ನನಗೆ ಸಿಕ್ಕಿರುವ ಪ್ರಶಸ್ತಿ ಎಂದರೆ ಅದು ಕ್ಯಾಂಪ್ಸ್ ಫೌಂಡೇಶನ್‌ನ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ. ಬಡ ಕುಟುಂಬದ ಚಂದ್ರಶೇಖರ್‌ರವರು ಸಿಎ ಉತ್ತೀರ್ಣ ಆಗುವ ತನಕವೂ ಅವರ ಮನೆಗೆ ವಿದ್ಯುತ್ ಸಂಪರ್ಕ ಆಗಿರಲಿಲ್ಲ. ಚಿಮಿನಿ ದೀಪದಡಿಯಲ್ಲಿ ಓದಿ ಈಗ ಶೈಕ್ಷಣಿಕವಾಗಿ ಅತ್ಯುನ್ನತ ಸ್ಥಾನಕ್ಕೆ ಏರಿದ್ದಾರೆ. ಈ ಸಾಧಕ ಯುವ ಜನತೆಗೆ ರೋಲ್ ಮಾಡೆಲ್ ಆಗಿದ್ದಾರೆ ಎಂದರು.

ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.,ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳಿಗೆ ೧೦೦ ವರ್ಷಗಳ ಇತಿಹಾಸವಿದೆ. ಇಲ್ಲಿನ ವಿದ್ಯಾಸಂಸ್ಥೆಗಳಲ್ಲಿ ಈಗ ೨೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಇದೀಗ ಕ್ಯಾಪ್ಸ್ ಫೌಂಡೇಶನ್‌ನವರು ಹೊರಾಂಗಣದಲ್ಲಿ ಸುಮಾರು ೨೫ ಲಕ್ಷ ರೂ.,ವೆಚ್ಚದಲ್ಲಿ ವಿಜ್ಞಾನ ವನ ನಿರ್ಮಾಣ ಮಾಡುವ ಮೂಲಕ ಸಂಸ್ಥೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಬೇಕಾದ ಎಲ್ಲಾ ಪ್ರಯೋಗಗಳೂ ಈ ವಿಜ್ಞಾನ ವನದಲ್ಲಿ ಇದೆ. ಇದರಿಂದ ಸಮೀಪದ ಶಾಲೆಯ ವಿದ್ಯಾರ್ಥಿಗಳಿಗೂ ಪ್ರಯೋಜನವಾಗುವಂತೆ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು. ಅಮೃತ ಭಾರತ ವಿಜ್ಞಾನವನ ಉಸ್ತುವಾರಿಗಳಾದ ಸುಮಂತ್ ಚಂಬು ರೆಡ್ಡಿ, ಅಮನ್ ಶೆಟ್ಟಿ, ನಾಗದತ್ತ್, ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಎನ್.ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.,ರವರು ಅತಿಥಿಗಳನ್ನು ಪರಿಚಯಿಸಿದರು. ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸತೀಶ್ ಭಟ್ ಸ್ವಾಗತಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಕಾರಂತ್ ವಂದಿಸಿದರು. ಉಪನ್ಯಾಸಕ ಚೇತನ್ ಕಾರ್ಯಕ್ರಮ ನಿರೂಪಿಸಿದರು.

 

ಪ್ಲಾಸ್ಟಿಕ್ ಬಳಕೆ ನಿಷೇಧಿಸಿ:
ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಸಭಾ ಕಾರ್ಯಕ್ರಮದ ಆರಂಭದಲ್ಲಿ ಬೃಹತ್ ಎಲ್‌ಇಡಿ ಪರದೆಯ ಮೂಲಕ ವಿಡಿಯೋ ಪ್ರದರ್ಶನ ಮಾಡಲಾಯಿತು. ಕ್ಯಾಪ್ಸ್ ಪೌಂಡೇಶನ್‌ನ ವಿದ್ಯಾರ್ಥಿಗಳು ಕಿರು ನಾಟಕವನ್ನೂ ಪ್ರದರ್ಶಿಸಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿನಯ್‌ರವರಿಂದ ಭರತನಾಟ್ಯ ನಡೆಯಿತು. ಕ್ಯಾಪ್ಸ್ ಫೌಂಡೇಶನ್‌ನ ಚಂದ್ರಶೇಖರ ಶೆಟ್ಟಿ ಹಾಗೂ ಇತರೇ ಸದಸ್ಯರನ್ನು ಸ್ವಾಮೀಜಿಯವರು ಸಂಸ್ಥೆಯ ಪರವಾಗಿ ಗೌರವಿಸಿದರು. ಮಧ್ಯಾಹ್ನ ಬೆಂಗಳೂರು ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.

‘ಸುದ್ದಿ’ಚಾನೆಲ್‌ನಲ್ಲಿ ನೇರ ಪ್ರಸಾರ:
ಕಾರ್ಯಕ್ರಮ ಸುದ್ದಿ ಯೂ ಟ್ಯೂಬ್ ಚಾನೆಲ್ ಹಾಗೂ ಸುದ್ದಿಬಿಡುಗಡೆ ಫೇಸ್‌ಬುಕ್ ಪೇಜ್‌ನಲ್ಲಿ ನೇರಪ್ರಸಾರಗೊಂಡಿತು.

LEAVE A REPLY

Please enter your comment!
Please enter your name here