ಸುದ್ದಿ ಬಳಗದ ಸಿಬ್ಬಂದಿಗಳ ವಿರುದ್ಧ ಪ್ರದೀಪ್ ಶೆಟ್ಟಿ ದಾಖಲಿಸಿದ್ದ ಸುಳ್ಳು ಕೇಸು ಹೈಕೋರ್ಟ್‌ನಲ್ಲಿ ವಜಾ

0

  •  ಕೇಸು ಮುಚ್ಚಿಟ್ಟು ಪುನಃ ಕೇಸ್ ನೀಡಿರುವುದು ಕಾನೂನಿನ ಮತ್ತು ಕೋರ್ಟ್ ಕಲಾಪದ ದುರುಪಯೋಗವಾಗಿದೆ
  •  ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ; ಹೈಕೋರ್ಟ್ ಎಚ್ಚರಿಕೆ
  •  ಸುಳ್ಳು ಕೇಸು ದಾಖಲು ಮಾಡಿ ಹಿಂಸೆ ನೀಡಿದ್ದವರ ವಿರುದ್ಧ ಕಾನೂನು ಹೋರಾಟ-ಸುದ್ದಿ ಬಳಗ

ಪುತ್ತೂರು: ಯುವಭಾರತ್ ವಾಟ್ಸಪ್ ಗ್ರೂಪ್ ಅಡ್ಮಿನ್ ಆಗಿರುವ ಬನ್ನೂರು ಕಂಜೂರಿನ ಪ್ರದೀಪ್ ಕುಮಾರ್ ಶೆಟ್ಟಿ ಎಂಬಾತ ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ಅಮಾಯಕ 26 ಸಿಬ್ಬಂದಿಗಳ ವಿರುದ್ಧ ಪುತ್ತೂರು ನ್ಯಾಯಾಲಯದಲ್ಲಿ ದಾಖಲು ಮಾಡಿದ್ದ ಖಾಸಗಿ ದೂರನ್ನು ಕರ್ನಾಟಕ ಹೈಕೋರ್ಟ್ ರದ್ದು ಪಡಿಸಿ ಆದೇಶಿಸಿದೆ. ‘ಮೊದಲು ನೀಡಿದ ಕೇಸನ್ನು ಮುಚ್ಚಿಟ್ಟು ಪ್ರದೀಪ್ ಕುಮಾರ್ ಶೆಟ್ಟಿ ಪುನಃ ಕೇಸು ನೀಡಿರುವುದು ಕಾನೂನಿನ ದುರುಪಯೋಗವಾಗಿದೆ. ಮಾತ್ರವಲ್ಲದೆ ಕೋರ್ಟ್‌ನ ಕಲಾಪಗಳ ದುರುಪಯೋಗವೂ ಆಗಿದೆ. ಇದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಉದ್ದೇಶಪೂರ್ವಕವಾಗಿ ಇಂತಹ ಕ್ಷುಲ್ಲಕ ಕೇಸ್ ಮಾಡಲು ಅವಕಾಶ ನೀಡಬಾರದು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ತನ್ನ ಆದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೆ, ಪುತ್ತೂರು ನ್ಯಾಯಾಲಯದಲ್ಲಿ ಸುದ್ದಿ ಬಳಗದ 26 ಸಿಬ್ಬಂದಿಗಳ ವಿರುದ್ಧ ಪ್ರದೀಪ್ ಕುಮಾರ್ ಶೆಟ್ಟಿ ದಾಖಲು ಮಾಡಿದ್ದ ಕೇಸನ್ನು ವಜಾಗೊಳಿಸಿ ಆದೇಶಿಸಿದ್ದಾರೆ. ಈ ಮೂಲಕ ಸುದ್ದಿ ಬಿಡುಗಡೆ ಪತ್ರಿಕಾ ಬಳಗಕ್ಕೆ ಜಯ ಸಿಕ್ಕಿದ್ದು ಸುಳ್ಳು ಕೇಸು ಮತ್ತು ಸುಳ್ಳು ಸಾಕ್ಷಿ ಹಾಕಿದ್ದವರಿಗೆ ಮುಖಭಂಗವಾಗಿದೆ. ಸುದ್ದಿ ಬಳಗದ ಪರವಾಗಿ ಹೈಕೋರ್ಟ್‌ನಲ್ಲಿ ಹಿರಿಯ ವಕೀಲ ಪಿಪಿ ಹೆಗ್ಡೆ ವಾದಿಸಿದ್ದರು. ಸತ್ಯವನ್ನು ಮರೆ ಮಾಚಿ ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಸುದ್ದಿ ಬಳಗದ ಅಮಾಯಕ ಸಿಬ್ಬಂದಿಗಳ ವಿರುದ್ಧ ಸುಳ್ಳು ಕೇಸು ದಾಖಲಿಸಿ ಸತತವಾಗಿ ಹಿಂಸೆ ನೀಡಿದ್ದು ಮಾತ್ರವಲ್ಲದೆ ಮಾನಹಾನಿ ಉಂಟು ಮಾಡಿರುವ ಪ್ರದೀಪ್ ಕುಮಾರ್ ಶೆಟ್ಟಿ ವಿರುದ್ಧ ಕಾನೂನು ಹೋರಾಟ ನಡೆಸಲು ಸುದ್ದಿ ಬಳಗ ಮುಂದಾಗಿದೆ. ಅಲ್ಲದೆ, ಸುದ್ದಿ ಬಳಗದ ಸಿಬ್ಬಂದಿಗಳ ವಿರುದ್ಧದ ಮೊದಲಿನ ಕೇಸಿನಲ್ಲಿ ಸಾಕ್ಷಿದಾರರಾಗಿದ್ದಲ್ಲದೆ ಪ್ರದೀಪ್ ಶೆಟ್ಟಿ ದಾಖಲಿಸಿರುವ ಸುಳ್ಳು ಕೇಸ್‌ಗೂ ಸುಳ್ಳು ಸಾಕ್ಷಿ ಹೇಳಿರುವ ಪ್ರಸಾದ್ ಬಲ್ನಾಡು ಅಲಿಯಾಸ್ ಕೃಷ್ಣಪ್ರಸಾದ್ ಬಲ್ನಾಡು, ಲತೇಶ್ ಶೆಟ್ಟಿ ಚಾರ್ವಾಕ, ಹರ್ಷ ಎ. ಬನ್ನೂರು ಮತ್ತು ಅನೀಶ್ ಕುಮಾರ್‌ರವರ ವಿರುದ್ಧವೂ ಕಾನೂನು ಹೋರಾಟ ನಡೆಸಲು ಸುದ್ದಿ ಬಳಗ ಚಿಂತನೆ ನಡೆಸಿದೆ.

ಪ್ರದೀಪ್ ಶೆಟ್ಟಿ ದಾಖಲು ಮಾಡಿದ್ದ ಸುಳ್ಳು ಕೇಸ್ ರದ್ದು ಪಡಿಸಿದ ಹೈಕೋರ್ಟ್: ಬನ್ನೂರು ಗ್ರಾಮದ ಕಂಜೂರು ಮನೆಯ ಸೀತಾರಾಮ ಶೆಟ್ಟಿಯವರ ಪುತ್ರ, ಯುವಭಾರತ್ ವಾಟ್ಸಪ್ ಗ್ರೂಪ್ ಅಡ್ಮಿನ್ ಪ್ರದೀಪ್ ಕುಮಾರ್ ಶೆಟ್ಟಿ ಎಂಬಾತ ಸುದ್ದಿ ಬಿಡುಗಡೆ ಪತ್ರಿಕಾ ಬಳಗದ 26 ಸಿಬ್ಬಂದಿಗಳ ವಿರುದ್ಧ ಸುಳ್ಳು ಕೇಸು ದಾಖಲು ಮಾಡಿದ್ದರು. ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪ್ರದೀಪ್ ಕುಮಾರ್ ಶೆಟ್ಟಿ ದಾಖಲು ಮಾಡಿದ್ದ ಈ ಸುಳ್ಳು ಕೇಸ್‌ಗೆ ಬಲ್ನಾಡು ಗ್ರಾಮದ ಉಮಿಗದ್ದೆ ನಿವಾಸಿ ಈಶ್ವರ ಗೌಡರವರ ಪುತ್ರ, ಡೈಜಿವರ್ಲ್ಡ್ ವರದಿಗಾರ ಎಂಬ ಹೆಸರಿನಲ್ಲಿ ಕೃಷ್ಣಪ್ರಸಾದ್ ಬಲ್ನಾಡು, ಚಾರ್ವಾಕ ಗ್ರಾಮದ ಬಾಬು ಶೆಟ್ಟಿಯವರ ಪುತ್ರ, ವಿಜಯವಾಣಿ ಪತ್ರಿಕೆಯ ಜಾಹೀರಾತು ವಿಭಾಗದ ವ್ಯವಸ್ಥಾಪಕ ಎಂದು ಹೇಳಿಕೊಂಡಿದ್ದ ಲತೇಶ್ ಶೆಟ್ಟಿ ಚಾರ್ವಾಕ, ಬನ್ನೂರು ಗ್ರಾಮದ ಬನ್ನೂರುಗುತ್ತು ಎ.ಶಿವರಾಮ ಆಚಾರ್ಯರವರ ಪುತ್ರ, ಉದಯವಾಣಿ ಜಾಹೀರಾತು ವಿಭಾಗದವರು ಎಂದು ಹೇಳಿಕೊಂಡಿದ್ದ ಹರ್ಷ ಎ. ಮತ್ತು ಕೆಮ್ಮಿಂಜೆ ಗ್ರಾಮದ ಮರೀಲು ಭಾಸ್ಕರ ಕೆ.ರವರ ಪುತ್ರ, ವಿ೪ ಟಿ.ವಿ. ವರದಿಗಾರ ಎಂದು ಹೇಳಿಕೊಂಡಿದ್ದ ಅನೀಶ್ ಕುಮಾರ್ ಸುಳ್ಳು ಸಾಕ್ಷಿ ಹಾಕಿದ್ದರು. ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ಜ್ಯೋತಿಪ್ರಕಾಶ್ ಪುಣಚ, ಸಂತೋಷ್ ಕುಮಾರ್ ಶಾಂತಿನಗರ, ಉಮೇಶ್ ಮಿತ್ತಡ್ಕ, ಶಶಿಧರ ವಿ.ಎನ್ ನರಿಮೊಗರು, ನಿಶಾಕಿರಣ್ ಬಾಳೆಪುಣಿ, ಆದಿತ್ಯ ಈಶ್ವರಮಂಗಲ, ವಸಂತ್ ಸಾಮೆತ್ತಡ್ಕ, ನಾರಾಯಣ ನಾಯ್ಕ ಅಮ್ಮುಂಜ, ಸಚ್ಚಿದಾನಂದ, ಪ್ರಿಯತ್, ಫಾರುಕ್ ಶೇಖ್, ವಿಜಯ ಕುಮಾರ್, ಲೋಕೇಶ್ ಬನ್ನೂರು, ಸಂತೋಷ್ ಮೊರಾಸ್, ಜೈನುದ್ದೀನ್, ಮೊಹಮ್ಮದ್, ಕಿರಣ್, ವಿನೋದ್, ಸುಳ್ಯ ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ಈಶ್ವರ ವಾರಣಾಸಿ, ಶರೀಫ್ ಜಟ್ಟಿಪಳ್ಳ, ಹರೀಶ್ ಬಂಟ್ವಾಳ್, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ಮಂಜುನಾಥ ರೈ ಮತ್ತು ಪುತ್ತೂರು ಸುದ್ದಿ ಬಳಗದ ನಾಲ್ವರು ಮಹಿಳಾ ಸಿಬ್ಬಂದಿಗಳ ಸಹಿತ 26 ಮಂದಿಯ ವಿರುದ್ಧ ಐಪಿಸಿ 143, 147,504,506,342 ಮತ್ತು 149ರನ್ವಯ ಸುಳ್ಳು ಕೇಸು ದಾಖಲು ಮಾಡಲಾಗಿತ್ತು. ಬಳಿಕ ಸುದ್ದಿ ಬಳಗದವರು ತಮ್ಮ ಮೇಲಿನ ಕೇಸ್ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಆಗ್ರಹಿಸಿ ಹೈಕೋರ್ಟ್‌ನ ಹಿರಿಯ ವಕೀಲ ಪಿಪಿ ಹೆಗ್ಡೆಯವರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಕರಣಕ್ಕೆ ತಡೆಯಾe ನೀಡಿ ಆದೇಶ ನೀಡಿದ್ದರು. ನಂತರ ಪ್ರದೀಪ್ ಕುಮಾರ್ ಶೆಟ್ಟಿ ತನ್ನ ವಕೀಲರ ಮೂಲಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ತಡೆಯಾe ತೆರವುಗೊಳಿಸುವಂತೆ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್‌ರವರು ಇದೀಗ ಪ್ರದೀಪ್ ಕುಮಾರ್ ಶೆಟ್ಟಿ ದಾಖಲು ಮಾಡಿದ್ದ ಸುಳ್ಳು ಕೇಸನ್ನು ಸಂಪೂರ್ಣ ರದ್ದು ಪಡಿಸಿ ಆದೇಶ ನೀಡಿದ್ದಾರೆ. ದೂರದಾರ ಪ್ರದೀಪ್ ಶೆಟ್ಟಿ ಮತ್ತು ಸಾಕ್ಷಿದಾರರ ಪರ ಪುತೂರಿನಲ್ಲಿ ವಕೀಲರಾದ ಶ್ಯಾಮ್‌ಪ್ರಸಾದ್ ಕೈಲಾರ್ ವಾದಿಸಿದ್ದರು.

ಮತ್ತೊಂದು ಸುಳ್ಳು ಕೇಸ್‌ಗೂ ತಡೆಯಾಜ್ಞೆ ನೀಡಿದ ಹೈಕೋರ್ಟ್: ‘ಸುಳ್ಳು ಕೇಸು, ಸುಳ್ಳು ಸಾಕ್ಷಿ ದಾಖಲು ಮಾಡಿ ಹಿಂಸೆ ನೀಡಬೇಡಿ, ನ್ಯಾಯಾಲಯದಲ್ಲಿ ಸತ್ಯವನ್ನೇ ಹೇಳಿ’ ಎಂದು ಒತ್ತಾಯಿಸಿ ಪತ್ರಿಕಾ ಭವನದ ಬಳಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದ ಸುದ್ದಿ ಬಿಡುಗಡೆ ಪತ್ರಿಕಾ ವರದಿಗಾರರಾದ ನಾರಾಯಣ ನಾಯ್ಕ ಅಮ್ಮುಂಜ, ಲೋಕೇಶ್ ಬನ್ನೂರು ಮತ್ತು ಶೇಖ್ ಜೈನುದ್ದೀನ್ ನೆಲ್ಲಿಕಟ್ಟೆ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ಗೂ ಹೈಕೋರ್ಟ್ ತಡೆಯಾe ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರಾಗಿದ್ದ ಸುದ್ದಿ ಬಿಡುಗಡೆ ವರದಿಗಾರರ ವಿರುದ್ಧ ಪುತ್ತೂರು ತಾಲೂಕು ಪತ್ರಕರ್ತರ ಸಂಘದವರೇ ಆಗಿರುವ ಮತ್ತು ಈ ಹಿಂದಿನ ಎರಡು ಕೇಸ್‌ಗಳಿಗೂ ಸಾಕ್ಷಿದಾರರಾಗಿರುವ ಕೃಷ್ಣಪ್ರಸಾದ್ ಬಲ್ನಾಡು ದಾಖಲು ಮಾಡಿದ್ದ ಸುಳ್ಳು ಕೇಸ್‌ಗೆ ಪತ್ರಕರ್ತರ ಸಂಘದವರೇ ಆಗಿರುವ ಅನೀಶ್ ಕುಮಾರ್ ಮರೀಲ್ ಮತ್ತು ಬಿ.ಟಿ.ರಂಜನ್ ಶೆಣೈ ಉಪ್ಪಿನಂಗಡಿರವರು ಸುಳ್ಳು ಸಾಕ್ಷಿ ಹಾಕಿದ್ದರು. ಈ ಕೇಸ್‌ಗೆ ತಡೆಯಾe ನೀಡುವಂತೆ ಕೋರಿದ್ದ ಸುದ್ದಿ ಬಳಗ ಮಾಡಿದ್ದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು. ಈ ಪ್ರಕರಣದಲ್ಲಿಯೂ ಸುದ್ದಿ ಬಳಗದ ಪರವಾಗಿ ಹೈಕೋರ್ಟ್ ಹಿರಿಯ ವಕೀಲ ಪಿಪಿ ಹೆಗ್ಡೆ ವಾದಿಸಿದ್ದರು. ದೂರುದಾರ ಕೃಷ್ಣಪ್ರಸಾದ್ ಪರ ವಕೀಲ ಶ್ಯಾಮ್ ಪ್ರಸಾದ್ ಕೈಲಾರ್ ವಾದಿಸಿದ್ದರು.

ಉದ್ದೇಶಪೂರ್ವಕವಾಗಿ ಕ್ಷುಲ್ಲಕ ಕೇಸ್ ಮಾಡಲು ಅವಕಾಶ ನೀಡಬಾರದು: ಹೈಕೋರ್ಟ್

ಸುದ್ದಿ ಬಳಗದ ವಿರುದ್ಧ ಪ್ರದೀಪ್ ಕುಮಾರ್ ಶೆಟ್ಟಿ ಪುತ್ತೂರು ನ್ಯಾಯಾಲಯದಲ್ಲಿ ದಾಖಲು ಮಾಡಿದ್ದ ಕೇಸ್‌ಗೆ ಸಂಬಂಽಸಿ ಹೈಕೊರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್‌ರವರು 2022ರ ಜುಲೈ 14ರಂದು ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ಪ್ರದೀಪ್ ಕುಮಾರ್ ಶೆಟ್ಟಿ ನೀಡಿದ್ದ ದೂರಿನಂತೆ 762/2017ರಂತೆ ಸುದ್ದಿ ಬಳಗದ 26 ಮಂದಿಯ ವಿರುದ್ಧ ಪುತ್ತೂರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಸುದ್ದಿ ಬಳಗದಿಂದ ಹೈಕೋರ್ಟ್‌ನಲ್ಲಿ 4711/2017ರನ್ವಯ ರಿಟ್ ಪಿಟಿಶನ್ ಸಲ್ಲಿಕೆಯಾಗಿತ್ತು. ಇದರ ಮೊದಲು ಚಿನ್ಮಯಕೃಷ್ಣ ಮತ್ತು ಪ್ರದೀಪ್ ಕುಮಾರ್ ಶೆಟ್ಟಿಯವರು 14-05-2016ರಂದು ಸುದ್ದಿ ಬಳಗದ ಏಳು ಮಂದಿಯ ವಿರುದ್ಧ ದೂರು ನೀಡಿದ್ದರು. ಅದರ ಆಧಾರದಲ್ಲಿ ಪುತ್ತೂರು ನಗರ ಠಾಣೆಯಲ್ಲಿ 113/2016ರಂತೆ ಕೇಸು ದಾಖಲಾಗಿತ್ತು. ಕೇಸ್‌ಗೆ ಒಳಗಾಗಿರುವ ಸುದ್ದಿ ಬಳಗದ ಏಳು ಮಂದಿ ಮೇಲೆ ಮೊದಲಿನ ದೂರಿನಲ್ಲಿ ದೂರುದಾರನಾಗಿರುವ ಪ್ರದೀಪ್ ಕುಮಾರ್ ಶೆಟ್ಟಿ 4-11-2016ರಂದು ಅದಕ್ಕೆ ಹೆಚ್ಚುವರಿಯಾಗಿ 19 ಜನರ ಹೆಸರನ್ನು ಸೇರಿಸಿ ದೂರು ನೀಡಿದ್ದರು. ಈ ವಿಚಾರದಲ್ಲಿ ಸುದ್ದಿ ಬಳಗದ ಪರ ವಾದ ಮಂಡಿಸಿದ್ದ ವಕೀಲ ಪಿ.ಪಿ. ಹೆಗ್ಡೆಯವರು ಒಂದೇ ಘಟನೆಯ ಮೇಲೆ ಎರೆಡರಡು ಕೇಸು ಕೊಡುವುದಕ್ಕೆ ಅವಕಾಶ ಇಲ್ಲ. ಅದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಮೊದಲಿನ ಕೇಸ್‌ನಲ್ಲಿ ದೂರುದಾರರಾಗಿದ್ದರೂ ದುರುದ್ದೇಶಪೂರ್ವಕವಾಗಿ ಮುಚ್ಚಿಡಲು ಮೊದಲಿನ ಕೇಸ್‌ನಲ್ಲಿ ಇದ್ದ ಏಳು ಜನರಲ್ಲದೆ ಅದರಲ್ಲಿ ಇಲ್ಲದ 19 ಜನರನ್ನು ಸೇರಿಸಿ ಆರು ತಿಂಗಳ ನಂತರ ದುರುದ್ದೇಶಪೂರ್ವಕವಾಗಿ ಕೇಸು ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸಹಿತ ವಿವಿಧ ನ್ಯಾಯಾಲಯಗಳ ಈ ಹಿಂದಿನ ಬೇರೆ ಪ್ರಕರಣಗಳ ತೀರ್ಪು ಉಲ್ಲೇಖಿಸಿ ನ್ಯಾಯಪೀಠದ ಗಮನ ಸೆಳೆದಿದ್ದರು. ಪಿಪಿ ಹೆಗ್ಡೆಯವರ ವಾದ ಪುರಸ್ಕರಿಸಿದ ನ್ಯಾಯಮೂರ್ತಿಗಳು ಮೊದಲು ನೀಡಿದ ಕೇಸನ್ನು ಮುಚ್ಚಿಟ್ಟು ಪ್ರದೀಪ್ ಕುಮಾರ್ ಪುನಃ ಕೇಸು ನೀಡಿರುವುದು ಕಾನೂನಿನ ದುರುಪಯೋಗವಾಗಿದೆ. ಮಾತ್ರವಲ್ಲದೆ ಕೋರ್ಟ್‌ನ ಕಲಾಪಗಳ ದುರುಪಯೋಗವೂ ಆಗಿದೆ.

ಕೋರ್ಟ್ ಅದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಉದ್ದೇಶಪೂರ್ವಕವಾಗಿ ಕ್ಷುಲ್ಲಕ ಕೇಸ್ ಮಾಡಲು ಅವಕಾಶ ನೀಡಬಾರದು ಎಂದು ಆದೇಶ ನೀಡಿದ್ದಾರೆ. ಅಲ್ಲದೆ ಪುತ್ತೂರು ನ್ಯಾಯಾಲಯದಲ್ಲಿ 762/2017ರನ್ವಯ ದಾಖಲಾಗಿದ್ದ ಸುದ್ದಿ ಬಳಗದ ಸಿಬ್ಬಂದಿಗಳ ವಿರುದ್ಧದ ಕೇಸ್ ವಜಾಗೊಳಿಸಿ ಆದೇಶಿಸಿದ್ದಾರೆ.

ಸುಳ್ಳು ಕೇಸು ದಾಖಲು ಮಾಡಿ ಹಿಂಸೆ ನೀಡಿದ್ದವರ ವಿರುದ್ಧ ಕಾನೂನು ಹೋರಾಟ

ಸತ್ಯವನ್ನು ಮರೆ ಮಾಚಿ ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಸುದ್ದಿ ಬಳಗದ ಅಮಾಯಕ ಸಿಬ್ಬಂದಿಗಳ ವಿರುದ್ಧ ಸುಳ್ಳು ಕೇಸು ದಾಖಲಿಸಿ ಸತತವಾಗಿ ಹಿಂಸೆ ನೀಡಿದ್ದು ಮಾತ್ರವಲ್ಲದೆ ಮಾನಹಾನಿ ಉಂಟು ಮಾಡಿರುವ ಪ್ರದೀಪ್ ಕುಮಾರ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ಸುಳ್ಳು ಕೇಸು ದಾಖಲು ಮಾಡುವಾಗ ಸುಳ್ಳು ಸಾಕ್ಷಿ ಹೇಳಿರುವ ಪ್ರಸಾದ್ ಬಲ್ನಾಡು ಅಲಿಯಾಸ್ ಕೃಷ್ಣಪ್ರಸಾದ್ ಬಲ್ನಾಡು, ಲತೇಶ್ ಶೆಟ್ಟಿ ಚಾರ್ವಾಕ, ಹರ್ಷ ಎ. ಬನ್ನೂರು ಮತ್ತು ಅನೀಶ್ ಕುಮಾರ್‌ರವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ನ್ಯೂಸ್ ಚಾನೆಲ್‌ನ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ತಿಳಿಸಿದ್ದಾರೆ. ನಮ್ಮ ಬಳಗದ ಮೇಲಿನ ಕೇಸನ್ನು ಹೈಕೋರ್ಟ್ ವಜಾಗೊಳಿಸಿರುವುದು ನಮಗೆ ನ್ಯಾಯಾಲಯದ ಮೂಲಕ ದೊರೆತಿರುವ ದೊಡ್ಡ ಜಯವಾಗಿದೆ. ಇದು ನಮ್ಮ ನೈತಿಕ ಸ್ಥೈರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಜತೆಗೆ ಮೊದಲು ನೀಡಿದ ಕೇಸನ್ನು ಮುಚ್ಚಿಟ್ಟು ಪುನಃ ಕೇಸು ನೀಡಿರುವುದು ಕಾನೂನಿನ ದುರುಪಯೋಗವಾಗಿದೆ ಮಾತ್ರವಲ್ಲದೆ ಕೋರ್ಟ್‌ನ ಕಲಾಪಗಳ ದುರುಪಯೋಗವೂ ಆಗಿದೆ. ಕೋರ್ಟ್ ಅದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು. ಇಂತಹ ಉದ್ದೇಶಪೂರ್ವಕವಾಗಿ ಮಾಡುವ ಕ್ಷುಲ್ಲಕ ಕೇಸ್ ಮಾಡಲು ಅವಕಾಶ ನೀಡಬಾರದು ಎಂದು ನ್ಯಾಯಮೂರ್ತಿಗಳು ಆದೇಶ ನೀಡಿರುವುದು ನಮ್ಮ ಕಾನೂನು ಹೋರಾಟಕ್ಕೆ ಸ್ಪೂರ್ತಿ ನೀಡಿದೆ ಎಂದು ಸಂತೋಷ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here