ಹರ್ ಘರ್ ತಿರಂಗಾ ಅಭಿಯಾನದ ತಾ.ಮಟ್ಟದ ಅಧಿಕಾರಿಗಳ ಸಭೆ, ಅಭಿಯಾನಕ್ಕೆ ಚಾಲನೆ

0

ಪುತ್ತೂರು: ಹರ್ ಘರ್ ತಿರಂಗಾ ಸಂದೇಶ ಸಾರಲು ಈಗಾಗಲೇ ಮೂರನೇ ಒಂದು ಭಾಗ ಮನೆಗಳಿಗೆ ರಾಷ್ಟ್ರಧ್ವಜ ವಿತರಿಸಲಾಗಿದೆ. ಇದು ಎಲ್ಲಾ ಮನೆಗಳಿಗೂ ತಲುಪಬೇಕು. ಎಲ್ಲಾ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕು. ಮೂರು ದಿನಗಳ ಕಾಲ ಸ್ವಾತಂತ್ರ್ಯದ ಅಮೃತಮಹೋತ್ಸವವು ಉತ್ಸವ, ಸಂಭ್ರಮಾಚರಣೆ ರೀತಿಯಲ್ಲಿ ಆಚರಿಸಲು ಪ್ರತಿ ಇಲಾಖೆಗಳು ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಬೇಕು ಎಂದು ಶಾಸಕ ಸಂಜೀವ ಮಠಂದೂರು ಇಲಾಖೆಗಳಿಗೆ ಸೂಚನೆ ನೀಡಿದರು.



ದೇಶದ ಸ್ವಾತಂತ್ರ್ಯೋತ್ಸವದ ಅಮೃತಮಹೋಹತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾಣದ ಅಂಗವಾಗಿ ಆ.೧೧ರಂದು ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖಾಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವು ದೇಶದ ಪ್ರತಿ ಮನೆ, ಪ್ರತಿಯೊಬ್ಬರ ಮನಗಳಲ್ಲಿ ಆಚರಿಸಬೇಕು. ಇದಕ್ಕಾಗಿ ಹರ್ ಘರ್ ತಿರಂಗಾ ಸಂದೇಶ ಸಾರುವ ಕೆಲಸವಾಗಿದೆ. ಇದರ ಮುಖಾಂತ ಪ್ರತಿ ಮನೆಗಳಲ್ಲಿ ಧ್ವಜಹಾರಾಡಿಸಬೇಕು. ಸ್ವಾತಂತ್ರ್ಯೋತ್ಸವವು ಸಂಭ್ರಮದ ರೀತಿಯಲ್ಲಿ ಆಚರಿಸಲ್ಪಡಬೇಕು. ಇದಕ್ಕಾಗಿ ಸರಕಾರಿ ಕಾರ್ಯಕ್ರಮಗಳ ಹೊರತಾಗಿ ಆಯಾ ಇಲಾಖೆಗಳ ವ್ಯಾಪ್ತಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಜನರನ್ನು ತಲುಪಬೇಕು ಎಂದ ಶಾಸಕರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಮನೆ ಮನೆಗೆ ಧ್ವಜ ವಿತರಿಸಲು ಆರು ಸಾವಿರ ಧ್ವಜ ಖರೀಧಿಸಿರುವುದಾಗಿ ಅವರು ತಿಳಿಸಿದರು.


ಮಾಹಿತಿ ನೀಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಆ.೧೩ರಿಂದ ೧೫ರ ತನಕ ಮೂರು ದಿನಗಳ ಕಾಲ ರಾಷ್ಟ್ರಧ್ವಜವನ್ನು ಹಾರಿಸಬೇಕು. ಕಚೇರಿಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಮಾತ್ರ ಧ್ವಜ ಹಾರಾಡಿಸಬೇಕು. ಮನೆಗಳಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ಧ್ವಜ ಹಾರಿಸಲು ಅವಕಾಶವಿದ್ದು, ಆ.೧೫ರಂದು ಸೂರ್ಯಾಸ್ತಕ್ಕೆ ಧ್ವಜಾವರೋಹಣ ಮಾಡಬೇಕು. ಧ್ವಜ ಹಾರಿಸುವ ಸಂದರ್ಭದಲ್ಲಿ ಧ್ವಜ ಸಂಹಿತೆ ಉಲ್ಲಂಘನೆಯಾಗಬಾರದು ಹಾಗೂ ರಾಷ್ಟ್ರ ಧ್ವಜಕ್ಕೆ ಅಗೌರವ ಬಾರದಂತೆ ಇಲಾಖಾ ಮುಖ್ಯಸ್ಥರು ಮುಂಜಾಗ್ರತೆ ವಹಿಸಬೇಕು. ಹರಿದ ಮತ್ತು ಕೊಳತ್ತಾದ ಧ್ವಜವನ್ನು ಹಾರಿಸುವಂತಿಲ್ಲ. ಇದಕ್ಕಾಗಿ ಧ್ವಜವನ್ನು ಪರಿಶೀಲಿಸಿಕೊಂಡು ಹಾರಿಸಬೇಕು. ರಾಷ್ಟ್ರ ಧ್ವಜವನ್ನು ಸುಡುವುದು, ಕೆಡಿಸುವಂತಹ ಮೊದಲಾದ ಅಗೌರವ ತೋರುವ ರೀತಿಯಲ್ಲಿ ನಡೆದುಕೊಳ್ಳುವುದು, ಮಾತು, ಬರಹಗಳು ಅಥವಾ ಇತರೇ ಕೃತ್ಯದ ಮೂಲಕ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದರೆ ಮೂರು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನು ವಿಧಿಸುವ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದರು.

ವೈರಲ್ ಮಾಡುವುದೂ ಅಪರಾಧ:
ರಾಷ್ಟ್ರಧ್ವಜ ಹಾರಾಟ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಎಡವಟ್ಟುಗಳಾದಲ್ಲಿ ಅದನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಬೇಕು. ಹೊರತು ಅದರ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ವೈರಲ್ ಮಾಡುವುದು ಅಪರಾಧವಾಗಿದೆ ಎಂದರು ಸಹಾಯಕ ಆಯುಕ್ತರು ತಿಳಿಸಿದರು.

ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ, ತಹಶೀಲ್ದಾರ್ ನಿಸರ್ಗಪ್ರಿಯ, ತಾ.ಪ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರ ಸಭಾ ಪೌರಾಯುಕ್ತ ಮಧು ಎಸ್,ಮನೋಹರ್, ನಗರ ಠಾಣಾ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಹಾಗೂ ಸಂಜೀವಿನಿ ಒಕ್ಕೂಟದ ಎಂಬಿಕೆಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಅನುಷ್ಠಾನ ಇಲಾಖೆಗಳಿಗೆ ತಾ.ಪಂ ವತಿಯಿಂದ ರಾಷ್ಟ್ರಧ್ವಜವನ್ನು ವಿತರಿಸಲಾಯಿತು. ಶಾಸಕ ಸಂಜೀವ ಮಠಂದೂರು ಆಯಾ ಇಲಾಖಾಧಿಕಾರಿಗಳಿಗೆ ಧ್ವಜ ಹಸ್ತಾಂತರಿಸಿದರು. ನಂತರ ತಾಲೂಕು ಆಡಳಿತದ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಶಾಸಕರು ಚಾಲನೆ ನೀಡಿದರು.

 

LEAVE A REPLY

Please enter your comment!
Please enter your name here