ರೈತರ ಜೈವಿಕ ಉತ್ಪಾದನಾ ಕಂಪನಿಯ ಪುತ್ತೂರು ಶಾಖೆ ಉದ್ಘಾಟನೆ ; ಜೈವಿಕ ಇಂಧನ ಉತ್ಪಾದನೆಯ ಮಾಹಿತಿ ಕಾರ್ಯಾಗಾರ

0

ಪುತ್ತೂರು:ಪುತ್ತೂರು ರೈತರ ಜೈವಿಕ ಉತ್ಪಾದನಾ ಕಂಪನಿ(ಎಂಸಿಎಲ್) ಇದರ ಕಚೇರಿಯ ಉದ್ಘಾಟನೆ ಹಾಗೂ ಜೈವಿಕ ಇಂಧನ ಉತ್ಪಾದನೆಯ ಕುರಿತ ಮಾಹಿತಿ ಕಾರ್ಯಾಗಾರವು ಜು.12ರಂದು ಎಪಿಎಂಸಿ ರಸ್ತೆ ಹಿಂದೂಸ್ಥಾನ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ನಡೆಯಿತು.

ಕಚೇರಿಯನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಜೈವಿಕ ಇಂಧನ ತಯಾರಿಸುವ ಹೊಸ ಪ್ರಯೋಗ ಎಂಸಿಎಲ್ ನೀಡಿದೆ. ಇದನ್ನು ಸಾಮಾನ್ಯ ರೈತರೂ ತನ್ನ ಮನೆಯಲ್ಲಿ ಬೆಳೆಯುವ ಅವಕಾಶ ನೀಡಿದೆ. ನಮ್ಮ ಮನೆಯಲ್ಲಿಯೇ ಸಿಎನ್‌ಜಿ ಇಂಧನ ತಯಾರಿಸಲಾಗುತ್ತಿದೆ. ಜೈವಿಕ ಗೊಬ್ಬರ, ಆಹಾರ ಕಾಳಜಿಯಂತೆ ಜೈವಿಕ ಇಂಧನ ತಯಾರಿಸುವ ಯೋಜನೆಯಿಂದ ವಿಷಮುಕ್ತ ಪರಿಸರ ನಿರ್ಮಿಸುವ ಮೂಲಕ ಪುರಾತನ ಸಾವಯವ ಪರಂಪರೆ ಮತ್ತೊಮ್ಮೆ ಬರಲಿದೆ ಎಂದರು.

ದನಗಳಿಗೆ ಹಾಕುವ ಹುಲ್ಲಿನಿಂದ ಸಿಎನ್‌ಜಿ ಆವಿಷ್ಕಾರ ಆಗಿದೆ. ಪುತ್ತೂರಿನ ರೈತರೂ ಇದನ್ನು ಬೆಳೆಯಬಹುದು. ಇದು ಇಂದಿನ ದೇಶಕ್ಕೆ ಆವಶ್ಯಕತೆಯಿದೆ. ಅರಬ್ ದೇಶಗಳಲ್ಲಿ ಇಂಧನ ಬರಿದಾದರೆ ಪರಿಯಾಯವಾಗಿ ಜೈವಿಕ ಇಂಧನವೇ ಮೂಲ ಇಂಧನವಾಗಲಿದ್ದು ಎಲ್ಲಾ ರೈತರು ಹುಲ್ಲು ಉತ್ಪಾದಿಸಿ ಪ್ರೋತ್ಸಾಹಿಸಬೇಕು. ಈ ಯೋಜನೆಗೆ ಪುತ್ತೂರಿನ ಜತೆ ಸಹಕಾರವಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ನಮ್ಮ ಭವಿಷ್ಯದ ದೃಷ್ಠಿಯಲ್ಲಿ ಇಂತಹ ಯೋಜನೆಗಳು ಆವಶ್ಯಕ. ಸಂಸ್ಥೆಯು ಹೊಸ ಯೋಜನೆಗಳನ್ನು ನೀಡಿದ್ದು ಇವುಗಳ ಬಗ್ಗೆ ಅಧ್ಯಯನ ಮಾಡಿಕೊಂಡು ಅದರ ಜೊತೆಗೆ ನಾವು ಹೊಂದಿಕೊಳ್ಳಬೇಕು. ಮುಂದೆ ಇದು ರೈತರ ಆರ್ಥಿಕ ಶಕ್ತಿಯಾಗಲಿದೆ. ಹೀಗಾಗಿ ಇದರೊಂದಿಗೆ ತೊಡಗಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿಗೆ ಬಯೋ ಡೀಸೆಲ್ ಬೆಳೆಯುವ ಯೋಜನೆಯನ್ನು ತಂದಿರುವುದಕ್ಕೆ ಅಭಿನಂಧಿಸಿದರು. ಸುಂದರ ನಗರ ನಿರ್ಮಿಸುವ ನಗರ ಸಭೆಯ ಯೋಜನೆಗೆ ರೋಟರಿ ಸಂಸ್ಥೆಯ ಮುಖಾಂತರ ತ್ಯಾಜ್ಯದಲ್ಲಿ ಬಯೋಗ್ಯಾಸ್ ಮಾಡುವ ಯೋಜನೆ ಪ್ರಗತಿಯಿಲ್ಲಿದೆ. ಇದೀಗ ಎಂಸಿಎಲ್ ಸಂಸ್ಥೆಯ ಬಯೋ ಡೀಸೆಲ್ ತಯಾರಿಸುವ ಯೋಜನೆಯಿಂದ ಸ್ವಚ್ಚ ಪುತ್ತೂರು ನಿರ್ಮಾಣವಾಗಲಿದೆ. ನಮ್ಮ ಕರ್ತವ್ಯ ಎಂದು ತಿಳಿದು ಈ ಯೋಜನೆಗೆ ನಗರ ಸಭೆಯು ಸಂಸ್ಥೆಯ ಜೊತೆ ಕೈಜೋಡಿಸುವುದಾಗಿ ತಿಳಿಸಿದರು.

ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರ ಕಂಡ ಕನಸನ್ನು ಡಾ.ಸುಚರಿತ ಶೆಟ್ಟಿ ಹಾಗೂ ಡಾ.ನಿರೀಕ್ಷಾ ಶೆಟ್ಟಿಯವರು ಪುತ್ತೂರಿನಲ್ಲಿ ನನಸು ಮಾಡುವ ಯೋಜನೆಯಲ್ಲಿದ್ದಾರೆ. ಎಲ್ಲರೂ ಸದಸ್ಯತ್ವ ಪಡೆದು ಬೆಳೆಸುವ ಮೂಲಕ ನಾವು ಬೆಳೆಯೋಣ, ಕಂಪನಿಯನ್ನು ಬೆಳೆಸುವ ಜೊತೆಗೆ ರಾಷ್ಟ್ರವನ್ನು ಬೆಳೆಸೋಣ ಎಂದರು.

ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ ಮಾತನಾಡಿ, ಕೃಷಿಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದ್ದು ಪ್ರತಿಯೊಬ್ಬರ ರೈತರ ಕಂಪನಿಯ ಸದಸ್ಯತ್ವ ಪಡೆದು ಸಹಕರಿಸುವಂತೆ ತಿಳಿಸಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಳ್ಯೊಟ್ಟು, ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ, ಎಂಸಿಎಲ್ ಕಂಪನಿಯ ಬಿಡಿಎ ಸೀನಿಯರ್ ಪ್ರೈಮ್ ಶ್ರೀನಿವಾಸ ದೊತ್ರೆ, ಕಿರಣ್ ಗೂಗ್ರೆ, ನಂದ್ರೇಕರ್, ವಸಂತ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಹಿತಿ ಕಾರ್ಯಾಗಾರ:

ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ಜೈವಿಕ ಇಂಧನ ಉತ್ಪಾದನೆಯ ಬಗ್ಗೆ ಮಾಹಿತಿ ಕಾರ್ಯಗಾರದಲ್ಲಿ ಎಂಸಿಎಲ್ ಕಂಪನಿಯ ಬಿಡಿಎ ಸೀನಿಯರ್ ಪ್ರೈಮ್ ಶ್ರೀನಿವಾಸ ದೊತ್ರೆ, ಕಿರಣ್ ಗೂಗ್ರೆ, ನಂದ್ರೇಕರ್, ವಸಂತ ಪೂಜಾರಿ ಮಾಹಿತಿ ನೀಡಿದರು.

ಡಾ.ನಿರೀಕ್ಷಾ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ, ಶಿವನಾಥ ರೈ ಮೇಗಿನಗುತ್ತು ವಂದಿಸಿದರು. ಭಾಗ್ಯೇಶ್ ರೈ, ಮಹೇಶ್ ರೈ ಅಂಕೊತ್ತಿಮಾರ್, ಉಮೇಶ್ ರೈ, ಶಿವನಾಥ ರೈ, ಎ.ಎಂ. ಪ್ರವೀಣ್ ಚಂದ್ರ ಆಳ್ವ, ಸಾಜ ರಾಧಾಕೃಷ್ಣ ಆಳ್ವ ಮೊದಲಾದವರು ಅತಿಥಿಗಳನ್ನು ಹೂಗುಚ್ಚ ಹಾಗೂ ಸ್ಮರಣಿಕ ನೀಡಿ ಗೌರವಿಸಿದರು.

[box type=”note” bg=”#” color=”#” border=”#” radius=”25″]ಜೈವಿಕ ಇಂಧನ ಉತ್ಪಾದನೆಯು ಅಬ್ದುಲ್ ಕಲಾಂರವರ ಕನಸು. 15 ವರ್ಷ ಆಧ್ಯಯನ ಮಾಡಿ ಅದರ ಮಾಹಿತಿ ನೀಡಿದ್ದರು. ಇದರಿಂದಾಗಿ ಆಮ್ಲಜನಕ ಉತ್ಪಾದನೆ ಹೆಚ್ಚಾಗಲಿದೆ. ನೀರಿನ ಮಟ್ಟ ವೃದ್ಧಿಯಾಗಲಿದೆ. ಹುಲ್ಲು ಬಳಕೆಯೇ ಕಂಪನಿಯ ಮೂಲವಾಗಿದೆ. ಇದರಿಂದ ಜಾಗತಿಕ ತಾಪಮಾನ ನಿಯಂತ್ರಣ, ಜೊತೆಗೆ ಯುವಕರಿಗೆ ಉದ್ಯೋಗ ದೊರೆತು ಉತ್ತಮ ಆದಾಯಕ್ಕೆ ಸಹಕಾರಿಯಾಗಲಿದೆ. ಸಾಲವಿಲ್ಲದೆ ನಡೆಯುವ ಸಂಸ್ಥೆಯಲ್ಲಿ ಎಲ್ಲರೂ ಸದಸ್ಯರಾಗಿ ಸಹಕರಿಸಬೇಕು.

-ಡಾ.ಸುಚರೀತ ಶೆಟ್ಟಿ[/box]

LEAVE A REPLY

Please enter your comment!
Please enter your name here