ನೆಲ್ಯಾಡಿ ವಲಯ ಬಂಟರ ಸಂಘದ ಆಶ್ರಯದಲ್ಲಿ ‘ಆಟಿಡೊಂಜಿ ದಿನ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ

0

  • ಮಂಗಳೂರಿನಲ್ಲಿ ೨೨೦ ಕೋಟಿ ರೂ.ವೆಚ್ಚದ ಶತಮಾನೋತ್ಸವ ಕಟ್ಟಡ ನಿರ್ಮಾಣ: ಅಜಿತ್‌ಕುಮಾರ್ ರೈ ಮಾಲಾಡಿ

ನೆಲ್ಯಾಡಿ: ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಮಿತಿ ಹಾಗೂ ಬಂಟರ ಸಂಘ ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ನೆಲ್ಯಾಡಿ ವಲಯ ಬಂಟರ ಸಂಘದ ಆಶ್ರಯದಲ್ಲಿ ಆಟಿಡೊಂಜಿ ದಿನ ೨೦೨೨, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಆ.೧೪ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದಲ್ಲಿ ನಡೆಯಿತು.

ಪೂರ್ವಾಹ್ನ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಅವರು ಮಾತನಾಡಿ, ೧೧೪ ವರ್ಷಗಳ ಹಿಂದೆ, ಯಾವುದೇ ಸವಲತ್ತು ಇಲ್ಲದ ಸಂದರ್ಭದಲ್ಲಿ ನಮ್ಮ ಹಿರಿಯರು ಊರೂರು ಸುತ್ತಿ ಸಮಾಜ ಬಾಂಧವರನ್ನು ಒಟ್ಟುಗೂಡಿಸಿ ಬಂಟರ ಯಾನೆ ನಾಡವರ ಸಂಘ ಆರಂಭಿಸಿದ್ದಾರೆ. ಮಾತೃಸಂಘಕ್ಕೆ ೧೦೧ ವರ್ಷ ಪೂರ್ಣಗೊಂಡ ವೇಳೆ ಮಂಗಳೂರಿನಲ್ಲಿ ಶತಮಾನೋತ್ಸವ ಕಟ್ಟಡ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ಕಾರಣಾಂತರಗಳಿಂದ ಇದು ಸಾಧ್ಯವಾಗಲಿಲ್ಲ. ಈಗ ಎಲ್ಲಾ ದಾಖಲೆ ಸರಿಪಡಿಸಿಕೊಳ್ಳಲಾಗಿದ್ದು ೭.೮೯ ಲಕ್ಷ ಚದರ ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ದೊರೆತಿದೆ. ಇದು ಸುಮಾರು ೨೨೦ ಕೋಟಿ ರೂ.ವೆಚ್ಚದ ಯೋಜನೆಯಾಗಿದ್ದು ೩೬ ಅಂತಸ್ತಿನ ಕಟ್ಟಡ ನಿರ್ಮಾಣ ಆಗಲಿದೆ. ಇದರಿಂದ ಬರುವ ಆದಾಯವನ್ನು ವಿದ್ಯೆ, ಆರೋಗ್ಯ, ಮನೆ ಸೇರಿದಂತೆ ಸಮಾಜದ ಬಡ ಜನರ ಸೇವೆಗೆ ವಿನಿಯೋಗ ಮಾಡುವ ಉದ್ದೇಶವಿರಿಸಲಾಗಿದೆ ಎಂದರು. ಮಾತೃಸಂಘದ ವತಿಯಿಂದ ಬಂಟ ಸಮಾಜದವರ ಮಾಹಿತಿ ಸಂಗ್ರಹ ಆರಂಭಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಹೇಳಿದ ಅಜಿತ್ ಕುಮಾರ್ ರೈಯವರು ನೆಲ್ಯಾಡಿ ವಲಯ ಬಂಟರ ಸಂಘಕ್ಕೆ ಧನ ಸಹಾಯ ಹಸ್ತಾಂತರಿಸಿದರು.

ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರು, ಬಂಟರ ಸಂಘದ ಬಲವರ್ಧನೆಗಾಗಿ ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಸಮಿತಿ ರಚನೆ ಮಾಡಲಿದ್ದೇವೆ. ವಲಯ ಸಮಿತಿಯನ್ನೂ ಬಲಪಡಿಸಲಿದ್ದೇವೆ. ಉದ್ದೇಶಿತ ಬಂಟರ ಭವನಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು. ಪ್ರತಿಭಾ ಪುರಸ್ಕಾರ ನೆರವೇರಿಸಿದ ಅಬುದಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈಯವರು ಮಾತನಾಡಿ, ಪುತ್ತೂರು ಬಂಟರ ಸಂಘ ಸಮಾಜಕ್ಕೆ ಮಾದರಿ ಸಂಘವಾಗಿದೆ. ಮಕ್ಕಳಿಗೆ ಆಚಾರ-ವಿಚಾರ ತಿಳಿಸಬೇಕು, ಒಳ್ಳೆಯ ವಿದ್ಯೆ ನೀಡಬೇಕು. ಸಮಾಜ, ದೇಶಕ್ಕೆ ನಮ್ಮವರ ಕೊಡುಗೆ ಸಿಗಬೇಕು. ಬೇರೆ ಸಮಾಜದವರ ವಿದ್ಯೆಗೂ ಬಂಟ ಸಮಾಜ ಪ್ರೋತ್ಸಾಹ ನೀಡುತ್ತಿದೆ ಎಂದ ಅವರು ನೆಲ್ಯಾಡಿ ವಲಯ ಬಂಟರ ಸಂಘದ ವಿದ್ಯಾನಿಧಿಗೆ ೨೫ ಸಾವಿರ ರೂ.,ದೇಣಿಗೆ ನೀಡುವುದಾಗಿ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಹೇಮನಾಥ್ ಶೆಟ್ಟಿ ಕಾವು ಮಾತನಾಡಿ, ದ.ಕ.,ಉಡುಪಿ,ಕಾಸರಗೋಡು ಜಿಲ್ಲೆ ಬಂಟ ಸಮಾಜದವರ ಮೂಲ ಆಗಿದೆ. ಬಂಟ ಸಮಾಜದಲ್ಲಿ ಹಲವು ಸಾಧಕರಿದ್ದಾರೆ. ಇವರಿಂದ ಶಿಕ್ಷಣ, ಚಿಕಿತ್ಸೆ, ಮನೆ ನಿರ್ಮಾಣ, ಮದುವೆಗೆ ಆರ್ಥಿಕ ನೆರವು ಸಿಗುತ್ತಿದೆ. ನೆಲ್ಯಾಡಿ ವಲಯ ವ್ಯಾಪ್ತಿಯಲ್ಲಿ ಬಂಟ ಸಮಾಜದವರ ಸಂಖ್ಯೆ ಸೀಮಿತವಾಗಿದ್ದರೂ ಈ ತನಕ ಈ ಭಾಗದ ಜನರಿಗೆ ಸುಮಾರು ೨೨ ಲಕ್ಷ ರೂ.,ಕೊಡುಗೆ ಸಿಕ್ಕಿದೆ. ಸಂಘ ಇನ್ನಷ್ಟೂ ಬಲಿಷ್ಠಗೊಳ್ಳಬೇಕು. ನೆಲ್ಯಾಡಿಯಲ್ಲಿ ಸಂಘಕ್ಕೆ ಜಾಗ ಖರೀದಿಗೆ ಸಹಕಾರ ನೀಡಲಾಗುವುದು ಎಂದರು. ಇನ್ನೋರ್ವ ಅತಿಥಿ ಬಂಟರ ಯಾನೆ ನಾಡವರ ಮಾತೃಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ, ಬಂಟ ಸಮಾಜದವರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಯಾವುದೇ ಕಾರ್ಯಕ್ರಮ ಯಶಸ್ವಿಯಲ್ಲಿ ಬಂಟ ಸಮಾಜದವರ ಪಾತ್ರವಿದೆ. ವಿದ್ಯಾವಂತ ಸಮಾಜ ನಿರ್ಮಾಣ ಆಗಬೇಕು. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಮಾತೃಸಂಘದ ನಿರ್ದೇಶಕ ಯನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ಸಮಾಜಕ್ಕೆ ನಾಯಕತ್ವ ನೀಡುವ ಗುಣ ಬಂಟ ಸಮಾಜದವರಲ್ಲಿದೆ. ಸಮಾಜದಲ್ಲಿನ ಬಡವರಿಗೆ ನೆರವು ನೀಡುವ ಮೂಲಕ ಅವರ ಕಣ್ಣೀರೊರೆಸುವ ಕೆಲಸ ಸಮಾಜದಿಂದ ಆಗಬೇಕು. ನೆಲ್ಯಾಡಿ ವಲಯ ಬಂಟರ ಸಂಘ ಅತೀ ಹೆಚ್ಚು ಚಟುವಟಿಕೆಯಿಂದ ಕೂಡಿರುವ ಸಂಘವಾಗಿದೆ ಎಂದರು. ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈಯವರು ಸಂದರ್ಭೋಚಿತವಾಗಿ ಮಾತನಾಡಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆ ಅವರು, ೧೯೯೮ರಲ್ಲಿ ನೆಲ್ಯಾಡಿ ವಲಯ ಬಂಟರ ಸಂಘ ಸ್ಥಾಪನೆಗೊಂಡಿದ್ದರೂ ಸಂಘಕ್ಕೆ ಹೆಚ್ಚಿನ ಶಕ್ತಿ ಬಂದಿದ್ದು ೨೦೧೪ರಲ್ಲಿ. ನೆಲ್ಯಾಡಿ ವಲಯದಲ್ಲಿ ೨೫೦ ಕುಟುಂಬಗಳಿವೆ. ಎಲ್ಲಾ ಕುಟುಂಬಗಳ ವಿವರ ಇರುವ ಪುಸ್ತಕ ರಚಿಸಲಾಗಿದೆ. ಮಾತೃಸಂಘ, ತಾಲೂಕು ಸಮಿತಿ ಹಾಗೂ ಊರಿನ, ಪರವೂರಿನ ಸಮಾಜಬಾಂಧವರ ಸಹಕಾರದಿಂದ ಸಮಾಜದ ಬಡವರಿಗೆ ನೆರವು ನೀಡಿದ್ದೇವೆ. ಸಮಾಜದ ಬಡ ಕುಟುಂಬದವರಿಗೆ ಮದುವೆಗಾಗಿ ಈ ತನಕ ಒಟ್ಟು ೫.೮೮ ಲಕ್ಷ ರೂ.,ನೆರವು ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿ ೮೯,೫೦೦ ರೂ., ಮನೆ ನಿರ್ಮಾಣಕ್ಕೆ ೫.೨೫ ಲಕ್ಷ ರೂ., ವಲಯ ವ್ಯಾಪ್ತಿಯ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ದಾರಕ್ಕಾಗಿ ೧೫ ಸಾವಿರ ರೂ., ೧.೧೫ ಲಕ್ಷ ರೂ., ಪ್ರತಿಭಾ ಪುರಸ್ಕಾರ, ಕೋವಿಡ್ ಸಂದರ್ಭದಲ್ಲಿ ೧೫೦ ಮಂದಿಗೆ ಕಿಟ್ ವಿತರಣೆ ಮಾಡಲಾಗಿದೆ. ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ನೆಲ್ಯಾಡಿಯಲ್ಲಿ ಆಯೋಜಿಸಲಾಗಿದೆ. ಈ ತನಕ ವಿವಿಧ ಸಾಮಾಜಿಕ ಚಟುವಟಿಕೆಗಾಗಿ ಒಟ್ಟು ಸುಮಾರು ೨೨ ಲಕ್ಷ ರೂ., ವಿನಿಯೋಗಿಸಲಾಗಿದೆ. ಮುಂದೆ ನೆಲ್ಯಾಡಿ ವಲಯದಲ್ಲಿ ಸಂಘಕ್ಕೆ ಜಾಗ ಖರೀದಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಬಂಟರ ಯಾನೆ ನಾಡವರ ಮಾತೃಸಂಘದ ಪುತ್ತೂರು ತಾಲೂಕು ಸಮಿತಿ ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಒಳಾಂಗಣ ಕ್ರೀಡಾಕೂಟ ಉದ್ಘಾಟಿಸಿದ ಜಗನ್ನಾಥ ರೈ ಅರಂತಬೈಲು, ಇಚ್ಲಂಪಾಡಿ ಹೊಸಮನೆ ಮೋನಪ್ಪ ಶೆಟ್ಟಿ, ನೆಲ್ಯಾಡಿ ವಲಯ ಬಂಟರ ಸಂಘದ ಸಂಚಾಲಕ ಸತೀಶ್ ರೈ ಕೊಣಾಲುಗುತ್ತು, ಕಾರ್ಯದರ್ಶಿ ವಾಣಿ ಸುಂದರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿ ವಲಯ ಬಂಟರ ಸಂಘದ ಗೌರವಾಧ್ಯಕ್ಷ ಗುಡ್ಡಪ್ಪ ಶೆಟ್ಟಿ ಕಪಿಲಾ, ಖಜಾಂಜಿ ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ಉಪಾಧ್ಯಕ್ಷರಾದ ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ಪ್ರವೀಣ್ ಭಂಡಾರಿ ಪುರ, ಭಾಸ್ಕರ ರೈ ತೋಟ, ಮಹಾಬಲ ಶೆಟ್ಟಿ ದೋಂತಿಲ, ಸುಂದರ ಶೆಟ್ಟಿ ಪುರ, ಕಾರ್ಯದರ್ಶಿ ವಾಣಿಸುಂದರ ಶೆಟ್ಟಿ, ಸಹ ಸಂಚಾಲಕ ಜಯಾನಂದ ಬಂಟ್ರಿಯಾಲ್ ಅತಿಥಿಗಳನ್ನು ಗೌರವಿಸಿದರು. ಉಪಾಧ್ಯಕ್ಷ ಜಯಾನಂದ ಶೆಟ್ಟಿ ಇಚ್ಲಂಪಾಡಿ, ಜೊತೆ ಕಾರ್ಯದರ್ಶಿ ಶೀಲಾ ಯಶೋಧರ ಶೆಟ್ಟಿ ಆಮುಂಜ, ಸದಸ್ಯರಾದ ನೋಣಯ್ಯ ಶೆಟ್ಟಿ ಮರಂದೆ, ಶ್ರೀಮತಿ ವಿಶಾಲ ಆರ್.ಶೆಟ್ಟಿ ಕಡೆಂಬಿಲ, ಚಂದ್ರಶೇಖರ ರೈ ರಾಮನಗರ, ನಮಿತಾ ಎಸ್.ಶೆಟ್ಟಿ, ಆನಂದ ಶೆಟ್ಟಿ ಕಂಚಿನಡ್ಕ, ಗಣೇಶ್ ಶೆಟ್ಟಿ ಕಂಚಿನಡ್ಕ, ಸುಜಾತ ರಮೇಶ್ ಶೆಟ್ಟಿ ಬೀದಿ ಮತ್ತಿತರರು ಸಹಕರಿಸಿದರು. ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸುಚಿತ್ರಾ ಜೆ. ಬಂಟ್ರಿಯಾಲ್ ಪ್ರಾರ್ಥಿಸಿದರು. ನೆಲ್ಯಾಡಿ ವಲಯ ವ್ಯಾಪ್ತಿಯ ಬಂಟ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಆಟಿಯ ಖಾದ್ಯಗಳನ್ನೊಳಗೊಂಡ ಸಹ ಭೋಜನ ನಡೆಯಿತು.

ಸಾಧಕರಿಗೆ ಸನ್ಮಾನ;
ನೆಲ್ಯಾಡಿ ವಲಯ ಬಂಟರ ಸಂಘದ ಸಂಚಾಲಕ ಸತೀಶ್ ರೈ ಕೊಣಾಲುಗುತ್ತು, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ, ನಿವೃತ್ತ ಸಿಬ್ಬಂದಿ ಪದ್ಮನಾಭ ಶೆಟ್ಟಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರೈ ಮನವಳಿಕೆ, ಮಾತೃಸಂಘದ ನಿರ್ದೇಶಕ ಯನ್.ಚಂದ್ರಹಾಸ ಶೆಟ್ಟಿ, ಅಬುದಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈಯವರನ್ನು ನೆಲ್ಯಾಡಿ ವಲಯ ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಮಿತಿ ಸಹ ಸಂಚಾಲಕ ಜಯಾನಂದ ಬಂಟ್ರಿಯಾಲ್‌ರವರು ಸನ್ಮಾನಿತರನ್ನು ಪರಿಚಯಿಸಿದರು. ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಮನವಳಿಕೆಯವರಿಗೆ ಶಾಲು,ಹಾರಾರ್ಪಣೆ ಮಾಡಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ/ವಿದ್ಯಾರ್ಥಿಗಳಿಗೆ ಸನ್ಮಾನ:
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ತೇರ್ಗಡೆಯಾದ ನೆಲ್ಯಾಡಿ ವಲಯ ವ್ಯಾಪ್ತಿಯ ಬಂಟ ಸಮಾಜದ ಸುಮಾರು ೨೨ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ನೆಲ್ಯಾಡಿ ಅಶ್ವಮೇಧ ಕ್ಯಾಟರರ್‍ಸ್ ಮಾಲಕ ರತ್ನಾಕರ ಶೆಟ್ಟಿ ಹಾಗೂ ಹೇಮಲತಾ ದಂಪತಿ ಪುತ್ರಿ ಆಪ್ತ ಶೆಟ್ಟಿ, ಪುತ್ರ ಆದರ್ಶ ಶೆಟ್ಟಿ, ನೆಲ್ಯಾಡಿ ರಾಮನಗರ ರವಿಪ್ರಸಾದ್ ಶೆಟ್ಟಿ ಹಾಗೂ ಶಕುಂತಳಾ ದಂಪತಿ ಪುತ್ರ ರಿತಿಕ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಆಟೋಟ ಸ್ಪರ್ಧೆ:
ಆಟಿಡೊಂಜಿ ದಿನದ ಅಂಗವಾಗಿ ಸಮಾಜ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಭಕ್ತಿಗೀತೆ, ಚೆನ್ನೆಮಣೆ, ಸಂಗೀತ ಕುರ್ಚಿ ಹಾಗೂ ಇತರೇ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಜಗನ್ನಾಥ ರೈ ಅರಂತಬೈಲು ಕ್ರೀಡಾಕೂಟ ಉದ್ಘಾಟಿಸಿದರು. ಮೋನಪ್ಪ ಶೆಟ್ಟಿ ಹೊಸಮನೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here