ಮತಾಂಧ ಶಕ್ತಿಗಳಿಗೆ ಆರ್ಥಿಕ, ಸಾಮಾಜಿಕ ಬಹಿಷ್ಕಾರ ; ವ್ಯಕ್ತಿಯಾಗಿದ್ದ ಪ್ರವೀಣ್ ಶಕ್ತಿಯಾಗಿ ಸಮಾಜ ಮುನ್ನಡೆಸುತ್ತಾರೆ

0

  • ಪ್ರವೀಣ್ ನೆಟ್ಟಾರು ನುಡಿನಮನ ಕಾರ್ಯಕ್ರಮದಲ್ಲಿ ಮುಖಂಡರ ಪ್ರತಿಪಾದನೆ

ಪುತ್ತೂರು : ಪ್ರವೀಣ್ ನೆಟ್ಟಾರು ಹತ್ಯೆ ನಡೆಸಿದ ಮತಾಂಧ ಶಕ್ತಿಗಳನ್ನು ಮತ್ತು ಅವರಿಗೆ ಬೆಂಬಲ ಕೊಡುವವರನ್ನು ಸಮಾಜದಿಂದ ಬೇರ್ಪಡಿಸಬೇಕು. ಅವರಿಗೆ ಆರ್ಥಿಕ, ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದು ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ವೈಕುಂಠ ಸಮಾರಾಧನೆ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ನೇತೃತ್ವದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಪೆರುವಾಜೆಯ ಜೆ.ಡಿ ಅಡಿಟೋರಿಯಂನಲ್ಲಿ ಕಾರ್ಯಕ್ರಮ ನೆರವೇರಿತು.

ಸಚಿವ ಎಸ್.ಅಂಗಾರ ಮಾತನಾಡಿ, ಪ್ರವೀಣ್ ಹತ್ಯೆ ಮಾಡಿದ ಜಿಹಾದಿಗಳಿಗೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಗುರಿ ಇರಬಹುದು. ಆದರೆ ನಮ್ಮ ಮುಂದಿರುವುದು ಭಾರತವನ್ನು ಪರಮ ವೈಭವ ಸ್ಥಿತಿಗೆ ಕೊಂಡೊಯ್ಯುವಂತದ್ದು. ಈ ಹಂತದಲ್ಲಿ ಹಲವರ ಬಲಿದಾನವಾಗಿದೆ. ಈ ಸಾಲಿಗೆ ಪ್ರವೀಣ್ ಕೂಡಾ ಸೇರಿದ್ದಾರೆ ಎಂದರಲ್ಲದೆ, ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆ ಇಡಿ. ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇವರ ಹಿನ್ನಲೆಯನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತೇವೆ ಎಂದರು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ಸಮಾಜದಲ್ಲಿ ಅನ್ಯಮತೀಯರೊಂದಿಗೆ ಆರ್ಥಿಕ, ಸಾಮಾಜಿಕ ಸಂಬಂಧ ಇರಿಸಿಕೊಳ್ಳುವಂತಹ ಸಂದರ್ಭಗಳಿಗೆ ಪ್ರವೀಣ್ ಹತ್ಯೆ ಘಟನೆ ದೊಡ್ಡ ಪಾಠ. ಇನ್ನಾದರೂ ಇಂತಹ ಆರ್ಥಿಕ, ಸಾಮಾಜಿಕ ಸಂಬಂಧಗಳಿಂದ ದೂರವಿರಬೇಕು ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸೇವಾ ಪ್ರಮುಖ್ ಸುಭಾಶ್ಚಂದ್ರ ಕಳಂಜ ಮಾತನಾಡಿ, ಸಮಾಜಕ್ಕಾಗಿ ರೂಪಿಸಿಕೊಂಡ ಕಾರ್ಯಕರ್ತ ಪ್ರವೀಣ್ ನೆಟ್ಟಾರ್. ವ್ಯಕ್ತಿಯಾಗಿದ್ದ ಪ್ರವೀಣ್ ಈಗ ಶಕ್ತಿಯಾಗಿ ಸಮಾಜವನ್ನು ಮುನ್ನಡೆಸಲಿದ್ದಾರೆ. ಮತೀಯ ಶಕ್ತಿಗಳೊಂದಿಗಿನ ಆರ್ಥಿಕ ವ್ಯವಹಾರದಿಂದ ದೂರ ಉಳಿಯುವುದರ ಮೂಲಕ ಮಾತ್ರ ಇನ್ನಷ್ಟು ಸಾವುಗಳನ್ನು ಕುಗ್ಗಿಸಬಹುದು ಎಂದರು.

ಎಂದೂ ವೈಯಕ್ತಿಕ ಯೋಚನೆ ಮಾಡದೆ ಸಮಾಜದ, ದೇಶದ ಬಗ್ಗೆ ಯೋಚಿಸುತ್ತಿದ್ದ ಪ್ರವೀಣ್‌ನಂತಹ ವ್ಯಕ್ತಿಯ ಹತ್ಯೆ ಘಟನೆ ನಂಬಲು ಸಾಧ್ಯವಿಲ್ಲ. ಅವರ ಕುಟುಂಬದೊಂದಿಗೆ ನಾವೆಲ್ಲ ಯಾವತ್ತು ಇದ್ದೇವೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ ನಾಯಕ್ ಹೇಳಿದರು.

ಬೆಳ್ಳಾರೆಯ ಬಿಜೆಪಿ ಮುಖಂಡ ಆರ್.ಕೆ.ಭಟ್ ಕುರುಂಬುಡೇಲು ಮಾತನಾಡಿ, ಪ್ರವೀಣ್ ಪ್ರಾಯಕ್ಕಿಂತಲೂ ಹೆಚ್ಚು ಪ್ರಬುದ್ಧತೆ, ಮತ್ತು ನಿಶ್ಚಿತ ಗುರಿ ಹೊಂದಿದ್ದ ಯುವಕ. ಅವರಂತವರಿಗೇ ಈ ಸಮಾಜದಲ್ಲಿ ಬದುಕಲು ಹಕ್ಕಿಲ್ಲ ಎಂದಾದರೇ ಬೇರೆ ಯಾರಿಗೆ ಬದುಕುವ ಹಕ್ಕಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಬಂದಿದೆ ಎಂದರು.

ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯೆ ಭವ್ಯ ಮಾತನಾಡಿ, ಮತೀಯ ವಾದ, ಭಯೋತ್ಪಾದನೆ ಮೂಲಕ ಪ್ರವೀಣ್ ಅಣ್ಣನನ್ನು ಕೊಂದ, ಅವರಿಗೆ ರಕ್ಷಣೆ ನೀಡಿದ ಎಲ್ಲಾ ದುಷ್ಟ ಶಕ್ತಿಗಳೊಂದಿಗಿನ ಆರ್ಥಿಕ ವ್ಯವಹಾರ ಕಡಿದುಕೊಳ್ಳುವುದೇ ಅವರಿಗೆ ನೀಡುವ ಶ್ರದ್ಧಾಂಜಲಿ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ರಾಷ್ಟ್ರೀಯ ಸ್ವಯಂ ಸೇವ ಸಂಘದ ಮುಖಂಡರಾದ ನ.ಸೀತಾರಾಮ, ಚಂದ್ರಶೇಖರ ತಳೂರು ಮೊದಲಾದವರು ಉಪಸ್ಥಿತರಿದ್ದರು. ಪ್ರವೀಣ್‌ರ ಸಹೋದರಿಯರ ಮಕ್ಕಳು ಹಾಡಿನ ಮೂಲಕ ಮಾವನನ್ನು ನೆನೆಪಿಸಿಕೊಂಡರು. ಸುಚಿನ್ ವೈಯಕ್ತಿಕ ಗೀತೆ ಹಾಡಿದರು. ಶಿವಪ್ರಸಾದ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಪ್ರವೀಣ್ ಕುಟುಂಬದ ಪರವಾಗಿ ಲಕ್ಷ್ಮಣ ಫಲ ಗಿಡಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here