ಐತ್ತೂರು: ಕೊಡಂಕಿರಿಯಲ್ಲಿ ಧರೆ ಕುಸಿದು ಮನೆಗೆ ಹಾನಿ ; ಕಾಂಕ್ರೀಟ್ ತಡೆಗೋಡೆಯೂ ನೆಲಸಮ-ಅಪಾರ ನಷ್ಟ

0

ಚಿತ್ರ: ಯೂಸುಫ್ ರೆಂಜಲಾಡಿ

ಪುತ್ತೂರು: ಧಾರಾಕಾರವಾಗಿ ಸುರಿದ ಮಳೆಗೆ ಕಡಬ ತಾಲೂಕಿನ ಐತ್ತೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮದ ಕೊಡಂಕಿರಿ ಎಂಬಲ್ಲಿ ಮನೆಯ ಹಿಂಭಾಗದ ಧರೆ ಕುಸಿದು ಮನೆಗೆ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.

 

ಕೊಡಂಕಿರಿ ನಿವಾಸಿ ಕೆ.ಪಿ ಜಾನ್ ಎಂಬವರ ಮನೆಯ ಹಿಂಭಾಗದ ಧರೆಯ ಸುಮಾರು ಭಾಗ ಕುಸಿದ ಪರಿಣಾಮ ಮನೆಯ ಹಿಂಬಾಗದ ಗೋಡೆ ಒಡೆದು ಹೋಗಿದೆ.

ಮನೆಯ ಹಿಂಭಾಗದಲ್ಲಿ ಸುರಕ್ಷತಾ ದೃಷ್ಟಿಯಿಂದ ಈ ಹಿಂದೆಯೇ ರೂ.4.80 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಇದೀಗ ಧರೆ ಕುಸಿದು ಬಿದ್ದ ಪರಿಣಾಮ ಕಾಂಕ್ರೀಟ್ ತಡೆಗೋಡೆ ಕೂಡಾ ನೆಲ ಸಮವಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಧರೆ ಕುಸಿದು ಕಾಂಕ್ರೀಟ್ ತಡೆಗೋಡೆ ನೆಲಸಮಗೊಂಡ ಬಗ್ಗೆ ಮನೆಯ ಯಜಮಾನ ಕೆ.ಪಿ ಜಾನ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕೆ.ಪಿ ಜಾನ್ ಅವರ ಪತ್ನಿ, ಪುತ್ರ, ಸೊಸೆ ಹಾಗೂ ಮಗು ಈ ಮನೆಯಲ್ಲಿ ಮನೆಯಲ್ಲಿ ವಾಸವಾಗಿದ್ದಾರೆ.

ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ:

ಮನೆಯ ಹಿಂಭಾಗದ ಧರೆ ಕುಸಿದು ಮನೆಯ ಗೋಡೆ ಬಿರುಕು ಬಿಟ್ಟಿದ್ದಲ್ಲದೇ ಮನೆಯ ಮಾಡಿಗೂ ಹಾನಿಯಾಗಿದೆ. ಮಳೆ ನೀರು ಮನೆಯೊಳಗೇ ಬೀಳುತ್ತಿದ್ದು ಮನೆಯೊಳಗೆ ನೀರು ತುಂಬಿಕೊಂಡಿದೆ. ಮನೆ ಮಂದಿ ಅನ್ಯ ದಾರಿ ಕಾಣದೇ ಮನೆಯನ್ನು ಬಿಟ್ಟು ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೊದಲಿಗೆ ಧರೆ ಅಲ್ಪ ಕುಸಿದ ವಿಚಾರ ಮನೆಯವರ ಗಮನಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಮನೆಯವರು ಮುಂಜಾಗ್ರತೆಯಾಗಿ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯಿಂದ ತೆರಳಿದ ಸಂದರ್ಭದಲ್ಲಿ ಧರೆ ಕುಸಿತಗೊಂಡಿದೆ. ಬಲಿಷ್ಠವಾಗಿ ಕಟ್ಟಿದ್ದ ಕಾಂಕ್ರೀಟ್ ತಡೆಗೋಡೆಯೂ ಕುಸಿತಕ್ಕೊಳಗಾಗಿ ಮನೆಗೆ ಹಾನಿಯುಂಟಾಗಿದೆ. ಮೊದಲೇ ಧರೆ ಕುಸಿತದ ಮುನ್ಸೂಚನೆ ಮನೆಯವರಿಗೆ ಸಿಕ್ಕಿದ್ದರಿಂದ ಮನೆಮಂದಿ ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ.

ಪರಿಹಾರಕ್ಕೆ ಮನವಿ:

ಧರೆ ಕುಸಿದು ಕಾಂಕ್ರೀಟ್ ತಡೆಗೋಡೆ ನೆಲಸಮಗೊಂಡಿರುವುದು ಹಾಗೂ ಮನೆಯ ಹಿಂಭಾಗದ ಗೋಡೆ ಬಿರುಕು ಬಿಟ್ಟಿರುವುದು, ಮಾಡು ಹಾನಿಯಾಗಿರುವುದು ಸೇರಿದಂತೆ ಲಕ್ಷಾಂತರ ರೂ ನಷ್ಟ ಸಂಭವಿಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಪರಿಹಾರ ಒದಗಿಸಿಕೊಡಬೇಕೆಂದು ಕೆ.ಪಿ ಜಾನ್ ಮನವಿ ಮಾಡಿದ್ದಾರೆ. ಮೊದಲಿಗೆ ಧರೆ ಅಲ್ಪ ಕುಸಿತಗೊಂಡ ಸಂದರ್ಭದಲ್ಲಿ ಕಡಬ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಕೆ.ಪಿ ಜಾನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here