ಮನೆ ಮನೆ ತಿರಂಗ, ಮೆರವಣಿಗೆ, ಘೋಷಣೆ-ಲಂಚ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಿ, ಜನರಿಗೆ ನೈಜ ಸ್ವಾತಂತ್ರ್ಯ ನೀಡಲಿ

0

ಅಧಿಕಾರಿಗಳು, ಜನಪ್ರತಿನಿಧಿಗಳು ಜನಸೇವಕರಾಗಿದ್ದಾರೆ. ಜನರು ರಾಜರು ಎಂಬುವುದನ್ನು ನೆನಪಿಸಿ ಕಾರ್ಯರೂಪಕ್ಕೆ ತರಲಿ

ಪ್ರಧಾನಿ ಮೋದಿಯವರು ಸ್ವಚ್ಛತೆ, ಮನೆ ಮನೆ ತಿರಂಗ ಎಂದು ಕರೆ ಕೊಟ್ಟರೆ ಮಾತ್ರ ಎಚ್ಚರ ಎಂಬ ಗುಲಾಮಗಿರಿ ಸಂಸ್ಕೃತಿಯಿಂದ ಹೊರ ಬನ್ನಿ, ಸ್ವತಂತ್ರವಾಗಿ ಒಳಿತು, ಕೆಡುಕು ಯೋಚಿಸುವ ಶಕ್ತಿ, ಸಂಸ್ಕೃತಿ ಬೆಳೆಸಿರಿ. ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯವನ್ನು ಪಡೆಯಿರಿ.


ಕಳೆದ ವರ್ಷ 75ನೇ ಸ್ವಾತಂತ್ರ್ಯೋತ್ಸವದ ಪ್ರಾರಂಭ. ಅದನ್ನು ಮನೆ ಮನೆಯಲ್ಲಿ ಸಂಭ್ರಮಿಸಿ ಆಚರಿಸಲು ಸುದ್ದಿಯಿಂದ ಜನರಿಗೆ ಕರೆ ಕೊಟ್ಟಿದ್ದೆವು. ಆ ಪ್ರಯುಕ್ತ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಸ್ವಾತಂತ್ರ್ಯ ರಥ ಸಂಚರಿಸಿ ಜನಜಾಗೃತಿ ಉಂಟು ಮಾಡಿತು. ಆದರೆ ಇಲ್ಲಿಯ ಆಡಳಿತಕ್ಕೆ, ಸರಕಾರಕ್ಕೆ ಇದು 75ನೇ ವರ್ಷದ ಸ್ವಾತಂತ್ರ್ಯ ಎಂದು ಮರೆತೇ ಹೋಗಿತ್ತು. ಕೊರೋನಾದ ವೀಕೆಂಡ್ ಕರ್ಫ್ಯೂ ಎಂಬ ಕಾರಣಕ್ಕೆ ಕಾಟಾಚಾರಕ್ಕೆ ಆಚರಣೆಗೆ ಅನುಮತಿ ಕೊಟ್ಟಿತ್ತು. ಅದರ ಬಗ್ಗೆ ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಕರ್ಫ್ಯೂ ಘೋಷಣೆ, ಜನರ ಸ್ವಾತಂತ್ರ್ಯಕ್ಕೆ ಕಪ್ಪು ಚುಕ್ಕೆ ಎಂಬ ಶಿರೋನಾಮೆಯ ಅಡಿಯಲ್ಲಿ ಸಂಪಾದಕೀಯ ಲೇಖನ ಬರೆದಿದ್ದೆ. ಕರ್ಫ್ಯೂ ಮತ್ತು ಬಂದ್ ಸಂದರ್ಭಗಳಲ್ಲಿ ಮಂತ್ರಿಗಳು ವಿರೋಧ ಪಕ್ಷದ ನಾಯಕರು, ಶಾಸಕರು, ಪ್ರಮುಖರು ಕೊರೋನಾದ ಎಲ್ಲಾ ನಿಯಮಗಳನ್ನು ಮೀರಿ ಸಭೆ ಸಮಾರಂಭ ಏರ್ಪಡಿಸಿದ್ದರು. ಸಾಮಾನ್ಯ ಜನರಿಗೆ ಅನ್ವಯವಾಗುವ ಕಾನೂನು ಅವರಿಗೆ ಅನ್ವಯವಾಗುವುದಿಲ್ಲ ಎಂಬುವುದನ್ನು ಉದಾಹರಣೆಯ ಸಹಿತವಾಗಿ ಬರೆದಿದ್ದೆ. ಆದರೂ ಕಾನೂನಿನ ಹೆದರಿಕೆಯಿದ್ದರೂ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಜನರು ಮನೆ ಮನೆಯಲ್ಲಿ ಸಂಭ್ರಮಿಸಿದ್ದರು. ಕೆಲವೆಡೆ ಮೆರವಣಿಗೆ, ಸ್ವಾತಂತ್ರ್ಯದ ಘೋಷಣೆ ಕೂಡ ನಡೆಯಿತು. ಮೂರು ತಾಲೂಕಿನಲ್ಲಿಯೂ ಉತ್ತಮ ಕೆಲಸ ಮಾಡುವ ಅಧಿಕಾರಿಗಳನ್ನು, ಇಲಾಖೆಗಳನ್ನು ಜನರು ಓಟಿನ ಮೂಲಕ ಗುರುತಿಸಿದ್ದರು. ಶಾಸಕರು ಮಾಡಬೇಕಾದ ಅಗತ್ಯದ ಕೆಲಸಗಳನ್ನು ತಿಳಿಸಿದ್ದರು. ಸ್ಟುಡಿಯೋಗಳಲ್ಲಿ ಸ್ವಾತಂತ್ರ್ಯದ ಈ ಎಲ್ಲಾ ಆಚರಣೆಗಳನ್ನು ಪ್ರಚಾರ ಮಾಡಲಾಯಿತು.

ಈ ಸಲ ಪ್ರಧಾನಿ ಮೋದಿಯವರು ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಎಂಬ ಅದ್ಭುತ ಘೋಷಣೆ ಮಾಡಿದ್ದಾರೆ. ಸಂಭ್ರಮಕ್ಕೆ ಬೇಕಾದ ಆದೇಶ ನೀಡಿದ್ದಾರೆ. ಅದು ಸಂತೋಷದ ವಿಷಯ ನಾವು ಅದನ್ನು ಸ್ವಾಗತಿಸಿ ಸುದ್ದಿಯ ಸ್ವಾತಂತ್ರ್ಯ ರಥದ ಮೂಲಕ ಜನ ಜಾಗೃತಿ ಮೂಡಿಸಿದ್ದೇವೆ. ಸ್ಟುಡಿಯೋ ಕಾರ್ಯಕ್ರಮದ ಮೂಲಕ ಸಂಪೂರ್ಣ ಬೆಂಬಲ ನೀಡಿದ್ದೇವೆ. ಇಲ್ಲಿ ಒಂದು ಪ್ರಶ್ನೆಯನ್ನು ಜನರ ಮುಂದೆ ಇಡಲು ಬಯಸುತ್ತೇನೆ. ಈ ಸಲ ಮೋದಿಜಿಯವರು ಕರೆ ಕೊಟ್ಟಿದ್ದರಿಂದ ಜನರು ಮುಂದೆ ಬಂದಿದ್ದಾರೆ. ಸಂಭ್ರಮಿಸುತ್ತಿದ್ದಾರೆ ಎಂದರೆ ಸರಿಯಲ್ಲವೆ? ಆದರೆ ಅವರ ಕರೆಗಾಗಿ ಕಾಯಬೇಕಾಗಿರಲಿಲ್ಲ. ಈ ಸ್ವಾತಂತ್ರ್ಯ ನಮ್ಮೆಲ್ಲರದ್ದು. ಪ್ರತೀ ಮನೆಯವರು ಮುಂದೆ ಬಂದು ಅದಕ್ಕೆ ತಯಾರಿ ನಡೆಸಿ ತಮ್ಮದೇ ಸ್ವಾತಂತ್ರ್ಯ ಎಂದು ಅದ್ಭುತವಾಗಿ ಆಚರಿಸಬೇಕಿತ್ತು. ಮೋದಿಜಿಯವರು ಕರೆ ಕೊಡದೇ ಇದ್ದಿದ್ದರೆ ಏನಾಗುತ್ತಿತ್ತು. ಈ ಸಲವೂ ಪ್ರತೀ ವರ್ಷದಂತೆ ವಿದ್ಯಾರ್ಥಿಗಳಿಗೆ, ಸರಕಾರಿ ಕಛೇರಿಗಳಿಗೆ ಮಾತ್ರ ಸ್ವಾತಂತ್ರ್ಯ, ತಿರಂಗದ ಅನಾವರಣ. ಉಳಿದೆಲ್ಲರಿಗೂ ರಜೆ ರಜೆ… ಎಂದಾಗುತ್ತಿರಲಿಲ್ಲವೇ? ಜನರು ಯೋಚಿಸಬೇಕು. ಇದು ನಮ್ಮ ಊರು, ನಮ್ಮ ದೇಶ. ರಾಷ್ಟ್ರ ಧ್ವಜ ನಮಗೆ ಸ್ವಾತಂತ್ರ್ಯದ, ಸಂವಿಧಾನದ ಹಕ್ಕು ನೀಡಿದ, ದೇಶದ ಎಲ್ಲರನ್ನೂ ಒಗ್ಗೂಡಿಸುವ ಹೆಮ್ಮೆಯ ಧ್ವಜ ಎಂದಾಗಬೇಕು.

ಈ ಪ್ರಜಾಪ್ರಭುತ್ವದಲ್ಲಿ ನಾವು ಸ್ವತಂತ್ರರು. ಒಳಿತು ಕೆಡುಕುಗಳನ್ನು ಯೋಚಿಸುವ, ನಿರ್ಣಯಿಸುವ ಹಕ್ಕು ನಮ್ಮದು ಎಂದಾಗಬೇಕು. ಅಂತಹ ಶಿಕ್ಷಣ, ಸಂಸ್ಕೃತಿ, ಶಕ್ತಿ ನಮಗೆ ದೊರಕಬೇಕು. ಸ್ವಚ್ಛತೆ ಸೇರಿದಂತೆ ಎಲ್ಲದಕ್ಕೂ ಮೋದಿಜಿಯವರ ಕರೆಗೆ ಕಾದರೆ ಏನಾಗಬಹುದು? ನಾವೇ ಜವಾಬ್ದಾರಿಯಿಂದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದೇ ಇದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವೇ? ಅದಕ್ಕಾಗಿ ಮಹಾತ್ಮ ಗಾಂಧೀಜಿಯವರ, ಜನರ ಆಡಳಿತದ, ಭಾಗವಹಿಸುವಿಕೆಯ ಗ್ರಾಮ ಸ್ವರಾಜ್ಯದ ಬಗ್ಗೆ ಹಲವಾರು ವರ್ಷಗಳಿಂದ ಪ್ರಚಾರ ಮಾಡುತ್ತಿದ್ದೇನೆ. ಪ್ರಧಾನಿ ಮೋದಿಯವರ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧೀಯವರ ಕ್ಷೇತ್ರದಲ್ಲಿ ನನ್ನ ಚಿಂತನೆಯನ್ನು ಪ್ರಚಾರ ಮಾಡಿ ಹಂಚಿಕೊಳ್ಳಲು ಆ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೆ ಎಂಬುವುದನ್ನು ಪುನಃ ಇಲ್ಲಿ ನೆನಪಿಸಲು ಬಯಸುತ್ತೇನೆ.

ಈ ಸಲದ ಸ್ವಾತಂತ್ರ್ಯ ಸಂಭ್ರಮ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ತಾವು ಜನಸೇವಕರು, ಜನಸೇವೆಯೇ ದೊಡ್ಡ ದೇಶ ಸೇವೆ ಎಂಬುವುದನ್ನು ನೆನಪಿಸುವಂತೆ ಮಾಡಬೇಕು. ಜನರಿಗೆ ನಾವು ಸ್ವತಂತ್ರರು. ‘ನಾವು ಗುಲಾಮರಲ್ಲ, ರಾಜರು’ ಎಂಬ ಪ್ರಜ್ಞೆಯನ್ನು, ಜವಾಬ್ದಾರಿಯನ್ನು ಮೂಡಿಸಬೇಕು. ಆ ಮೂಲಕ ಲಂಚ, ಭ್ರಷ್ಟಾಚಾರ ಮುಕ್ತ ಊರು, ರಾಜ್ಯ, ದೇಶ ನಮ್ಮದಾಗಿ ಜನರಿಗೆ ನಿಜವಾದ ಸ್ವಾತಂತ್ರ್ಯ ದೊರಕಬೇಕು ಎಂದು ಆಶಿಸುತ್ತೇನೆ.

ಈ ಮೇಲಿನ ಲೇಖನಕ್ಕೆ ಪೂರಕವಾಗಿ ಈ ಹಿಂದೆ ಬರೆದ ಸಂಪಾದಕೀಯದ ಸಂಕ್ಷಿಪ್ತ ಲೇಖನ ಮತ್ತು ಶಿರೋನಾಮೆಗಳನ್ನು ಈ ಕೆಳಗೆ ನೀಡಲಾಗಿದೆ.

 

LEAVE A REPLY

Please enter your comment!
Please enter your name here