ಪಾಣಾಜೆ: ರಸ್ತೆ ಅಗಲೀಕರಣ ಅಪೂರ್ಣ; ಬಸ್ ತಂಗುದಾಣ ಪುನರ್ ನಿರ್ಮಿಸಿಲ್ಲ, ಚರಂಡಿ ನಿರ್ಮಾಣವೂ ಅಸಮರ್ಪಕ – ನಾಗರಿಕರಿಂದ ಭಾರೀ ಆಕ್ರೋಶ

ಪಾಣಾಜೆ: ಸ್ವರ್ಗ ಪಾಣಾಜೆ ಪುತ್ತೂರು ರಸ್ತೆಯ ಆರ್ಲಪದವು ಸಮೀಪ ರಸ್ತೆ ಅಗಲೀಕರಣ ನೆಪದಲ್ಲಿ ನೆಲ್ಲಿತ್ತಿಮಾರು ಬಸ್ ತಂಗುದಾಣದಲ್ಲಿ ಹಾಸಲಾದ ಟೈಲ್ಸ್ ತೆರವುಗೊಳಿಸಿದ್ದರೂ ಯಾವುದೇ ಅಗಲೀಕರಣ ನಡೆಸದೆ ಕಾಮಗಾರಿ ಪೂರ್ಣಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸ್ವರ್ಗ ಪಾಣಾಜೆ ಪುತ್ತೂರು ರಸ್ತೆಯ ಆರ್ಲಪದವು ನೆಲ್ಲಿತ್ತಿಮಾರು ಬಸ್ ತಂಗುದಾಣ‌

ಆರ್ಲಪದವು ಪೇಟೆಯಿಂದ ಒಂದು ಕಿ.ಮೀ.ದೂರದಲ್ಲಿ ಪಾಣಾಜೆ ಮೂಲಕ ಕೇರಳ ತೆರಳುವ ರಸ್ತೆಯಲ್ಲಿ ಭರಣ್ಯ ಮೂಲಕ ಜಾಂಬ್ರಿ ಗುಹೆಗೆ ತಿರುಗುವ ಮುಖ್ಯ ರಸ್ತೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ವಾಹನ ಅಪಘಾತಗಳು ನಡೆದಿವೆ.

ಅಪಘಾತ ಸಾಧ್ಯತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಸುಮಾರು ಇಪ್ಪತ್ತು ಮೀ.ಉದ್ದಕ್ಕೆ ರಸ್ತೆ ಅಗಲೀಕರಣ ನಡೆಸಿದೆ. ರಸ್ತೆ ಮಧ್ಯಭಾಗದಲ್ಲಿ ಲೇನ್ ನಿಯಮ ಪಾಲಿಸುವಂತೆ, ಎಚ್ಚರಿಕೆಯಿಂದ ಓವರ್ ಟೇಕ್ ಮಾಡುವಂತೆ ಬಿಳಿ ಪಟ್ಟಿಗಳನ್ನು ಹಾಕಲಾಗಿದೆ.

ನೆಲ್ಲಿತ್ತಿಮಾರಿನಲ್ಲಿ ರಸ್ತೆ ಅಗಲೀಕರಣ ನಡೆಸಲು ಪಾಣಾಜೆ ಗ್ರಾ.ಪಂ. ಪಂಚಾಯಿತಿ ರಾಜ್ ಎಂಜಿನಿಯರಿಂಗ್ ಉಪವಿಭಾಗ ಪುತ್ತೂರು ನಿರ್ಮಿಸಿದ್ದ ಬಸ್ ತಂಗುದಾಣಕ್ಕೆ ಹಾಸಲಾಗಿದ್ದ ಟೈಲ್ಸ್ ಪಿಡಬ್ಲ್ಯೂಡಿ ಗುತ್ತಿಗೆದಾರರು ತೆರವುಗೊಳಿಸಿದ್ದರೂ ಇಲ್ಲಿ ಯಾವುದೇ ಅಗಲೀಕರಣ ಕಾಮಗಾರಿ ನಡೆಸದೆ ಇಲ್ಲಿನ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಟೈಲ್ಸ್ ತೆರವುಗೊಳಿಸಿದ್ದನ್ನು ಎರಡು ದಿನ ಹಿಂದೆ ನಡೆದ ಗ್ರಾಮ ಸಭೆಯಲ್ಲಿ ಪ್ರಶ್ನಿಸಲಾದರೂ ಲೋಕೋಪಯೋಗಿ ಇಲಾಖೆ ಪಾಣಾಜೆ ವಿಭಾಗದ ಎಂಜಿನಿಯರ್ ಸಮರ್ಪಕ ಉತ್ತರ ನೀಡಿಲ್ಲ. ರಸ್ತೆ ಅಗಲೀಕರಣಕ್ಕಾಗಿ ಟೈಲ್ಸ್ ತೆರವುಗೊಳಿಸಲಾಗಿದೆಯೇ ಅಥವಾ ಬಸ್ ತಂಗುದಾಣವನ್ನು ಸ್ಥಳಾಂತರಿಸುವ ಉದ್ದೇಶದಿಂದ ಟೈಲ್ಸ್ ತೆರವುಗೊಳಿಸಲಾಗಿದೆಯೇ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡಿದೆ.

ಅಸಮರ್ಪಕ ಚರಂಡಿ ನಿರ್ಮಾಣ, ನೆಲ್ಲಿತ್ತಿಮಾರು ಬಸ್ ತಂಗುದಾಣದ ಎದುರು ರಸ್ತೆಯಲ್ಲಿ ಹಾಕಲಾದ ಬಿಳಿ ರೇಖೆ

ಅಸಮರ್ಪಕ ಚರಂಡಿ ನಿರ್ಮಾಣ

ನೆಲ್ಲಿತ್ತಿಮಾರು ಬಸ್ ನಿಲ್ದಾಣದ ಸಮೀಪ ಸುಮಾರು ಹದಿನೈದರಿಂದ ಇಪ್ಪತ್ತು ಮೀ.ಉದ್ದಕ್ಕೆ ಮಳೆ ನೀರು ಹರಿಯಲು ಕಾಂಕ್ರೀಟ್ ಚರಂಡಿ ನಿರ್ಮಿಸಲಾಗಿದೆ. ಆದರೆ ಚರಂಡಿಯ ಆರಂಭ ಹಾಗೂ ಅಂತ್ಯ ಭಾಗಗಳಲ್ಲಿ ಸಮರ್ಪಕ ಕಾಮಗಾರಿ ನಡೆದಿಲ್ಲ. ನೆಲ್ಲಿತ್ತಿಮಾರಿನಿಂದ ಅಪ್ಪಿನಿಮೂಲೆ ತೆರಳುವ ರಸ್ತೆಯಲ್ಲಿರುವ ಮೋರಿ ಎತ್ತರವಾಗಿರುವುದರಿಂದ ಈ ಚರಂಡಿಯನ್ನು ತಗ್ಗಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಸಮೀಪದ ಮನೆ ಪರಿಸರದಿಂದ ಹರಿಯುವ ಮಳೆನೀರು ಈ ಚರಂಡಿ ಸೇರದೆ ಮನೆ ಅಂಗಳದಲ್ಲೇ ಸಂಗ್ರಹವಾಗುತ್ತಿದೆ.

ನೆಲ್ಲಿತ್ತಿಮಾರಿನಲ್ಲಿದ್ದ ವಿದ್ಯುತ್ ಕಂಬವನ್ನು ಸ್ಥಳಾಂತರಿಸದೆ ಚರಂಡಿ ನಿರ್ಮಿಸಲಾಗಿದೆ. ಸಾಕಷ್ಟು ಇಳಿಜಾರು ಇಲ್ಲದೆ ನಿರ್ಮಿಸಿದ ಚರಂಡಿಯಲ್ಲಿ ಮಣ್ಣು ಕಸ ತುಂಬಿದರೆ ನೀರಿನ ಹರಿಯುವಿಕೆಗೆ ತಡೆಯಾಗಲಿದೆ. ರಸ್ತೆ ಹಾಗೂ ಚರಂಡಿ ನಡುವೆ ಕಾಂಕ್ರೀಟ್ ಹಾಸದಿರುವುದು ಅಥವಾ ಮಣ್ಣು ತುಂಬಿಸದಿರುವುದು ವಾಹನಗಳು ಎದುರು ಬದುರಾದಾಗ ಸಾಗಲು ಹಾಗೂ ಪಾದಚಾರಿಗಳಿಗೆ ನಡೆದಾಡಲೂ ಕಷ್ಟವಾಗಿದೆ. ಲೋಕೋಪಯೋಗಿ ಇಲಾಖೆ ಬಸ್ ನಿಲ್ದಾಣದಿಂದ ತೆರವು ಗೊಳಿಸಿದ ಟೈಲ್ಸ್ ಹಾಗೂ ಚರಂಡಿ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.